ಶನಿವಾರ, ಜುಲೈ 31, 2021
21 °C

ಮಕ್ಕಳಿಗೆ ಅಕ್ಷರ ಕಲಿಸುವ ಮುನ್ನ...

ಮಂಜುಳ ರಾಜ್‌ Updated:

ಅಕ್ಷರ ಗಾತ್ರ : | |

ಮಗು ಹುಟ್ಟಿದ ತಕ್ಷಣ ಎದ್ದು ಓಡಾಡಲಿ ಎನ್ನುವುದು ತಂದೆ– ತಾಯಿಯರ ಆಸೆ, ಸ್ವಲ್ಪ ಎದ್ದು ನಡೆಯುವಂತಾದ ಮೇಲೆ ಬೇಗನೆ ಮಗು ಬರೆಯುವುದನ್ನು ಕಲಿಯಲಿ ಎನ್ನುವ ಅವಸರ, ಮಗುವನ್ನು ಶಾಲೆಗೆ ಕಳುಹಿಸಿದ ನಂತರ ಅದು ಹೆಚ್ಚು ಹೆಚ್ಚು ಪುಟ ಬರೆಯಲಿ ಎನ್ನುವ ಬಯಕೆ. ಆದರೆ ಸುಖಾ ಸುಮ್ಮನೆ ಮಗು ಬರೆಯಲು ಪ್ರಾರಂಭಿಸುವುದು ಸಾಧ್ಯವೇ? ಹಾಗಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಪೋಷಕರದು.

ಮಗುವಿಗೆ ಬರೆಯುವುದು ಸುಲಭವಾಗುವಂತೆ ಕೆಲವು ಚಟುವಟಿಕೆಗಳನ್ನು ಮಾಡಿಸುವುದು ಅಗತ್ಯ. ತನ್ಮೂಲಕ ಅವರಲ್ಲಿ ಉತ್ತಮ ಚಲನಾ ಕೌಶಲ (ಫೈನ್ ಮೋಟರ್ ಸ್ಕಿಲ್ಸ್) ಗಳನ್ನು ಮೂಡಿಸುವುದು ಸಾಧ್ಯ. ಅದಕ್ಕಾಗಿ ನಾವು ಮನೆಯಲ್ಲಿ ಬಳಸುವ ವಸ್ತುಗಳ ಮೂಲಕವೇ, ನಮ್ಮ ದೈನಂದಿನ ಚಟುವಟಿಕೆ (ಜೀವನ ಕೌಶಲ)ಗಳಲ್ಲಿ ಅವರನ್ನು ಸೇರಿಸಿಕೊಳ್ಳುವುದರಿಂದ  ಅವರಲ್ಲಿನ ಚಲನಾ ಕೌಶಲಗಳನ್ನು ಉತ್ತಮಗೊಳಿಸಬಹುದು.

ಮನೆಯಲ್ಲೇ ಮಾಡಬಹುದಾದ ಚಟುವಟಿಕೆಗಳು

1. ನಾವು ಮನೆಯಲ್ಲಿ ಚಪಾತಿ ಹಿಟ್ಟನ್ನು ಕಲೆಸುವಾಗ ಮಕ್ಕಳಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಸಿ, ಬೇರೆ ಬೇರೆ ಆಕಾರಗಳನ್ನು ಮಾಡಲು ಹೇಳಿ. ಉದಾ: ಹಾವು, ಮೀನು ಇತ್ಯಾದಿ. ಮಕ್ಕಳ ಪುಟ್ಟ ಪುಟ್ಟ ಕೈಗಳು ಹಿಟ್ಟಿನೊಡನೆ ಆಟವಾಡುವಾಗ ಅವರಲ್ಲಿನ ಕೈಗಳ ಮಣಿಕಟ್ಟಿನ ಬಲ ಖಂಡಿತ ಹೆಚ್ಚಾಗುತ್ತದೆ.  

2. ನಾವು ರೊಟ್ಟಿ ಅಥವಾ ಚಪಾತಿ ಮಾಡುವಾಗ ಅದ್ದಲು ಬಳಸುವ ಹಿಟ್ಟನ್ನು ಒಂದು ತಟ್ಟೆಯಲ್ಲಿ ಹಾಕಿಕೊಳ್ಳುತ್ತೇವೆ. ಈ ಹಿಟ್ಟಿನ ಜೊತೆ ಆಟವಾಡುವುದು ಮಕ್ಕಳಿಗೆ ಬಹಳ ಪ್ರಿಯ. ಅದರ ಮೇಲೆ ಅವರ ಪುಟ್ಟ ಬೆರಳುಗಳಿಂದ ಏನಾದರೂ ಬರೆಯಲು ಹೇಳಬಹುದು. ವಿಧ ವಿಧವಾದ ಆಕಾರಗಳು ಆ ಹಿಟ್ಟಿನಲ್ಲಿ ಮೂಡಿದಾಗ ಮಗುವಿನ ಮುಖ ಅರಳುವುದನ್ನು ನೋಡುವ ಖುಷಿ ತಾಯಿಯದಾದರೆ, ಕೈ ಮತ್ತು ಬೆರಳುಗಳು ಸರಾಗವಾಗಿ ಚಲಿಸಿದಾಗ ಆಗುವ ಲಾಭ ಮಗುವಿಗೆ.

3. ಕಾಗದದಲ್ಲಿ  ದೋಣಿ, ವಿಮಾನ, ಇನ್ನೂ ಅನೇಕ ಆಕಾರಗಳನ್ನು ನಾವು ಚಿಕ್ಕಂದಿನಲ್ಲಿ ಮಾಡುತ್ತಿದ್ದುದನ್ನು ಅವರಿಗೂ ಮಾಡಲು ಕಲಿಸಿ.

4. ಅವರ ಶರ್ಟ್‌ನ ಗುಂಡಿಗಳನ್ನು ಅವರಿಗೇ ಹಾಕಿಕೊಳ್ಳಲು ಹೇಳಿ ಅಥವಾ ಯಾವುದಾದರೂ ಶರ್ಟ್‌ ಅನ್ನು ಕೊಟ್ಟು ಅದರ ಗುಂಡಿಗಳನ್ನು ಬಿಚ್ಚುವುದು, ಹಾಕುವುದನ್ನು ಮಾಡಿಸಿ.

5. ಅವರ ಶೂ ಲೇಸ್‌ ಅನ್ನು ಅವರಿಗೇ ಕಟ್ಟಿಕೊಳ್ಳಲು ಕಲಿಸಿ. ಒಂದು ಫ್ರೇಮ್‌ಗೆ ದಾರ ಅಥವಾ ಲೇಸ್ ಹಾಕಿ ಕಟ್ಟಲು ಹೇಳಬಹುದು.

6. ಪೇಪರ್ ಕೊಟ್ಟು ವಿಭಿನ್ನ ಆಕಾರಗಳನ್ನು ಕತ್ತರಿಸಲು ಹೇಳಿ. ಅದು ಅವರಿಗೆ ಕಷ್ಟವೆನಿಸಿದರೆ ಚಪಾತಿ ಹಿಟ್ಟನ್ನು ಲಟ್ಟಿಸಿ, ಅದನ್ನು ಕತ್ತರಿಸುವಂತೆ ಹೇಳಬಹುದು.

7. ಮನೆಯ ಮುಂದೆ ಎರಡು ಬೆರಳುಗಳಿಂದ ರಂಗೋಲಿ ಚೆಲ್ಲಲು ಮಗುವಿಗೆ ಪ್ರೋತ್ಸಾಹಿಸಿ.

8.  ಮನೆಯಲ್ಲಿರುವ ಮಣಿಗಳನ್ನು ದಾರಕ್ಕೆ ಪೋಣಿಸಲು ಹೇಳಿ. ಕಷ್ಟವೆನಿಸಿದರೆ ತೂತು ದೊಡ್ಡದಾಗಿರುವ ಮಣಿಗಳನ್ನು ನೀಡಿ.

9. ಮಕ್ಕಳಿಗೆ ಅಂಕಿಗಳನ್ನು ಎಣಿಸುವ ಮಣಿಗಳ ಸ್ಟ್ಯಾಂಡ್‌ (ಅಬ್ಯಾಕಸ್‌)ನಲ್ಲಿ ಮಣಿಗಳನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಒಂದೊಂದನ್ನೇ ಜರುಗಿಸಲು ತಿಳಿಸಿ.

10. ಮಸಾಲೆ ಕುಟ್ಟುವ ಕುಟ್ಟಾಣಿಯಲ್ಲಿ ಸ್ವಲ್ಪ ಸಕ್ಕರೆ ಮತ್ತು ಹುರಿಗಡಲೆ ಹಾಕಿ ಕುಟ್ಟಲು ಹೇಳಿ. ನಂತರ ಒಂದು ಚಮಚದಲ್ಲಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಕೊಡಲು ಹೇಳಬಹುದು.

11. ಗಂಧವನ್ನು  ತೇಯುವಂತೆ ತಿಳಿಸಿ. ಗಂಧದ ಕಲ್ಲಿನ ಮೇಲೆ ಚಕ್ಕೆಯನ್ನು ಹಾಕಿ ಉಜ್ಜುವುದು ಮಕ್ಕಳಿಗೆ ಒಂದು ರೀತಿಯಲ್ಲಿ ತಮಾಷೆಯಾಗಿರುತ್ತದೆ .

12. ಮಕ್ಕಳಿಗೆ ಊಟವನ್ನು ತಾಯಿ ತಿನ್ನಿಸದೆ, ತಾವೇ ತಿನ್ನುವಂತೆ ಕಲಿಸಿ.

13. ಎರಡು ಲೋಟಗಳನ್ನಿಟ್ಟು, ಒಂದರಲ್ಲಿ ನೀರನ್ನಿಟ್ಟು ಒಂದು ಚಮಚ ಅಥವಾ ಉದ್ಧರಣೆಯನ್ನು ಕೊಟ್ಟು ಮತ್ತೊಂದು ಲೋಟಕ್ಕೆ ತುಂಬಿಸಲು ತಿಳಿಸಿ. ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಬಗ್ಗಿಸಲು ಹೇಳಿ.

14. ಮರದ ಬ್ಲಾಕ್‌ಗಳನ್ನು ಜೋಡಿಸಲು ಉತ್ತೇಜಿಸಿ, ಬಣ್ಣ ಬಣ್ಣದ ಮರದ ತುಂಡುಗಳನ್ನು ಮಕ್ಕಳು ಆನಂದವಾಗಿಯೇ ಜೋಡಿಸುತ್ತಾರೆ.

ಈ ಚಟುವಟಿಕೆಗಳನ್ನೆಲ್ಲಾ ಮಾಡಿಸಿದಾಗ ಮಕ್ಕಳ ಚಲನಾ ಕೌಶಲ ಖಂಡಿತ ಉತ್ತಮವಾಗುತ್ತದೆ. ಮಣಿಕಟ್ಟಿನ ಚಲನೆ ಸರಾಗವಾಗುತ್ತದೆ.

ಮೊಟ್ಟ ಮೊದಲಿಗೆ ಪೆನ್ಸಿಲ್ ಅನ್ನು ಹಿಡಿಯಲು ಅವರ ಬೆರಳುಗಳು ಸಿದ್ಧವಾಗಬೇಕು. ಹಿಂದೆ ಬಳಪದಲ್ಲಿ ಸ್ಲೇಟ್‌ನ ಮೇಲೆ ಬರೆಸುತ್ತಿದ್ದರು, ಆದರೆ ಒಂದೇ ಬಾರಿಗೆ ಅವರಿಗೆ ಪೆನ್ಸಿಲ್ ಅನ್ನು ಕೊಡಲಾಗುತ್ತದೆ, ಅದನ್ನು ಮಗು ಹಿಡಿಯುವಂತಾಗಬೇಕು. ಬರೆಯಲು ಪ್ರಾರಂಭವಾದ ಮೇಲೂ ಅಷ್ಟೇ, ಮೊದಲು ಚುಕ್ಕಿಗಳನ್ನು ಕೂಡಿಸಬೇಕು. ಗೆರೆಗಳು, ಓರೆ ಗೆರೆಗಳು, ಸಮಾನಾಂತರ ಗೆರೆ, ನಂತರ ಡೊಂಕಾದ ಗೆರೆ.. ಈ ರೀತಿ ಒಂದರ ನಂತರ ಮತ್ತೊಂದು ಹಂತಕ್ಕೆ ಹೋಗಬೇಕು.

ಮಗು ಹೆಚ್ಚು ಬರೆದಿಲ್ಲ ಅಥವಾ ಶಾಲೆಯಲ್ಲಿ ಹೆಚ್ಚು ಬರೆಸುತ್ತಿಲ್ಲ ಎಂದು ಬೇಸರಿಸಬೇಡಿ. ಬರೆಯುವುದರ ಜೊತೆಗೆ ಬರೆದದ್ದನ್ನು ಓದುವುದು ಮತ್ತು ಅರ್ಥ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಒಂದನೆಯ ತರಗತಿಯಲ್ಲಿ ಓದುವ ಮಗು, ಬೋರ್ಡಿನ ಮೇಲಿರುವುದನ್ನು ನೋಡಿಕೊಂಡು ಗುಂಡಾಗಿ ಬರೆಯಬಹುದು. ಆದರೆ ಅದನ್ನು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಆ ಮಗುವಿಗೆ ಬರದೇ ಇರಬಹುದು. ಆದ್ದರಿಂದ ಬರೆಯುವುದರ  ಜೊತೆ ಓದುವುದು, ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಒಂದು ಭಾಷೆಯನ್ನು ಕಲಿಯುವುದೆಂದರೆ ಸಹಜವಾಗಿ ಒಂದು ಮಗು ಮನೆಯ ವಾತಾವರಣದಲ್ಲಿ ಮಿಕ್ಕವರು ಮಾತನಾಡಿದ್ದನ್ನು ಕೇಳಿಸಿಕೊಂಡು ಹೇಗೆ ತಾನೂ ಮಾತನಾಡಲು ಕಲಿಯುತ್ತದೆಯೋ (ಆರ್ಗ್ಯಾನಿಕ್ ಅಕ್ವಿಸಿಶನ್ ಆಫ್ ಲ್ಯಾಂಗ್ವೇಜ್) ಅದೇ ರೀತಿ ಕೇಳಿಸಿಕೊಳ್ಳುವುದು, ಮಾತನಾಡುವುದು ನಂತರ ಓದುವುದು ಅಥವಾ ನಾವು ಜೋರಾಗಿ ಓದಿ ಅವರಿಗೆ ಕೇಳಿಸುವುದು (ಎಲ್‌ಎಸ್‌ಆರ್‌ಡಬ್ಲ್ಯು– ಲಿಸನ್‌, ಸ್ಪೀಕ್‌, ರೀಡ್‌, ರೈಟ್‌) ಮಾಡಬೇಕು. ನಂತರ ಮಗು ಬರೆಯಲು ಸಿದ್ಧವಾಗುತ್ತದೆ. ಅದಕ್ಕಿಂತ  ಮೊದಲು ಬರೆಯಲು ಬಲವಂತ ಮಾಡಬಾರದು. ಮಗು ನಿಧಾನವಾಗಿ ಕಲಿಯುತ್ತದೆ ಅದಕ್ಕೇಕೆ ಅವಸರ ಅಲ್ಲವೇ?

(ಲೇಖಕಿ: ಬೆಂಗಳೂರಿನಲ್ಲಿ ಶೈಕ್ಷಣಿಕ ಆಪ್ತಸಮಾಲೋಚಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು