ಬುಧವಾರ, ಫೆಬ್ರವರಿ 8, 2023
17 °C

ಮಹಿಳಾ ಲೋಕದಲ್ಲಿ ಉದ್ಯಮ ಸುಗ್ಗಿ

ಶಾಂತಾಕುಮಾರಿ  Updated:

ಅಕ್ಷರ ಗಾತ್ರ : | |

Prajavani

ಯುದ್ಧವೇ ಇರಲಿ, ಸಾಂಕ್ರಾಮಿಕ ರೋಗಗಳ ಕಾಲಘಟ್ಟವೇ ಬರಲಿ. ಅವು ತನ್ನ ಕರಾಳ ಮುಖವನ್ನು ಬಿಚ್ಚಿಟ್ಟು, ಶ್ರೀಸಾಮಾನ್ಯರ ಬದುಕನ್ನು ಅಸಹನೀಯಗೊಳಿಸುತ್ತವೆ ಎನ್ನುವುದು ಸತ್ಯ. ಹಾಗೆಯೇ, ಇವು ಹೊಸ ಆವಿಷ್ಕಾರ, ಹೊಸ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಹಾದಿ ತೋರಿಸುತ್ತವೆ ಎಂಬುದೂ ಅಷ್ಟೆ ನಿಜ.

ಕೊರೊನೋತ್ತರ ಕಾಲಘಟ್ಟ ಹಾಗೂ ಅದೇ ಸಮಯ ದಲ್ಲಿ ಮಹಿಳಾ ಉದ್ಯಮ ಕ್ಷೇತ್ರದಲ್ಲಾಗುತ್ತಿರುವ ಸಕಾರಾತ್ಮಕ ಬೆಳವಣಿಗೆಗಳು ಈ ಮಾತುಗಳಿಗೆ ಸಾಕ್ಷಿಯಾಗಿವೆ. ಕೋವಿಡ್ ತಂದೊಡ್ಡಿದ್ದ ಬಿಕ್ಕಟ್ಟಿನಿಂದ ಜಗತ್ತೇ ಪತರಗುಟ್ಟುತ್ತಿದ್ದಾಗ, ಮನೆಯವರು ಉದ್ಯೋಗ ಕಳೆದುಕೊಂಡಾಗ ಕೆಲವು ಹೆಣ್ಣುಮಕ್ಕಳು ತಮಗೆ ಗೊತ್ತಿರುವ ಜ್ಞಾನವನ್ನೇ ಬಂಡವಾಳವಾಗಿಸಿಕೊಂಡು ಉದ್ಯಮ ಕಟ್ಟಿದರು. ತಾವು ಬೆಳೆದ ಬೆಳೆಗಳು, ತಯಾರಿಸಿದ ಸಿಹಿತಿಂಡಿ, ಹಪ್ಪಳ, ಸಂಡಿಗೆ ಸಾಂಬಾರು ಪುಡಿಯಂತಹ ದಿನ ಬಳಕೆಯ ಅವಶ್ಯಕ ಎನಿಸುವ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಹಣ ಸಂಪಾದಿಸಿದರು. ಮಾಸ್ಕ್‌ ತಯಾರಿಕೆಯೇ ಇರಲಿ, ಬಟ್ಟೆ, ಒಡವೆ, ಪೂಜಾ ಸಾಮಗ್ರಿ, ಅಲಂಕಾರಿಕ ಸಾಧನ ಹೀಗೆ ನಿತ್ಯೋಪಯೋಗಿ ವಸ್ತುಗಳನ್ನೇ ಗ್ರಾಹಕರಿಗೆ ತಲುಪಿಸಲು ಮುಂದಾದರು. ಕಿರು ಮಹಿಳಾ ಉದ್ಯಮಿಗಳ ಸಂಖ್ಯೆ ನೋಡ ನೋಡುತ್ತಲೇ ಹತ್ತು ನೂರಾಗಿ, ನೂರು ಸಾವಿರವಾಯಿತು.

ನವೋದ್ಯಮಿಗಳ ಪರ್ವ...

ಗೀತಾ ಬ್ಯೂಟಿಷಿಯನ್. ಆಕೆಯ ಪತಿ ಒಂದು ಫ್ಯಾಕ್ಟರಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕೊರೊನಾ ಕಾಲದಲ್ಲಿ ಅವರ ಫ್ಯಾಕ್ಟರಿ ಮುಚ್ಚಿಹೋಯಿತು. ಲಾಕ್‌ಡೌನ್‌ನಿಂದ ಪಾರ್ಲರ್ ಸಹ ಮುಚ್ಚಬೇಕಾಯಿತು. ಮನೆಯಲ್ಲಿ ಮಕ್ಕಳು, ವಯಸ್ಸಾದ ಅತ್ತೆ–ಮಾವ. ದಿನನಿತ್ಯದ ಊಟಕ್ಕೂ ಪರಿತಪಿಸುವಂತಹ ಸ್ಥಿತಿ. ಆಗ ಆಕೆಗೆ ತೋಚಿದ್ದು ಅಪಾರ್ಟ್‌ಮೆಂಟ್‌ಗಳಲ್ಲಿ ವಯಸ್ಸಾದವರಿಗೆ ಹಾಗೂ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದ (ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ) ಬ್ಯಾಚುಲರ್ಸ್‌ಗಳಿಗೆ ಊಟದ ಡಬ್ಬಿ ಕಳಿಸುವ ಕೆಲಸ. ಅದಕ್ಕೆಷ್ಟು ಬೇಡಿಕೆ ಬಂತೆಂದರೆ, ಈಗ ಅವರು ‘ಡಬ್ಬಿ’ ಕಳಿಸುವ ಕೆಲಸವನ್ನು ಕೇಟರಿಂಗ್ ಉದ್ಯಮವಾಗಿ ಬೆಳೆಸಿದ್ದಾರೆ. ಇದು ಸುಮಾರು ಹದಿನೈದು ಜನರಿಗೆ ಕೆಲಸ ನೀಡಿದ್ದಾರೆ.

ರೋಹಿಣಿ ಒಂದು ಇವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ನಂತರ ಸಭೆ ಸಮಾರಂಭ ರದ್ದಾದವು. ಕಂಪನಿ ನಷ್ಟದೊಂದಿಗೆ ಮುಚ್ಚಿ ಹೋಯಿತು. ಪತಿಯು ಮಾರ್ಕೆಟಿಂಗ್ ಫೀಲ್ಡ್‌ನಲ್ಲಿದ್ದುದರಿಂದ ಅವರೂ ಕೆಲಸ ಕಳೆದು‌ಕೊಂಡರು. ಮನೆ ಬಾಡಿಗೆ, ಇಎಂಐಗಳು, ಮಕ್ಕಳ ವಿದ್ಯಾಭ್ಯಾಸ ನಿಭಾಯಿಸಲು ಸೋತಾಗ ರೋಹಿಣಿ ಧೃತಿಗೆಡದೆ ಮದುವೆಗಳ ಇವೆಂಟ್ ಮ್ಯಾನೇಜ್ಮೆಂಟ್ ಹೊಣೆ ಹೊತ್ತರು. ಅದೇ ವೃತ್ತಿಯಲ್ಲಿ ಅನುಭವವಿದ್ದ ಆಕೆಗೆ ಕಷ್ಟವೆನಿಸಲಿಲ್ಲ. ದೊಡ್ಡ ದೊಡ್ಡ ಸಮಾರಂಭಗಳಿಗೂ ಅವರ ಸೇವೆ ವಿಸ್ತರಿಸಿತು. ಈಗ ಅವರು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ.

ಇವೆರಡೂ ಕೊರೊನಾ ದುರಿತ ಕಾಲದಲ್ಲಿಯೂ ಆಶಾ ಭಾವನೆ ಹುಟ್ಟಿಸುವ ಕಥೆಗಳು. ಇಂಥ ಹಲವು ಸ್ಫೂರ್ತಿದಾಯಕ ಕಥೆಗಳ ನಾಯಕಿಯರು ನಮ್ಮ ನಡುವೆ ಇದ್ದಾರೆ. ಮಾತ್ರವಲ್ಲ, ಸಂಘಟಿತವಾಗಿ, ಉದ್ಯಮಕ್ಕೆ ಸಾಂಸ್ಥಿಕ ರೂಪ ಕೊಟ್ಟು ಯಶಸ್ವಿಯಾದ ಮಹಿಳೆಯರೂ ಇದ್ದಾರೆ.

ಸಾಂಸ್ಥಿಕ – ಸಾಂಘಿಕ ಸ್ವರೂಪ

ಮಹಿಳೆಯರದ್ದು ಅನುತ್ಪಾದಕ ದುಡಿತ ಎಂದೇ ಒಂದು ಕಾಲದಲ್ಲಿ ಹೇಳಲಾಗಿತ್ತು. ಮಹಿಳೆಯರ ದುಡಿತ ದೇಶದ ಆರ್ಥಿಕ ಪ್ರಗತಿಪಥದಲ್ಲಿ ಹೆಜ್ಜೆ ಗುರುತು ಮೂಡಿಸಬೇಕಾದರೆ ಅದಕ್ಕೊಂದು ಸಾಂಸ್ಥಿಕ ಸಾಂಘಿಕ ಸ್ವರೂಪ ನೀಡಬೇಕು. ಆ ಮೂಲಕ ಅವಳು ತನ್ನ ಅಸ್ಮಿತೆಯನ್ನು ಬಲಪಡಿಸಿಕೊಳ್ಳಬೇಕು. ಉದ್ಯಮಿಯಾಗಿ ತನ್ನನ್ನು ಗುರುತಿಸಿಕೊಳ್ಳಬೇಕು. ಇಂಥ ಬದಲಾವಣೆಯ ಗಾಳಿ ಬೀಸಿದ್ದು ಮಾತ್ರ ಕಳೆದೆರಡು ವರ್ಷಗಳಲ್ಲಿ.

ಹಳ್ಳಿಯ ಮೂಲೆಯಲ್ಲಿದ್ದುಕೊಂಡು ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು ಎಂದು ಧೈರ್ಯ ಮಾಡಿ, ಅದಕ್ಕಾಗಿ ಒಂದು ಫೇಸ್‌ಬುಕ್‌ ಪುಟ ತೆರೆದ ಬೆಂಗಳೂರಿನ ಅಪರ್ಣಾ ರಾವ್‌ ‘ಧೃತಿ ಮಹಿಳಾ ಮಾರುಕಟ್ಟೆ’ ಎಂಬ ಹೆಸರಿನಡಿಯಲ್ಲಿ ಧೃತಿಗೆಡದಂತೆ ನಡೆಯಲು ಬದುಕಿನ ಹಾದಿ ತೋರಿದ್ದಾರೆ. ಇತ್ತೀಚೆಗೆ ಮಾರಾಟಮೇಳವೊಂದನ್ನು ಹಮ್ಮಿಕೊಂಡದ್ದಲ್ಲದೇ ‘ಧೃತಿಗೆಡದ ಹೆಜ್ಜೆಗಳು‘ ಎಂಬ ಪುಸ್ತಕವನ್ನು ಹೊರತರಲಾಗಿದೆ.

ಸುನೀತಾ ಮಹಿಳಾ ಮಾರುಕಟ್ಟೆ (ಸುಮಾ)ಎಂಬ ಫೇಸ್‌ಬುಕ್‌ ಪೇಜ್‌ ಅನ್ನು ಸೌಪರ್ಣಿಕಾ ಹೊಳ್ಳ ಎಂಬುವವರು ನಡೆಸುತ್ತಿದ್ದು ಉದ್ಯಮಕ್ಕೆ ಸಂಬಂಧಿಸಿದ ಆನ್‌ಲೈನ್ ಪತ್ರಿಕೆ ಸಹ ನಡೆಸುತ್ತಿದ್ದಾರೆ. ಇವರೆಲ್ಲ ಉದಾಹರಣೆಗಳಷ್ಟೇ. ಇಂಥ ಸಾವಿರಾರು ಮಹಿಳೆಯರು ಸ್ವ ಉದ್ಯೋಗ ಆರಂಭಿಸಿದ್ದಾರೆ. ಪ್ರಾರಂಭದಲ್ಲಿ ಇವರೆಲ್ಲರ ಉದ್ದೇಶ ಒಂದಷ್ಟು ವಹಿವಾಟು ನಡೆಸುವುದಾಗಿತ್ತು. ಆದರೆ, ಕೆಲವು ಉದ್ಯಮಗಳು ಈಗ ತರಹೇವಾರಿ ಉತ್ಪನ್ನಗಳೊಂದಿಗೆ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ. ಇದರ ಜೊತೆಗೆ, ಸೋಪು, ಹೇರ್‌ಆಯಿಲ್‌, ಸಿರಿಧಾನ್ಯ, ಬ್ಯಾಗುಗಳು, ಅಡಕೆ ಹಾಳೆ ಉತ್ಪನ್ನ, ಒಳ ಉಡುಪು, ಸಿದ್ಧ ಉಡುಪು, ಪೇಪರ್ ಬ್ಯಾಗ್‌.. ಇನ್ನೂ ನೂರಾರು ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಾ ಮಾರಾಟ ಮಾಡುತ್ತಾ ಸ್ವಾವಲಂಬಿ ಬದುಕನ್ನು ಕಂಡುಕೊಂಡ ಮಹಿಳೆಯರೂ ಇದ್ದಾರೆ.

ಕೊನೆಯದಾಗಿ..

90ರ ದಶಕದಲ್ಲಿ ತಂತ್ರಜ್ಞಾನದ ದೆಸೆಯಿಂದ ಹಲವು ಮಹಿಳಾ ಉದ್ದಿಮೆದಾರರು ಚಾಲ್ತಿಗೆ ಬಂದರು. ಕಂಪ್ಯೂಟರ್‌, ಮಹಿಳೆಯರ ಜೀವನ ಪ್ರವೇಶಿಸಿದ ನಂತರ ಆರ್ಥಿಕ ಸ್ವಾವಲಂಬನೆ ಹೆಚ್ಚಿ, ಆಕೆಯೂ ಉದ್ಯಮಶೀಲೆ ಎಂಬ ಹೊಸ ದೃಷ್ಟಿಕೋನದಿಂದ ನೋಡುವಂತಾಯಿತು.

ನಾಲ್ಕೈದು ದಶಕಗಳ ಹಿಂದಿನ ಬದುಕನ್ನೊಮ್ಮೆ ಅವಲೋಕಿಸಿ ನೋಡಿದರೆ ಅಲ್ಲಿ, ಹೈನುಗಾರಿಕೆ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಮಹಿಳೆಯೇ ಸ್ವತಂತ್ರವಾಗಿ ಉದ್ಯಮ ನಡೆಸುತ್ತಿದ್ದಿದ್ದನ್ನು ಗಮನಿಸಬಹುದು. ಅಷ್ಟು ಮಾತ್ರವಲ್ಲ, ಹೊಲಿಗೆ, ಸೀರೆ ನೇಯ್ಗೆ ವ್ಯಾಪಾರದಿಂದ ಹಿಡಿದು, ಹಪ್ಪಳ ಸಾಂಬಾರುಪುಡಿ ಚಟ್ನಿಪುಡಿ ಮುಂತಾದ ಆಹಾರೋತ್ಪನ್ನಗಳ ಮಾರಾಟದಿಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತಿದ್ದನ್ನು ಗುರುತಿಸಬಹುದು. ಇಷ್ಟಾದರೂ ಆಕೆಯನ್ನು ಉದ್ಯಮಿಯೆಂದು ಪರಿಗಣಿಸಿದ್ದು ಕಡಿಮೆ. ಆದರೆ, ಈಗ ಕಾಲ ಬದಲಾಗಿದೆ. ಉದ್ಯಮ ಕ್ಷೇತ್ರದಲ್ಲೂ ಮಹಿಳೆ ತನ್ನ ಹೆಗ್ಗುರುತುಗಳನ್ನು ಮೂಡಿಸುತ್ತಿದ್ದಾಳೆ.

ಈಗ ಮಹಿಳಾ ಉದ್ಯಮದಲ್ಲಿ ಚಂಬೆಳಕು ಕಾಣುತ್ತಿದೆ. ವರ್ಷಾರಂಭದಲ್ಲಿ ಬರುವ ಸುಗ್ಗಿ ಹಬ್ಬ ಸಂಕ್ರಾಂತಿ ಮಹಿಳಾ ಉದ್ಯಮ ಲೋಕದಲ್ಲಿ ಹೊಸ ಭರವಸೆ ಮೂಡಿಸಲಿ.

ಸರ್ಕಾರದ ಕೆಲ ಯೋಜನೆಗಳು

ಅನ್ನಪೂರ್ಣ: ಹೆಸರೇ ಹೇಳುವಂತೆ ಇದು ಕ್ಯಾಟರಿಂಗ್ ದರ್ಶಿನಿ ಮುಂತಾದ ವ್ಯಾಪಾರ ಸ್ಥಾಪನೆಗಾಗಿ ಕೊಡುವಂತಹ ಕೇಂದ್ರ ಸರ್ಕಾರದ ಸಾಲ. ₹50 ಸಾವಿರ ಹಣವನ್ನು ವರ್ಕಿಂಗ್ ಕ್ಯಾಪಿಟಲ್ ಆಗಿ ಬಳಸಲು ನೀಡುತ್ತಾರೆ. ಪಾತ್ರೆ, ಗ್ಯಾಸ್ ಅಗತ್ಯ ಪೀಠೋಪಕರಣಗಳಿಗಾಗಿ ಬಳಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ನಲ್ಲಿ ಮಾತ್ರ ದೊರೆಯುತ್ತದೆ.

ಸ್ತ್ರೀ ಶಕ್ತಿ ಪ್ಯಾಕೇಜ್: ಇದರಲ್ಲಿ ಕಂಪನಿ/ವ್ಯಾಪಾರದಲ್ಲಿ ಮಹಿಳೆಯರ ಓನರ್ ಶಿಪ್ ಶೇ 50ಕ್ಕಿಂತ ಜಾಸ್ತಿ ಇದ್ದಲ್ಲಿ 0.05 ದರದಲ್ಲಿ ₹2 ಲಕ್ಷದಿಂದ ₹5 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ.

ಸೆಂಟ್ ಕಲ್ಯಾಣಿ ಸ್ಕೀಮ್: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಈ ಯೋಜನೆಯಲ್ಲಿ ಗಾರ್ಮೆಂಟ್, ಬ್ಯೂಟಿ ಪಾರ್ಲರ್, ಎಸ್‌ಟಿಡಿ, ಜೆರಾಕ್ಸ್, ಫಾರ್ಮಿಂಗ್ ಮುಂತಾದ ವ್ಯವಹಾರಗಳನ್ನು ನಡೆಸಲು ಮಹಿಳೆಯರಿಗಾಗಿಯೇ ಶೇ 20ರಷ್ಟು  ಮಾರ್ಜಿನ್ ಹಣದ ಜೊತೆ ₹1 ಕೋಟಿವರೆಗೂ ಸಾಲ ನೀಡುತ್ತಾರೆ.

ಒಂದಂತೂ ನಿಜ; ಏನೇ ಯೋಜನೆಗಳಿದ್ದರೂ ಬ್ಯಾಂಕ್‌ ವಿಧಿಸುವ ನಿಯಮಗಳು ಕಠಿಣವಾಗಿಯೇ ಇರುತ್ತವೆ. ಆದರೆ, ಮಹಿಳೆಯರಲ್ಲಿ ಬೇಕಿರುವುದು ಉದ್ಯಮಶೀಲತೆಯ ಮೈಂಡ್‌ಸೆಟ್‌. ಜತೆಗೆ ತನ್ನನ್ನು ತಾನು ಉದ್ಯಮಶೀಲಳು ಎಂದು ಬಿಂಬಿಸಿಕೊಳ್ಳುವ ರೀತಿ. ಇವುಗಳನ್ನು ಸರಿಯಾಗಿ ಅಳವಡಿಸಿಕೊಂಡಾಗ ಮಾತ್ರ ಮಧ್ಯವರ್ತಿಗಳ ಕಮಿಷನ್‌ ಉಪಟಳದಿಂದ ಪಾರಾಗಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು