ಬುಧವಾರ, ಏಪ್ರಿಲ್ 21, 2021
27 °C

ಶಿವಶರಣ, ತತ್ವಪದಕಾರ, ಹಸನ ವಸ್ತಾದೇಪ್ಪನ 107 ನೇ ಸಂಭ್ರಮದ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೋಟ್ನಳ್ಳಿ (ಯರಗೋಳ): ಶಿವಶರಣ, ತತ್ವಪದಕಾರ, ಹಸನ ವಸ್ತಾದೇಪ್ಪನ 107 ನೇ ಜಾತ್ರೆ ವಿಜೃಂಭಣೆಯಿಂದ ಗುರುವಾರ ಜರುಗಿತು.

ಬುಧವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧದ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಮೆರವಣಿಗೆಯುದ್ದಕ್ಕೂ ಕೋಲಾಟ, ಗೆಜ್ಜೆಕುಣಿತ, ನೃತ್ಯ, ಭಜನೆ ಹಾಡುಗಳು ಸಂಭ್ರಮ ಜೋರಾಗಿತ್ತು. ಆಕಾಶದಲ್ಲಿ ಪಟಾಕಿಗಳು ಬಣ್ಣದ ಚಿತ್ತಾರ ಮೂಡಿಸಿದವು. ಗಂಧದ ಮೆರವಣಿಗೆ ಗುರುವಾರ ನಸುಕಿನಲ್ಲಿ 'ಹಸನ ವಸ್ತಾದೆಪ್ಪ' ದರ್ಗಾ ತಲುಪಿತು.

ನೆರೆದಿದ್ದ ಭಕ್ತರು ತಮ್ಮ ಹರಕೆ ತೀರಿಸಿದರು. ಬಿರಿಯಾನಿ, ಮಾದ್ಲಿ ನೈವೇದ್ಯ ಅರ್ಪಿಸಿ, ಧೂಪ ಹೊತ್ತಿಸಿ, ಜ್ಯೋತಿ ಬೆಳಗಿಸಿ, ಟೆಂಗಿನ ಕಾಯಿ ಒಡೆದು ಭಕ್ತರು ಪುನೀತರಾದರು.

ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಗ್ರಿ, ಬಳೆ, ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಬಿಸಿಲಿನ ತಾಪದಿಂದ ಕಲ್ಲಂಗಡಿ, ಕಬ್ಬಿನ ಹಾಲು, ಐಸ್ ಕ್ರೀಂ, ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿತ್ತು.

ಸುತ್ತಲಿನ ಕೋಟಗೇರಾ, ಹಂದ್ರಿಕಿ, ಚಂಡರಕಿ, ಚಿಂತಕುಂಟ, ಹೊಸಳ್ಳಿ, ಗುರುಮಠಕಲ್‌, ಕಂದಕೂರ, ಗುಂಜನೂರ, ಇಟಕಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಜಾತ್ರೆ ನಿಮಿತ್ತ ನಾಟಕ ಪ್ರದರ್ಶನ, ಗ್ರಾಮೀಣ ಕ್ರೀಡೆಗಳಾದ ಕೈ ಕುಸ್ತಿ, ಭಾರ ಎತ್ತುವ ಸ್ಪರ್ಧೆಗಳು ಜರುಗಿದವು. ಗ್ರಾಮದ ಪ್ರಮುಖರಾದ ಬಸವರಾಜ ಗುತ್ತೇದಾರ, ಗುರುಲಿಂಗಯ್ಯ ಸ್ವಾಮಿ, ಬಾಲಪ್ಪ ನಾಟೇಕರ್, ಭೀಮಪ್ಪ ನಂಗಿ, ಶರಣಪ್ಪ ಬೈರಮ್ಮಕೊಂಡ, ಡಾ. ಮಧುಸೂದನ ರೆಡ್ಡಿ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು