ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ | ಬಸವಸಾಗರ ಜಲಾಶಯ: ಜೀವನದಿಯ ಡ್ಯಾಂಗೆ ಬೇಕು ‘ಜೀವಕಳೆ’

6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಜಲಮೂಲ
Published : 29 ಜುಲೈ 2024, 4:19 IST
Last Updated : 29 ಜುಲೈ 2024, 4:19 IST
ಫಾಲೋ ಮಾಡಿ
Comments
ನಾರಾಯಣಪುರ ಬಸವಸಾಗರದ ಮುಖ್ಯ ಕ್ರಸ್ಟ್ ಗೇಟ್‌ಗಳಿಂದ ನೀರುಹರಿಯುತ್ತಿರುವುದು
ನಾರಾಯಣಪುರ ಬಸವಸಾಗರದ ಮುಖ್ಯ ಕ್ರಸ್ಟ್ ಗೇಟ್‌ಗಳಿಂದ ನೀರುಹರಿಯುತ್ತಿರುವುದು
ಬಸವಸಾಗರವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯ ದಶಕಗಳ ಬೇಡಿಕೆಯಂತೆ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ
ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಜೀವನಾಡಿಯಾಗಿದೆ. ಸಮಗ್ರ ನೀರಾವರಿಗೆ ಒತ್ತು ನೀಡಬೇಕು. ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿದರೆ ರೈತ ಬಾಳು ಹಸನಾಗುತ್ತದೆ
ಎಂ.ಆರ್ ಖಾಜಿ ಕೃಷ್ಣಾ ಕಾಡಾ ನೀರು ಬಳಕೆದಾರರ ಸಂಘದ ಮುಖಂಡ
ನಾರಾಯಣಪುರ ಜಲಾಶಯದ ಮುಂಭಾಗದಲ್ಲಿ ಸುಂದರ ಉದ್ಯಾನವನ ನಿರ್ಮಿಸಿದರೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ
ವಿರೇಶ ಹಿರೇಮಠ ನಾರಾಯಣಪುರ ನಿವಾಸಿ
ಅಧಿಕಾರಿಗಳು ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ ಕಾಲುವೆಗೆ ಹರಿಸಲಿಲ್ಲ. ಈಗ ಏಕಾಏಕಿ ಕಾಲುವೆಯ ಜೊತೆಗೆ ನದಿಗೂ ಬಿಡುತ್ತಿರುವುದು ಪ್ರಶ್ನಾರ್ಹವಾಗಿದೆ
ಹಣಮಂತರಾಯ ಮಡಿವಾಳ ರೈತ ಮುಖಂಡ
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಅತಿದೊಡ್ಡ ಜಲಾಶಯ ಹೊಂದಿದರೂ ಸಮರ್ಪಕ ಬಳಕೆ ಆಗದಿರುವುದು ಚಿಂತನೀಯ
ಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಆಲಮಟ್ಟಿಯಂತೆ ಬೇಕು ಉದ್ಯಾನವನ
ಜಲಾಶಯದ ಮುಂಭಾಗ ವಿಸ್ತಾರ ಭೂ ಪ್ರದೇಶವಿದ್ದು ಸುಂದರವಾದ ಉದ್ಯಾನವನ ನಿರ್ಮಾಣ ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಉದ್ಯೋಗ ಸೃಷ್ಟಿಯ ಜೊತೆಗೆ ಸರ್ಕಾರಕ್ಕೂ ಆದಾಯದ ಮೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಉದ್ಯಾನವನ ನಿರ್ಮಿಸಬೇಕು ಎಂಬುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಜಲಾಶಯದ ಬಳಿ ಉದ್ಯಾನ ನಿರ್ಮಾಣಕ್ಕಾಗಿ ಜಾಗ ಮೀಸಲಿಟ್ಟಿದ್ದರೂ ಅದರ ಪ್ರಯೋಜನವಾಗುತ್ತಿಲ್ಲ. ಜಲಾಶಯದ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿದ್ದು ಇಲ್ಲಿಗೆ ಬಂದವರು ಅಲ್ಲಿಗೂ ಭೇಟಿ ನೀಡಿದರೆ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನ ಆಗುತ್ತದೆ. ಪುಣ್ಯಕ್ಷೇತ್ರ ಕೃಷ್ಣಾ ನದಿ ತೀರದಲ್ಲಿ ದಕ್ಷಿಣ ಕಾಶಿ ಎಂದೇ ಪುರಾಣ ಪ್ರಸಿದ್ದ ಛಾಯಾ ಭಗವತಿ ಪುಣ್ಯಕ್ಷೇತ್ರವಿದ್ದು ವಿಶೇಷ ದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ನದಿಗೆ ಅಪಾರ ನೀರು ಹರಿಬಿಟ್ಟ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಮೀಪವಿರುವ ಚಕ್ರಕಟ್ಟಾ ವಿವ್ ಪಾಂಟ್‌ಗೆ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿ ವಿಸ್ತಾರವಾಗಿ ಹರಿಯುವ ಕೃಷ್ಣಾನದಿಯ ಪ್ರವಾಹವನ್ನು ನಿಸರ್ಗ ನಿರ್ಮಿತ ಕಲ್ಲು ಪೊಟರೆಗಳ ಸೀಳಿನಿಂದ ಉಂಟಾದ ಕಿರು ಜಲಪಾತಗಳಿಂದ ರಭಸದಿಂದ ದುಮ್ಮಿಕ್ಕುವ ನೀರಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಾರೆ.
ಜಲವಿದ್ಯುತ್ ಉತ್ಪಾದನೆ
ಜಲಾಶಯದಿಂದ ಕೃಷಿ ಕುಡಿಯುವ ನೀರಿನ ಜೊತೆಗೆ ಜಲಾಶಯಕ್ಕೆ ಹೊಂದಿಕೊಂಡಿರುವ ಮುರುಡೇಶ್ವರ ಜಲವಿದ್ಯುತ್ ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತದೆ. ಮುಂದೆ ಹರಿದ ನೀರು ಬೋರುಕಾ ವಿದ್ಯುತ್ ಸ್ಥಾವರದ ಮೂಲಕವು 24 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ.
‘ನಿಲ್ಲದ ಕಾಲುವೆ ಕೊನೆ ಭಾಗದ ರೈತರ ಗೋಳು’
ಸುರಪುರ: ತಾಲ್ಲೂಕಿನಲ್ಲಿ ಮೂರು ವಿತರಣಾ ಕಾಲುವೆಗಳಿಂದ ಜಮೀನುಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲುವೆ ಕೊನೆ ಭಾಗಕ್ಕೆ ನೀರು ಮರೀಚಿಕೆಯಾಗಿದ್ದು ಆ ಭಾಗದ ರೈತರು ಗೋಳು ಮುಂದುವರಿದಿದೆ. ವಿತರಣಾ ಕಾಲುವೆ 4 ಬೂದನೂರದಿಂದ ಮಾಲಗತ್ತಿವರೆಗೆ 4 ಕಿ.ಮೀ ಉದ್ದವಿದೆ. ಈ ಕಾಲುವೆಯಿಂದ 5200 ಹೆಕ್ಟೇರ್ ಜಮೀನಿಗೆ ನೀರು ಉಣಿಸಲಾಗುತ್ತಿದೆ. ವಿತರಣಾ ಕಾಲುವೆ 5 ದ್ಯಾಮನಾಳದಿಂದ ದೇವಪುರದವರೆಗೆ 40 ಕಿ.ಮೀ. ಉದ್ದವಿದೆ. ಈ ಕಾಲುವೆ ವ್ಯಾಪ್ತಿಯಲ್ಲಿ 15884 ಜಮೀನು ಬರುತ್ತದೆ. ವಿತರಣಾ ಕಾಲುವೆ 6 ವನದುರ್ಗದಿಂದ ಸುಗೂರವರೆಗೆ 36 ಕಿ.ಮೀ ಉದ್ದವಿದೆ. ಇದರ ವ್ಯಾಪ್ತಿಯಲ್ಲಿ 18400 ಹೆಕ್ಟೇರ್ ಭೂಮಿ ಒಳಪಡುತ್ತದೆ. ಕಳೆದ ಎರಡು ವರ್ಷಗಳಿಂದ ಕಾಲುವೆ ದುರಸ್ತಿ ಜಂಗಲ್ ಕಟಿಂಗ್ ಹೂಳು ತೆಗೆಯುವ ಕಾಮಗಾರಿ ಮಾಡಿಲ್ಲ. ರೈತರು ಈ ಬಗ್ಗೆ ವಿಚಾರಿಸಿದರೆ ಅನುದಾನ ಇಲ್ಲ ಎಂದು ಅಧಿಕಾರಿಗಳು ಉತ್ತರ ಹೇಳಿ ಕೈ ತೊಳೆದುಕೊಂಡಿದ್ದಾರೆ. ಈಗಾಗಲೇ ಬಸವಸಾಗರ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕಾಲುವೆಗಳ ನಿರ್ವಹಣೆ ಮಾಡದಿರುವುದರಿಂದ ಕೊನೆ ಭಾಗಕ್ಕೆ ನೀರು ತಲುಪದಿರುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.
‘30 ವರ್ಷಗಳಿಂದ ಸಿಕ್ಕಿಲ್ಲ ನೀರು’
ಹುಣಸಗಿ: ತಾಲ್ಲೂಕಿನಲ್ಲಿ ಅಂದಾಜು 50000 ಹೆಕ್ಟೇರ್‌ಗೂ ಹೆಚ್ಚು ನೀರಾವರಿ ಕ್ಷೇತ್ರ ಇದ್ದು ಇನ್ನೂ ಹೆಚ್ಚಿನ ಪ್ರದೇಶಕ್ಕೆ ನೀರು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೃಷ್ಣಭಾಗ್ಯಜಲ ನಿಗಮದ ಅಧಿಕಾರಿಗಳು ಹೇಳುತ್ತಾರೆ. ‘ಕಳೆದ 30 ವರ್ಷಗಳ ಹಿಂದೆಯೇ ಕಾಲುವೆ ಜಾಲ ಇದ್ದರೂ ಸಹಿತ ದೇವತ್ಕಲ್ ಬೇನಕನಹಳ್ಳಿ ಸಿದ್ಧಾಪುರ ಭಾಗದಲ್ಲಿ ಇಂದಿಗೂ ಸಮರ್ಪಕವಾಗಿ ನೀರು ಲಭ್ಯವಾಗಿಲ್ಲ’ ಎಂದು ದೇವತ್ಕಲ್ ಹಾಗೂ ಹಾಲಬಾವಿ ಗ್ರಾಮದ ಹಿರಿಯ ಹೋರಾಟಗಾರಾದ ಅಯ್ಯಣ್ಣ ಹಾಲಬಾವಿ ಮಲ್ಲಣ್ಣ ನಾಯಕ ದಂಡಪ್ಪ ಹೇಳುತ್ತಾರೆ. ಹುಣಸಗಿ ತಾಲ್ಲೂಕಿನಲ್ಲಿ ಒಟ್ಟು 25ಕ್ಕೂ ಹೆಚ್ಚು ವಿತರಣಾ ಕಾಲುವೆಗಳು ಹಾಗೂ ಉಪಕಾಲುವೆಗಳನ್ನು ಹೊಂದಿದ್ದು ಅಂದಾಜು 288 ಕಿಮಿ ವ್ಯಾಪ್ತಿಯಲ್ಲಿ ಕಾಲುವೆಯ ಮೂಲಕ ನೀರು ಒದಗಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕಾಲುವೆ ಜಾಲದಲ್ಲಿ ಸಿಲ್ಟ್ ಹಾಗೂ ಮುಳ್ಳು ಕಂಟಿ ತೆರವು ದುರಸ್ತಿ ಕಾರ್ಯ ನಡೆದಿಲ್ಲ ಎಂದು ರೈತರು ಹೇಳುತ್ತಾರೆ. ಅಲ್ಲದೆ ಕಾಲುವೆ ಅಡಿಯಲ್ಲಿ ಬರುವ ಬಹುತೇಕ ಸೇವಾ ರಸ್ತೆಗಳು ಹದಗೆಟ್ಟಿದ್ದರಿಂದಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರು ನಿರ್ವಹಣೆಯಲ್ಲಿ ಗುಣಮಟ್ಟದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ‘ಇಸಾಂಪುರ ಗ್ರಾಮದಿಂದ ನೀರು ಹರಿಸುವ ಡಿ 7 ವಿತರಣಾ ಕಾಲುವೆ ಎಸ್ಆರ್ ಹಾಗೂ ಐಪಿ ಸೇವಾ ರಸ್ತೆಗಳು ಸಂಪೂರ್ಣ ಹಾಳಾಗಿವೆ. ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ವಜ್ಜಲ ಗ್ರಾಮದ ನಿಂಗನಗೌಡ ಬಸನಗೌಡ್ರ ಹಾಗೂ ಕಲ್ಲದೇವನಹಳ್ಳಿ ಗ್ರಾಮದ ಸಿದ್ದಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ನಿರ್ವಹಣೆ ಇಲ್ಲದ ಕಾಲುವೆಗಳು
ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಇರುವ ಮುಖ್ಯ ವಿತರಣಾ ಕಾಲುವೆ ಹಾಗೂ ಉಪ ಕಾಲುವೆಗಳ ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಕಾಲುವೆಗಳ ಬದಿಗಳಲ್ಲಿ ಜಾಲಿ ಗಿಡಗಳು ಹಾಗೂ ಹುಲ್ಲು ಬೆಳೆದಿದೆ ಇದರಿಂದಾಗಿ ಕಾಲುವೆಗಳ ಮುಖಾಂತರ ಜಮೀನುಗಳಿಗೆ ಸರಿಯಾಗಿ ನೀರು ಹರಿಯುವುದಿಲ್ಲ. ಇದೇ ಜುಲೈ 19ರಿಂದ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ಬಿಟ್ಟ ನೀರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ತಡಿಬಿಡಿ ಗ್ರಾಮದ ಅನತಿ ದೂರದಲ್ಲಿ ಇರುವ ಮುಖ್ಯ ವಿತರಣಾ ಕಾಲುವೆ ಸಂಖ್ಯೆ 58 ರಲ್ಲಿ ನೀರು ತುಂಬಿ ಹರಿಯುತಿತ್ತು. ಆದರೆ ಶನಿವಾರ ಆ ನೀರೆಲ್ಲಾ ಕಾಲುವೆಯಲ್ಲಿ ಖಾಲಿಯಾಗಿತ್ತು. ಇದರಿಂದಾಗಿ ತಾಲ್ಲೂಕಿನ‌ ರೈತರ ಜಮೀನುಗಳಿಗೆ ನೀರಿಲ್ಲದಂತಾಗಿದೆ. ವಡಗೇರಾದ ಉಪ ವಿಭಾಗದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಸುಮಾರು 33 ಗ್ರಾಮಗಳು ಬರುತ್ತವೆ. ಇದರಲ್ಲಿ ನೀರಾವರಿ ಪ್ರದೇಶದ 21 ಗ್ರಾಮಗಳು ಇವೆ. 2800 ಹೆಕ್ಟೇರ್‌ ಭೂಮಿ ನಿರಾವರಿ ಸೌಲಭ್ಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT