ಗುರುವಾರ , ಜೂಲೈ 9, 2020
23 °C
ಆರೋಗ್ಯ ಸೇವೆ ಕಲ್ಪಿಸಲು ನಿರಾಕರಿಸಿದರೆ ನೋಂದಣಿ ರದ್ದು: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ

ವಿಜಯಪುರ| ಕಂಟೈನ್ಮೆಂಟ್ ವಲಯದಲ್ಲಿ ಆಸ್ಪತ್ರೆಗಳ ಸೇವೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ 19 ದೃಢಪಟ್ಟಿರುವ ಕಂಟೈನ್ಮೆಂಟ್ ವಲಯದಲ್ಲಿ ಖಾಸಗಿ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಶುಕ್ರವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಕಂಟೈನ್ಮೆಂಟ್‌ ವಲಯದಲ್ಲಿರುವ ಆಸ್ಪತ್ರೆಗಳು ಒಳರೋಗಿಗಳ ವಿಭಾಗ, ಹೆರಿಗೆ, ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುವಂತಿಲ್ಲ. ಕೇವಲ ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬಹುದಾಗಿದೆ ಎಂದರು.

ಕಂಟೈನ್ಮೆಂಟ್ ಪ್ರದೇಶದ ಆಸ್ಪತ್ರೆಗಳಲ್ಲಿ ಶೇ 25 ರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆಗೆ ಅವಕಾಶ ಇದೆ. ಅವರನ್ನು ಕಂಟೈನ್ಮೆಂಟ್ ವಲಯದಿಂದ ಸಂಚರಿಸಲು ಅವಕಾಶ ನೀಡದೆ, ಸೂಕ್ತ ಸುರಕ್ಷತಾ ಪರಿಕರಗಳೊಂದಿಗೆ ಆರೋಗ್ಯ ಸೇವೆ ಕಲ್ಪಿಸುವಂತೆ ಸೂಚಿಸಿದರು.

ಆರೋಗ್ಯಕ್ಕೆ ಸಂಬಂಧಿಸಿದ ತುರ್ತುಚಿಕಿತ್ಸಾ ಪ್ರಕರಣಗಳು ಬಂದಲ್ಲಿ ಅಂತಹ ರೋಗಿಗಳನ್ನು ತಜ್ಞವೈದ್ಯರ ಬಳಿ ಕಳುಹಿಸಲು ಪೊಲೀಸರ ನೆರವನ್ನು ಪಡೆಯಬಹುದಾಗಿದೆ. ಗೋಲಗುಮ್ಮಟ ಸಿಪಿಐ ಬಿ.ಕೆ. ಮುಕರ್ತಿಹಾಳ ಅವರ ಮೊ. ಸಂ.9480804232ಗೆ ಸಂಪರ್ಕಿಸಿ ನೆರವನ್ನು ಸಹ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಬಫರ್‌ಜೋನ್‌ ವ್ಯಾಪ್ತಿಯ ಆಸ್ಪತ್ರೆಗಳು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ನೋಂದಣಿ ರದ್ದು:

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತತಕ್ಷಣದಿಂದ ಕಾರ್ಯಾರಂಭಿಸಬೇಕು. ಇಲ್ಲವಾದರೆ, ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯಾದ್ಯಂತ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಹೊರತುಪಡಿಸಿ ಇನ್ನೂ ಕೆಲವು ಆಸ್ಪತ್ರೆಗಳು ತೆರೆಯದೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಅಂತಹ ಆಸ್ಪತ್ರೆಗಳು ತಕ್ಷಣ ತೆರೆದು ಸಾರ್ವಜನಿಕರ ಸೇವೆಗೆ ಅಣಿಯಾಗಬೇಕು ಎಂದರು.

ಜಿಲ್ಲೆಯಾದ್ಯಂತ ಇರುವಂತಹ 229 ಆರ್ಯುವೇದಿಕ್ ಕ್ಲಿನಿಕ್, 5 ಯುನಾನಿ, 29 ಹೋಮಿಯೋಪಥಿಕ್, 230 ಆಲೋಪಥಿಕ್ ಮತ್ತು 38 ಡೈಗ್ನೋಸ್ಟಿಕ್ ಆಸ್ಪತ್ರೆಗಳು ಯಾವುದೇ ಪರಿಸ್ಥಿತಿಯಲ್ಲಿ ಉಸಿರಾಣ ತೊಂದರೆ ಮತ್ತು ನೆಗಡಿ, ಕೆಮ್ಮು, ಜ್ವರ(ಐಎಲ್‍ಐ) ರೋಗಿಗಳನ್ನು ಉಪಚರಿಸುವಂತಿಲ್ಲ, ಇಂತಹ ರೋಗಿಗಳು ಕಂಡುಬಂದಲ್ಲಿ ತಕ್ಷಣ ತಜ್ಞವೈದ್ಯರ ಬಳಿಗೆ ಕಳುಹಿಸುವುದರ ಜೊತೆಗೆ ರೋಗಿ, ಸಂಬಂಧಿಸಿದ ಆಸ್ಪತ್ರೆಗೆ ತಲುಪಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಈ ಕುರಿತು ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಐಎಂಎ ಅಧ್ಯಕ್ಷರಿಗೂ ಮಾಹಿತಿ ಒದಗಿಸಬೇಕು. ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡಿರಬೇಕು ಎಂದು ತಿಳಿಸಿದರು.

ಕೋವಿಡ್-19 ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಗೆ ಸಮನ್ವಯ ಸಾಧಿಸಲಾಗುವುದು ಎಂದರು.

ಕೊರೊನಾ ಹೊರತು ಪಡಿಸಿ ಇತರೇ ಯಾವುದಾದರು ಸಾವು ಆಗಿದಲ್ಲಿ ದೃಡೀಕರಣ ಪ್ರಮಾಣ ಪತ್ರ ಇಟ್ಟುಕೊಳ್ಲುವುದರ ಜೊತೆಗೆ ಸಂಬಂಧಪಟ್ಟವರಿಗೂ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಕಂಟೆನ್ಮೆಂಟ್ ವಲಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡಬಾರದು, ಕೋವಿಡ್-19 ತಡೆಯುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.