ಮಂಗಳವಾರ, ಜೂನ್ 28, 2022
28 °C

ಒಂದೇ ದಿನ 10 ಸಾವಿರ ಜನರಿಗೆ ಚುಚ್ಚುಮದ್ದು: ಕೋವಿಡ್ ಲಸಿಕಾಕರಣಕ್ಕೆ ಡಿಸಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು, ಗ್ರಾಮಗಳಲ್ಲಿ ಕೋವಿಡ್‌ ಲಸಿಕಾ ಅಭಿಯಾನ ಶುಕ್ರವಾರ ನಡೆಯಿತು. 45 ವರ್ಷ ಮೇಲ್ಪಟ್ಟ ಎಲ್ಲ ವರ್ಗದ ಜನರಿಗೆ ಲಸಿಕೆ ನೀಡಿಕೆ ವಿವಿಧ ಕಡೆ ನಡೆಯಿತು.

ನಗರದ ಹಿಂದಿ ಪ್ರಚಾರ ಸಭಾಂಗಣ, ಬೀಡಿ ಕಾರ್ಮಿಕ ಆಸ್ಪತ್ರೆ ಹಾಗೂ ಮಾರ್ಕೆಟ್‌ನಲ್ಲಿ ಬೀದಿ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ, ಕಿರಾಣಿ ಅಂಗಡಿ ಮಾಲೀಕ, ಕೆಲಸಗಾರರು ಇನ್ನಿತರ ಫಲಾನುಭವಿಗಳ ಲಸಿಕಾಕರಣಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಚಾಲನೆ ನೀಡಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಆರ್‌ಸಿಎಚ್ ಅಧಿಕಾರಿ ಡಾ. ಸೂರ್ಯಪ್ರಕಾಶ್ ಕಂದಕೂರ, ಯಾದಗಿರಿ ತಹಶೀಲ್ದಾರ್‌ ಚೆನ್ನಮಲ್ಲಪ್ಪ ಘಂಟಿ ಇದ್ದರು.

10 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ: 18 ವರ್ಷ ಮೇಲ್ಪಟ್ಟ ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ವರ್ಗದ ಜನರಿಗೆ ಶುಕ್ರವಾರ ಸಂಜೆ 4 ಗಂಟೆವರೆಗೆ 10,348 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ.ಆರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಎಲ್ಲಾ ಕಡೆಗಳಲ್ಲೂ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕೋರಿದರು.

ಜಿಲ್ಲೆಯಾದ್ಯಂತ ಕೋವಿಡ್‌ ಲಸಿಕೆ ಹಾಕುವ ಕಾರ್ಯ ಎಂಸಿಎಚ್‌ ಆಸ್ಪತ್ರೆ (ಹಳೆ ಜಿಲ್ಲಾಸ್ಪತ್ರೆ), 2 ತಾಲ್ಲೂಕು ಆಸ್ಪತ್ರೆ, 6 ಸಮುದಾಯ ಆರೋಗ್ಯ ಕೇಂದ್ರ, 44 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 169 ಉಪಕೇಂದ್ರಗಳಲ್ಲಿ ನಡೆಯುತ್ತಿದ್ದು, ಜೊತೆಗೆ ಇಲಾಖಾವಾರು ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲಾಯಾದ್ಯಂತ ಕಳೆದ ನಾಲ್ಕೂವರೆ ತಿಂಗಳಿನಿಂದ ಕೋವಿಡ್ ಲಸಿಕಾಕರಣ ಯುದ್ಧದೋಪಾದಿಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಲ್ಲೆಯ ಎಲ್ಲಾ ಶಾಸಕರು ಹಾಗೂ ಎಲ್ಲಾ ಹಂತದ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( ಆರ್‌ಸಿಎಚ್‌ಒ ವಿಭಾಗ) ಹಾಗೂ ಎಲ್ಲಾ ಇಲಾಖೆಗಳ ಸಿಬ್ಬಂದಿಗಳ ಸಹಕಾರದೂಂದಿಗೆ ಗುರಿ ಸಾಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶಾರದಾ ನೇತೃತ್ವದಲ್ಲಿ ಲಸಿಕೆ ಹಾಕಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಚಂದ್ರಯ್ಯ ಕಾವಲಿ, ದೇವಪ್ಪ ಸುರಪುರ, ವೀರೇಶ್ ಚಲುವಾದಿ, ಆರೋಗ್ಯ ಇಲಾಖೆಯ ಶ್ವೇತಾ, ಗ್ರಾಮ ಪಂಚಾಯಿತಿ ಸಿಬ್ಬಂದಿಯಾದ ಈರಣ್ಣ ಕಾವಲಿ ಮತ್ತು ಶರಣಪ್ಪ ಏವೂರ್, ಲಕ್ಷ್ಮಣ ದಿವಟೆ, ರಾಮು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು