ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯ‍ಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಹರ್ಷ

Published 26 ಮೇ 2024, 15:40 IST
Last Updated 26 ಮೇ 2024, 15:40 IST
ಅಕ್ಷರ ಗಾತ್ರ

ವಿಜಯ‍ಪುರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಸುರಿದ ಮಳೆಯು ಬಿತ್ತನೆಗೆ ಮುಂದಾದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಬೆಳಿಗ್ಗೆಯಿಂದಲೇ ಸಂಜೆಯವರೆಗೆ ಧಗೆ ಹಾಗೂ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು, ಸಂಜೆ 4ರ ನಂತರ ದಟ್ಟವಾದ ಮೋಡಗಳು ಆವರಿಸಿದ್ದು, ಸಂಜೆ 6ರ ನಂತರ ನಗರದ ಹಲವು ಭಾಗಗಳಲ್ಲಿ ಪ್ರಾರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಭರ್ಜರಿಯಾಗಿ ಸುರಿಯಿತು.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವಣ ಹಾಗೂ ಬಿಸಿಲಿನ ಧಗೆ ಇತ್ತು. ಭಾನುವಾರ ಸಂಜೆ ಸುರಿದ ಮಳೆ ಜಿಲ್ಲೆ ಜನರಿಗೆ ತಂಪೆರೆದಿದೆ.

ನಗರದಲ್ಲಿ ಸುರಿದ ಮಳೆಗೆ ಪಾದಚಾರಿಗಳು ಹಾಗೂ ಬೈಕ್‌ ಸವಾರರು ಅಲ್ಲಲ್ಲಿ ಮರದ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರೆ, ಕೆಲವರು ಮಳೆಯಲ್ಲಿ ನೆನೆಯುತ್ತ ಬೈಕ್‌ನಲ್ಲಿ ತೆರಳಿದರು. ಕೆಲವೆಡೆ ವಿದ್ಯುತ್ ಪೂರೈಕೆಯು ತಾತ್ಕಾಲಿಕವಾಗಿ ಸ್ಥಗಿತವಾಯಿತು.

ಜಿಲ್ಲೆಯ ತಿಕೋಟಾ, ಕಲಕೇರಿ, ತಾಂಬಾ, ತಾಳಿಕೋಟೆ, ಸಿಂದಗಿ, ಬಸವನಬಾಗೇವಾಡಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ. ಬಿರುಗಾಳಿಗೆ ಅನೇಕ ಪತ್ರಾಸ್‌ಗಳು ಹಾರಿವೆ.

ಮಳೆಗೆ ಅವಾಂತರ: ಭಾರಿ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಜೀರಂಕಲಗಿ ಗ್ರಾಮದ ವಿಠ್ಠಲ ಭೀಮಣ್ಣ ಕನ್ನೂರ ಅವರ ಮೇಲೆ  ಪತ್ರಾಸ್‌ ಶೆಡ್‌ ಹಾರಿ ಬಿದ್ದು ಗಾಯವಾಗಿದೆ. ಕಲಕೇರಿ ಗ್ರಾಮದಲ್ಲಿ ಮಲ್ಲಪ್ಪ ಅಡಿಯಪ್ಪ ಮದರಿ ಅವರ ಎಮ್ಮೆ ಸಿಡಿಲು ಬಿಡಿದು ಸ್ಥಳದಲ್ಲಿಯೇ ಮೃತಪಟ್ಟಿದೆ.

ಬಿರುಗಾಳಿ ಸಹಿತ ಮಳೆಗೆ ರೂಡಗಿ ಗ್ರಾಮದ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸೂಮಾರು 50-60 ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ರೂಡಗಿ ಹಾಗೂ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ತೊಂದರೆಯಾಗಿದ್ದು, ಆದ್ಯತೆ ಮೇರೆಗೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT