ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಭತ್ತ ಜಿಗಿತ, ಹತ್ತಿ ದರ ಕುಸಿತ

Published 11 ನವೆಂಬರ್ 2023, 5:11 IST
Last Updated 11 ನವೆಂಬರ್ 2023, 5:11 IST
ಅಕ್ಷರ ಗಾತ್ರ

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಭತ್ತಕ್ಕೆ ಒಳ್ಳೆಯ ದರ ಬಂದಿದೆ. ವಿವಿಧ ತಳಿಯ 75 ಕೆ.ಜಿ ಭತ್ತಕ್ಕೆ ₹1,860ರಿಂದ ₹1,900 ದರವಿದೆ. ಕಳೆದ ವರ್ಷ ಈ ವೇಳೆಗೆ 1,700 ಬೆಲೆ ಇತ್ತು.

ಕೃಷ್ಣಾ, ಭೀಮಾ ನದಿ, ಹಳ್ಳಕೊಳ್ಳ ದಡದಲ್ಲಿ ಬೆಳೆದ ಭತ್ತ ಕಟಾವು ಮಾಡಿದ್ದು, ವ್ಯಾಪಾರಿಗಳೇ ನೇರವಾಗಿ ಗದ್ದೆಗಳಿಗೆ ಬಂದು ಖರೀದಿ ಮಾಡಿಕೊಂಡು ತೆರಳುತ್ತಿದ್ದಾರೆ. ಕಾಲುವೆ ಜಾಲದಲ್ಲಿ ಇನ್ನೆರಡು ವಾರಗಳಲ್ಲಿ ಭತ್ತ ಕಟಾವಿಗೆ ಬರಲಿದೆ. ಆಗ ಮತ್ತಷ್ಟು ಬೇಡಿಕೆ ಹೆಚ್ಚಲಿದೆ ಎನ್ನುವುದು ರೈತರ ಅಭಿಪ್ರಾಯ.

‘ಬಿಳಿ ಬಂಗಾರ’ಕ್ಕಿಲ್ಲ ಬೆಲೆ: ವರ್ಷದಿಂದ ವರ್ಷಕ್ಕೆ ಭತ್ತದ ಬೆಲೆ ಹೆಚ್ಚಾಗುತ್ತಿದೆ. ಆದರೆ, ಹತ್ತಿ ಬೆಲೆ ಕಳೆದ ವರ್ಷದಿಂದ ಇಳಿಕೆಯತ್ತ ಸಾಗುತ್ತಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಕ್ವಿಂಟಲ್‌ಗೆ ₹8,000 ಮಾರಾಟವಾಗುತ್ತಿತ್ತು. ಆದರೆ, ಈ ವರ್ಷ ₹7,200ಕ್ಕಿಂತ ಹೆಚ್ಚಾಗಿಲ್ಲ. ಇದರಿಂದ ‘ಬಿಳಿ ಬಂಗಾರ’ಕ್ಕೆ ಈ ವರ್ಷವೂ ಒಳ್ಳೆಯ ದರ ಇಲ್ಲದಂತಾಗಿದೆ ಎನ್ನುವುದು ಬೆಳೆಗಾರರ ಅಳಲಾಗಿದೆ.

‘ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದ್ದು, ಈಗಾಗಲೇ ಕೆಲವು ಕಡೆ ಹತ್ತಿ ಬಿಡಿಸಲಾಗಿದೆ. ಆದರೆ, ಸೂಕ್ತ ಬೆಲೆ ಇಲ್ಲದೇ ಬೆಳೆಗಾರರು ಕಂಗಾಲಾಗುವಂತಾಗಿದೆ’ ಎಂದು ಬೆಳೆಗಾರ ಹಣಮಂತ ನಾಯಕ ಬೆಳೆಗೇರಾ ಹೇಳುತ್ತಾರೆ.

ವೈಜ್ಞಾನಿಕ ಬೆಲೆ ನಿಗದಿ ಪಡಿಸಿ: ಹತ್ತಿ, ಭತ್ತಕ್ಕೆ ಗೊಬ್ಬರ, ಕೂಲಿ ಸೇರಿ ಖರ್ಚು ವೆಚ್ಚ ಜಾಸ್ತಿಯಾಗಿದೆ. ಇದಕ್ಕೆ ತಕ್ಕಂತೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

‘ಎಕರೆಗೆ 40 ಸಾವಿರ ಖರ್ಚು ಮಾಡಲಾಗುತ್ತಿದೆ. ಬರಗಾಲದಲ್ಲೂ ಕಾಲುವೆ ಜಾಲದಲ್ಲಿ ಭತ್ತ ಬೆಳೆಯಲಾಗಿದೆ. ಹಿಂಗಾರು ಬೆಳೆಗೆ ಕಾಲುವೆ ನೀರು ಹರಿಸುವುದಿಲ್ಲ ಎಂದು ಈಗಾಗಲೇ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಸರ್ಕಾರ ಶೀಘ್ರವೇ ಭತ್ತ, ಹತ್ತಿ ಖರೀದಿ ಕೇಂದ್ರಗಳನ್ನು ತೆಗೆದು ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಸತ್ಯಂಪೇಟೆ.

‘ಹತ್ತಿಯಲ್ಲಿ ಮೂರು ವಿಧಗಳಿದ್ದು, ‘ಎ’ ಗ್ರೇಡ್‌ನ ಒಂದು ಕ್ವಿಂಟಲ್‌ ಹತ್ತಿಗೆ ₹7,000ರಿಂದ ₹7,200, ‘ಬಿ’ ಗ್ರೇಡ್‌ಗೆ ₹6,800, ‘ಸಿ’ ಗ್ರೇಡ್‌ನ ₹ 6,600 ದರವಿದೆ. ದೀ‍ಪಾವಳಿ ನಂತರ ಮತ್ತಷ್ಟು ಹತ್ತಿ ಮಾರುಕಟ್ಟೆಗೆ ಬರುತ್ತದೆ’ ಎನ್ನುತ್ತಾರೆ ಹತ್ತಿ ವ್ಯಾಪಾರಿ ಅಬ್ಬಾಸಲಿ ನಾಯ್ಕಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT