ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಾಲೇಜು ಹಾಡು ಪಾಡು ಸರಣಿ | 70 ವಿದ್ಯಾರ್ಥಿಗಳಿಗೆ ಒಬ್ಬರೆ ಕಾಯಂ ಶಿಕ್ಷಕಿ

ಕಾಗದದಲ್ಲೇ ಉಳಿದ ಶಾಲಾ ಕಟ್ಟಡ ನೆಲಸಮ, ರಸ್ತೆಯೇ ಪ್ರಾರ್ಥನಾ ಸ್ಥಳ
Last Updated 3 ಡಿಸೆಂಬರ್ 2021, 20:15 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿ ಒಂದರಿಂದ 7ನೇ ತರಗತಿವರೆಗೆ 70 ವಿದ್ಯಾರ್ಥಿಗಳಿದ್ದರೂ ಕೇವಲ ಒಬ್ಬರೇ ಕಾಯಂ ಶಿಕ್ಷಕರಿದ್ದಾರೆ. ಉಳಿದವರು ಅತಿಥಿ ಶಿಕ್ಷಕರು. ಒಂದು ಕೋಣೆ ಶಿಥಿಲಗೊಂಡಿದ್ದರಿಂದ ಬಾಗಿಲು ಹಾಕಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಕಾಡುತ್ತಿದೆ.

ಇದು ನಗರದ ವಾರ್ಡ್‌ ಸಂಖ್ಯೆ 3ರ ಶರಣನಗರ (ಶಹಾಪುರಪೇಟ) ಶಾಲೆಯ ದುಸ್ಥಿತಿ.

ಶಾಲೆ ಮುಂಭಾಗದ ರಸ್ತೆಯೇ ಪ್ರಾರ್ಥನಾ ಸ್ಥಳವಾಗಿದೆ. ರಸ್ತೆ ಮೇಲೆ ವಾಹನ ಬಂದರೆ ಬೆಳಗಿನ ಪ್ರಾರ್ಥನೆಗೆ ಅಡ್ಡಿಯಾಗಲಿದೆ. ಸುಸಜ್ಜಿತ ಕೋಣೆಗಳೇಇಲ್ಲ. ಆಟದ ಮೈದಾನವಂತೂ ಕನಸಿನ ಮಾತಾಗಿದೆ.

ಶಾಲೆಯೂ ಇಕ್ಕಟ್ಟಾದ ಜಾಗದಲ್ಲಿ ನಿರ್ಮಾಣವಾಗಿದ್ದು, ಚಿಕ್ಕ ಚಿಕ್ಕ ಕೋಣೆಗಳಿವೆ. ಮೇಲ್ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದ್ದರಿಂದ ಒಂದು ಕೋಣೆಗೆ ಬೀಗ ಹಾಕಲಾಗಿದೆ. ಇದ್ದ ಕೋಣೆಗಳು ಮಳೆಗಾಲದಲ್ಲಿ ಸೋರುತ್ತವೆ. ಗೋಡೆಗಳಿಂದ ನೀರು ಜಿನುಗುತ್ತವೆ.

ಶುದ್ಧ ಕುಡಿಯುವ ನೀರಿನ ಘಟಕವಿಲ್ಲ: ಶಾಲೆಯಲ್ಲಿ ಕೊಳವೆಬಾವಿ ಕೊರೆಸಲಾಗಿದ್ದು, ಅದೇ ನೀರನ್ನೇ ಬಿಸಿಯೂಟ, ವಿದ್ಯಾರ್ಥಿಗಳು ಕುಡಿಯುತ್ತಾರೆ. ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಯಾಗಿಲ್ಲ. ಬಿಸಿಯೂಟ ಶಾಲೆಯಲ್ಲಿ ಕುಳಿತು ಊಟ ಮಾಡಲು ಸಾಧ್ಯವಿಲ್ಲದಿದ್ದರಿಂದ ಅಕ್ಕಪಕ್ಕದ ಮನೆಗಳಲ್ಲಿ ಹೋಗಿ ಮಕ್ಕಳು ಊಟ ಮಾಡುತ್ತಾರೆ. ಈ ಮುಂಚೆ ಪಕ್ಕದ ಕಲ್ಯಾಣ ಮಂಟಪದಲ್ಲಿ ಮಕ್ಕಳು ಊಟ ಮಾಡುತ್ತಿದ್ದರು.

ಶಾಲೆಗೆ ಐದು ಶಿಕ್ಷಕರ ಹುದ್ದೆಗಳು ಮಂಜೂರು ಆಗಿವೆ. ಆದರೆ, ಕಾಯಂ ಶಿಕ್ಷಕಿ ಒಬ್ಬರು ಮಾತ್ರ ಇದ್ದಾರೆ. ಒಬ್ಬರು ಎರವಲು ಆಧಾರದ ಮೇಲೆ ಬಂದಿದ್ದರೆ, ಉಳಿದ ಮೂವರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಶಿಕ್ಷಕರು ಇಲ್ಲದಿದ್ದರಿಂದ ಕಾಯಂ ಶಿಕ್ಷಕಿಯಮೇಲೆ ಎಲ್ಲ ಹೊಣೆ ಅವರ ಮೇಲೆ ಬಿದ್ದಿದೆ. ಇದರಿಂದ ಪಾಠ ಬೋಧನೆಗೆ ತೊಂದರೆಯಾಗಿದೆ.

ಕೋಣೆಗೆ ಬೀಗ: ಮೇಲ್ಚಾವಣಿ ಕುಸಿಯುವ ಭೀತಿ ಇರುವುವುದರಿಂದ ಒಂದು ಕೋಣೆಗೆ ಬೀಗ ಹಾಕಲಾಗಿದೆ. ಇದರಿಂದ ಜಾಗದ ಸಮಸ್ಯೆಯಾಗಿದೆ. ಒಂದೇ ಕೊಠಡಿಯಲ್ಲಿ ಎರಡು ತರಗತಿ ವಿದ್ಯಾರ್ಥಿಗಳನ್ನು ಕೂರಿಸುವ ಪರಿಸ್ಥಿತಿ ಬಂದಿದೆ. ದುರಸ್ತಿಗೆ ಬಂದಿರುವ ಈ ಕೋಣೆಯಲ್ಲಿ ಕಂಪ್ಯೂಟರ್ ತರಗತಿಗಳು ನಡೆಯುತ್ತಿದ್ದವು. ಈಗ ಅವೆಲ್ಲವೂ ಬಂದ್‌ ಆಗಿವೆ.

ಮಳೆ ಬಂದರೆ ಸೋರುವ ಕೋಣೆಗಳು: ಶಾಲೆಯ ಮೇಲಂತಸ್ತಿನಲ್ಲಿ ಎರಡು ಕೋಣೆಗಳಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಮಳೆ ಬಂದರೆ ಸೋರುವ ಕೋಣೆಯಲ್ಲೇ ಪಾಠ ನಡೆಯುತ್ತದೆ. ಹೆಸರಿಗೆ ಮಾತ್ರ ಅಲ್ಲಿ ದೀಪ, ಫ್ಯಾನ್‌ ಅಳವಡಿಸಲಾಗಿದೆ. ವಿದ್ಯುತ್‌ ಇಲ್ಲದ ಕಾರಣ ಬೆಳಗುತ್ತಿಲ್ಲ. ಚಾವಣಿಯ ಶೀಟ್‌ಗಳು ಅಲ್ಲಲ್ಲಿ ಒಡೆದಿವೆ. ಇಲ್ಲಿಯೇ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ನಗರಸಭೆ ಅಧ್ಯಕ್ಷರ ವಾರ್ಡ್‌: ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಅವರ ವಾರ್ಡ್‌ ವ್ಯಾಪ್ತಿಗೆ ಶಹಾ‍ಪುರಪೇಟ ಶಾಲೆ ಒಳಪಟ್ಟಿದೆ. ಅವರಿಗೂ ಶಾಲೆಇಕ್ಕಟ್ಟಿನಲ್ಲಿ ನಡೆಸುತ್ತಿರುವುದು ಗಮನಕ್ಕಿದೆ. ಆದರೆ, ನಿವೇಶನ ಸಿಕ್ಕುತ್ತಿಲ್ಲ ಎನ್ನುವುದು ಅವರ ಹೇಳಿಕೆ.

‘ಹಿಂದಿನ ಮುಖ್ಯಶಿಕ್ಷಕರು ನಿವೇಶನ ಮತ್ತು ಹೊಸ ಕಟ್ಟಡಕ್ಕಾಗಿ ಹಲವಾರು ಬಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ನೆಲಸಮಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸಬೇಕು. ಅನುದಾನ ಇಲ್ಲದಿದ್ದರಿಂದ ಕಾಗದದಲ್ಲೇ ನಿಂತುಹೋಗಿದೆ. ಮುಖ್ಯಶಿಕ್ಷಕರ ನಿಧನ ನಂತರ ನನಗೆ ಶಾಲೆಯ ಹೊಣೆ ನೀಡಲಾಗಿದೆ’ ಎನ್ನುತ್ತಾರೆ ಪ್ರಭಾರಿ ಮುಖ್ಯಶಿಕ್ಷಕಿನಜೀಮಾ ಉನ್ನೀಸಾ.

***

ಪಟ್ಟಿ: ಶಾಲಾ ಹಾಜರಾತಿ ವಿವರ(ತರಗತಿ; ಸಂಖ್ಯೆ)

1;10
2;7
3;9
4;11
5;8
6;10
7;15

ಒಟ್ಟು;70

***

ಕೆಕೆಆರ್‌ಡಿಬಿ ಅನುದಾನದಲ್ಲಿ ನಾಲ್ಕು ಕೋಣೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ನಿವೇಶನ ಸಮಸ್ಯೆಯಿಂದ ಕೈಬಿಡಲಾಗಿದೆ. ಜಾಗ ಸಿಕ್ಕರೆ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು

-ವಿಲಾಸ ಪಾಟೀಲ, ನಗರಸಭೆ ಅಧ್ಯಕ್ಷ

***

ನಗರದ ಶಹಾಪುರಪೇಟ ಶಾಲೆ ಇಕ್ಕಟ್ಟು ಇರುವುದು ಗಮನಕ್ಕಿದೆ. ಜಾಗದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಜೊತೆ ಚರ್ಚಿಸುತ್ತೇನೆ

-ಶಾಂತಗೌಡ ಪಾಟೀಲ, ಡಿಡಿಪಿಐ

***

ಶಾಲೆಯಲ್ಲಿ 7 ಕೋಣೆಗಳಿದ್ದು, ಇದರಲ್ಲಿ ಮೂರು ಕೋಣೆಗಳು ಮಾತ್ರ ಸುಸ್ಥಿತಿಯಲ್ಲಿವೆ. ಆಟದ ಮೈದಾನವಿಲ್ಲ. ಪ್ರಾರ್ಥನೆಗೆ ತೊಂದರೆ ಇದೆ
- ನಜೀಮಾ ಉನ್ನೀಸಾ, ಪ್ರಭಾರಿ ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT