ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಶಿಕ್ಷಣಕ್ಕೆ ‘ವಿ ತಾರ’

ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗೆ ವಿಎಂವೇರ್‌ ಸಂಸ್ಥೆ ವತಿಯಿಂದ ಉಚಿತ ವೃತ್ತಿ ತರಬೇತಿ
Last Updated 31 ಜನವರಿ 2023, 10:48 IST
ಅಕ್ಷರ ಗಾತ್ರ

ಮನೆಯಲ್ಲೇ ಕೂರಲು ಬೋರ್ ಹೊಡಿತಾ ಇದೆ... ನಾನು ಕೆಲಸಕ್ಕೆ ಹೋಗುವಾಗಲೇ ಜೀವನ ಚೆನ್ನಾಗಿತ್ತು, ಮಕ್ಕಳು–ಮನೆ ಅಂತ ಕೆಲಸ ಬಿಟ್ಟು ತಪ್ಪು ಮಾಡಿದೆ. ಈಗ ಕೆಲಸಕ್ಕೆ ಸೇರೋಣ ಎಂದರೆ ಕಲಿತಿದ್ದೆಲ್ಲ ಗುಡ್ಡ ಹತ್ತಿ ಹೋಗಿದೆ... ಎಂದು ಪರಿತಪಿಸುವ ಮಹಿಳೆಯರಿಗಾಗಿ ‘ವಿ-ಮಿನ್‌ಕ್ಲೂಷನ್‌ ತಾರ’ ಎನ್ನುವ ವಿಶೇಷ ತರಬೇತಿ ಕಾರ್ಯಕ್ರಮ ಇದೆ.

ಬೆಂಗಳೂರಿನ ಜಯನಗರದಲ್ಲಿರುವ ವಿಎಂವೇರ್ ಸಂಸ್ಥೆಯು 2019ರಲ್ಲಿ ಮಹಿಳೆಯರಿಗಾಗಿ ಉಚಿತ ಟೆಕ್ನಾಲಜಿ ತರಬೇತಿ ಕಾರ್ಯಕ್ರಮ ಆರಂಭಿಸಿದೆ. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಹಾಗೂ ಈಗಾಗಲೇ ಉದ್ಯೋಗ ಪಡೆದು, ಕೆಲ ಕಾರಣದಿಂದ ಉದ್ಯೋಗ ತೊರೆದು, ಈಗ ಮತ್ತೆ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವ ಮಹಿಳೆಯರಿಗಾಗಿ ಮಾತ್ರ ಈ ‌ವೃತ್ತಿ ಕೌಶಲ ತರಬೇತಿ ಇದ್ದು, ಯಾವುದೇ ವಯೋಮಿತಿಯ ನಿರ್ಬಂಧ ಇಲ್ಲ.

ತರಬೇತಿಯನ್ನು ಆನ್‌ಲೈನ್‌ನಲ್ಲೇ ನೀಡಲಾಗುತ್ತಿದೆ. ವಿ–ಮಿನ್‌ಕ್ಲೂಷನ್‌ ತಾರ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ತರಬೇತಿ ಪಡೆದವರಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣಪತ್ರಗಳನ್ನೇ ನೀಡಲಾಗುವುದು. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದರಿಂದ, ಯಾರು ಯಾವಾಗ ಬೇಕಾದರೂ ತರಬೇತಿ ಪಡೆದುಕೊಳ್ಳಬಹುದಾಗಿದ್ದು, ನೋಂದಣಿಗೆ ಕೊನೇದಿನ ಎನ್ನುವುದು ಇಲ್ಲಿಲ್ಲ. ಈ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.vmware.com/taara/ ವೆಬ್‌ಸೈಟ್‌ಗೆ ಭೇಟಿ ನೀಡಿ.

ತರಬೇತಿಯ ವಿಶೇಷತೆ

ಈ ತರಬೇತಿ ಅಡಿಯಲ್ಲಿ ಡೇಟಾಸೆಂಟರ್, ನೆಟ್‌ವರ್ಕಿಂಗ್, ಬ್ಯಾಂಕಿಂಗ್‌, ಅಡ್ಮಿನಿಸ್ಟ್ರೇಟಿವ್‌, ಕ್ಲೌಡ್ ಮತ್ತು ಕ್ಲೌಡ್ ಮ್ಯಾನೇಜ್‌ಮೆಂಟ್ ತಂತ್ರಜ್ಞಾನಗಳ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯೂ ಸಂಪೂರ್ಣ ಉಚಿತವಾಗಿದ್ದು, ಕನಿಷ್ಠ 3 ರಿಂದ 6 ತಿಂಗಳ ಅವಧಿಯದ್ದಾಗಿದೆ. ಕೋರ್ಸ್‌ನನ್ನು ಮೂರು ಹಂತದಲ್ಲಿ ವಿಂಗಡಿಸಲಾಗಿದೆ. ಈಗಾಗಲೇ ಕೆಲಸದ ಅನುಭವ ಇರುವವರಿಗೆ ತಮ್ಮ ವೃತ್ತಿಯನ್ನು ಉನ್ನತೀಕರಿಸಿಕೊಳ್ಳುವವರಿಗೆ ಮಧ್ಯಮದ ಹಂತದ ತರಬೇತಿ, ಈಗಷ್ಟೇ ಉದ್ಯೋಗ ಪ್ರಾರಂಭಿಸುವವರಿಗೆ ನೂತನವಾಗಿ ತರಬೇತಿ ಹಾಗೂ ಈಗಾಗಲೇ ಉದ್ಯೋಗದಲ್ಲಿ ಉನ್ನತ ಸ್ಥಾನದಲ್ಲಿದ್ದವರಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುವುದು. ಈ ತರಬೇತಿಗೆ ಸೇರಿಕೊಳ್ಳುವವರು ಕಡ್ಡಾಯವಾಗಿ ಕೆಲಸದಲ್ಲಿರಬಾರದು ಹಾಗೂ 18 ವರ್ಷ ಮೇಲ್ಪಟ್ಟಿರಬೇಕು.

ಈವರೆಗೂ ಸುಮಾರು 15 ಸಾವಿರ ಮಹಿಳೆಯರು ತರಬೇತಿ ಪಡೆದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಪ್ರಸ್ತುತ 22 ಸಾವಿರಕ್ಕೂ ಹೆಚ್ಚು ನೋಂದಣಿ ಆಗಿದೆ. ಕಾಶ್ಮೀರ, ಅಂಡಮಾನ್‌, ಕಾರ್ಗಿಲ್‌ನಿಂದಲೂ ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ.

– ಸೀತಾ ಲಕ್ಷ್ಮೀ, ಸೀನಿಯರ್ ಪ್ರೋಗ್ರಾಮ್ ಮ್ಯಾನೇಜರ್‌, ವಿಎಂವೇರ್‌

ಮದುವೆಯಾದ ಬಳಿಕ ಕುಟುಂಬ ನಿರ್ವಹಣೆ ಹಾಗೂ ಜವಾಬ್ದಾರಿ ಕಾರಣದಿಂದ 10 ವರ್ಷ ಉದ್ಯೋಗ ತೊರೆದಿದ್ದೆ. ಮತ್ತೆ ಕೆಲಸಕ್ಕೆ ಸೇರಬೇಕು ಎಂದುಕೊಂಡಾಗ ಸಾಕಷ್ಟು ತಂತ್ರಜ್ಞಾನ ಮುಂದುವರಿದಿತ್ತು. ಅದರ ಕಲಿಕೆಗೆ ಹುಡುಕಾಡುತ್ತಿದ್ದಾಗ ವಿ–ಮಿನ್‌ಕ್ಲೂಷನ್‌ –ತಾರಾ’ ತರಬೇತಿಯ ಕುರಿತು ತಿಳಿಯಿತು. ಇಲ್ಲಿ 3 ತಿಂಗಳ ಆನ್‌ಲೈನ್ ತರಬೇತಿ ಪಡೆಯುತ್ತಿದ್ದಾಗಲೇ ಉದ್ಯೋಗ ದೊರೆಯಿತು.

– ನಿತ್ಯಾ, ‘ತಾರಾ’ ಗ್ಯಾಜುಯೇಟ್‌

ಮೂಲತಃ ನಾನು ಶಿಕ್ಷಕಿಯಾಗಿದ್ದೆ. ಕೋವಿಡ್ ಸಮಯದಲ್ಲಿ ಮನೆಯಿಂದಲೇ ಕೆಲಸ ಹಾಗೂ ಆನ್‌ಲೈನ್‌ ತರಗತಿಗಳು ಪ್ರಾರಂಭವಾಗಿದ್ದವು. ಹೆಚ್ಚಿನ ತಾಂತ್ರಿಕ ಜ್ಞಾನಕ್ಕಾಗಿ ಹುಡುಕುತ್ತಿದ್ದಾಗ ಈ ಸಂಸ್ಥೆಯ ಬಗ್ಗೆ ತಿಳಿಯಿತು. ಈಗ ಬಿಜಿನೆಸ್‌ ಡೆವಲಪ್‌ಮೆಂಟ್‌ನ ಎಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.

– ಅಶ್ವಿನಿ, ತರಬೇತಿ ಪಡೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT