ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬಹುದೊಡ್ಡ ನೇಮಕಾತಿ ಪ್ರಕ್ರಿಯೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣವಕಾಶ
Published 13 ಡಿಸೆಂಬರ್ 2023, 21:19 IST
Last Updated 13 ಡಿಸೆಂಬರ್ 2023, 21:19 IST
ಅಕ್ಷರ ಗಾತ್ರ

ದೇಶದ ಪ್ಯಾರಾ ಮಿಲಟರಿ ಪಡೆಗಳಲ್ಲಿ ಸೇವೆ ಮಾಡಬೇಕೆಂಬ ಕನಸು ಹೊಂದಿರುವ ಯುವಕ–ಯುವತಿಯರಿಗೆ ಮತ್ತೊಂದು ಸುವರ್ಣಾವಕಾಶ ಬಂದಿದೆ. ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ವಿವಿಧ ವಿಭಾಗಗಳಲ್ಲಿ ‘ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ’ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ (SSC) ಆರಂಭಿಸಿದೆ.

ಪುರುಷ ಮತ್ತು ಮಹಿಳಾ ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಇದೇ ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕಡೆಯ ದಿನ. ಈ ನೇಮಕಾತಿ  ಪ್ರಕ್ರಿಯೆಯ ವಿವರಗಳನ್ನು ಇಲ್ಲಿ ತಿಳಿಯೋಣ..

ಸಿಎಪಿಎಫ್ ಅಡಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB), ಹಾಗೂ ಸಿಎಪಿಎಫ್‌ ಹೊರತುಪಡಿಸಿ ಗೃಹ ಇಲಾಖೆಯ ಪ್ರತ್ಯೇಕ ಭದ್ರತಾ ಘಟಕಗಳಾದ ಅಸ್ಸಾಂ ರೈಫಲ್ಸ್ (AR) ಸೆಕ್ರೇಟಿರಿಯೆಟ್ ಸೆಕ್ಯೂರಿಟಿ ಫೋರ್ಸ್‌ನಲ್ಲಿ (SSF) ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 

ಹುದ್ದೆಗಳ ವಿವರ
ಕಾನ್‌ಸ್ಟೆಬಲ್‌ ಜಿಡಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳ ಒಟ್ಟು ಹುದ್ದೆಗಳ ಸಂಖ್ಯೆ 26,146. ಇದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರುವ ಹುದ್ದೆಗಳ ಸಂಖ್ಯೆ 2,799. ಆನ್‌ಲೈನ್ ಅರ್ಜಿ ಸಲ್ಲಿಸಲು ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ₹100 ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ, ನಿವೃತ್ತ ಯೋಧರಿಗೆ ಶುಲ್ಕ ವಿನಾಯಿತಿ ಇದೆ. ಯುಪಿಐ ಸೌಲಭ್ಯ ಬಳಸಿಯೂ ಶುಲ್ಕವನ್ನು ಆನ್‌ಲೈನ್ ಪಾವತಿ ಮಾಡಬಹುದು.

ವಿದ್ಯಾರ್ಹತೆ
ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 23. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 28, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ಸಡಿಲಿಕೆ ಇದೆ. ಸೇನೆಯ ನಿವೃತ್ತ ಯೋಧರು ನಿವೃತ್ತಿ ಆದಾಗಿನಿಂದ ಮೂರು ವರ್ಷದವೊಳಗೆ ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ
₹ 21,700–69,100

ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆ
ಈ ನೇಮಕಾತಿಯು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಸಾಮರ್ಥ್ಯ ಪರೀಕ್ಷೆ (PST/PET), ವೈದ್ಯಕೀಯ ಪರೀಕ್ಷೆ (DME/MRE) ಹಾಗೂ ದಾಖಲಾತಿಗಳ ತಪಾಸಣೆ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ.

ಮೊದಲ ಹಂತವಾದ ಸಿಬಿಟಿ ಪರೀಕ್ಷೆಯಲ್ಲಿ 160 ಅಂಕಗಳಿಗೆ 80 ಪ್ರಶ್ನೆಗಳ 1 ಪತ್ರಿಕೆ ಮಾತ್ರ ಇರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕ. ಅವಧಿ 1 ಗಂಟೆ ಮಾತ್ರ. ಪ್ರತಿ 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ. ಬಹುಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ.

ಸಿಬಿಟಿ ಪರೀಕ್ಷೆ ಇಂಗ್ಲಿಷ್, ಹಿಂದಿ ಹಾಗೂ ಕನ್ನಡವೂ ಒಳಗೊಂಡಂತೆ ಇತರ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಅಭ್ಯರ್ಥಿಗಳು ಕನಿಷ್ಠ ಶೇ 30ರಷ್ಟು ಅಂಕಗಳನ್ನು ಇದರಲ್ಲಿ ಪಡೆಯುವುದು ಕಡ್ಡಾಯ.

ಎಸ್ಸೆಸ್ಸೆಲ್ಸಿ ಮಟ್ಟದ ಪಠ್ಯಕ್ರಮವನ್ನು ಹೊಂದಿರುತ್ತದೆ. ಹಾಗಾಗಿ ಆಸಕ್ತರು 5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಪಠ್ಯಗಳನ್ನು ಓದಿಕೊಳ್ಳಬಹುದು.  ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬಹುದು. ಇದರೊಂದಿಗೆ ಪ್ರಚಲಿತ ಮಾಹಿತಿಗಾಗಿ ದಿನಪತ್ರಿಕೆಗಳನ್ನು ಓದಬಹುದು. 

ಎಲ್ಲೆಲ್ಲಿ ಪರೀಕ್ಷೆ?

ಸಿಬಿಟಿ ಪರೀಕ್ಷೆಗಳು ಎಸ್‌ಎಸ್‌ಸಿಯ 9 ವಲಯಗಳಿಂದ ನಡೆಯುತ್ತವೆ. ಅದರಲ್ಲಿ ಕರ್ನಾಟಕ, ಕೇರಳ ಅಭ್ಯರ್ಥಿಗಳಿಗೆ ‘ಎಸ್‌ಎಸ್‌ಸಿ ಕರ್ನಾಟಕ–ಕೇರಳ ಸರ್ಕಲ್’ 14 ಕಡೆ ಸಿಬಿಟಿ ಪರೀಕ್ಷೆ ನಡೆಸಲಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ, ಎರ್ನಾಕುಲಂ, ಕೊಲ್ಲಂ, ಕೊಟ್ಟಾಯಂ, ಕೋಯಿಕ್ಕೋಡ್‌, ತಿರುವನಂತಪುರಂ, ತ್ರಿಶೂರ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಫೆಬ್ರುವರಿಯಲ್ಲಿ  ಪರೀಕ್ಷೆ ನಡೆಯುವ ಸಂಭವವಿದೆ.

ಅಭ್ಯರ್ಥಿಗಳು ತಮಗೆ ಸಿಎಪಿಎಫ್‌ನ ಯಾವ ವಿಭಾಗ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಅರ್ಜಿ ಸಲ್ಲಿಸುವಾಗಲೇ ಆದ್ಯತಾನುಸಾರ ಆಯ್ಕೆ ಮಾಡಿಕೊಳ್ಳಬೇಕು.

ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಅರ್ಹತಾ ಮಾನದಂಡಗಳಿಗಾಗಿ, ಹುದ್ದೆಗಳ ಪ್ರವರ್ಗವಾರು ವಿಂಗಡಣೆ ಹಾಗೂ ಇತರೆ ಹೆಚ್ಚಿನ ಮಾಹಿತಿ ಬಗ್ಗೆ ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.nic.in ನೋಡಬಹುದು.

ಅಣಕು ಪರೀಕ್ಷೆ
ಅನೇಕ ವಿದ್ಯಾರ್ಥಿಗಳಿಗೆ ಸಿಬಿಟಿ ಟೆಸ್ಟ್ ಬಗ್ಗೆ ಗೊಂದಲ ಇರುತ್ತದೆ. ಇದಕ್ಕೆ ಚಿಂತೆ ಮಾಡಬೇಕಿಲ್ಲ. ಸಿಬಿಟಿ ಪರೀಕ್ಷೆ ಹೇಗೆ ನಡೆಯುತ್ತದೆ? ಏನು ತಯಾರಿ ಮಾಡಿಕೊಳ್ಳಬೇಕು? ಎಂಬುದರ ಬಗ್ಗೆ ಹಾಗೂ ಅಣಕು ಪರೀಕ್ಷೆಯ ಅವಕಾಶವನ್ನು ಎಸ್‌ಎಸ್‌ಸಿ ಒದಗಿಸಿದೆ. ಆಸಕ್ತರು ಎಸ್‌ಎಸ್‌ಸಿ ವೆಬ್‌ಸೈಟ್‌ನ ಕ್ಯಾಂಡಿಡೇಟ್ ಕಾರ್ನರ್‌ಗೆ ಹೋಗಿ Mock Test ಪರಿಶೀಲಿಸಬಹುದು.

NCC ಅಭ್ಯರ್ಥಿಗಳಿಗೆ ಬೋನಸ್ ಅಂಕ!
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಎನ್‌ಸಿಸಿ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ (ಸಿಬಿಟಿ ಪರೀಕ್ಷೆ) ಬೋನಸ್ ಅಂಕಗಳನ್ನು ನೀಡಲಾಗುತ್ತದೆ. 'ಸಿ’ ಪ್ರಮಾಣ ಪತ್ರ ಹೊಂದಿರುವವರಿಗೆ ಶೇ 5 ರಷ್ಟು ಅಂಕಗಳು, 'ಬಿ’ ಪ್ರಮಾಣಪತ್ರ ಹೊಂದಿರುವವರಿಗೆ ಶೇ 3, ಹಾಗೂ 'ಎ’ ಪ್ರಮಾಣ ಪತ್ರ ಹೊಂದಿರುವವರಿಗೆ ಶೇ 2 ರಷ್ಟು ಅಂಕಗಳನ್ನು ಸಿಬಿಟಿ ಪರೀಕ್ಷೆಯ ಅಂಕಗಳಿಗೆ ಸೇರಿಸಲಾಗುತ್ತದೆ.

ಸಿಬ್ಬಂದಿ ನೇಮಕಾತಿ ಆಯೋಗದ ಬಗ್ಗೆ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆಗಳಿಗೆ ಬೇಕಿರುವ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಹಾಗೂ ಸಿಬ್ಬಂದಿಗಳ ಪರೀಕ್ಷೆ ಬಗೆಗಿನ ಪ್ರಕ್ರಿಯೆ ನೋಡಿಕೊಳ್ಳುತ್ತದೆ. ಇದು 1975ರಲ್ಲಿ ಸ್ಥಾಪನೆಯಾಗಿದ್ದು, ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT