ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಲಭಿಸದ ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿವರ!

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅವಸರ; ಅಧಿಕಾರಿಗಳ ಅವಾಂತರ
Last Updated 11 ಆಗಸ್ಟ್ 2020, 15:22 IST
ಅಕ್ಷರ ಗಾತ್ರ

ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡು ಎರಡು ದಿನವಾದರೂ ವಿಜಯಪುರ ಜಿಲ್ಲೆಯ ಸಮಗ್ರ ಮಾಹಿತಿ ಮಂಗಳವಾರ ತಡರಾತ್ರಿ ವರೆಗೂ ಲಭಿಸಲಿಲ್ಲ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್‌ ಅವರುಸೋಮವಾರ ಮಧ್ಯಾಹ್ನ ಫಲಿತಾಂಶ ಪ್ರಕಟಿಸುತ್ತಿರುವಂತೆ ಆಯಾ ವಿದ್ಯಾರ್ಥಿಗಳ ಮೊಬೈಲ್‌ ಫೋನ್‌ಗಳಿಗೆ ನೇರವಾಗಿ ಫಲಿತಾಂಶ ಲಭಿಸಿದ್ದರೂ ಸಹ ಡಿಡಿಪಿಐ, ಬಿಇಒ ಕಚೇರಿಗಳಿಗೆ ಎರಡು ದಿನವಾದರೂ ತಲುಪದೇ ಇರುವುದು ಇಲಾಖೆ ಒಳಗಿನ ಅವಾಂತರವನ್ನು ಬಯಲುಗೊಳಿಸಿದೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಎಷ್ಟು ಜನ ಉತ್ತೀರ್ಣರಾಗಿದ್ದಾರೆ. ಯಾವಾವ ವಿಷಯಗಳಲ್ಲಿ ಎಷ್ಟು ಜನ ಅನುತ್ತೀರ್ಣರಾಗಿದ್ದಾರೆ. ನಗರ– ಗ್ರಾಮೀಣ, ಬಾಲಕ–ಬಾಲಕಿಯರಲ್ಲಿ ಯಾರು ಮೇಲುಗೈ ಸಾಧಿಸಿದ್ದಾರೆ. ಎಷ್ಟು ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಎಷ್ಟು ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. ಜಿಲ್ಲೆಯಲ್ಲಿ ಯಾವ ಶಾಲೆ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಹಿಂದಿನ ವರ್ಷಗಳಿಗೂ ಈ ವರ್ಷಕ್ಕೂ ಫಲಿತಾಂಶದಲ್ಲಿ ಆಗಿರುವ ಏರಿಳಿತಗಳೇನು ಎಂಬ ವಿಶ್ಲೇಷಣೆಗೆ ಅಗತ್ಯ ಮಾಹಿತಿ ಲಭಿಸದೇ ಡಿಡಿಪಿಐ, ಬಿಇಒ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚಡಪಡಿಸುತ್ತಿದ್ದ ದೃಶ್ಯ ಕಂಡುಬಂದಿತು.

ಪೂರ್ವ ಸಿದ್ಧತೆ ಇಲ್ಲ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು,ಫಲಿತಾಂಶ ಪ್ರಕಟಿಸುವ ಮುನ್ನಾ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸಿದ್ಧತೆ ಮಾಡಿಕೊಳ್ಳುವ ಮೊದಲೇ ಶಿಕ್ಷಣ ಸಚಿವರು ತರಾತುರಿಯಲ್ಲಿ ಸಿಕ್ಕಷ್ಟು ಮಾಹಿತಿಯನ್ನು ಪ್ರಕಟಿಸಿದ್ದಾರೆ. ಹೀಗಾಗಿ ಗೊಂದಲವಾಗಿದೆ ಎಂದರು.

ಈ ವರ್ಷ ಫಲಿತಾಂಶವನ್ನು ಎ,ಬಿ,ಸಿ ಎಂದು ಗ್ರೇಡ್‌ ಮಾಡಿರುವುದರಿಂದ ಆಯಾ ಜಿಲ್ಲಾವಾರು ಮಾಹಿತಿ ಲಭಿಸುವುದು ವಿಳಂಬವಾಗಲು ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಫಲಿತಾಂಶದ ವಿವರ ಪಡೆದುಕೊಳ್ಳಲು ಎರಡು ದಿನಗಳಿಂದ ಹಗಲುರಾತ್ರಿ ಕಾಯುತ್ತಿದ್ದೇವೆ. ಈಗ ಬರುತ್ತದೆ, ಆಗ ಬರುತ್ತದೆ ಎಂದು ಬೆಂಗಳೂರು ಕೇಂದ್ರ ಕಚೇರಿಯಿಂದ ಹೇಳುತ್ತಲೇ ಇದ್ದಾರೆ. ಬಹುತೇಕ ಬುಧವಾರ ಲಭಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇ–ಮೇಲ್‌, ವಾಟ್ಸ್‌ ಆ್ಯಪ್‌ನಂತಹ ಅತ್ಯಾಧುನಿಕ ವ್ಯವಸ್ಥೆ ನಡುವೆ ಎರಡು ದಿನವಾದರೂ ಫಲಿತಾಂಶ ವಿವರ ಲಭಿಸದೇ ಇರುವುದು ಶಿಕ್ಷಣ ಇಲಾಖೆ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿದೆ ಎಂದು ವಿಜಯಪುರದ ಸಂಗಮೇಶ ಬಿರಾದಾರ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT