ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ ಹೋದ ಜೋಳದಡಗಿ ಬ್ಯಾರೇಜ್

ನದಿ ದಂಡೆಯ ಜನರಿಗೆ ಪ್ರವಾಹದ ನಂತರವೂ ಬೆಂಬಿಡದ ಸಂಕಷ್ಟ
Last Updated 23 ಅಕ್ಟೋಬರ್ 2020, 1:51 IST
ಅಕ್ಷರ ಗಾತ್ರ

ಶಹಾಪುರ/ವಡಗೇರಾ: ಭೀಮಾ ನದಿಯ ಪ್ರವಾಹದಿಂದ ಜೋಳದಡಗಿ ಬ್ರಿಡ್ಜ್‌ ಕಂ. ಬ್ಯಾರೇಜ್ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದ ಸೈದಾಪುರ-ಜೋಳದಡಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಸೇತುವೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

‘ಮುಳುಗು ಸೇತುವೆಯಂತೆ ಬ್ರಿಡ್ಜ್‌ ನಿರ್ಮಿಸಲಾಗಿದೆ. ಸೇತುವೆ ನೆಲಮಟ್ಟದಿಂದ ಕೆಳಗಡೆ ಇದೆ. ಬ್ಯಾರೇಜಿನ ಉದ್ದ 550 ಮೀಟರ್ ಇದೆ. 1,960 ಹೆಕ್ಟೇರ್ ನೀರಾವರಿ ಪ್ರದೇಶ ವ್ಯಾಪ್ತಿ ಹೊಂದಿದ್ದು, 1.29 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. 2003ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಅಂದಿನ ಯೋಜನಾ ವೆಚ್ಚ ₹24.50 ಕೋಟಿ ಆಗಿತ್ತು. ಸ್ವಯಂ ಚಾಲಿತ ಗೇಟ್ ಅಳವಡಿಸುವ ಕಾರ್ಯ ಸಾಗಿದೆ’ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದರು.

ರಾಜ್ಯದಲ್ಲಿಯೇ ವಡಗೇರಾ ತಾಲ್ಲೂಕು ಹೆಚ್ಚು ನೀರಾವರಿ ಪ್ರದೇಶಕ್ಕೆ ಒಳಪಡುವ ಕ್ಷೇತ್ರವೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಅದರ ಜೊತೆಗೆ ಪ್ರಸಕ್ತ ಬಾರಿ ಹೆಚ್ಚು ಹಾನಿ ಸಂಭವಿಸಿದ ಪ್ರದೇಶವು ಆಗಿದೆ. ಭೀಮಾ ನದಿಯ ದಂಡೆಯಲ್ಲಿ 15ಕ್ಕೂ ಹೆಚ್ಚು ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ 14ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ತಾಲ್ಲೂಕಿನಲ್ಲಿ ಗುರುಸುಣಗಿ, ಜೋಳದಡಗಿ ಎರಡು ಭೀಮಾ ಬ್ಯಾರೇಜ್ ಇವೆ. ಅಲ್ಲದೆ ಕೃಷ್ಣಾ ನದಿಗೆ ಗೂಗಲ್ ಬಳಿ ಬ್ಯಾರೇಜ್ ಸಹ ಹೊಂದಿದೆ.

ಪ್ರಸಕ್ತ ವರ್ಷ ಮಾತ್ರ ತಾಲ್ಲೂಕಿನ ಭೀಮಾ ಮತ್ತು ಕೃಷ್ಣಾ ನದಿ ದಂಡೆಯ ಜನತೆಯ ಬದುಕು ಧಾರುಣವಾಗಿದೆ. ಪ್ರವಾಹದಿಂದ ನೀರಿನಲ್ಲಿಯೇ ಬದುಕು ಕೊಚ್ಚಿಕೊಂಡು ಹೋಗಿದೆ. ಕಟಾವಿಗೆ ಬಂದಿದ್ದ ಭತ್ತ ಕೊಯ್ಲು ಮಾಡಬೇಕು, ಹತ್ತಿ ಕೀಳಬೇಕು ಎನ್ನುವಾಗ ಪ್ರವಾಹ ಒಕ್ಕರಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ನದಿಯ ನೀರನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ರೈತರಿಗೆ ಮತ್ತು ಸುತ್ತಲಿನ ಗ್ರಾಮಗಳ ಜನತೆಗೆ ಪ್ರವಾಹದಿಂದಾಗಿ ನೀರೇ ಶಾಪವಾಗಿ ಪರಿಣಮಿಸಿದೆ. ಪ್ರವಾಹದ ಸೆಳೆತಕ್ಕೆ ಜಮೀನುಗಳ ಫಲವತ್ತಾದ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ. ವಿದ್ಯುತ್ ಮೋಟಾರ್‌, ವಿದ್ಯುತ್ ಕಂಬ, ವಿದ್ಯುತ್‌ ಪರಿವರ್ತಕ, ಪೈಪು ಕಿತ್ತಿ ಹೋಗಿವೆ. ಅವೆಲ್ಲವನ್ನು ಸರಿಪಡಿಸಲು ಹೆಚ್ಚಿನ ಸಮಯ ಬೇಕು. ಹಣ ಎಲ್ಲಿಂದ ತರಬೇಕು. ಮುಂದಿನ ಜೀವನ ಸಾಗಿಸುವುದಾದರು ಹೇಗೆ? ಎಂದು ನದಿ ದಂಡೆಯ ಭಾಗದಲ್ಲಿ ಸಂಕಷ್ಟ ಎದುರಿಸುತ್ತಿರುವ ಜನರ ಪ್ರಶ್ನೆಯಾಗಿದೆ.

ಶಹಾಪುರ ತಾಲ್ಲೂಕಿನ ಭೀಮಾ ನದಿ ದಂಡೆಯಲ್ಲಿ 10 ಹಾಗೂ ಕೃಷ್ಣಾ ನದಿ ದಂಡೆಗೆ 14 ಹಳ್ಳಿಗಳು ವಡಗೇರಾ ತಾಲ್ಲೂಕಿನ ರೈತರು ಅನುಭವಿಸಿದ ದುಸ್ಥಿತಿಯನ್ನು ಇಲ್ಲಿನ ರೈತರು ಕೂಡ ಅನುಭವಿಸಿದ್ದಾರೆ. ಪ್ರವಾಹದಿಂದ ಹೆಚ್ಚು ನಷ್ಟ ಅನುಭವಿಸಿದ್ದು ಶಹಾಪುರ ಮತ್ತು ವಡಗೇರಾ ತಾಲ್ಲೂಕಿನ ಗ್ರಾಮಗಳು. ಸರ್ಕಾರ ಇವೆರಡೂ ತಾಲ್ಲೂಕುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಂಕಷ್ಟ ಎದುರಿಸಿದ ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT