ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

Published 16 ಮೇ 2024, 6:07 IST
Last Updated 16 ಮೇ 2024, 6:07 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತದ ಬೆಳೆಗೆ ಸರ್ಕಾರದಿಂದ ಬರ ಪರಿಹಾರ ಬಂದಿಲ್ಲ. ಒಣ ಬೇಸಾಯದ ಮಳೆಯಾಶ್ರಿತ ಬೆಳೆಗೆ ಪರಿಹಾರ ಬಂದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಸರ್ಕಾರದ ನಿರ್ದೇಶನದಂತೆ ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಗೆ ನಷ್ಟ ಹಾನಿಯಾದ ಬಗ್ಗೆ ಸರ್ವೇ ಮಾಡಲಾಗಿತ್ತು. ಅಲ್ಲದೇ ಪ್ರಕೃತಿ ವಿಕೋಪದ ಅಡಿಯಲ್ಲಿ ಬರ ಪರಿಹಾರ ನಿಯಮದ ಪ್ರಕಾರ ಬೆಳೆ ಹಾನಿ ನಷ್ಟದ ವರದಿಯನ್ನು ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸರ್ಕಾರದಿಂದ ಎರಡು ತಿಂಗಳ ಹಿಂದೆ ₹2 ಸಾವಿರ ಬರ ಪರಿಹಾರ ಬಂದಿತ್ತು. ಈಗ ಕೇಂದ್ರ ಸರ್ಕಾರದಿಂದ ಬೆಳೆ ನಷ್ಟ ಹಾನಿಯ ಅಂದಾಜಿನ ಮೇಲೆ ರೈತರ ಖಾತೆಗೆ ಹಣ ಜಮಾ ಆಗುತ್ತಲಿದೆ. ಇದರಲ್ಲಿ ನಮ್ಮದೇನು ಪಾತ್ರವಿಲ್ಲ ಎನ್ನುತ್ತಾರೆ ತಹಶೀಲ್ದಾರ್‌ ಉಮಕಾಂತ ಹಳ್ಳೆ.

‘ಬರ ಪರಿಹಾರ ಬರದೆ ಇರುವುದಕ್ಕೆ ಮೂರು ಕಾರಣಗಳನ್ನು ಗುರುತಿಸಿದೆ. ಅದರಲ್ಲಿ ರೈತರು ಎಫ್‌ಐಡಿ ಸಂಖ್ಯೆ ಸರಿಯಾಗಿ ಇದೆಯೇ ಎಂದು ಪರಿಶೀಲಿಸಬೇಕು. ಆಧಾರ್‌ ಕಾರ್ಡ್‌ಗೆ ಪಹಣಿ ಲಿಂಕ್ ಆಗಿದೆಯಾ ಎಂದು ಪರಿಶೀಲಿಸಬೇಕು. ರೈತರ ಆಧಾರ್‌ ಕಾರ್ಡ್ ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಆಗಿದೆಯಾ ಎಂದು ಪರಿಶೀಲಿಸಬೇಕು. ಎಲ್ಲಾ ಸರಿಯಾಗಿದ್ದರೆ ಮತ್ತೊಮ್ಮೆ ಲೋಪದೋಷಗಳನ್ನು ಸರಿಪಡಿಸಿ ವರದಿ ನೀಡುತ್ತೇವೆ. ಆಗ ರೈತರ ಖಾತೆಗೆ ಹಣ ಜಮಾ ಆಗುತ್ತದೆ. ರೈತರು ಅನವಶ್ಯಕವಾಗಿ ಗೊಂದಲ ಉಂಟು ಮಾಡಬಾರದು’ ಎಂದು ಅವರು ಮನವಿ ಮಾಡಿದರು.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಿಷೇಧಿತ ಬೆಳೆಯಾಗಿದೆ. ನೀರಾವರಿ ಆಶ್ರಿತ ಬೆಳೆ ಇದಾಗಿದೆ. ಬೆಳೆ ನಷ್ಟ ಅನುಭವಿಸುವ ಸಮಸ್ಯೆ ಉಂಟಾಗುವುದಿಲ್ಲ. ಸರ್ಕಾರದ ನಿರ್ದೇಶನದ ಪ್ರಕಾರ ಭತ್ತ ಬೆಳೆ ಹಾನಿ ಬಗ್ಗೆ ವರದಿ ನೀಡುವಂತೆ ಸೂಚಿಸಿಲ್ಲ. ಆದರೆ ವಡಗೇರಾ ಪ್ರದೇಶದಲ್ಲಿ ಕಬ್ಬು ಬೆಳೆ ನಷ್ಟ ವರದಿ ನೀಡಿದ್ದೇವೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಹತ್ತಿ, ಮೆಣಸಿನಕಾಯಿ, ತೊಗರಿ ಬೆಳೆಯು ನೀರಾವರಿ ಪ್ರದೇಶವಾಗಿದ್ದರೂ ಸಹ ಬರ ಪರಿಹಾರ ಬಂದಿದೆ. ಆದರೆ ಭತ್ತ ಬೆಳೆಗೆ ಯಾಕೆ ನೀಡುತ್ತಿಲ್ಲ. ಸರ್ಕಾರ ಬೆಳೆ ನಷ್ಟ ಹಾನಿಯಲ್ಲಿ ಭತ್ತ ಬೆಳೆಯನ್ನು ಸೇರ್ಪಡೆ ಮಾಡಿಕೊಳ್ಳಬೇಕಾಗಿತ್ತು’ ಎಂಬುದು ಭತ್ತ ಬೆಳೆದ ರೈತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT