ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿಯ ದೇವದಾಸಿ ಕುಟುಂಬದಲ್ಲಿ ಜನಿಸಿದ ಕಾಮಾಕ್ಷಿ, ಕಿತ್ತು ತಿನ್ನುವ ಬಡತನಕ್ಕಿಂತಲೂ ಮಿಗಿಲಾಗಿ ‘ಅಪ್ಪ ಯಾರು’ ಎಂಬ ಮೂದಲಿಕೆಯ ಪ್ರಶ್ನೆಯೊಂದಿಗೇ ಬೆಳೆದು ದೊಡ್ಡವರಾದವರು. ಪದವಿತನಕವೂ ಕನ್ನಡ ಮಾಧ್ಯಮದಲ್ಲೇ ಓದಿದರೂ ಇದೀಗ ಇಂಗ್ಲೆಂಡ್‌ನ ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ. ತಮ್ಮ ಈ ಕನಸಿನ ಗುರಿ ಸಾಧನೆಗೆ ಪ್ರೇರಣೆಯಾದ ಹಾದಿಯನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ.
ಪದವಿತನಕ ಕನ್ನಡ ಮಾಧ್ಯಮದಲ್ಲಿ ಓದಿದ ನಿಮಗೆ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆಗೆ ಸ್ನಾತಕೋತ್ತರ ವ್ಯಾಸಂಗಕ್ಕೆ ತೆರಳುವಾಗ ಹಿಂಜರಿಕೆ ಆಗಿರಲಿಲ್ಲವೇ?
ಕಾಮಾಕ್ಷಿ: ನಿಜಕ್ಕೂ ನನಗೆ ಆಗ ಇಂಗ್ಲಿಷ್, ಹಿಂದಿ ಎರಡೂ ಸರಿಯಾಗಿ ಬರುತ್ತಿರಲಿಲ್ಲ. ಗೂಗಲ್, ಯೂಟ್ಯೂಬ್‌ಗಳಲ್ಲಿನ ವಿಡಿಯೊಗಳನ್ನು ಬಳಸಿಕೊಂಡು ಎರಡೂ ಭಾಷೆಗಳನ್ನು ಕರಗತ ಮಾಡಿಕೊಂಡೆ. ಕನ್ನಡಿ ಮುಂದೆ ನಿಂತು ದಿನಕ್ಕೆ ಎರಡು, ಮೂರು ವಾಕ್ಯಗಳನ್ನು ಹೇಳುತ್ತ, ನನ್ನನ್ನು ನಾನೇ ಪರೀಕ್ಷೆ ಮಾಡಿಕೊಂಡು ಸುಧಾರಿಸಿಕೊಂಡೆ. ಸಾಮಾಜಿಕ ಮಾಧ್ಯಮವನ್ನು ನಮ್ಮ ಒಳಿತಿಗೂ ಬಳಸಿಕೊಳ್ಳಬಹುದು ಎಂದು ನನಗೆ ಗೊತ್ತಾದದ್ದು ಆಗಲೇ.
ಹೀಗಿದ್ದರೂ ನನ್ನ ಇಂಗ್ಲಿಷ್ ಕನ್ನಡಮಯವಾಗಿಯೇ ಇತ್ತು. ಲಿಖಿತ ಪರೀಕ್ಷೆಗೆ ಮುಂಬೈಗೆ ಹೋದಾಗ ನಾನು ಕನ್ನಡದ ರೀತಿಯಲ್ಲಿ ಇಂಗ್ಲಿಷ್ ಮಾತನಾಡುವುದನ್ನು ಕೇಳಿ ನಕ್ಕಿದ್ದರು, ಅವರ ಜೊತೆ ನಾನೂ ನಕ್ಕಿದ್ದೆ. ನಾನು ಈಗ ಹಿಂಜರಿಯಬಾರದು, ಈಗ ನನಗೆ ಕಲಿಯಲು ಅವಕಾಶ ಇದೆ, ಇದು ಕುಹಕ ಅಲ್ಲ, ನಾನು ಹಿಂಜರಿದರೆ ನನ್ನ ಕೈಹಿಡಿದು ಮುಂದೆ ತರುವವರು ಯಾರೂ ಇಲ್ಲ ಎಂಬ ಸ್ಪಷ್ಟ ಅರಿವು ನನಗಿತ್ತು. ಹೀಗಾಗಿಯೇ ಇಂಗ್ಲಿಷ್ ಸವಾಲನ್ನು ದಾಟಿ ಬರುವುದು ಸಾಧ್ಯವಾಯಿತು.
ನಿನ್ನ ಮನೆ ಸಮೀಪದ ಹಂಪಿಯಲ್ಲೇ ಕನ್ನಡ ವಿಶ್ವವಿದ್ಯಾಲಯ ಇದೆ, ಅಲ್ಲೇ ಎಂ.ಎ ಮಾಡು, ಪಿಎಚ್.ಡಿ ಮಾಡು ಎಂದು ಹಲವರು ಹೇಳಿರಬೇಕಲ್ಲ?
ಕಾಮಾಕ್ಷಿ: ಹೌದು, ಆದರೆ ನನ್ನ ಗುರಿ ಅದರಾಚೆ ಇತ್ತು. ನಾನು ಓದಿ ನಮ್ಮ ಸಮುದಾಯದ ಸುಧಾರಣೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸು ಕಟ್ಟಿಕೊಂಡವಳು. ಅದಕ್ಕೆ ಕಾರಣ ನನ್ನ ಅಮ್ಮ. ‘ನನಗೆ ಎಂಟನೇ ವಯಸ್ಸಿಗೇ ‘ಮುತ್ತು’ ಕಟ್ಟಿಬಿಟ್ಟರು, ನೀನೂ ಹಾಗೆ ಆಗಬಾರದು, ಸಾಧ್ಯವಿದ್ದಷ್ಟು ಓದು’ ಎನ್ನುತ್ತಿದ್ದ ಅಮ್ಮ ಕೂಲಿ ಕೆಲಸ ಮಾಡಿದರೂ ನನ್ನ ಓದಿಗೆ ಅಡ್ಡಿ ಮಾಡಲೇ ಇಲ್ಲ. ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ಅವರ ಕುರಿತ ಓದು ನನ್ನ ಯೋಚನಾ ಲಹರಿ ವಿಸ್ತರಿಸುವಂತೆ ಮಾಡಿತು. ಹೀಗಾಗಿ, ಏನೋ ವಿಶೇಷವಾದುದನ್ನೇ ಸಾಧಿಸಬೇಕು, ನನ್ನ ಸಮುದಾಯದವರು ‘ಅಪ್ಪ ಯಾರು’ ಎಂಬ ಕುಹಕದ ಪ್ರಶ್ನೆಯಿಂದ ಹೊರಬರುವಂತೆ ಆಗಬೇಕು, ಆ ದಿಸೆಯಲ್ಲಿ ಕೆಲಸ ಮಾಡಬೇಕು ಎಂಬ ಛಲವೇ ನನಗೆ ಇಂಗ್ಲೆಂಡ್ ಹಾದಿ ತೋರಿಸಿದೆ.
ಹಾಗಿದ್ದರೆ ಸಸೆಕ್ಸ್‌ನಂತಹ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳುವುದು ಸುಲಭವೇ?
ಕಾಮಾಕ್ಷಿ: ಉನ್ನತ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಿನ್ನೆಲೆ ಇದ್ದವರಿಗೆ ಸಸೆಕ್ಸ್ ಬಿಡಿ ವಿಶ್ವದ ಯಾವ ವಿಶ್ವವಿದ್ಯಾಲಯಕ್ಕೆ ತೆರಳುವುದೂ ಕಷ್ಟವಲ್ಲ. ಆದರೆ ಸವಾಲು ಇರುವುದು ನನ್ನಂತಹವರಿಗೆ. ನನಗೆ ಈ ಮೂರೂ ಇಲ್ಲ. ಸಸೆಕ್ಸ್ ವಿಶ್ವವಿದ್ಯಾಲಯವನ್ನೇ ತೆಗೆದುಕೊಳ್ಳಿ. ಮೊದಲು ₹ 12 ಲಕ್ಷ ಕಟ್ಟಿದ ಮೇಲಷ್ಟೇ ಅಲ್ಲಿ ವೀಸಾ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ನಾನು ಅಲ್ಲಿನ ಪ್ರೊಫೆಸರ್‌ಗಳ ಪ್ರಾಜೆಕ್ಟ್ ಕೆಲಸಗಳನ್ನು ಒಂದು ವರ್ಷ ಆನ್‌ಲೈನ್ ಮೂಲಕ ಮಾಡಿ, ಅವರಿಂದ ಸೈ ಎನಿಸಿಕೊಂಡೆ. ನನ್ನ ಕೆಲಸದ ಬದ್ಧತೆ, ಸ್ಪಷ್ಟ ಹಾದಿಯನ್ನು ಗಮನಿಸಿದ ಅವರು ನನ್ನನ್ನು ಷರತ್ತುರಹಿತ ಪಿಎಚ್.ಡಿ ವ್ಯಾಸಂಗಕ್ಕೆ ಶಿಫಾರಸು ಮಾಡಿದರು. ಅದರಿಂದ ರಾಜ್ಯದ ‘ಪ್ರಬುದ್ಧ’ ಯೋಜನೆಯಡಿ ಆಯ್ಕೆಯಾಗುವುದು ಸಾಧ್ಯವಾಯಿತು. ನಾನು ₹ 12 ಲಕ್ಷ ಮುಂಗಡ ಪಾವತಿಸುವ ಅಗತ್ಯ ಇಲ್ಲದೆಯೇ ವೀಸಾ ಪಡೆದಿದ್ದೇನೆ.
ಸಸೆಕ್ಸ್ ವಿಶ್ವವಿದ್ಯಾಲಯವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ? ಇನ್ನಷ್ಟು ಖ್ಯಾತ ವಿಶ್ವವಿದ್ಯಾಲಯಗಳೂ ಇವೆಯಲ್ಲವೇ?
ಕಾಮಾಕ್ಷಿ: ನನ್ನ ಸಂಶೋಧನೆಯ ವಿಷಯ ‘ಡೆವಲಪ್‌ಮೆಂಟ್ ಆ್ಯಂಡ್ ಎಜುಕೇಷನ್’. ಈ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಯಾವ ವಿಶ್ವವಿದ್ಯಾಲಯ, ಯಾವ ಪ್ರೊಫೆಸರ್‌ಗಳು ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಆಳವಾದ ಅಧ್ಯಯನ ಮಾಡಿದೆ. 325 ವಿಶ್ವವಿದ್ಯಾಲಯಗಳ ಮಾಹಿತಿ ಕಲೆಹಾಕಿದೆ. 100ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳೊಂದಿಗೆ ಇ–ಮೇಲ್ ಸಂವಹನ ನಡೆಸಿದೆ. ಕೆಲವರು ತಿರಸ್ಕರಿಸಿದರು, ಕೆಲವರು ಸ್ಪಂದಿಸಿದರು. ನನ್ನ ಅಧ್ಯಯನ ವಿಷಯ, ಮಾರ್ಗದರ್ಶನ ಮಾಡಬಲ್ಲಂತಹ ಪ್ರೊಫೆಸರ್‌ಗಳ ಪಟ್ಟಿ ಸಿದ್ಧಪಡಿಸಿದಾಗ, ಬರೀ ಆರು ವಿಶ್ವವಿದ್ಯಾಲಯಗಳು ಉಳಿದಿದ್ದವು. ಆ ಆರು ಮಂದಿಯ ಹಲವು ಪ್ರಾಜೆಕ್ಟ್ ಕೆಲಸಗಳನ್ನು ನಾನು ಮಾಡಿಕೊಟ್ಟೆ. ಆದರೆ ಸಸೆಕ್ಸ್ ವಿಶ್ವವಿದ್ಯಾಲಯದ ಬಾರ್ಬರಾ ಮತ್ತು ಗುಂಜನ್ ಅವರ ಸಂಶೋಧನೆ, ಆಳವಾದ ಜ್ಞಾನವನ್ನು ಗಮನಿಸಿ, ಅವರ ಮಾರ್ಗದರ್ಶನದಲ್ಲೇ ಮುಂದುವರಿಯಲು ಮನಸ್ಸು ಮಾಡಿದೆ. ಅವರೂ ನನಗೆ ಅವಕಾಶ ನೀಡಿದರು.
ಸಸೆಕ್ಸ್‌ಗೆ ಆಯ್ಕೆಯಾದರೂ ಅಂತರರಾಷ್ಟ್ರೀಯ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು (ಐಇಎಲ್‌ಟಿಎಸ್) ನೀವು ಪಾಸು ಮಾಡಲೇಬೇಕಿತ್ತಲ್ಲವೇ? ಆ ಸವಾಲು ದಾಟಿದ್ದು ಹೇಗೆ?
ಕಾಮಾಕ್ಷಿ: ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಉತ್ತಮ ಕೆಲಸಕ್ಕೆ ಬಳಸಿಕೊಂಡ ತೀರಾ ಅಪರೂಪದ ವ್ಯಕ್ತಿಗಳಲ್ಲಿ ನಾನೂ ಒಬ್ಬಳಿರಬಹುದು. ನಾನು ಯಾವ ಕೋಚಿಂಗಿಗೂ ಹೋಗಲಿಲ್ಲ. ಬದಲಿಗೆ, ಗೂಗಲ್, ಯೂಟ್ಯೂಬ್, ಚಾಟ್ ಜಿಪಿಟಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡೆ. ಕೋಚಿಂಗ್‌ಗೆ ಹೋಗುವಷ್ಟು ದುಡ್ಡು ನನ್ನಲ್ಲಿ ಇರಲಿಲ್ಲ. ದೆಹಲಿಯ ಎನ್‌ಜಿಒದಲ್ಲಿ ಮಾಡುತ್ತಿದ್ದ ಕೆಲಸದಿಂದ ಸಿಗುತ್ತಿದ್ದ ಸಂಬಳದಲ್ಲಿ ಅಲ್ಲಿನ ದುಬಾರಿ ಜೀವನದ ನಡುವೆಯೇ ನನ್ನ ಅಮ್ಮನಿಗೆ ಬಿಡಿಗಾಸು, ಇಬ್ಬರು ತಂಗಿಯಂದಿರ ಶಿಕ್ಷಣದ ವೆಚ್ಚ ಭರಿಸಬೇಕಿತ್ತು. ಹೀಗಾಗಿ, ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಖರ್ಚು ಕಡಿಮೆ ಮಾಡುತ್ತಲೇ, ದೊಡ್ಡ ಕನಸಿನ ಬೆನ್ಹತ್ತಿ ಹೊರಟಿದ್ದೇನೆ. ನನ್ನ ಉನ್ನತ ವ್ಯಾಸಂಗಕ್ಕೆ ಈಗ ರಾಜ್ಯ ಸರ್ಕಾರ ನೆರವಾಗುತ್ತಿದೆ. ನನ್ನ ಈ ಹಾದಿಯಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯ ಪ್ರೊಫೆಸರ್ ಚಂದ್ರು ಸರ್, ಹೊಸಪೇಟೆಯ ‘ಸಖಿ’ ಟ್ರಸ್ಟ್‌ನವರು ನೆರವಾಗಿದ್ದಾರೆ.
ಹಾಗಿದ್ದರೆ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯದವರೂ ಉನ್ನತ ಶಿಕ್ಷಣದ ಕನಸು ಕಾಣಬಹುದೇ?
ಕಾಮಾಕ್ಷಿ: ಖಂಡಿತ. ಸ್ಪಷ್ಟ ಗುರಿ, ಸಾಧಿಸುವ ಛಲ ಇವೆರಡು ಮಾತ್ರ ಬೇಕು. ನಮ್ಮನ್ನು ಪೋಷಿಸುವವರು ಇಲ್ಲ ಅಂದುಕೊಳ್ಳಬಾರದು. ಕೈಯಲ್ಲಿ ಮೊಬೈಲ್ ಹಿಡಿದರೆ ಯುವಕರು, ಯುವತಿಯರು ಕೆಟ್ಟು ಹೋಗುತ್ತಾರೆ, ಕಾಲಹರಣ ಮಾಡುತ್ತಾರೆ ಎಂದುಕೊಳ್ಳಬೇಡಿ. ಅದರಿಂದ ನಮ್ಮ ವೈಯಕ್ತಿಕ ಲಾಭವನ್ನು ಗರಿಷ್ಠ ಮಟ್ಟದಲ್ಲಿ ಪಡೆಯಬಹುದು ಎಂಬುದೂ ಗಮನದಲ್ಲಿರಲಿ. ನಾನು ಕಪ್ಪಗಿದ್ದೇನೆ, ಗಿಡ್ಡಕ್ಕಿದ್ದೇನೆ, ಭಾಷೆ ಬರದು ಎಂಬಂತಹ ಯಾವ ಕೀಳರಿಮೆಯೂ ಬೇಡ. ಹಾದಿ ಎಷ್ಟೇ ದುರ್ಗಮವಾಗಿರಲಿ, ಗುರಿ ಮಾತ್ರ ಸ್ಪಷ್ಟವಾಗಿರಲಿ ಎಂದಷ್ಟೇ ನಾನು ಸಲಹೆ ನೀಡುವೆ.
ಇಂಗ್ಲೆಂಡ್‌ನಿಂದ ಮರಳಿದ ಬಳಿಕ ಏನು ಮಾಡಬೇಕು ಅಂದುಕೊಂಡಿದ್ದೀರಿ?
ಕಾಮಾಕ್ಷಿ: ದೇವದಾಸಿ ಪದ್ಧತಿ ತೊಲಗಬೇಕು. ಅದಕ್ಕಾಗಿ ಪ್ರಯತ್ನ ಇದ್ದೇ ಇರುತ್ತದೆ. ಇಂತಹ ಕುಟುಂಬದಲ್ಲಿ ಹುಟ್ಟಿದವರು ಯಾವ ಹೀಯಾಳಿಕೆಗೂ ಜಗ್ಗದೆ ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ‘ಯುವ ಸಮುದಾಯ ಕೇಂದ್ರ’ ಸ್ಥಾಪಿಸಿ, ಉನ್ನತ ಶಿಕ್ಷಣಕ್ಕೆ ಅವರಿಗೆ ಮಾರ್ಗದರ್ಶನ ಮಾಡುವ ಗುರಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.