ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಎಸ್‌ ಮುಖಂಡ ಗುರು ಪಾಟೀಲ ಮನೆಗೆ ಸಚಿವರ ಭೇಟಿ: ರಾಜಕೀಯ ವಲಯದಲ್ಲಿ ಚರ್ಚೆ

Published : 9 ನವೆಂಬರ್ 2023, 5:11 IST
Last Updated : 9 ನವೆಂಬರ್ 2023, 5:11 IST
ಫಾಲೋ ಮಾಡಿ
Comments

ಶಹಾಪುರ: ತಾಲ್ಲೂಕಿ ಶಿರವಾಳ ಗ್ರಾಮಕ್ಕೆ ಬುಧವಾರ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿದಾಗ ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡ ಗುರು ಪಾಟೀಲ ಶಿರವಾಳ ಅವರು ಸಚಿವರಿಗೆ ದೇಗುಲಗಳ ಪರಿಚಿಯಿಸಿದರು. ನಂತರ ಅವರನ್ನು ತಮ್ಮ ಮನೆಗೆ ಉಪಾಹಾರ ಸೇವನೆಗೆ ಕರೆದುಕೊಂಡು ಹೋಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಬಿಜೆಪಿ ಟಿಕೆಟ್ ಸಿಗದ ಕಾರಣ ಹೊರ ಬಂದು 2023ರಲ್ಲಿ ಜೆಡಿಎಸ್‌ನಿಂದ ಶಹಾಪುರ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಗುರು ಪಾಟೀಲ ಶಿರವಾಳ ಅವರು ಕೆಲ ದಿನಗಳಿಂದ ತಟಸ್ಥವಾಗಿ ಉಳಿದುಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿನ ಜೆಡಿಎಸ್ ಪಕ್ಷವು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿತು. ಮತ್ತೆ ಮರಳಿ ಬಿಜೆಪಿ ತೆರಳಲು ಮಾನಸಿಕವಾಗಿ ಸಿದ್ಧರಿಲ್ಲದ ಗುರು ಪಾಟೀಲ ಅವರು ಕಾಂಗ್ರೆಸ್ ಕಡೆ ವಾಲುವ ಲಕ್ಷಣಗಳು ದಟ್ಟವಾಗಿವೆ. ಅದಕ್ಕೆ ಪೂರಕ ಎನ್ನುವಂತೆ ಉಪಾಹಾರ ಸೇವನೆ ನೆಪದಲ್ಲಿ ಶಿರವಾಳ ಅವರ ಮನೆಯಲ್ಲಿ ಕೆಲ ಹೊತ್ತು ರಾಜಕೀಯ ಮಾತುಕತೆ ನಡೆದಿವೆ’ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ಸಚಿವ ಎಚ್.ಕೆ.ಪಾಟೀಲ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಗುರು ಪಾಟೀಲ ಶಿರವಾಳ ಅವರು ಭಾಗವಹಿಸಿದ್ದು ಗಮನಾರ್ಹವಾಗಿದೆ. ಅಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ ಸಾಥ್ ನೀಡಿದರು. ನಂತರ ಶಹಾಪುರ ನಗರದ ಕನ್ಯಾಕೊಳ್ಳುರ ಅಗಸಿ ಪ್ರದೇಶಕ್ಕೆ ಸಚಿವ ಎಚ್.ಕೆ.ಪಾಟೀಲ ಹಾಗೂ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿದಾಗ ಜೆಡಿಎಸ್ ಮುಖಂಡ ಮಲ್ಲಣ್ಣ ಮಡ್ಡಿ ಸಾಹು ಇಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಿರುವುದು ರಾಜಕೀಯ ಮೇಲಾಟ ಶುರುವಾಗಿದೆ ಎಂದು ಅಲ್ಲಿನ ಜನತೆ ಮಾತನಾಡುವುದು ಕೇಳಿ ಬಂತು.

‘ಚುನಾವಣೆಯ ಸಂದರ್ಭದಲ್ಲಿ ಜೀವದ ಹಂಗು ತೊರೆದು ಹೋರಾಟ ಮಾಡಿದ್ದೇವೆ. ಈಗ ಏಕಾಏಕಿ ಸಚಿವರು ನಮ್ಮ ಗ್ರಾಮಕ್ಕೆ ಬಂದಿದ್ದಾರೆ ಎಂಬ ನೆಪ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ನೋವುಂಟು ಮಾಡಿದೆ. ಸೌಜನ್ಯದ ನೆಪ ಬೇಡ. ರಾಜಕೀಯವಾಗಿ ಎಲ್ಲವನ್ನು ಎದುರಿಸುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ವಿನಃ ಹೊಂದಾಣಿಕೆಯ ಪ್ರದರ್ಶನ ಮಾಡಿಕೊಳ್ಳಬಾರದು’ ಎಂದು ಜೆಡಿಎಸ್ ಮುಖಂಡರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಗುರು ಪಾಟೀಲ ಶಿರವಾಳ ಚರ್ಚೆಯಲ್ಲಿ ಮಗ್ನರಾಗಿರುವುದು
ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಗುರು ಪಾಟೀಲ ಶಿರವಾಳ ಚರ್ಚೆಯಲ್ಲಿ ಮಗ್ನರಾಗಿರುವುದು

‘ರಾಜಕೀಯ ಉದ್ದೇಶವಿಲ್ಲ’

ಇಬ್ಬರು ಸಚಿವರು ಗ್ರಾಮಕ್ಕೆ ಭೇಟಿ ನೀಡಿದಾಗ ಸೌಜನ್ಯಕ್ಕಾಗಿ ಭೇಟಿಯಾಗಿ ಸ್ಮಾರಕಗಳ ಸಂರಕ್ಷಣೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲ. ನಮ್ಮ ಗ್ರಾಮಕ್ಕೆ ಬಂದಿದ್ದಾರೆ ಎಂಬ ಕಾರಣದಿಂದ ಉಪಾಹಾರ ಸೇವನೆಗೆ ಮನೆಗೆ ಕರೆದುಕೊಂಡು ಬಂದಿರುವೆ. ಇದರಲ್ಲಿ ರಾಜಕೀಯ ಕಲಬೆರಕೆ ಮಾಡಬೇಡಿ’ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT