ಬುಧವಾರ, ಮೇ 12, 2021
26 °C
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕಟ್ಟುನಿಟ್ಟಿನ ಸೂಚನೆ

ಯಾದಗಿರಿ: ‘ಕಂಟೇನ್ಮೆಂಟ್‌’ನಲ್ಲಿ ಕರ್ಫ್ಯೂ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಕಂಟೇನ್ಮೆಂಟ್‌ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಮನೆಯಿಂದ ಹೊರಗಡೆ ಬರಲು ಅವಕಾಶವಿಲ್ಲ. ಇಡೀ ಪ್ರದೇಶ ಸೀಲ್ ಆಗಿರುವಂತೆ ನೋಡಿಕೊಳ್ಳುವ ಮತ್ತು ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡುವ ಜವಾಬ್ದಾರಿ ಪೊಲೀಸ್ ಸಿಬ್ಬಂದಿಯದ್ದಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ತಾಲ್ಲೂಕಿನ ಕಂಟೇನ್ಮೆಂಟ್‌ ಝೋನ್‌ಗಳಾದ ವೆಂಕಟೇಶ ನಗರ (ಅಲ್ಲಿಪುರ ತಾಂಡಾ), ಕಂಚಗಾರಹಳ್ಳಿ ತಾಂಡಾ, ಚಾಮನಳ್ಳಿ ತಾಂಡಾಗಳಲ್ಲಿ ಕೈಗೊಂಡಿರುವ ಬಂದೋಬಸ್ತ್ ಕ್ರಮಗಳನ್ನು ಅವರು ಮಂಗಳವಾರ ಪರಿಶೀಲಿಸಿದರು.

‘ನಿಯಂತ್ರಿತ ವಲಯದ ಎಲ್ಲ ಪ್ರವೇಶ ದ್ವಾರಗಳಲ್ಲೂ ತಡೆಗೋಡೆ ಹಾಕುವ ಮೂಲಕ ನಾಕಾಬಂದಿ ಮಾಡಬೇಕು. ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರ ಇರಬೇಕು. ಯಾವುದೇ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದು. ಗೃಹ ದಿಗ್ಬಂಧನದಲ್ಲಿ ಇರುವವರು ನಿಗದಿತ ಅವಧಿ ಮುಗಿಯುವವರೆಗೂ ಕಡ್ಡಾಯವಾಗಿ ಮನೆಯಲ್ಲಿ ಇರಬೇಕು. ಅಂಥವರು ಹೊರಗಡೆ ತಿರುಗಾಡುವುದು ಕಂಡುಬಂದರೆ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು. ಅವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ನಿಯಂತ್ರಿತ ವಲಯದಲ್ಲಿ ಆರಂಭಿಸಿರುವ ಆರೋಗ್ಯ ಔಟ್‌ಪೋಸ್ಟ್‌ನಲ್ಲಿ ಒಬ್ಬರು ವೈದ್ಯರು ಸತತ ಐಇಸಿ ಪ್ರಚಾರ ಕೈಗೊಳ್ಳಬೇಕು. ದಿನಕ್ಕೆರಡು ಬಾರಿ ಜನಸಂಪರ್ಕ ಪತ್ತೆ ಕಾರ್ಯಕ್ಕೆ ಅಗತ್ಯ ಸಂಖ್ಯೆಯ ಕ್ಷೇತ್ರ ಸಿಬ್ಬಂದಿ ನಿಯೋಜಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿ ನಿಯಂತ್ರಿತ ವಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಘನತ್ಯಾಜ್ಯ ನಿರ್ವಹಣೆ ಮತ್ತು ಸೋಂಕು ನಿವಾರಕಗಳ ಸಿಂಪಡಣೆ ಮಾಡಬೇಕು. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯ ವಲಸೆ ಕಾರ್ಮಿಕರಿಗೆ ಅಜೀಂ ಪ್ರೇಮ್‌ಜೀ ಫೌಂಡೇಷನ್ ವತಿಯಿಂದ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಮನೆಯಲ್ಲಿ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಇದ್ದಲ್ಲಿ ಅಂಥವರಿಂದ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ: 08473–253950 ಸಂಪರ್ಕಿಸಬೇಕು’ ಎಂದು ಹೇಳಿದರು.

ಯರಗೋಳ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ವಾಹನಗಳ ಓಡಾಟ ಮತ್ತು ಪೊಲೀಸ್ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಸಿಪಿಐ ಶರಣಗೌಡ ನ್ಯಾಮಣ್ಣವರ, ಗ್ರಾಮೀಣ ಠಾಣೆ ಪಿಎಸ್‍ಐ ವೀರಣ್ಣ ಮಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು