ಶುಕ್ರವಾರ, ಏಪ್ರಿಲ್ 23, 2021
32 °C
ಮಳೆ ತರುವಂತೆ ರೈತರಿಂದ ಜೋಕುಮಾರಸ್ವಾಮಿಗೆ ಪ್ರಾರ್ಥನೆ

ಗಣಪ ಹೋದ, ಜೋಕುಮಾರ ಬಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಗ್ರಾಮೀಣ ಜನಪದ ಹಬ್ಬಗಳಲ್ಲೊಂದಾದ ಜೋಕುಮಾರನ ಹಬ್ಬವನ್ನು ಯರಗೋಳ ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.  ಜೋಕುಮಾರನನ್ನು ಶ್ರದ್ಧಾ–ಭಕ್ತಿಯಿಂದ ಪೂಜಿಸಿದರೆ, ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂಬು‌ದು ಜನರ ನಂಬಿಕೆ.

‘ಜೋಕುಮಾರ ಚಂದಗೇಡಿ ಸಿರಿಗೇಡಿ, ದಂಡೆಯಲ್ಲಿ ನಮ್ಮನ್ನು ಬಿಟ್ಟು ಬಂದ, ಚನ್ನಯ್ಯನ ಮನೆಯಲ್ಲಿ ಉಂಡು ಬಂದ’ ಎಂಬ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಮಹಿಳೆಯರು ಜೋಕಮಾರನನ್ನು ತಲೆಯ ಮೇಲೆ ಹೊತ್ತು ಮನೆಗಳಿಗೆ ತಿರುಗುತ್ತಿರುವ ದೃಶ್ಯ ಶುಕ್ರವಾರ ಗ್ರಾಮದಲ್ಲಿ ಕಂಡುಬಂತು.

ಪ್ರತಿವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾದ ಐದು ದಿನಗಳ ನಂತರ ಜನಿಸುವ ಜೋಕುಮಾರ, ಕೃಷಿಕರ ಪಾಲಿನ ಆರಾಧ್ಯ ದೈವ. ರೈತರು ತಾವು ಬೆಳೆದ ಬೆಳೆಗೆ ಮಳೆ ತರುತ್ತಾನೆ ಎನ್ನುವ ನಂಬಿಕೆಯಿಂದ ಜೋಕುಮಾರಸ್ವಾಮಿಯನ್ನು ಆರಾಧಿಸುತ್ತಾರೆ.

ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಮಲಕಪ್ಪನಳ್ಳಿ, ಅಲ್ಲಿಪುರ, ಮಲಕಪ್ಪನಳ್ಳಿ, ಖಾನಳ್ಳಿ, ಹೊನಗೇರಾ, ಬಂದಳ್ಳಿ ಗ್ರಾಮದಲ್ಲಿ ಜೋಕುಮಾರನ ಸಂಭ್ರಮ ಜೋರಾಗಿದೆ.

ಯರಗೋಳ ಗ್ರಾಮದ ನಾಯ್ಕೋಡಿ, ಚಿಕ್ಕಬಾನರ, ತಳವಾರ, ಮಾನೆಗಾರ, ಹಿರಿಬಾನರ ಮನೆತನದ ಮಹಿಳೆಯರು ಕುಂಬಾರ ಬಸವರಾಜ ಮನೆಯಲ್ಲಿ ಜನಿಸುವ ಜೋಕುಮಾರನನ್ನು ಪುಟ್ಟಿಯಲ್ಲಿ ಕುಳಿರಿಸಿ ಪೂಜೆ ನೆರವೇರಿಸಿ, ಮನೆ ಮನೆಗೆ ತೆರಳುತ್ತಾರೆ.

ಮೊದಲಿಗೆ ಗ್ರಾಮದ ಮಾಲಿಗೌಡ, ಪೊಲೀಸ್ ಗೌಡರ ಮನೆಗಳಿಗೆ ತೆರಳಿ ಹಿರಿಯರಿಂದ ಪೂಜೆಗೊಂಡು ದವಸ, ಧಾನ್ಯ ಸ್ವೀಕರಿಸುತ್ತಾರೆ. ನಂತರ ನಾಯ್ಕೋಡಿ ಮನೆತನದ ಮಹಿಳೆಯರು ಜೋಕುಮಾರನಿಗೆ ಇಷ್ಟವಾದ ಜೋಳದ ಕಡುಬು, ಪುಂಡಿಪಲ್ಯ, ಉಳ್ಳಗಡಿಖಾರ, ಬದನೆಕಾಯಿ ಪಲ್ಯ, ಅನ್ನ, ಸಾಂಬರ, ತಯಾರಿಸಿ ನೈವೇದ್ಯ ಅರ್ಪಿಸುತ್ತಾರೆ.

ರೈತಾಪಿ ಜನರು ಜೋಕುಮಾರನಿಗೆ ಮಳೆ ತರುವಂತೆ ಬೇಡಿಕೊಂಡರೆ, ಮಕ್ಕಳಾಗದ ಮಹಿಳೆಯರು ಹರಕೆ ಹೊರುತ್ತಾರೆ. ಏಳು ದಿನಗಳ ನಂತರ ಮಹಾತಂಗಿ ಮನೆತನದವರು, ಬಟ್ಟೆ ಒಗೆಯುವ ಅಗಸರ ಕಲ್ಲಿನ ಬುಡದಲ್ಲಿ ಜೋಕುಮಾರ ಸ್ವಾಮಿ ಮೂರ್ತಿ ಕೂರಿಸಿ ಬರುತ್ತಾರೆ. ಮೂರು ದಿನಗಳ ನಂತರ ಜೋಕುಮಾರನ ತಲೆಯಲ್ಲಿ ಹುಳುಗಳಾದರೆ ಮಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ರೈತರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು