ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಬಲ ಜಾತಿಗಳ ದಬ್ಬಾಳಿಕೆಯಿಂದ ಶೋಷಿತರ ಧ್ವನಿ ಹತ್ತಿಕ್ಕುವ ಕೆಲಸ: ರಾಮಚಂದ್ರ

Published 31 ಡಿಸೆಂಬರ್ 2023, 5:13 IST
Last Updated 31 ಡಿಸೆಂಬರ್ 2023, 5:13 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಬಲ ಜಾತಿಗಳ ದಬ್ಬಾಳಿಕೆಯಿಂದ ಶೋಷಿತರ ಧ್ವನಿ ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು, ಬಹುಸಂಖ್ಯಾತರು ಒಗ್ಗೂಡಿ ಶಕ್ತಿ ಪ್ರದರ್ಶನ  ಮಾಡುವ ಸಮಯ ಬಂದಿದೆ’ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರ ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ವತಿಯಿಂದ ರಾಜ್ಯದ ಶೋಷಿತ ಸಮುದಾಯಗಳ ಜಾಗೃತಿ ಮಹಾಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಂಘಟಿತರಾಗಿ ಹೋರಾಡಿದರೆ ಹಿಂದುಳಿದ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ, ಮನುವಾದ ಸಿದ್ಧಾಂತವುಳ್ಳವರು ನಮ್ಮನ್ನು ಆಳುವ ಪ್ರಕ್ರಿಯೆ ಹೀಗೆಯೆ ಮುಂದುವರಿಯಲಿದೆ. ನಾವುಗಳು ತುಳಿತಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಎಚ್.ಕಾಂತರಾಜ ನಡೆಸಿದ ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಜ.28ರಂದು ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆಯೋಜಿಸಿದೆ. ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಶೋಷಿತರ ಬಲ ಪ್ರದರ್ಶನ ಮಾಡಲಾಗುವುದು’ ಎಂದರು.

ಸಂಚಾಲಕ ಆರ್.ಆರ್.ವೆಂಕಟರಾಮಯ್ಯ ಮಾತನಾಡಿ, ‘ಸಮಾವೇಶವು ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಬೇಕು. ಶೋಷಿತ ಸಮುದಾಯಗಳು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಅನೇಕ ಆಯೋಗಗಳ ವರದಿ ಜಾರಿಯಾದಂತೆ ಕಾಂತರಾಜ ವರದಿಯನ್ನು ಜಾರಿಗೊಳಿಸಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಮಾಜಿ ಸದಸ್ಯ ಶರಣಪ್ಪ ಡಿ.ಮಾನೇಗಾರ್, ಮುಖಂಡರಾದ ಮರೆಪ್ಪ ಚಟ್ಟರಕರ್, ಅಪ್ಪಣ್ಣ ಚಿನ್ನಾಕಾರ್, ಸೈದಪ್ಪ ಗುತ್ತೇದಾರ್, ಮೌಲಾಲಿ ಅನಪುರ, ಭೀಮಣ್ಣ ಮೇಟಿ ಮಾತನಾಡಿದರು. ‘ಕಾಂತರಾಜ ವರದಿ ಜಾರಿ ಮಾಡಬೇಕು. ಶೋಷಿತರ ಎಲ್ಲರೂ ಒಟ್ಟಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಬೇಕು’ ಎಂದು ಒಕ್ಕೋರಲಿನಿಂದ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಶಿವಪುತ್ರ ಜವಳಿ, ನಾಗರಾಜ, ಸಿ.ಎಲ್.ರವಿಕುಮಾರ್, ಭೀಮರಾಯ ಠಾಣಗುಂದಿ, ಮಲ್ಲಿಕಾರ್ಜುನ ಗೋಸಿ, ಮಡಿವಾಳಪ್ಪ, ಮಡಿವಾಳಪ್ಪ, ಮಲ್ಲಿಕಾರ್ಜುನ ಕಟ್ಟಿಮನಿ, ಮಲ್ಲಣ್ಣ ಐಕೂರು, ಶಾಂತಪ್ಪ ನಿಡಗುಂದಿ, ಆಂಜನೇಯ ಬಬಲಾದ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

‘ಶೋಷಿತ ಜಾಗೃತಿ ಸಮಾವೇಶ ಜ.28ಕ್ಕೆ’
ಯಾದಗಿರಿ: ಚಿತ್ರದುರ್ಗದ ಹೊರವಲಯದ ಬಸವ ಮೂರ್ತಿ ಮಾದಾರ ಚನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಜ.28ರಂದು ಹಮ್ಮಿಕೊಳ್ಳಲಾಗಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ಶೇ 97ರಷ್ಟು ತಳ ಸಮುದಾಯಗಳು ಸಾವಿರಾರು ವರ್ಷಗಳಿಂದ ಸಂಕಷ್ಟ ಅನುಭವಿಸಿವೆ. ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನದಿಂದ ಕಳೆದ 70 ವರ್ಷಗಳಿಂದ ವಿದ್ಯೆ ಉದ್ಯೋಗ ಅಧಿಕಾರ ಅಂತಸ್ತು ಸಮಾನತೆಗಳನ್ನು ಪಡೆದು ದೇಶದ ಮೂಲ ನಿವಾಸಿಗಳು ಪ್ರಗತಿಯತ್ತ ಮುನ್ನಡೆಯುತ್ತಿದ್ದಾರೆ. ಇದನ್ನು ಸಹಿಸಲಾಗದ ಪುರೋಹಿತಶಾಹಿ ವರ್ಗ ಮುಸಲ್ಮಾನರೆಂಬ ಬೆದರು ಬೊಂಬೆಯ ಭಯ ಹುಟ್ಟಿಸಿ ತಮ್ಮ ಸ್ವಾರ್ಥಕ್ಕಾಗಿ ತಳ ಸಮುದಾಯದ ಯುವಕರನ್ನು ಮರಳು ಮಾಡುತ್ತಿದೆ. ಅವರ ಮಾತಿಗೆ ಮರಳಾಗದೆ ಸಂವಿಧಾನ ಸಾಮಾಜಿಕ ನ್ಯಾಯ ಸಹಬಾಳ್ವೆ ಸ್ವಾಭಿಮಾನದ ಸಂರಕ್ಷಣೆಗಾಗಿ ಏಕತೆಯಿಂದ ಹೋರಾಟ ಮಾಡಬೇಕಾಗಿದೆ’ ಎಂದರು. ‘ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ಸಮಾನತೆ ಸಾರಿದ ಕರ್ನಾಟಕ ಅಗ್ರಗಣ್ಯ ರಾಜ್ಯ. ಹಲವು ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಯಾಗಿದೆ. ಆದರೆ ಬಲಾಢ್ಯರು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಚನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಈ ಸಮಾವೇಶದಲ್ಲಿ ನಾಡಿನ ದಲಿತ ಹಿಂದುಳಿದ ಅಲೆಮಾರಿ ಅರೆ ಅಲೆಮಾರಿ ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘ–ಸಂಸ್ಥೆಗಳು ಹಾಗೂ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕೋರಿದರು. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಆರ್.ವೆಂಕಟರಾಮಯ್ಯ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕರ್ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಶಿ ಮಾಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಲಕ್ಷ್ಮಣ ರಾಠೋಡ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಸೈದ್ಪಪ್ಪ ಗುತ್ತೆದಾರ ಮಾದಿಗ ಸಮಾಜದ ಮುಖಂಡ ವಿಜಯಕುಮಾರ್ ಶಿರಗೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT