ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ, ಟ್ಯಾಕ್ಸಿ ಚಾಲಕರಿಗೆ ತೈಲ ಬರೆ

ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ; ಕಂಗೆಟ್ಟ ಚಾಲಕರು
Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಟ್ಯಾಕ್ಸಿ, ಆಟೊ ಚಾಲಕರು ಈಗ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ ಪೆಟ್ರೋಲ್‌ ಬೆಲೆ ₹83.31, ಡೀಸೆಲ್ ₹76.77ಇತ್ತು. ಶುಕ್ರವಾರಕ್ಕಿಂತಪೆಟ್ರೋಲ್‌ 25 ಪೈಸೆ, ಡೀಸೆಲ್‌ 20 ಪೈಸೆ ಹೆಚ್ಚಳವಾಗಿದೆ. ಜೂನ್ 7ರಿಂದ ಇಂಧನ ದರ ಪರಿಷ್ಕರಣೆ ಮಾಡಲಾಗಿದೆ. ಅಂದಿನಿಂದ ಏರುಗತಿಯಲ್ಲಿಯೇ ಸಾಗುತ್ತಿದೆ.ಸತತ 21 ದಿನವೂ ಏರಿಕೆಯಾಗಿದೆ.

ಲಾಕ್‌ಡೌನ್‌ ವೇಳೆ ಆದಾಯವಿಲ್ಲದೆ ಮನೆಯಲ್ಲಿದ್ದ ಚಾಲಕರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತೆ ಇಂಧನ ದರ ಏರುಗತಿಯಲ್ಲಿದ್ದು, ಚಾಲಕರು ದುಬಾರಿ ಬೆಲೆಗೆ ತತ್ತರಿಸಿದ್ದಾರೆ.

‘ಲಾಕ್‌ಡೌನ್‌ ವೇಳೆ ₹66 ಇದ್ದ ಡೀಸೆಲ್‌ದರ ಈಗ ಏಕಾಏಕಿ ₹76ಆಗಿದೆ. ಇದರಿಂದ ಆಟೊ ಓಡಿಸಲು ಸಮಸ್ಯೆಯಾಗಿದೆ. ಹೆಚ್ಚು ಜನರನ್ನು ತುಂಬಿಸಲು ಆಗುತ್ತಿಲ್ಲ. ಹೀಗಾಗಿ ₹5ರಿಂದ ₹10 ಪ್ರಯಾಣ ದರಏರಿಕೆ ಮಾಡಿದ್ದೇವೆ. ಆದರೆ, ಗ್ರಾಹಕರು ಚೌಕಾಶಿ ಮಾಡುತ್ತಾರೆ’ ಎನ್ನುತ್ತಾರೆ ಆಟೊ ಚಾಲಕ ಮಲ್ಲಿಕಾರ್ಜುನ.

‘ನಗರದ ಗಾಂಧಿ ವೃತ್ತದಿಂದ ಹಳೆ ಬಸ್‌ ನಿಲ್ದಾಣದವರೆಗೆ ಮೊದಲು ₹10 ದರ ಇತ್ತು. ಇದೀಗ ₹15 ಮಾಡಲಾಗಿದೆ. ನಡುವೆ ಇಳಿದುಕೊಂಡರೆ ₹10 ತೆಗೆದುಕೊಳ್ಳುತ್ತೇವೆ. ಕೆಲ ಗ್ರಾಹಕರು ಸ್ಪಂದಿಸಿದರೆ, ಇನ್ನು ಕೆಲವರು ವಾಗ್ವಾದಕ್ಕೆ ಇಳಿಯುತ್ತಾರೆ’ ಎಂದರು ಅವರು.

‘ಜಿಲ್ಲೆಯಲ್ಲಿ ಸುಮಾರು ಎರಡೂವರೆ ಸಾವಿರ ಆಟೊಗಳು ಇರಬಹುದು. ಇದರಲ್ಲಿ ಕೆಲವರು ಈ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿ ಆರಂಭಿಸಿದ್ದಾರೆ. ಅನಿವಾರ್ಯ ಇದ್ದವರು ಮಾತ್ರ ಆಟೊ ಓಡಿಸುತ್ತಿದ್ದಾರೆ. ಊಟಕ್ಕೂ,ಇಂಧನ ತುಂಬಿಸಲು ಪರದಾಡುವ ಸ್ಥಿತಿ ಇದೆ’ ಎಂದು ತಿಳಿಸಿದರು.

ಇದು ಆಟೊ ಚಾಲಕರ ಸಮಸ್ಯೆಯಾದರೆ ಟ್ಯಾಕ್ಸಿ ಚಾಲಕರ ಗೋಳು ಮತ್ತೊಂದು ಬಗೆಯದು. ಲಾಕ್‌ಡೌನ್‌ ಪರಿಣಾಮ ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳವಾಗಿದೆ. ಮೊದಲು ₹10ರಿಂದ ₹11 ಕಿ.ಮೀ ಪ್ರಯಾಣ ದರಇತ್ತು. ಈಗ ₹13ರಿಂದ ₹14ಕ್ಕೆ ಏರಿಕೆ ಮಾಡಲಾಗಿದೆ. ಇಂಧನ ದರ ಏರಿಕೆಯಿಂದ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ.

‘ಇಂಧನ ದರ ಹೆಚ್ಚಳವಾಗಿದ್ದರಿಂದ ನಾವು ದರ ಏರಿಸಿದ್ದೇವೆ. ಆದರೆ, ಗ್ರಾಹಕರು ಮೊದಲಿಗೆ ದರ ಕೇಳುತ್ತಿದ್ದಾರೆ. ಇದರಿಂದ ನಷ್ಟಕ್ಕೆ ಸಿಲುಕಿದ್ದೇವೆ. ಊಟ, ಮನೆಬಾಡಿಗೆ ಕಟ್ಟಲು ಸಮಸ್ಯೆ ಎದುರಿಸುತ್ತಿದ್ದೇವೆ. ನಮ್ಮ ನೆರವಿಗೆ ಸರ್ಕಾರ ಧಾವಿಸಬೇಕು. ಮತ್ತಷ್ಟು ಸಹಾಯಧನ ನೀಡಬೇಕು’ ಎಂದು ಟ್ಯಾಕ್ಸಿ ಚಾಲಕ ಗುಂಡಪ್ಪ ಹೇಳಿದರು.

ಎಲ್ಲರಿಗೂ ತಲುಪಿಲ್ಲ ಸಹಾಯಧನ!

ಜಿಲ್ಲೆಯಲ್ಲಿ ಟ್ಯಾಕ್ಸಿ, ಆಟೊ ಚಾಲಕರಿಗೆ ಇನ್ನು ಸರ್ಕಾರದಿಂದ ಸಹಾಯಧನ ತಲುಪಿಲ್ಲ. ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಚಾಲಕರಿಗೆ ಸರ್ಕಾರವೇ ₹5000 ಸಹಾಯಧನ ನೀಡಲು ಉದ್ದೇಶಿಸಿತ್ತು. ಆದರೆ, ಎಲ್ಲರಿಗೂ ಹಣ ತಲುಪಿಲ್ಲ.

‘ನಾವು 5 ಜನ ಒಟ್ಟಿಗೆ ಅರ್ಜಿ ಸಲ್ಲಿಸಿದ್ದೀವಿ. ಇದರಲ್ಲಿ ಒಬ್ಬರಿಗೆ ಮಾತ್ರ ಬಂದಿದ್ದು, ಇನ್ನುಳಿದ ನಾಲ್ವರಿಗೆ ಹಣ ಬಂದಿಲ್ಲ’ ಎಂದು ಚಾಲಕರೊಬ್ಬರು ತಿಳಿಸಿದರು.

ಸಹಾಯಧನಕ್ಕಾಗಿಕಾದು 2 ತಿಂಗಳಾಗುತ್ತಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಅನುದಾನ ಬರೀ ಘೋಷಣೆಗೆ ಸೀಮಿತವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಆಟೊ, ಟ್ಯಾಕ್ಸಿ ಚಾಲಕರು ಆಕ್ರೋಶ ಹೊರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT