ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿ: ಸದಸ್ಯರ ಆಗ್ರಹ

ಆಡಳಿತ, ವಿರೋಧ ಪಕ್ಷದವರ ನಡುವೆ ಆರೋಪ ಪ್ರತ್ಯಾರೋಪ; ಅಧಿಕಾರಿಗಳ ವಿರುದ್ಧ ಸದಸ್ಯರ ಕಿಡಿ
Last Updated 9 ಜುಲೈ 2021, 4:16 IST
ಅಕ್ಷರ ಗಾತ್ರ

ಯಾದಗಿರಿ:ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ವಿಲಾಸ್ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರುಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ನಗರಸಭೆ ಸದಸ್ಯರ ಕಾರ್ಯಗಳನ್ನು ಸರಿಯಾಗಿ ಅಧಿಕಾರಿಗಳು ಮಾಡುತ್ತಿಲ್ಲ. ಆದರೆ, ದಲ್ಲಾಳಿಗಳಿಂದ ಹೋಗುವ ಫೈಲ್‌ಗಳಿಗೆ ಮುಕ್ತಿಕೊಡಿಸುತ್ತಾರೆ. ನಮ್ಮ ಕೆಲಸಗಳೇ ಆಗದಿದ್ದರೆ ಜನ ಸಾಮಾನ್ಯರ ಕೆಲಸಗಳು ಹೇಗೆ ಆಗುತ್ತವೆ ಎಂದು ಅಧಿಕಾರಿಗಳ ವಿರುದ್ಧ ಸದಸ್ಯರಾದಸದಸ್ಯರಾದ ಲಲಿತಾ ಅನಪುರ, ವೆಂಕಟರೆಡ್ಡಿ ವನಕೇರಿ, ಹಣಮಂತ ನಾಯಕ, ಚನ್ನಕೇಶವಗೌಡ ಬಾಣತಿಹಾಳ, ಮಂಜುನಾಥ ದಾಸನಕೇರಿ, ಅಂಬಯ್ಯ ಶಾಬಾದಿ ಆಕ್ರೋಶ ವ್ಯಕ್ತಪಡಿಸಿದರು.

ಖಾತಾ ನಕಲುಸೇರಿದಂತೆ ಸಾರ್ವಜನಿಕರ ವಿವಿಧ ಕೆಲಸಗಳು ಸಕಾಲಕ್ಕೆ ಆಗದೆ ತೊಂದರೆ ಅನುಭವಿಸುವಂತಾಗಿದ್ದು, ಇದರಿಂದ ಜನಪ್ರತಿನಿಧಿಗಳ ಮೇಲೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ನಮಗೆ ನಿಂದನೆ ಇರುವುದಿಲ್ಲ ಎಂದು ಆರೋಪಿಸಿದರು.

ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ನಮ್ಮ ಕರೆ ಸ್ವೀಕರಿಸುವುದಿಲ್ಲ. ವಾರ್ಡ್‍ನಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪೌರಾಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

ಸದಸ್ಯ ಸುರೇಶ ಅಂಬಿಗೇರ ಮಾತನಾಡಿ,ಅಂಗನವಾಡಿ ಕಟ್ಟಡ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಿ ಹಲವು ದಿನಗಳು ಕಳೆದಿವೆ. ಈ ಬಗ್ಗೆ ಸಂಬಂಧಿಸಿದ ಸಿಬ್ಬಂದಿ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ಸದಸ್ಯ ಅಸದ್ ಚಾವೂಸ್‌ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆ ಹಣ ಸರ್ಕಾರಕ್ಕೆ ವಾಪಸ್‌ ಹೋಗುವ ಮುನ್ನ ಕೆಲಸ ಮಾಡಿ ಎಂದರು.

ತೆರವುಗೊಳಿಸುವ ಭರವಸೆ:

ಹೈಕೋರ್ಟ್ ಆದೇಶದಂತೆ ಗಾಂಧಿ ಚೌಕ್ ಬಳಿಯಿರುವ ಕಟ್ಟಡವನ್ನು ನೆಲಸಮಗೊಳಿಸಬೇಕು. ಸರ್ಕಾರದ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು ಎಂದು ನಗರಸಭೆ ಸದಸ್ಯರಾದ ಲಲಿತಾ ಅನಪುರ ಮತ್ತು ಹಣಮಂತ ನಾಯಕ ಹಾಗೂ ಚನ್ನಕೇಶವಗೌಡ ಬಾಣತಿಹಾಳ ಹಾಗೂ ಹಣಮಂತ ಇಟಗಿ ಆಗ್ರಹಿಸಿದರು.

ಗಾಂಧಿ ವೃತ್ತದಲ್ಲಿರುವ ನಗರಸಭೆಯ ವ್ಯಾಪ್ತಿಗೆ ಬರುವ ಕಟ್ಟಡಗಳನ್ನು ತೆರವುಗೊಳಿಸಲು ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿಯೇ ನಿರ್ಧರಿಸಿತ್ತು. ಆದರೆ, ತೆರವು ಕಾರ್ಯ ಇನ್ನೂ ಕೈಗೊಂಡಿಲ್ಲ. ಈವರೆಗೆ ಬಾಕಿ ಉಳಿದಿರುವ ಟೆಂಡರ್‌ಗಳಿಗೆ ನೋಟಿಸ್ ನೀಡಿ ಮರು ಟೆಂಡರ್‌ಗಳನ್ನು ಕರೆಯಲು ಸದಸ್ಯರು ಒತ್ತಾಯಿಸಿದರು. ಕೂಡಲೇ ಅದನ್ನು ತೆರವುಗೊಳಿಸಲಾಗುವುದು ಎಂದು ಅಧ್ಯಕ್ಷ ವಿಲಾಸ್ ಪಾಟೀಲ ಭರವಸೆ ನೀಡಿದರು.

ಹಳೆಯ ವಾಹನಗಳನ್ನು ಹರಾಜಿಗೆ ಹಾಕಲು ಟೆಂಡರ್‌ಗಳನ್ನು ಕರೆಯಬೇಕೆಂದು ಸದಸ್ಯರು ಒತ್ತಾಯಿಸಿದರು.

ನಿಜಶರಣ ಅಂಬಿಗರ ಚೌಡಯ್ಯ ಅವರ ಪುತ್ಥಳಿ ಸ್ಥಾಪನೆ ಮಾಡಲು ಜಾಗ ಮಂಜೂರಾತಿ ಮಾಡಬೇಕು. ಮುಂದಿನ ಸಾಮಾನ್ಯ ಸಭೆಯೊಳಗೆ ನೀಡದಿದ್ದರೇ ನಾವು ಕೋಲಿ ಸಮಾಜದ ನಾಲ್ವರು ಸದಸ್ಯರು ಬಹಿಷ್ಕಾರ ಮಾಡುತ್ತೇವೆ. ಮೊದಲು ಜಾಗ ಕೋಲಿ ಸಮಾಜ ನಗರಸಭೆಗೆ ದಾನ ನೀಡಿದೆ. ಇದೀಗ ಮರಳಿ ಅವರ ಹೆಸರಿಗೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದ ಸರಿಯಲ್ಲ ಎಂದು ಸದಸ್ಯರಾದ ಸುರೇಶ್ ಅಂಬಿಗೇರ, ಲಲಿತಾ ಅನಪುರ ಎಚ್ಚರಿಕೆ ನೀಡಿದರು.

ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ನಿರ್ಮಿಸುವ ಸ್ಥಳವನ್ನು ಮರು ಪರಿಶೀಲನೆ ಕೈಗೊಂಡು ನಂತರ ಆ ಸ್ಥಳವನ್ನು ಆ ಸಮಾಜದ ಅಧ್ಯಕ್ಷರಿಗೆ ಮರು ನೋಂದಾಯಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಕಾನೂನು ಬದ್ಧವಾಗಿ ಮರು ನೋಂದಣಿ ಮಾಡಿ ಟೆಂಡರ್ ಕರೆಯಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಲಾಯಿತು.

ನಗರಸಭೆಯಲ್ಲಿ ಪ್ರತಿಪಕ್ಷದ ಸದಸ್ಯರಿಗಿಂತಆಡಳಿತ ಪಕ್ಷದ ಸದಸ್ಯರೇ ಹೆಚ್ಚಿಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಮಾತಿನಿಂದ ಅಧ್ಯಕ್ಷ ಮತ್ತು ಪೌರಾಯುಕ್ತರಿಗೆ ತಿವಿದ ಘಟನೆ ನಡೆಯಿತು.

ಪೌರಾಯುಕ್ತ ಭೀಮಣ್ಣ ನಾಯಕ, ನಗರಸಭೆಯ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ, ಅಧಿಕಾರಿಗಳು ಹಾಗೂ ನಗರಸಭೆಯ ಸದಸ್ಯರು ಇದ್ದರು.

***

ಕಾರ್ಯರೂಪಕ್ಕೆ ಬಾರದ ನಿರ್ಣಯಗಳು

ನಗರಸಭೆಯ ಆದಾಯವನ್ನು ಸಂಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಕೇವಲ ಬಜೆಟ್‍ನಿಂದ ದೊರೆತ ಹಣದಿಂದ ಅಭಿವೃದ್ಧಿಗೊಳಿಸಲು ಅಸಾಧ್ಯ. ಹಿಂದೆ ನಡೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆ ನಿರ್ಣಯಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿವೆ ಎಂದು ಸದಸ್ಯರು ಪ್ರಶ್ನಿಸಿದರು.

ಒಂದರಿಂದ ಹದಿನೇಳನೇ ವಾರ್ಡ್‍ಗಳವರೆಗೂ ಹೆಚ್ಚಾಗಿ ಸ್ಲಂ ನಿವಾಸಿಗಳೇ ವಾಸವಾಗಿದ್ದು, ಅವರಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಶೌಚಾಲಯ ಹಾಗೂ ರಸ್ತೆಗಳ ಸಮಸ್ಯೆ ಹೆಚ್ಚಾಗಿದೆ. ಪೌರಾಯುಕ್ತರು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ನಗರದ ಸುತ್ತಲೂ ನೆಟ್ಟ ಸಸಿಗಳಿಗೆ ರಕ್ಷಿಸುವುದಕ್ಕಾಗಿ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಬೇಕೆಂದು ಸದಸ್ಯರು ಸಲಹೆ ನೀಡಿದರು.

ನಗರ ಸಭೆಯ ವ್ಯಾಪ್ತಿಗೆ ಬರುವ ಎಲ್ಲಾ ಆಸ್ತಿಗಳ ಸಂಪೂರ್ಣ ವರದಿಯನ್ನು ಸಭೆಯ ಮುಂದೆ ವರದಿ ಮಾಡಬೇಕು. ಎಲ್ಲಾ ವಾರ್ಡ್‍ಗಳಿಗೂ ಅತಿ ಶೀಘ್ರವಾಗಿ ಸ್ವಚ್ಛತಾ ಕಾರ್ಯಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.

***

ನಗರದ ಪ್ರತಿಯೊಂದು ವಾರ್ಡ್‍ಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕು
ವಿಲಾಸ್‌ ಪಾಟೀಲ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT