ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಭರವಸೆಯಲ್ಲೆ ಉಳಿದ ‘ದಬ್‌ ದಭಿ’ ಅಭಿವೃದ್ಧಿ‌‌‌‌

ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಅರಣ್ಯ ಇಲಾಖೆ ನಿಯಮಗಳು: ದೂರು
Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ನಜರಾಪುರ ಗ್ರಾಮದಲ್ಲಿರುವ ಧಬ್‌ ದಭಿ ಜಲಪಾತಕ್ಕೆ ತೆರಳುವವರಿಗೆ ಯಾವುದೇ ಸೌಕರ್ಯವಿಲ್ಲದೆ ಇರುವುದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಹಿನ್ನೆಡೆ ಉಂಟಾಗುತ್ತಿದೆ.

ಗುರುಮಠಕಲ್‌ನಿಂದ ತೆರಳುವವರಿಗೆ ಯಾವುದೇ ಮಾರ್ಗಸೂಚಕ ಫಲಕಗಳಿಲ್ಲ. ಇದರಿಂದ ಜಲಪಾತದ ಬಗ್ಗೆ ಹೊಸಬರಿಗೆ ತಿಳಿಯುವುದಿಲ್ಲ. ಅಲ್ಲದೆ ಜಲಪಾತಕ್ಕೆ ತೆರಳುವ ರಸ್ತೆಗೆ ಯಾವುದೇ ತಡೆಗೋಡೆ ಮಾಡಿಲ್ಲ. ಆಳವಾದ ಕಂದಕವಿದ್ದು, ಯಾಮಾರಿದರೆ ಕೆಳಕ್ಕೆ ಬೀಳುವ ಸಂಭವವಿದೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಂದರ ಜಲಪಾತದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. 6 ವರ್ಷಗಳ ಹಿಂದೆ ದಬ್‌ ದಭಿ ವಿಶ್ವಮಟ್ಟದಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ ಎನ್ನುವ ಭರವಸೆ ಮಾತುಗಳು ಕಾರ್ಯಗತಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.

ಅಕ್ರಮ ಚಟುವಟಿಕೆ ತಾಣ: ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟರೂ ಯಾವುದೇ ಅರಣ್ಯ ರಕ್ಷಕರು ಅಲ್ಲಿ ಕಾಣಸಿಗುವುದಿಲ್ಲ. ಇದರಿಂದ ಜಲಪಾತದ ಬಳಿ ಕುಡಿದು ಬಿಸಾಡಿದ ಬಾಟಲಿಗಳು, ಪ್ಲಾಸ್ಟಿಕ್‌ ತ್ಯಾಜ್ಯ ರಾಶಿ ಕಾಣಿಸುತ್ತದೆ. ಅರಣ್ಯದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಇಲ್ಲದಿರುವುದರಿಂದ ಪ್ರವಾಸಿಗರನ್ನು ಸೆಳೆಯಲು ಆ ನಿಮಯಗಳೇ ವಿಫಲವಾಗಿವೆ.

ಮೂಲಸೌಕರ್ಯ ವಂಚಿತ: ಪ್ರಸಿದ್ಧ ಪ್ರವಾಸಿ ತಾಣವಾದರೂ ತಾಲ್ಲೂಕು ಆಡಳಿತದ ವತಿಯಿಂದ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಖಾಸಗಿ ವಾಹನಗಳ ಮೂಲಕ ಮಾತ್ರ ಪ್ರವಾಸಿ ತಾಣಕ್ಕೆ ತೆರಳಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ವಾಹನ ಸೌಕರ್ಯ ಕಲ್ಪಿಸಿಲ್ಲ. ಅಲ್ಲದೆ ಕುಡಿಯಲು ನೀರು, ಆಹಾರವೂ ಅಲ್ಲಿ ಸಿಗುವುದಿಲ್ಲ. ಮಹಿಳೆಯರು ಬಂದರೆ ಶೌಚಕ್ಕೆ ಪರದಾಡುವುದು ಸಾಮಾನ್ಯವಾಗಿದೆ.ಇದರಿಂದಮಹಿಳೆಯರುಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಕಲ್ಲು, ಮಣ್ಣಿನ ರಸ್ತೆ: ನಜರಾಪುರ ಗ್ರಾಮಕ್ಕೆ ತೆರಳುವ ಮಧ್ಯದಲ್ಲಿ ಧಬಿ ದಭಿ ಜಲಪಾತ ಇದೆ. ಆದರೆ, ಕಲ್ಲು ಮಣ್ಣಿನಿಂದರಸ್ತೆ ಕೂಡಿದ್ದು, ಮಳೆ ಬಂದರೆ ಜಾರುತ್ತದೆ. ಅಲ್ಲದೆ ಜಲಪಾತದ ಬಳಿ ತೆರಳಲು ಹರಸಾಹಸ ಪಡಬೇಕಾಗಿದೆ. ಒಬ್ಬರು ಮಾತ್ರ ಪ್ರವೇಶಿಸುವ ದಾರಿ ಇದ್ದು, ಅದು ಕಲ್ಲುಗಳಿಂದ ಕೂಡಿದೆ.

‘ಗುರುಮಠಕಲ್‌ ತಾಲ್ಲೂಕಿನಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಇಲಾಖೆಗೆ ಆದಾಯವೂ ಹೆಚ್ಚುತ್ತದೆ. ಆದರೆ, ಅರಣ್ಯ, ಪ್ರವಾಸೋದ್ಯಮ ಇಲಾಖೆಗಳಲ್ಲಿನ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿವೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಪಾಟೀಲ.

‘ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೌಕರ್ಯ ಕಲ್ಪಿಸಲಾಗುವುದು. ಪ‍್ರಮುಖವಾಗಿ ರಸ್ತೆ, ತಡೆಗೋಡೆ, ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಪ್ರಭಾರಿ ಸಹಾಯಕ ನಿರ್ದೇಶಕ ಭೀಮರಾಯ ಮಸಾಲಿ ಅವರು.

***
ಧಬ್ ಧಬಿ ಜಲಪಾತವನ್ನು ಪ್ರವಾಸಿ ತಾಣವಾಗಿಸುವ ಕುರಿತು ಯೋಜನೆ ಸಿದ್ಧಗೊಳ್ಳುತ್ತಿದೆ ಎನ್ನುತ್ತಲೇ ಈಗಆರುವರ್ಷಗಳಾಯಿತು. ಜಲಪಾತದ ಹತ್ತಿರಕ್ಕೆತೆರಳಲುರಸ್ತೆಯನ್ನಾದರೂ ಮಾಡಿಸಿದರೆ ಚೆನ್ನ.
– ಕಾಶಪ್ಪ ಭಜಂತ್ರಿ, ನಜರಾಪುರ ಗ್ರಾಮಸ್ಥ

***
ಜಲಪಾತದ ಹತ್ತಿರಕ್ಕೆ ಬರುವವರು ಕುಡಿದ ಬಾಟಲಿಗಳನ್ನು ಅಲ್ಲೇ ಎಸೆಯುತ್ತಿದ್ದಾರೆ. ಜಲಪಾತ ಪ್ರದೇಶ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿರುವುದು ದುಃಖಕರ.
–ಚಂದನಗೌಡ ಮಾಲಿ ಪಾಟೀಲ,ನಜರಾಪುರ ಗ್ರಾಮಸ್ಥ

***
ದಬ್‌ ದಭಿ ಜಲಪಾತದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ₹1.47 ಕೋಟಿ ಮಂಜೂರು ಆಗಿದೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅವರಿಂದಲೇ ಕೆಲಸ ಮಾಡಿಸಲು ನಿರ್ಧರಿಸಲಾಗಿದೆ.
– ಭೀಮರಾಯ ಮಸಾಲಿ, ಪ್ರಭಾರಿ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT