ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಡಿ.ಎಂ.ಹೆಗಡೆ ಅವರ ಸಮಾಧಾನ ಅಂಕಣ: ಓದಿನಲ್ಲಿ ಮುಂದಿದ್ದರಷ್ಟೆ ಬುದ್ಧಿವಂತರೇ?

Published : 11 ಮೇ 2025, 23:30 IST
Last Updated : 11 ಮೇ 2025, 23:30 IST
ಫಾಲೋ ಮಾಡಿ
Comments
ಪ್ರ

ನನ್ನ ತಂದೆ ಬ್ಯಾಂಕ್‌ ಉದ್ಯೋಗಿ. ಅಮ್ಮ ಸರ್ಕಾರಿ ಕೆಲಸದಲ್ಲಿದ್ದಾರೆ. ಅಕ್ಕ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ತಮ್ಮ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಅವರಿಬ್ಬರೂ ಓದಿನಲ್ಲಿ ಜಾಣರು. ಆದರೆ, ನಾನು ಈ ಸಲ ಪಿಯು ಪರೀಕ್ಷೆಯಲ್ಲಿ ಫೇಲಾಗಿದ್ದೇನೆ. ಮತ್ತೆ ಬರೆದರೂ ಪಾಸಾಗೋದು ಕಷ್ಟ ಅನಿಸ್ತಿದೆ. ಫೇಲಾದರೆ ಮನೆಗೆ ಬರಬೇಡ. ಯಾವುದಾದರೂ ಕೆಲಸಕ್ಕೆ ಸೇರಿಕೊ ಎಂದಿದ್ದಾರೆ. ನನ್ನಿಂದ ಮನೆಯವರಿಗೆಲ್ಲ ಅವಮಾನ. ಏನು ಮಾಡಬೇಕು ತೋಚುತ್ತಿಲ್ಲ. 

ನೀವು ದಡ್ಡರಲ್ಲ!. ಎಲ್ಲರೂ ಒಂದೇ ಕ್ಷೇತ್ರದಲ್ಲಿ ಜಾಣರಾಗಿರಬೇಕಾಗಿಲ್ಲ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ವಿಶೇಷವಾದ ಅರ್ಹತೆ ಇರುತ್ತದೆ. ಬದುಕನ್ನು ರೂಪಿಸಿಕೊಳ್ಳಲು ಸಾಮರ್ಥವಿರುತ್ತದೆ. ನೀವು ಯಾರಿಗೂ ಹೋಲಿಕೆ ಮಾಡಿಕೊಂಡು ಕೊರಗಬೇಕಿಲ್ಲ. ನಿಮ್ಮಲ್ಲಿ ಇರುವ ವಿಶೇಷತೆಯನ್ನು ಸೂಕ್ಷ್ಮವಾಗಿ ಗಮನಿಸಿ. ಈ ದಿಸೆಯಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಿದೆ. 

ಫೇಲಾಗಿದ್ದಕ್ಕೆ ಕೊರಗಬೇಕಿಲ್ಲ. ಫೇಲಾಗುವುದು ಕಳ್ಳತನ, ಸುಳ್ಳು  ಹೇಳಿದಂತೆ ಅವಮಾನದ ವಿಷಯವಲ್ಲ. ಮತ್ತೆ ಪರೀಕ್ಷೆ ಬರೆದು ಪಾಸಾಗಬಹುದು. ಮುಂದಿನ ಪರೀಕ್ಷೆಯನ್ನು ಪಾಸಾಗುತ್ತಿದ್ದಂತೆಯೇ ಹಿಂದಿನ ಪರೀಕ್ಷೆಯ ಫಲಿತಾಂಶದ ಅಗತ್ಯವೂ ಇರುವುದಿಲ್ಲ. ಜೀವನದಲ್ಲಿ ಬರೆಯದೇ ಪಾಸಾಗಬೇಕಾದ ಬಹಳಷ್ಟು ಪರೀಕ್ಷೆಗಳಿವೆ. ಅವುಗಳಲ್ಲಿ  ಕೆಲವರು ಪಾಸಾಗುತ್ತಾರೆ. ಕೆಲವರು ಫೇಲಾಗಿ, ಪಾಸಾಗುತ್ತಾರೆ. ನೀರು ದಾರಿಯನ್ನು ಹುಡುಕಿಕೊಂಡು ನದಿಯಾಗಿ ಹರಿಯುವಂತೆಯೇ ಮನುಷ್ಯನ ಜೀವನವೂ ಎಲ್ಲಿಯೋ ಚಿಕ್ಕದಾಗಿ ಪ್ರಾರಂಭವಾಗಿ ವಿಶಾಲವಾಗಿ ಬೆಳೆಯುತ್ತ ಸಾಗುತ್ತದೆ. 

ಇನ್ನು, ಮಗು ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಎಂದು ಪಾಲಕರು ಕುಗ್ಗಬೇಕಿಲ್ಲ. ಮಗುವಿನ ಪಾಸು ಅಥವಾ ಫೇಲಿನ ಮೇಲೆ ಪಾಲಕರ ಬುದ್ಧಿವಂತಿಕೆ  ನಿರ್ಧಾರವಾಗುವುದಿಲ್ಲ. ಮಕ್ಕಳ ಬದುಕನ್ನು ಪಾಲಕರು ತಮ್ಮಿಷ್ಟದಂತೆ ನಿರ್ದೇಶಿಸಲಿಕ್ಕೆ ಆಗುವುದಿಲ್ಲ. ನಿಮ್ಮ ಬದುಕನ್ನು ನೀವು ರೂಪಿಸಿಕೊಂಡ ಹಾಗೆಯೇ ನಿಮ್ಮ ಮಕ್ಕಳು ಕೂಡ ಅವರವರ ಬದುಕನ್ನು ಅವರವರ ಅಭಿರುಚಿಗೆ, ಆಸಕ್ತಿಗೆ, ಅವಕಾಶಕ್ಕೆ, ಯೋಗ್ಯತೆಗೆ ತಕ್ಕ ಹಾಗೆ ರೂಪಿಸಿಕೊಳ್ಳುತ್ತಾರೆ. ಅದಕ್ಕೆ ಅವಕಾಶವನ್ನು ಕೋಡಬೇಕು. ಪ್ರೋತ್ಸಾಹಿಸಬೇಕು.

ಬಾಲ್ಯದಲ್ಲಿ ಅಶಕ್ತವಾಗಿದ್ದ ಮಗು ಪ್ರೌಢಾವಸ್ಥೆಗೆ ಬಂದ ಮೇಲೆ ಅಗಾಧವಾದದ್ದನ್ನು ಸಾಧಿಸಿರುವ ಸಾವಿರಾರು ಉದಾಹರಣೆಗಳು ಕಣ್ಮುಂದಿವೆ. ನಮ್ಮ ಮಕ್ಕಳು ನಮ್ಮ ಪ್ರಾರ್ಥನೆಯಿಂದ, ನಮಗಾಗಿ ಹುಟ್ಟಿ ಬಂದವರು. ವಿಶೇಷವಾಗಿ ಬದುಕುತ್ತಾರೆ ಎನ್ನುವ ಭರವಸೆ ಪಾಲಕರಿಗೆ ಇರಬೇಕು. ಯಾರೂ ಕೂಡ ಯಾರ ಭವಿಷ್ಯತ್ತನ್ನೂ ಸ್ಪಷ್ಟವಾಗಿ ಕಾಣಲಾರರು. ಕಾಣದ ಭವಿಷ್ಯದ ಬಗ್ಗೆ ಅನಗತ್ಯ ಗಾಬರಿ ಸರಿಯಲ್ಲ.

ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗಮನಿಸಬೇಕು. ಅದು ಅರಳುವಂತೆ, ಮಕ್ಕಳನ್ನು ಪ್ರೀತಿಯಿಂದ ಪ್ರೋತ್ಸಾಹಿಸಬೇಕು. ಎಂಜಿನಿಯರೋ, ಡಾಕ್ಟರೋ, ವಕೀಲರೋ, ಮಂತ್ರಿಯೋ, ಆಗುವುದಷ್ಟೇ ಸಾಧನೆಯಲ್ಲ. ಸಮಾಜದಲ್ಲಿ ಇರುವ ಎಲ್ಲರಿಂದಲೂ ಎಲ್ಲರಿಗೂ ಪರಸ್ಪರ ಉಪಯೋಗವಾಗುತ್ತಿದೆ. ಉಪಯೋಗಕ್ಕೆ ಬಾರದವರು ಇಲ್ಲಿ ಯಾರೂ ಇಲ್ಲ.   ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವುದಷ್ಟೇ ಬದುಕಿನ ಬೆಳಕು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT