ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಕ್ರೀಡಾಪಟುಗಳಿಗೆ, ಪರೀಕ್ಷಾರ್ಥಿಗಳಿಗೆ ಆಘಾತ

ವಿಜಯಪುರ ಜಿಲ್ಲಾ ಕ್ರೀಡಾಂಗಣ ಪ್ರವೇಶ ಇನ್ನು ದುಬಾರಿ!

ಬಸವರಾಜ್ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌, ವಾಲಿಬಾಲ್‌ ಕೋರ್ಟ್‌, ಬಾಸ್ಕೆಟ್‌ ಬಾಲ್‌ ಕೋರ್ಟ್‌ ಹಾಗೂ ಕನಕದಾಸ ಬಡಾವಣೆಯಲ್ಲಿರುವ ಈಜುಗೊಳ ಪ್ರವೇಶಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ನಿಗದಿ ಪಡಿಸಿರುವ ‘ದುಬಾರಿ ಶುಲ್ಕ’ ಕ್ರೀಡಾಪಟುಗಳು ಭರಿಸಲಾಗದಂತಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ವಿಶೇಷ ಘಟಕ ಯೋಜನೆಯಡಿ ₹ 5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಜನಸಾಮಾನ್ಯರು ಪ್ರತಿ ದಿನ ಅಭ್ಯಾಸ ಮಾಡಬೇಕು ಎಂದಾದರೆ ಮಾಸಿಕ ₹ 600, ವಾರ್ಷಿಕ ₹ 6 ಸಾವಿರ ಪ್ರವೇಶ ಶುಲ್ಕ ಪಾವತಿಸಬೇಕಾಗಿದೆ.

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ, ಸರ್ಕಾರಿ ನೌಕರರಿಗೆ ಹಾಗೂ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟುಗಳಿಗೆ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ.

₹ 52 ಲಕ್ಷದಲ್ಲಿ ನಿರ್ಮಾಣವಾಗಿರುವ ವಾಲಿಬಾಲ್‌ ಕೋರ್ಟ್‌ ಮತ್ತು ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ಜನಸಾಮಾನ್ಯರಿಗೆ ಪ್ರವೇಶ ಶುಲ್ಕ ಮಾಸಿಕ ₹ 300, ವಾರ್ಷಿಕ ₹ 3 ಸಾವಿರ ನಿಗದಿಯಾಗಿದೆ. ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ, ಸರ್ಕಾರಿ ನೌಕರರಿಗೆ ಹಾಗೂ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟುಗಳಿಗೆ ಮಾಸಿಕ ₹ 200, ವಾರ್ಷಿಕ ₹ 2 ಸಾವಿರ ನಿಗದಿಪಡಿಸಲಾಗಿದೆ.

ಕನಕದಾಸ ಬಡಾವಣೆಯಲ್ಲಿ ₹ 21.20 ಕೋಟಿ ಮೊತ್ತದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಈಜುಗೊಳದಲ್ಲಿ ಅಭ್ಯಾಸ ಮಾಡಲು ಮಾಸಿಕ ₹ 1,200, ವಾರ್ಷಿಕ ₹ 12 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 

ವಿಜಯಪುರ ನಗರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕ್ರೀಡಾಂಗಣ, ಸಿಂಥೆಟಿಕ್‌ ಟ್ರ್ಯಾಕ್‌, ಸಿಂಥೆಟಿಕ್‌ ಕೋರ್ಟ್‌, ಅಂತರರಾಷ್ಟ್ರೀಯ ಮಟ್ಟದ ಈಜುಗೊಳ ನಿರ್ಮಾಣವಾಗುತ್ತಿರುವುದು ಕಂಡು ಬಹಳ ಖುಷಿಪಟ್ಟಿದ್ದ ನಗರ ಮತ್ತು ಜಿಲ್ಲೆಯ ಗ್ರಾಮೀಣ ಭಾಗದ ಕ್ರೀಡಾಪಟುಗಳು ಇದೀಗ ಕ್ರೀಡಾ ಇಲಾಖೆ ನಿಗದಿಪಡಿಸಿರುವ ಪ್ರವೇಶ ಶುಲ್ಕದಿಂದ ಗರಬಡಿದವರಂತಾಗಿದ್ದಾರೆ. 

ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ ಜೊತೆಗೆ ಪೊಲೀಸ್‌, ಸೈನ್ಯಕ್ಕೆ ಸೇರಬಯಸುವ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಇದೇ ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣವನ್ನು ನಂಬಿಕೊಂಡಿದ್ದಾರೆ. ಆದರೆ, ಇಲಾಖೆ ನಿಗದಿಪಡಿಸಿರುವ ಶುಲ್ಕ ಇವರ ಪಾಲಿಗೆ ಹೊರೆಯಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಿಕೋಟಾ ತಾಲ್ಲೂಕಿನ ಕಳ್ಳವಟಗಿಯ ರಮಜಾನ್  ಮುಲ್ಲಾ, ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಪೊಲೀಸ್‌, ಮಿಲಿಟರಿ ಸೇರಿದಂತೆ ವಿವಿಧ ಹುದ್ದೆಗೆ ಆಯ್ಕೆಯಾಗಲು ದೈಹಿಕ ಕಸರತ್ತು ನಡೆಸಲು ಹಾಗೂ ರನ್ನಿಂಗ್ ಮಾಡಲು ಹಲವಾರು ವಿದ್ಯಾರ್ಥಿಗಳು, ಉದ್ಯೋಗ ಆಕಾಂಕ್ಷಿಗಳು ಬರುತ್ತಾರೆ. ಇಷ್ಟು ದಿನ ಕ್ರೀಡಾಂಗಣ ಪ್ರವೇಶ ಉಚಿತವಿತ್ತು. ಈಗ ಒಳ ಪ್ರವೇಶಿಸಲು ಹಣ ಕಟ್ಟಬೇಕು ಎನ್ನುತ್ತಿದ್ದಾರೆ. ಈ ಲಾಕ್ ಡೌನ್‌ ಸಮಯದಲ್ಲಿ ಉದ್ಯೋಗವಿಲ್ಲ, ಜೀವನ ನಡೆಸಲು ಹಣವಿಲ್ಲ. ನಮ್ಮಿಂದ ಕಟ್ಟಲು ಆಗುವುದಿಲ್ಲ. ತಕ್ಷಣ ಶುಲ್ಕ ನಿಗದಿಯನ್ನು ಕೈಬಿಟ್ಟು ಉಚಿತ ಪ್ರವೇಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹಳ್ಳಿಯಿಂದ ಬಂದಿರುವ ನಾವು ವಿಜಯಪುರದಲ್ಲಿ ಬಾಡಿಗೆ ರೂಂಗೆ 1500, ಮೆಸ್‌ಗೆ ₹ 1500 ನೀಡುತ್ತಿದ್ದೇವೆ. ಇದೀಗ ಕ್ರೀಡಾಂಗಣ ಪ್ರವೇಶಕ್ಕೂ ದುಬಾರಿ ಶುಲ್ಕ ನಿಗದಿಪಡಿಸಿರುವುದು ನಮ್ಮನ್ನು ಹತಾಶೆಗೊಳಿಸಿದ್ದು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಉಚಿತ ಪ್ರವೇಶಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

***

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿದೆ. ಮುಕ್ತ ಪ್ರವೇಶದಿಂದ ದುರುಪಯೋಗವಾಗಿ ಹಾಳಾಗುತ್ತದೆ. ಇದರ ತಡೆಗಾಗಿ ಶುಲ್ಕ ನಿಗದಿಪಡಿಸಲಾಗಿದೆ.
–ಎಸ್‌.ಜಿ.ಲೋಣಿ, ಸಹಾಯಕ ನಿರ್ದೇಶಕ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

***

ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಇಷ್ಟೊಂದು ದುಬಾರಿ ಶುಲ್ಕ ನಿಗದಿಪಡಿಸಿರುವುದು ಸರಿಯಲ್ಲ. ಕ್ರೀಡಾಂಗಣ ಕ್ರೀಡಾಪಟುಗಳ ಕೈಗೆಟುಕುವಂತಿರಲಿ.
–ಗಂಗಾಧರ ಡಬ್ಬಿಗಾರ, ಅಥ್ಲೆಟಿಕ್‌, ವಿಜಯಪುರ

***

ಪೊಲೀಸ್‌ ಆಯ್ಕೆಗಾಗಿ ದೈಹಿಕ ಸಾಮಾರ್ಥ್ಯ ಪರೀಕ್ಷೆಗೆ ಅಣಿಯಾಗಲು ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಇದೀಗ ಗರಿಷ್ಠ ಶುಲ್ಕ ನಿಗದಿಪಡಿಸಿರುವುದರಿಂದ ಭರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಅಭ್ಯಾಸ ಮಾಡಬೇಕಾಗಿದೆ.
–ಶಂಕರ ಬಿರಾದಾರ, ಕಡ್ಲೆವಾಡ, ದೇವರಹಿಪ್ಪರಗಿ

***

ಧಾರವಾಡ, ಗದುಗಿನಲ್ಲಿ ಕ್ರೀಡಾಂಗಣವನ್ನು ಉಚಿತವಾಗಿ ನೀಡಲಾಗುತ್ತಿದೆ. ನಮ್ಮಲ್ಲಿ ಜಿಲ್ಲಾ ಕ್ರೀಡಾಂಗಣವೇ ಇದ್ದೂ ಇಲ್ಲದಂತಾಗಿದೆ. 
-ರಮಜಾನ್ ಮುಲ್ಲಾ, ಪೊಲೀಸ್‌ ಪರೀಕ್ಷಾರ್ಥಿ, ಕಳ್ಳವಟಗಿ, ತಿಕೋಟಾ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು