ಅಜಲಾಪುರ(ಸೈದಾಪುರ): ಪ್ರಾಣ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಮಹಾದೇವಪ್ಪ ಮಡಿವಾಳ ಅವರ ಕುಟುಂಬದವರನ್ನು ಭೇಟಿಯಾದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶರಣಿಕ ಕುಮಾರ ದೋಕ ಅವರು ಸಾಂತ್ವನ ಹೇಳಿ, ವೈಯಕ್ತಿಕ ₹15 ಸಾವಿರ ಧನಸಹಾಯ ನೀಡಿದರು.
ಸಮೀಪದ ಅಜಲಾಪುರ ಗ್ರಾಮದ ಮಹಾದೇವಪ್ಪ ಮಡಿವಾಳ(44) ಅವರು ಆಗಸ್ಟ್ 13ರಂದು ತುಮಕೂರಿನ ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೃಪಟ್ಟಿದ್ದರು.
ಕೃಷಿ ಹೊಂಡದ ನೀರಲ್ಲಿ ಮುಳುಗುತ್ತಿರುವವರನ್ನ ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೆ ಒಬ್ಬ ವಿದ್ಯಾರ್ಥಿಯನ್ನು ಪ್ರಾಣಾಪಾಯದಿಂದ ಕಾಪಾಡಿ ಉಳಿದವರನ್ನು ಕಾಪಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ. ಇಂತಹವರು ಅಪರೂಪ. ಕುಟುಂಬಕ್ಕೆ ಆಧಾರವಾಗಿದ್ದ ಮಹಾದೇವಪ್ಪ ಮಡಿವಾಳ ಅವರನ್ನು ಕಳೆದುಕೊಂಡಿದೆ. ಘಟನೆಯಿಂದ ಕುಟುಂಬದ ಸದಸ್ಯರಿಗೆ ದಿಕ್ಕುತೋಚದಂತಾಗಿದೆ. ಸಮಾಜ, ಸಮುದಾಯ, ಜನಪ್ರತಿನಿಧಿಗಳು ಮತ್ತು ಸರ್ಕಾರ ಕುಟುಂಬದ ಸಹಾಯಕ್ಕೆ ನಿಲ್ಲಬೇಕು. ಆಸ್ತಿ-ಪಾಸ್ತಿ ಇಲ್ಲದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದರು. ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಕನಸು ಹಾಗೆ ಉಳಿದುಕೊಂಡಿದ್ದು, ಸರ್ಕಾರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನ ರೆಡ್ಡಿ ಶೆಟ್ಟಿಹಳ್ಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ಯುವ ಅಧ್ಯಕ್ಷ ವಿಜಯ ಕಂದಳ್ಳಿ, ತಿಮ್ಮ ರೆಡ್ಡಿ ಬೆಳಗುಂದಿ, ವೆಂಕಟೇಶ ನಾಯಕ ಕೂಡ್ಲೂರು, ಹನುಮಂತ ದೊಡ್ಮನೆ, ಜಗದೀಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.