ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸದೇ ಬಿಲ್ ಎತ್ತುವಳಿ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದಲ್ಲಿ 2021–22ನೇ ಸಾಲಿನ ಸರ್ವೆ ನಂ 18ರಲ್ಲಿ ಘನತ್ಯಾಜ್ಯ ವಿಲೇವಾರಿ ಸಂಸ್ಕರಣ ಘಟಕ ನಿರ್ಮಿಸದೇ ಬಿಲ್ ಎತ್ತುವಳಿ ಮಾಡಿರುವ ಆರೋಪ ಕೇಳಿ ಬಂದಿದೆ.
‘ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೆತ್ತುಕೊಳ್ಳಲಾಗಿದ್ದು, ಆದರೆ, ಮಾನವ ಬಳಕೆ ಮಾಡದೇ ಯಂತ್ರಗಳಿಂದ ಕಾಮಗಾರಿ ಮಾಡಿಸಲಾಗಿದೆ’ ಎಂದು ಗ್ರಾಮದ ಯುವ ಮುಖಂಡ ಅರುಣಕುಮಾರ ಬ ಮಲ್ಕಾಪುರ ಅವರು ಹುಣಸಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
‘ಘಟಕದ ಸ್ಥಳದಲ್ಲಿ ಕೂಲಿ ಕಾರ್ಮಿರಿಲ್ಲದೇ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಕೂಲಿ ಕಾರ್ಮಿಕರ ಹೆಸರಲ್ಲಿ ಹಣ ಲೂಟಿ ಮಾಡುವ ಕೆಲಸ ಪಂಚಾಯಿತಿ ಅಧಿಕಾರಿಗಳಿಂದ ನಡೆಯುತ್ತಿದೆ. ಹೀಗಾಗಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಆಗ್ರಹಿಸಿದ್ದಾರೆ.
‘ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಹೆಸರುಗಳನ್ನು ಸೃಷ್ಟಿಸಲಾಗಿದ್ದು, ಅವರು ಯಾರೂ ಕಾಮಗಾರಿಯೇ ಮಾಡಿಲ್ಲ. ಆದರೂ ಅವರ ಖಾತೆಗಳಿಗೆ ಹಣ ಜಮಾ ಮಾಡಿ ನಂತರ ಅವರಿಗೆ ಇಂತಿಷ್ಟು ಕೊಟ್ಟು ಎಲ್ಲ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
ಕಸ ಬುಟ್ಟಿ ವಿತರಿಸಿಲ್ಲ: ‘ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಿ ಸಂಗ್ರಹಿಸುವ ಬುಟ್ಟಿಗಳನ್ನು ಇನ್ನೂ ವಿತರಿಸಿಲ್ಲ. ಇದರಿಂದ ಈ ಯೋಜನೆ ಬಗ್ಗೆ ಜಾಗೃತಿ ಇಲ್ಲದಿರುವುದು ಸೇರಿದಂತೆ ಬುಟ್ಟಿಗಳು ಉಪಯೋಗ ಇಲ್ಲದಂತೆ ಆಗಿದೆ’ ಎನ್ನುವುದು ಹಗರಟಗಿ ಗ್ರಾಮದ ಯುವ ಮುಖಂಡ ಅರುಣಕುಮಾರ ಮಲ್ಕಾಪುರ ಅವರ ಆರೋಪವಾಗಿದೆ.
‘ತ್ಯಾಜ್ಯ ವಿಲೇವಾರಿ ಸಂಸ್ಕರಣ ಘಟಕದ ಕಾಮಗಾರಿ ನಡೆಯುತ್ತಿದ್ದು, ಬಾಬ್ ಕಾರ್ಡ್‌ದಾರರ ಖಾತೆಗೆ ಹಣ ಜಮಾ ಆಗುತ್ತದೆ. ಮಾನವ ದಿನಗಳನ್ನು ಸೃಷ್ಟಿಸಲಾಗಿದೆ’ ಎನ್ನುತ್ತಾರೆ ಹಗರಟಗಿ ಪಿಡಿಒ ರಾಮು ಅಗ್ನಿ.
***
ಖಾತ್ರಿ ಯೋಜನೆಯಡಿ ಜೆಸಿಬಿ ಹಚ್ಚಿ ಕೆಲಸ ಮಾಡಿ ಬಿಲ್ ಎತ್ತುವಳಿ ಮಾಡಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು
-ಅರುಣಕುಮಾರ ಹಗರಟಗಿ, ಯುವ ಮುಖಂಡ
**
ಮನರೇಗಾ ಯೋಜನೆಯ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಮಾಡಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲು ಮೇಲಧಿಕಾರಿಗಳು ಆಗಮಿಸಿದ್ದಾರೆ
-ರಾಮು ಅಗ್ನಿ, ಹಗರಟಗಿ ಪಿಡಿಒ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.