ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BSY ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ: ಯತ್ನಾಳ

Published 8 ಜನವರಿ 2024, 12:16 IST
Last Updated 8 ಜನವರಿ 2024, 12:16 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಘಕದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಅರುಣ್‌ ಸಿಂಗ್‌, ರಾಧಾಮೋಹನ್‌ ಅಗರವಾಲ್‌ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ನಡೆದಿರುವ ಹೊಂದಾಣಿಕೆ ಮತ್ತು ಕೆಟ್ಟ ರಾಜಕೀಯ ವ್ಯವಸ್ಥೆಯ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿ ಬಂದಿದ್ದೇನೆ. ದೆಹಲಿ ಭೇಟಿ ಅತ್ಯಂತ ಯಶಸ್ವಿಯಾಗಿದೆ‘ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

‘ಯಡಿಯೂರಪ್ಪ ಅವಧಿಯಲ್ಲಿ ನಡೆದ ಕೋವಿಡ್‌ ಹಗರಣದ ಬಗ್ಗೆ ವರಿಷ್ಠರಿಗೆ ವಿವರವಾಗಿ ತಿಳಿಸಿದ್ದೇನೆ. ನಾನು ಬಹಿರಂಗವಾಗಿ ಆರೋಪ ಮಾಡಿರುವುದಕ್ಕೆ ಯಾವುದೇ ಎಚ್ಚರಿಕೆಯನ್ನಾಗಲಿ, ಕ್ರಮಕೈಗೊಳ್ಳುವುದಾಗಿ ಹೇಳಿಲ್ಲ, ನಡ್ಡಾ ಮತ್ತು ಅಮಿತ್‌ ಶಾ ಅವರು ಅತ್ಯಂತ ಗೌರವಯುತವಾಗಿ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟದಲ್ಲಿ ಯಾವುದೇ ರಾಜೀ ಇಲ್ಲ’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ದೆಹಲಿ ಭೇಟಿ ಎಲ್ಲ ರೀತಿಯಲ್ಲೂ ನನಗೆ ಸಂತೃಪ್ತಿಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಭವಿಷ್ಯದಲ್ಲಿ ನಡೆಯುವ ಬದಲಾವಣೆ ಬಗ್ಗೆಯೂ ವರಿಷ್ಠರು ತಿಳಿಸಿದ್ದಾರೆ.  ಆದರೆ, ವಿಜಯೇಂದ್ರ ಜಾಲ ತಾಣದಲ್ಲಿ ಯತ್ನಾಳಗೆ ವರಿಷ್ಠರಿಂದ ಶಿಸ್ತು ಕ್ರಮದ  ಎಚ್ಚರಿಕೆ, ಪಕ್ಷದಿಂದ ಉಚ್ಛಾಟಿಸುವುದಾಗಿ ಸೂಚನೆ ಎಂದು ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದರು.

‘ಕರ್ನಾಟಕ ಯಾವೊಬ್ಬ ಬಿಜೆಪಿ ನಾಯಕರು ನನ್ನನ್ನು ಈ ಹಿಂದೆ ಮರಳಿ ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ, ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಯಾರ ಉಪಕಾರ ಇಲ್ಲ. ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ  ಅಮಿತ್ ಶಾ ಅವರೇ ನೇರವಾಗಿ ನನ್ನೊಂದಿಗೆ ಮಾತನಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು ಎಂದು ಸ್ಪಷ್ಟಪಡಿಸಿದರು.

ವಿಜಯಪುರಕ್ಕೆ ಬಿ.ವೈ.ವಿಜಯೇಂದ್ರ ಇತ್ತೀಚೆಗೆ ಭೇಟಿ ನೀಡಿದಾಗ ಕೆಲ ಸುದ್ದಿ ವಾಹಿನಿಗಳು ಹಾಗೂ ವಿಜಯೇಂದ್ರ ಜಾಲತಾಣಗಳಲ್ಲಿ ‘ಹಿಂದು ಹುಲಿಯ ಕೋಟೆಗೆ ರಾಜಾಹುಲಿ ಪುತ್ರ ಲಗ್ಗೆ, ಗುಹೆ ಸೇರಿಕೊಂಡ ಹಿಂದೂ ಹುಲಿ ಯತ್ನಾಳ, ನಾಪತ್ತೆಯಾದ ಹಿಂದೂ ಹುಲಿ’ ಎಂದು ಅತಿರಂಜಿತವಾಗಿ ಬಿಂಬಿಸಿರುವುದು ಸರಿಯಲ್ಲ. ಯಾವ ರಾಜಾಹುಲಿ, ಮರಿಹುಲಿಗೂ ಅಂಜಿ ಗುಹೆ ಸೇರುವ ಮಗಾ ನಾನಲ್ಲ’ ಎಂದರು.

ಈ ದೇಶದ ಸುರಕ್ಷತೆಗಾಗಿ ಹಾಗೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಲೋಕಸಭಾ ಚುನಾವಣೆಯನ್ನು ರಾಜ್ಯದಲ್ಲಿ ಒಗ್ಗಟ್ಟಾಗಿ ಎದುರಿಸಲಾಗುವುದು ಎಂದರು.

ರಾಜ್ಯದಲ್ಲಿ ಪಾಕಿಸ್ತಾನಿ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದುಗಳ‌ ಮೇಲೆ ದೌರ್ಜನ್ಯ ನಡೆಯುತ್ತಿದೆ‌. ಇದೊಂದು ಪಾಕಿಸ್ತಾನ ಸರ್ಕಾರದಂತಾಗಿದೆ ಎಂದು ಯತ್ನಾಳ ಆರೋಪಿಸಿದರು.

ಹಿಂದುಗಳ ದಯಮಯೆಯಿಂದ ಮುಸ್ಲಿಮರು ಭಾರತದಲ್ಲಿ ಸುರಕ್ಷಿತವಾಗಿದ್ದಾರೆ. ಗಾಂಧಿ, ನೆಹರು ಕಾಲದಲ್ಲೇ ಮುಸ್ಲಿಮರಿಗಾಗಿ ದೇಶವನ್ನು ಪ್ರತ್ಯೇಕಿಸಿ ಪಾಕಿಸ್ತಾನ ಕೊಟ್ಟಿದ್ದು ಏತಕ್ಕೆ ಎಂದು ಪ್ರಶ್ನಿಸಿದರು ಎಂದರು.

ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧವಿಲ್ಲ: ಜನವರಿ 12ರಿಂದ 18ರ ವರೆಗೆ ನಗರದಲ್ಲಿ ನಡೆಯಲಿರುವ ಸಿದ್ಧೇಶ್ವರ ಜಾತ್ರೆಯಲ್ಲಿ ವ್ಯಾಪಾರ, ವಹಿವಾಟಿಗೆ  ಹಿಂದುಗಳಿಗೆ ನೂರಕ್ಕೆ ನೂರು ಅವಕಾಶ ಇದೆ. ಹಾಗಂತ ಜಾತ್ರೆಯಲ್ಲಿ ವ್ಯಾಪಾರ, ವಹಿವಾಟು ಮಾಡಲು ಮುಸ್ಲಿಮರಿಗೆ ಯಾವುದೇ ತಕರಾರು ಇಲ್ಲ, ನಿರ್ಬಂಧವೂ ಇಲ್ಲ ಎಂದು ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.

ಸಿದ್ಧಶ್ವರ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂಬ ಶ್ರೀರಾಮಸೇನೆ ಮತ್ತು ಕೆಲ ಹಿಂದೂ ಸಂಘಟನೆಗಳು ಆಗ್ರಹಿಸಿ, ಫಲಕವನ್ನು ಅಳವಡಿಸಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಯತ್ನಾಳ,  ತೆಂಗಿನ ಕಾಯಿ, ಹೂವು, ಅರಿಸಿಣ, ಕುಂಕುಮ, ಅಗರಬತ್ತಿ ಸೇರಿದಂತೆ ಪೂಜಾ ಸಾಮಾಜುಗಳ ಮಾರಾಟಕ್ಕೆ ಇಸ್ಲಾಂ ಧರ್ಮದಲ್ಲೇ ನಿಷೇಧ ಇದೆ. ಆದರೂ ದುಡಿದು ತಿನ್ನುವವರಿಗೆ ನಾವೇಕೆ ಬೇಡ ಎನ್ನೋಣ. ಮಾರಾಟ ಮಾಡಲು ಅವಕಾಶ ನಿರ್ಬಂಧಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದರು.

ಜಾತ್ರೆಯಲ್ಲಿ ಅಂಗಡಿ ಹಾಕಲು ಹಿಂದುಗಳಿಗೆ ಅಗತ್ಯ ನೆರವನ್ನು ಬೇಕಾದರೆ ಸಿದ್ಧೇಶ್ವರ ಸಂಸ್ಥೆಯಿಂದ ಕೊಡಲು ಸಿದ್ಧರಿದ್ದೇವೆ. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲಿ. ಎಲ್ಲವನ್ನು ಎಲ್ಲರೂ ಮಾರಾಟ ಮಾಡಲು ಆಗುವುದಿಲ್ಲ ಎಂಬುದನ್ನು ಹಿಂದುಪರ ಸಂಘಟನೆಗಳ ಮುಖಂಡರು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT