ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯುವವರ ಕೈ ಹಿಡಿಯುವ ಟಿಪ್ಪಣಿ

Published 24 ಜುಲೈ 2023, 0:54 IST
Last Updated 24 ಜುಲೈ 2023, 0:54 IST
ಅಕ್ಷರ ಗಾತ್ರ

ತರಗತಿಯಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು ಧ್ಯಾನದಂತೆ ಸುಮ್ಮನೆ ಕೂತು ಎದ್ದು ಹೋದರೆ ಆಗುವುದಿಲ್ಲ. ಶಿಕ್ಷಕರು ಹೇಳಿದ ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡಿಟ್ಟು ಕೊಂಡಿದ್ದರೆ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.

ಕಲಿಯುವವರು ಮತ್ತು ಕಲಿಸುವವರ ನಡುವಿನ ಪ್ರಕ್ರಿಯೆ ಕಲಿಕೆ.‌ ಅವರಿಬ್ಬರ ನಡುವೆ ಪಠ್ಯ ಎಂಬುದಿರುತ್ತದೆ. ಅದು ಏನು ಬೋಧಿಸಬೇಕು ಎಂಬುದನ್ನು ಹೇಳುತ್ತದೆಯಾದರೂ ಅವರಿಬ್ಬರೂ ಅದಕ್ಕಷ್ಟೇ‌ ಸಿಮೀತವಾಗಿರುವುದು ಒಂದು ಒಳ್ಳೆಯ ಶಿಕ್ಷಣದ ಲಕ್ಷಣವಲ್ಲ. ಪಠ್ಯವಷ್ಟೇ ಅಂತಿಮವೆಂಬುದಿಲ್ಲ.

ಪಠ್ಯದಲ್ಲಿರುವುದನ್ನಷ್ಟೇ ಓದಿಕೊಂಡರೆ ಕಲಿಕೆ ಹೇಗೆ ಪರಿಣಾಮಕಾರಿಯಾಗಲು ಸಾಧ್ಯ? ಒಂದು ಅವಧಿಯಷ್ಟು ಬೋಧಿಸಿಲು ಶಿಕ್ಷಕರೊಬ್ಬರು ಹಲವು ಗಂಟೆಗಳ ಕಾಲ ತಯಾರಿ ನಡೆಸುತ್ತಾರೆ. ಹೊಸ ಹೊಸ ಮಾಹಿತಿ ಕಲೆ ಹಾಕುತ್ತಾರೆ. ಪಠ್ಯಕ್ಕಿಂತ ಹೆಚ್ಚು ಹೇಳುತ್ತಾರೆ. ಹೆಚ್ಚು ಹೆಚ್ಚು ಕಲಿಸುವ ಹಂಬವುಳ್ಳವರಾಗಿರುತ್ತಾರೆ. ಉದಾಹರಣೆ ಕೊಡುತ್ತಾರೆ. ವಿವರಿಸುತ್ತಾರೆ. ದೃಕ್ ಶ್ರವಣ ಮಾಧ್ಯಮ ಬಳಸುತ್ತಾರೆ. ಸಂಬಂಧಿಸಿದ ವಿಷಯವನ್ನು ಸಾಕಷ್ಟು ಪೂರ್ಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲು ಪ್ರಯತ್ನಿಸುತ್ತಾರೆ.

ಪಾಠ ಕೇಳುವ ವಿದ್ಯಾರ್ಥಿಗಳು ಧ್ಯಾನದಂತೆ ಸುಮ್ಮನೆ ಕೂತು ಎದ್ದು ಹೋದರೆ ಅದು ಪಠ್ಯ ಮೀರಿ ಹೇಗೆ ಹೆಚ್ಚಿನದು ಕಲಿಯುತ್ತಾರೆ ? ತರಗತಿಯಲ್ಲಿ ಶಿಕ್ಷಕರು ಹೇಳುವ ಅನೇಕ ವಿಷಯಗಳು ‘ಇದೇನು ಬಿಡು ನೆನಪಿರುತ್ತದೆ‘ ಅಂತ ಅನಿಸಿಬಿಡುತ್ತದೆ. ಆದರೆ ಮನೆಗೆ ಹೋದಾಗ ಮರೆತು ಹೋಗುತ್ತದೆ.‌ ಎರಡು ದಿನ ಕಳೆದರಂತೂ ಅದರ ನೆನಪೇ ಇರುವುದಿಲ್ಲ. ತರಗತಿಯಲ್ಲಿ ಪಾಠ ಕೇಳುವಾಗ ಶಿಕ್ಷಕರು ಹೇಳಿದ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಂಡಿದ್ದರೆ ? ಎಷ್ಟೊಂದು ಅನುಕೂಲವಾಗುತ್ತಿತ್ತು ಅನಿಸುತ್ತದೆ ಅಲ್ಲವಾ ? ಹೌದು ಎನಿಸಿದರೆ ನೀವು ಇನ್ಮೇಲೆ ತರಗತಿಯಲ್ಲಿ ಟಿಪ್ಪಣೆ ತೆಗೆದುಕೊಳ್ಳಲು ಯೋಜಿಸಬಹುದು.

ತರಗತಿಯಲ್ಲೇಕೆ ಟಿಪ್ಪಣಿ ತೆಗೆದುಕೊಳ್ಳಬೇಕು?

ತರಗತಿಯಲ್ಲಿ ಉತ್ತಮ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದು ಕಲಿಕಾ ಪ್ರಕ್ರಿಯಯ ಒಂದು ಭಾಗ. ಆ ಮೂಲಕ ಶೈಕ್ಷಣಿಕ ಯಶಸ್ಸನ್ನು ವಿದ್ಯಾರ್ಥಿ ಸಾಧಿಸಲು ಅನುಕೂಲವಾಗುತ್ತದೆ. ಪಾಠ ಮಾಡುವಾಗ ಸಕ್ರಿಯವಾಗಿ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದರಿಂದ ಮುಖ್ಯ ಪರಿಕಲ್ಪನೆಗಳ ಕಡೆ ಗಮನ ಕೇಂದ್ರೀಕರಿಸಲು ಮತ್ತು ವಿಷಯವನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ. ಟಿಪ್ಪಣಿ ಬರೆದುಕೊಳ್ಳುವುದು ಮಗುವಿನ ಗಮನ ಕೇಂದ್ರಿಕರಿಸುವಂತೆ ಮಾಡುತ್ತದೆ. ಒಂದು ಉತ್ತಮ ಟಿಪ್ಪಣಿ ಬರೆದುಕೊಳ್ಳುವಿಕೆ ನಿಮ್ಮ ಆಲಿಸುವಿಕೆ, ವಸ್ತುಗಳ ಗ್ರಹಿಕೆ ಮತ್ತು ಧಾರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದೆಲ್ಲವೂ ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತದೆ.

ಟಿಪ್ಪಣಿಯಿಂದೇನು ಲಾಭ?

ತರಗತಿ ಮುಗಿಸಿ ಮನೆಗೆ ಬಂದ ನಂತರ ವಿಷಯವನ್ನು ಪರಿಶೀಲಿಸಲು ಮತ್ತು ಅದರ ಕುರಿತು ಹೆಚ್ಚು ಅಧ್ಯಯನ ಮಾಡಲು ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿಗಳು ನೆರವಾಗುತ್ತವೆ. ತರಗತಿಯಲ್ಲಿ ಕೇಳಿದ ಪಾಠಗಳು ಮನೆಯಲ್ಲಿ ಒಮ್ಮೆ ಪುನರಾವರ್ತನೆಯಾದಂತಾಗುತ್ತದೆ.‌ ಇದರಿಂದ ಕಲಿಕೆ ಇನ್ನಷ್ಟು ಧೃಢಗೊಳ್ಳುತ್ತದೆ. ಕಿರು‌ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗೆ ಸಮರ್ಥವಾಗಿ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ನಿಖರವಾಗಿ, ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ಬರೆದಿಟ್ಟುಕೊಂಡ ಟಿಪ್ಪಣಿಗಳು ನಿಮ್ಮ ಸಮಯ, ಶಕ್ತಿ ಉಳಿಸಬಹುದು. ಗೊಂದಲ ತೊಲಗಿಸಬಹುದು ಮತ್ತು ಮಾಡಿಕೊಂಡ ಟಿಪ್ಪಣಿಗಳನ್ನು ಮುಂದಿಟ್ಟುಕೊಂಡು ವಿವರವಾಗಿ ಮಾಹಿತಿ ಬರೆದಿಟ್ಟುಕೊಳ್ಳಬಹುದು.‌ ಅಧ್ಯಯನಕ್ಕೆ ಬಳಸಿಕೊಳ್ಳಬಹುದು.‌ ತರಗತಿ ಬೋಧನೆಯನ್ನು ಮತ್ತೆ ಮತ್ತೆ ಪುನರಾವರ್ತಿಸಿಕೊಳ್ಳಲು ಇದು ಸಹಾಯವಾಗುತ್ತದೆ.‌

ಒಂದು ಉತ್ತಮ ಟಿಪ್ಪಣೆ ಹೇಗಿರಬೇಕು?

ವಿವರವಾಗಿ ಬರೆದುಕೊಳ್ಳದೆ ಕೇವಲ ಮುಖ್ಯ ವಿಷಯವನ್ನು ಬರೆದುಕೊಳ್ಳಬೇಕು. ಪಠ್ಯಕ್ಕೆ ಯಾವುದು‌ ಪೂರಕವೊ ಅದನ್ನು ಮಾತ್ರ ಬರೆದುಕೊಳ್ಳಿ. ಅದು ಸ್ಪಷ್ಟವಾಗಿರಬೇಕು. ಸುಮ್ಮನೆ ಗೀಚಿಕೊಂಡು ಹೋಗಬಾರದು. ಗೊಂದಲ ಬರುವಂತೆ ಬರೆದುಕೊಳ್ಳುವುದು ವ್ಯರ್ಥ. ತರಗತಿಗೆ ಮತ್ತು ವಿಷಯಕ್ಕೆ ಪ್ರತ್ಯೇಕವಾದ ನೋಟ್ ಪುಸ್ತಕ ಬಳಸುವುದು ಒಳ್ಳೆಯದು. ಅದಕ್ಕೆ ಸಂಬಂಧಿಸಿದಂತೆ ಯಾವಾಗಲೂ ಒಂದು ನಿಗದಿತ ಪುಸ್ತಕವನ್ನೇ ಬಳಸಿ. ದಿನಾಂಕ ಮತ್ತು ಸಮಯವನ್ನು ನಮೂದಿಸಿಕೊಳ್ಳುವುದು ಒಳ್ಳೆಯದು. ಹೇಳಿದ್ದೆಲ್ಲವನ್ನು ಬರೆದುಕೊಳ್ಳಬಾರದು. 

ಟಿಪ್ಪಣಿಗಳಿಗೆ ವಿವಿಧ ಸ್ವರೂಪಗಳು

ನಾವು ಅನೇಕ ಶೈಲಿಗಳಲ್ಲಿ ಟಿಪ್ಪಣಿಗಳನ್ನು ಬರೆದುಕೊಳ್ಳಬಹುದು. ಆದರೆ ನಿಮಗೆ ಹೇಗೆ ಅನುಕೂಲವೊ ಹಾಗೆ ಬರೆದಿಟ್ಟುಕೊಳ್ಳುವುದು ಒಳ್ಳೆಯದು. ದಿನಾಂಕ, ಅಗತ್ಯ ಪ್ರಶ್ನೆ, ವಿಷಯ, ಸಾರಾಂಶವನ್ನು ಬರೆದುಕೊಳ್ಳಲು ಕಾರ್ನೆಲ್ ಶೈಲಿ ಒಳ್ಳೆಯದು. ಕೆಲವೊಂದಕ್ಕೆ ಔಟ್ ಲೈನ್ ಸೂಕ್ತವಾಗುತ್ತದೆ. ಫ್ಲೋಚಾರ್ಟ್/ಕಾನ್ಸೆಪ್ಟ್ ಮ್ಯಾಪ್/ ಮೈಂಡ್ ಮ್ಯಾಪ್ ಗಳನ್ನು ಕೂಡ ಟಿಪ್ಪಣಿಯಾಗಿ ಬರೆದುಕೊಳ್ಳಬಹುದು. ವಾಕ್ಯಗಳು, ಪದಗುಚ್ಚಗಳು, ಚಿಹ್ನೆಗಳನ್ನು ಕೊಟ್ಟುಕೂಡ ಟಿಪ್ಪಣಿ ಬರೆದಿಟ್ಟುಕೊಳ್ಳಬಹುದು. ನಿಮಗೆ ಯಾವುದು ಸೂಕ್ತವೊ ಅದನ್ನು ಬಳಸಬಹುದು.

ಟಿಪ್ಪಣಿ ಮಾಡಿಕೊಳ್ಳಬೇಕಾದಾಗ ಗಮನಿಸಬೇಕಾದ ಅಂಶಗಳು.. 

• ಬರೆದುಕೊಳ್ಳುವ ಗಡಿಬಿಡಿಯಲ್ಲಿ ಶಿಕ್ಷಕರ ಬೋಧನೆಯ ಕೆಲವು ಅಂಶಗಳು ತಪ್ಪಿ ಹೋಗಬಹುದು ಆ ಬಗ್ಗೆ ಗಮನವಿರಲಿ

• ಮುಖ್ಯ ಅಂಶವನ್ನು ಅತ್ಯಂತ ಚುಟುಕಾಗಿ ಬರೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ಪದಗುಚ್ಚ, ಚಿಹ್ನೆ, ಸೂತ್ರ ಇವುಗಳನ್ನು ಬಳಸಿಕೊಳ್ಳಿ

• ಬರೆದುಕೊಂಡದ್ದನ್ನು 24 ಗಂಟೆಯಲ್ಲೇ ಅದನ್ನು ಮನೆಯಲ್ಲಿ ವಿವರವಾಗಿ ಬರೆದಿಟ್ಟುಕೊಳ್ಳಿ.

• ಯಾವುದೇ ಗೊಂದಲ ಉಳಸಿಕೊಂಡು ಮನೆಗೆ ಬರಬೇಡಿ, ಶಿಕ್ಷರನ್ನು ಕೇಳಿ ಬಗೆಹರಿಸಿಕೊಳ್ಳಿ.

• ಮನೆಯಲ್ಲಿ ಟಿಪ್ಪಣಿ ನಿರ್ವಹಿಸುವಾಗ ಅಗತ್ಯಬಿದ್ದರೆ ಗೆಳೆಯರ ಅನುಕೂಲ ಪಡೆಯಿರಿ.

• ಬರೆದುಕೊಂಡ ಟಿಪ್ಪಣೆಯೇ ಅಂತಿಮವಲ್ಲ; ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಿ

• ಬೇರೆ ಯಾರದೊ ಟಿಪ್ಪಣೆಯನ್ನು ಅನುಕರಿಸಬಾರದು. ಅವರವರೇ ಟಿಪ್ಪಣಿ ಮಾಡಿಕೊಳ್ಳುವುದು ಸೂಕ್ತ

• ಟಿಪ್ಪಣಿ ಆಧರಿಸಿ ವಿವರವಾಗಿ ಬರೆದಿಟ್ಟುಕೊಂಡ ಮೇಲೆಯೂ ಆ ಟಿಪ್ಪಣೆಗಳನ್ನು ಉಳಿಸಿಕೊಳ್ಳಿ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT