ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ವಿದ್ಯಾರ್ಥಿಸ್ನೇಹಿ ‘ಬ್ಯಾಗ್‌ಲೆಸ್ ಸ್ಕೂಲ್’ ದಿನ

ಮಧ್ಯಪ್ರದೇಶ ಸರ್ಕಾರವು ಇತ್ತೀಚೆಗೆ ‘ಬ್ಯಾಗ್‌ಲೆಸ್ ಸ್ಕೂಲ್’ ದಿನ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ.
Published 5 ಮೇ 2024, 14:26 IST
Last Updated 5 ಮೇ 2024, 14:26 IST
ಅಕ್ಷರ ಗಾತ್ರ

ಮಧ್ಯಪ್ರದೇಶ ಸರ್ಕಾರವು ಇತ್ತೀಚೆಗೆ ‘ಬ್ಯಾಗ್‌ಲೆಸ್ ಸ್ಕೂಲ್’ ದಿನ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ‘ಬ್ಯಾಗ್‌ಲೆಸ್ ಸ್ಕೂಲ್’ ದಿನವನ್ನು ನಿಗದಿಪಡಿಸಲಾಗಿದ್ದು, ಮುಂಬರುವ 2024-25ರ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ.

ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಲು ವಿವಿಧ ತರಗತಿಗಳ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲಾ ಬ್ಯಾಗ್‌ಗಳಿಗೆ ಸಂಬಂಧಿಸಿದಂತೆ ಗರಿಷ್ಠ ತೂಕವನ್ನು ನಿಗದಿಪಡಿಸಿದೆ.

ಮಾರ್ಗಸೂಚಿ ಏನು ಹೇಳುತ್ತದೆ?

ಮಾರ್ಗಸೂಚಿಗಳ ಪ್ರಕಾರ, 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗುಗಳು 1.6 ರಿಂದ 2.2 ಕೆಜಿ ತೂಕವನ್ನು ಮೀರಬಾರದು. 3 ರಿಂದ 5 ನೇ ತರಗತಿಯಲ್ಲಿರುವವರ ಬ್ಯಾಗ್‌ಗಳ ತೂಕ  1.7-2.5 ಕೆಜಿಗೆ ಮಿತಿಗೊಳಿಸಬೇಕು. 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ, 2-3 ಕೆಜಿ ಮತ್ತು 8ನೇ ತರಗತಿಯಲ್ಲಿರುವವರಿಗೆ 2.5ರಿಂದ 4 ಕೆಜಿಯಷ್ಟು ಭಾರವನ್ನು ಅನುಮತಿಸಲಾಗಿದೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಶಾಲಾಚೀಲಗಳು 2.5ರಿಂದ 4.5 ಕೆ.ಜಿಗಳಷ್ಟೇ ಇರಬೇಕೆಂದು ಅನುಮತಿಸಲಾಗಿದೆ.

ಬ್ಯಾಗ್‌ಗಳ ತೂಕದ ಮಹತ್ವ

ಶಾಲಾ ಮಕ್ಕಳ ಒಟ್ಟು ಬೆಳವಣಿಗೆಯಲ್ಲಿ ಶಾಲಾ ಬ್ಯಾಗ್‌ಗಳ ತೂಕದ ಪಾತ್ರವು ಮುಖ್ಯವಾಗಿದೆ. ಶೈಕ್ಷಣಿಕ ಸಾಮಗ್ರಿಗಳನ್ನು ಕೊಂಡೊಯ್ಯಲು ಬ್ಯಾಗ್‌ ಅಗತ್ಯವಾಗಿದ್ದರೂ ಅತಿ ತೂಕದ ಬ್ಯಾಗ್‌ಗಳನ್ನು ಹೊರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ದೈಹಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು: ಅತಿ ತೂಕವಿರುವ ಶಾಲಾ ಬ್ಯಾಗ್‌ಗಳಿಂದ ಮಸ್ಕ್ಯುಲೋಸ್ಕೆಲಿಟಲ್ ಡಿಸಾರ್ಡರ್‌, ಬೆನ್ನುನೋವು, ಕತ್ತುನೋವು ಮತ್ತು ಬೆನ್ನು ಬಾಗಿಸಿ ನಡೆಯುವ, ಅಸಮತೋಲಿತ ದೇಹ ಭಂಗಿಯಂಥ ಸಮಸ್ಯೆಗಳು ಉಂಟಾಗಬಹುದು. ಅಲ್ಲದೇ ಸ್ನಾಯುಗಳು ಮತ್ತು ಕೀಲುಗಳು ಬಳಲಿ, ದೀರ್ಘಾವಧಿಯ ತೊಂದರೆ ಬರಬಹುದು. ಭಾರವಾದ ಚೀಲಗಳು ಮಕ್ಕಳ ಬೆನ್ನುಮೂಳೆ ಮತ್ತು ಮೂಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಭಾರವಾದ ಚೀಲಗಳನ್ನು ದೀರ್ಘಕಾಲದವರೆಗೆ ಹೊತ್ತು ಸಾಗುವುದರಿಂದ ಸ್ಕೋಲಿಯೋಸಿಸ್ ಅಥವಾ ಕೈಫೋಸಿಸ್‌ನಂಥ ಅನಾರೋಗ್ಯ ಪರಿಸ್ಥಿತಿಗಳಿಗೂ ಕಾರಣವಾಗಬಹುದು.

ಮಾನಸಿಕ ಯೋಗಕ್ಷೇಮ

ಭಾರವಾದ ಶಾಲಾ ಚೀಲಗಳನ್ನು ಒಯ್ಯುವುದು ಮಕ್ಕಳ ಮಾನಸಿಕ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರಬಹುದು. ಭಾರವಾದ ಚೀಲಗಳಿಂದ ಉಂಟಾಗುವ ದೈಹಿಕ ಅಸ್ವಸ್ಥತೆ ಮತ್ತು ಒತ್ತಡ, ಆತಂಕಗಳು ಶಾಲೆಗೆ ಹಾಜರಾಗಲು ಅನಾಸಕ್ತಿ ಅಥವಾ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರಾಸಕ್ತಿ ತೋರಬಹುದು.

ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆ

ಭಾರವಾದ ಶಾಲಾ ಚೀಲಗಳು ಮಕ್ಕಳ ಸಾಮಾಜಿಕ ಸಂವಹನ ಮತ್ತು ಭಾವನಾತ್ಮಕ ಬೆಳವಣಿಗೆಗೆ ಅಡ್ಡಿಯಾಗಬಹುದು. ಭಾರವಾದ ಚೀಲಗಳನ್ನು ಹೊತ್ತೊಯ್ಯುವ ಭಾರ ಮತ್ತು ನೋವು ಮಕ್ಕಳ ಮನಸ್ಸಿನಲ್ಲಿ ಅಶಾಂತಿ ಮೂಡಿಸಲು ಕಾರಣವಾಗಬಹುದು. ಶಾಲೆಗೆ ತೆರಳುವ ಸಮಯದಲ್ಲಿ ನಡೆಯುವ ಯಾವುದೇ ಸಣ್ಣಪುಟ್ಟ ಕಿರಿಕಿರಿಗಳಿಗೂ ಮಕ್ಕಳು ಜಗಳ ಮಾಡುವುದು ಅಥವಾ ಅಸಹಿಷ್ಣುತೆ ತೋರಿಸುವುದು ಮತ್ತು ಮೂಡ್ ಸ್ವಿಂಗ್‌ಗಳಿಗೆ ಹೆಚ್ಚು ಒಳಗಾಗಬಹುದು. ಇದು ಗೆಳೆಯರು ಮತ್ತು ಶಿಕ್ಷಕರೊಂದಿಗಿನ ಅವರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.

ಕಲಿಕೆಯ ಮೇಲೆ ಪರಿಣಾಮ

ಭಾರವಾದ ಚೀಲಗಳಿಂದ ಉಂಟಾಗುವ ದೈಹಿಕ ಒತ್ತಡದಿಂದ ಮಕ್ಕಳ ಏಕಾಗ್ರತೆಗೆ ಭಂಗ ಬರಬಹುದು. ಮಾಹಿತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳದೇ ಹೋಗಬಹುದು. ಇದು ಕ್ರಮೇಣ   ಕಲಿಯುವ ಮತ್ತು ಕಲಿತಿದ್ದನ್ನು ಅರ್ಥೈಸಿಕೊಳ್ಳುವ ಅವರ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂತಿಮವಾಗಿ ಅವರ ಶೈಕ್ಷಣಿಕ ಪ್ರಗತಿ ಕುಗ್ಗುತ್ತದೆ.

ಪೋಷಕರ ಕಾಳಜಿ ಮತ್ತು ಒಳಗೊಳ್ಳುವಿಕೆ

ಪಾಲಕರು ಸಾಮಾನ್ಯವಾಗಿ ಶಾಲಾ ಬ್ಯಾಗ್‌ಗಳ ತೂಕ ಅದರಿಂದ ತಮ್ಮ ಮಕ್ಕಳ ಯೋಗಕ್ಷೇಮದ ಮೇಲೆ ಬೀರುವ ಪ್ರಭಾವದ ಬಗ್ಗೆ ಕಳವಳಕ್ಕೆ ಒಳಗಾಗುತ್ತಾರೆ. ಬ್ಯಾಗ್ ತೂಕವನ್ನು ಕಡಿಮೆ ಮಾಡುವ ಕ್ರಮಗಳ ಅನುಷ್ಠಾನದ ಬಗ್ಗೆ ಪೋಷಕರು ಮತ್ತು ಶಾಲಾ ಅಧಿಕಾರಿಗಳ ನಡುವೆ ಘರ್ಷಣೆ ಉಂಟಾಗಬಹುದು.

ಪಾಲಕರು ತಮ್ಮ ಮಕ್ಕಳ ಬ್ಯಾಗ್ ತೂಕ, ಪ್ಯಾಕಿಂಗ್ ಅಭ್ಯಾಸಗಳ ಬಗ್ಗೆ ಹೆಚ್ಚಿನ ರೀತಿಯ ಮೇಲ್ವಿಚಾರಣೆ ಮಾಡಲು ತೊಡಗಿ ಪೋಷಕರು ಮತ್ತು ಮಕ್ಕಳ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು.

ಮಕ್ಕಳ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಒಟ್ಟಾರೆ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು ಅವುಗಳ ತೂಕವನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕು.

ಶಾಲೆಗಳು, ಪೋಷಕರು ಮತ್ತು ನೀತಿ ನಿರೂಪಕರು ಬ್ಯಾಗ್ ತೂಕವನ್ನು ಕಡಿಮೆ ಮಾಡಲು, ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವಂಥ ಪರಿಸರ ರೂಪಿಸಬೇಕಿದೆ.

**********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT