ಬುಧವಾರ, ಸೆಪ್ಟೆಂಬರ್ 29, 2021
20 °C

ಓದಲೂ ಇದೆ ಸರಿಯಾದ ಕ್ರಮ

ಮನೋಜ್‌ ಟಿ.ಪಿ. Updated:

ಅಕ್ಷರ ಗಾತ್ರ : | |

Prajavani

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ಓದುವುದು ಹೇಗೆ ಎಂಬುದು ಬಹಳಷ್ಟು ಸ್ಪರ್ಧಾರ್ಥಿಗಳಲ್ಲಿ ಇರುವ ಗೊಂದಲ. ಕೇವಲ ಓದುತ್ತ ಹೋದರೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂಬುದು ತಜ್ಞರ ಅಭಿಮತ. ಏಕೆಂದರೆ ಓದುವಾಗ ನಿಮಗೆ ಮಾಹಿತಿ ಅರ್ಥವಾಗುತ್ತದೆ, ಆದರೆ ನೆನಪಿನಲ್ಲಿ ಉಳಿಯುವುದು ಬಹಳ ಕಷ್ಟ. ಹೀಗಾಗಿ ಕೆಲವೊಂದು ಸುಲಭವಾದ ಅಂಶಗಳನ್ನು ಪಾಲಿಸಿದರೆ ಪ್ರತಿಯೊಂದು ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು.

*ಮೊದಲು ಯಾವುದೇ ವಿಷಯವಿರಲಿ, ಅದರ ಶೀರ್ಷಿಕೆ, ಉಪ ಶೀರ್ಷಿಕೆ, ಆರಂಭದ ಮಾಹಿತಿಯನ್ನು ಓದಿಕೊಂಡು ಕೊನೆಯಲ್ಲಿನ ಸಾರಾಂಶದ ಮೇಲೆ ಕಣ್ಣು ಹಾಯಿಸಿ. ಈ ರೀತಿ ಓದಿದಾಗ ನಿಮಗೆ ಆ ವಿಷಯದ ಬಗ್ಗೆ ಒಟ್ಟಾರೆ ತಿಳಿವಳಿಕೆ ಸಿಗುತ್ತದೆ.

*ನಂತರ ಪುನಃ ವಿಷಯದ ಆರಂಭಕ್ಕೆ ಹೋಗಿ. ನಿಧಾನವಾಗಿ ಓದಲು ಶುರು ಮಾಡಿ. ಪ್ರತಿಯೊಂದು ಪ್ಯಾರಾದ ವಾಕ್ಯಗಳನ್ನು ಗಮನಿಸುತ್ತ, ಸಾಧ್ಯವಾದರೆ ಮುಖ್ಯವಾದ ಅಂಶಗಳ ಕೆಳಗೆ ಗೆರೆ ಎಳೆಯುತ್ತ ಹೋಗಿ. ಕೋಷ್ಟಕ, ಚಿತ್ರಗಳು, ಡಯಾಗ್ರಾಮ್‌ಗಳಿದ್ದರೆ ಮೈಂಡ್‌ ಮ್ಯಾಪಿಂಗ್‌ ಮೂಲಕ ನೆನಪಿನಲ್ಲಿಟ್ಟುಕೊಳ್ಳಿ.

*ಈ ಹಂತದಲ್ಲಿ ಇಡೀ ಅಧ್ಯಾಯದಲ್ಲಿ ಅಥವಾ ನಿಮಗೆ ಬೇಕಾದ ವಿಷಯದಲ್ಲಿ ಏನೇನಿದೆ ಎಂಬುದು ಗೊತ್ತಿರುತ್ತದೆ. ಈಗ ಸಮಗ್ರ ಅಧ್ಯಾಯವನ್ನು ಓದಲು ಶುರುಮಾಡಿ. ವಿವರಗಳನ್ನು ಹೆಚ್ಚು ಗಮನವಿಟ್ಟು ಓದಿ.

*ಓದಿ ಮುಗಿದ ಮೇಲೆ ಪುಸ್ತಕವನ್ನು ಬದಿಗಿಟ್ಟು, ನೀವು ಓದಿದ ಪ್ರಮುಖ ಅಂಶಗಳನ್ನು ಬರೆಯುತ್ತ ಹೋಗಿ. ಕೆಲವೇ ವಾಕ್ಯಗಳಲ್ಲಿ ಅಥವಾ ಕೆಲವೇ ಶಬ್ದಗಳಲ್ಲಿ ನಿಮ್ಮದೇ ಟಿಪ್ಪಣಿ ಮಾಡಿಕೊಳ್ಳಿ. ಓದಿದ ತಕ್ಷಣ ಟಿಪ್ಪಣಿ ಮಾಡಿಕೊಂಡರೆ ನಿಮಗೆ ಎಲ್ಲವೂ ನೆನಪಿನಲ್ಲಿರುವುದರಿಂದ ವೇಗವಾಗಿ ಟಿಪ್ಪಣಿ ಮಾಡಿಕೊಳ್ಳಬಹುದು. ಅಧ್ಯಯನ ಮಾಡಿದ ವಿಷಯವೂ ಎರಡನೇ ಸಲ ಮನದಟ್ಟಾಗುತ್ತದೆ.

*ಬರೆದ ಎಲ್ಲ ವಿಷಯಗಳನ್ನೂ ಆಗಾಗ ಓದಿಕೊಳ್ಳುತ್ತ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ನೆನಪಿಗೆ ಬಂದಾಗಲೆಲ್ಲ ಅದರ ವಿಶ್ಲೇಷಣೆ ಮಾಡುತ್ತ ಮುಖ್ಯವಾದ ಅಂಶಗಳನ್ನು ಬೇರೆ ಅಂಶಗಳ ಜೊತೆ ಜೋಡಿಸಿಕೊಂಡು ಇನ್ನಷ್ಟು ಆಳವಾದ ಅಧ್ಯಯನ ನಡೆಸಬಹುದು.

*ಆರೂ ದಿನಗಳ ಕಾಲ ಓದಿಕೊಂಡು ವಾರದ ಕೊನೆಗೆ ಪುನರಾವರ್ತನೆಗೆ ಮೀಸಲಿಡಿ. ಶಾಲೆಯಲ್ಲಾದರೆ ಕಿರು ಪರೀಕ್ಷೆಗಳಿರುತ್ತವೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಣಕು ಪರೀಕ್ಷೆಗಳನ್ನು ನೀವೇ ತೆಗೆದುಕೊಳ್ಳಬೇಕಾಗುತ್ತದೆ. ಈ ತರಹದ ಪುನರಾವರ್ತನೆ ಹಾಗೂ ಅಣಕು ಪರೀಕ್ಷೆಗಳು ನೀವು ಎದುರಿಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ನೆರವಾಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು