ಶನಿವಾರ, ಮೇ 21, 2022
23 °C

ವಿಪುಲ ಉದ್ಯೋಗಾವಕಾಶ; ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್

ಆರ್.ಬಿ.ಗುರುಬಸವರಾಜ. Updated:

ಅಕ್ಷರ ಗಾತ್ರ : | |

Prajavani

ತಂತ್ರಜ್ಞಾನ ಮತ್ತು ಚಿಲ್ಲರೆ ವಹಿವಾಟು ಪದ್ಧತಿ ಉಪಯೋಗಿಸಿಕೊಂಡು ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಉತ್ತೇಜಿಸುವುದೇ ರಿಟೇಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ನ ಉದ್ದೇಶ.

ದೇಶದ ಆರ್ಥಿಕತೆಯಲ್ಲಿ ಚಿಲ್ಲರೆ ವ್ಯಾಪಾರವು ಹೆಚ್ಚು ಪ್ರಬಲವಾದದ್ದು. ಇದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಹೆಚ್ಚು ಸವಾಲಿನ ಉದ್ಯಮ. ಚಿಲ್ಲರೆ ಉದ್ಯಮದಲ್ಲಿ ಕಳೆದ ಕೆಲವು ವರ್ಷಗಳಿಂದ ನುರಿತ ಹಾಗೂ ಕೌಶಲಭರಿತ ವೃತ್ತಿ ಪರಿಣತರಿಗೆ ಹೆಚ್ಚು ಬೇಡಿಕೆ ಇದೆ. ಇದಕ್ಕೆ ಕಾರಣಗಳು ಹಲವಾರು. ಬೆರಳ ತುದಿಯ ವ್ಯವಹಾರದ ದಿನಗಳಲ್ಲಿ ರಿಟೇಲ್ ವ್ಯಾಪಾರ ವಿಭಿನ್ನ ಸ್ವರೂಪಗಳಲ್ಲಿ ಬೆಳವಣಿಗೆ ಆಗುತ್ತಿದೆ.

ಈಗ ನಗರ, ಪಟ್ಟಣ, ದೊಡ್ಡ ಹಳ್ಳಿಗಳಿಗಳಲ್ಲೂ ಮಾಲ್‌, ಮಾರ್ಟ್‌ಗಳು ತಲೆ ಎತ್ತುತ್ತಿವೆ. ಒಬ್ಬಿಬ್ಬರು ಕೆಲಸಗಾರರಿಂದ ನಡೆಯುತ್ತಿದ್ದ ಅಂಗಡಿಗಳಲ್ಲಿ ಈಗ ಹತ್ತಾರು ಕೆಲಸಗಾರರು ಗ್ರಾಹಕರ ಹಿಂದೆ ಬಿದ್ದಿರುವುದನ್ನು ಕಾಣುತ್ತೇವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೋವಿಡ್ ಬಂದ ನಂತರ ‘ಸಂಚಾರಿ ವ್ಯಾಪಾರ’ ಎಲ್ಲೆಡೆಯೂ ವ್ಯಾಪಿಸಿದೆ. ಪ್ರತಿ ನಗರ, ಹಳ್ಳಿಗಳ ಗಲ್ಲಿಗಲ್ಲಿಗಳಲ್ಲಿ ವೈವಿಧ್ಯಮಯ ಸಂಚಾರಿ ವ್ಯಾಪಾರಿಗಳು ಸುತ್ತಾಡಿ ತಮ್ಮ ವ್ಯವಹಾರ ನಡೆಸುತ್ತಿರುವುದನ್ನು ಕಾಣಬಹುದು. ಇಂತಹ ವ್ಯಾಪಾರಿ ಕೌಶಲಕ್ಕೆ ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಅಗತ್ಯ.

ಏನಿದು ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್?

ತಂತ್ರಜ್ಞಾನ ಮತ್ತು ಚಿಲ್ಲರೆ ವಹಿವಾಟು ಪದ್ಧತಿ ಉಪಯೋಗಿಸಿಕೊಂಡು ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಉತ್ತೇಜಿಸುವುದೇ ರಿಟೇಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ನ ಉದ್ದೇಶ. ಚಿಲ್ಲರೆ ವ್ಯಾಪಾರದ ಅಗತ್ಯವನ್ನು ಅರ್ಥೈಸಿಕೊಂಡು, ಅದರಲ್ಲಿನ ಅಡೆತಡೆಗಳನ್ನು ನಿವಾರಿಸುವ ಹಾಗೂ ಮಾರಾಟ ಜಾಲವನ್ನು ವಿಸ್ತರಿಸುವ ಕೌಶಲವನ್ನೂ ಈ ಕೋರ್ಸ್ ಕಲಿಸುತ್ತದೆ.

ಏಕೆ ಈ ಕೋರ್ಸ್?

ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಚಿಲ್ಲರೆ ವ್ಯಾಪಾರದ ಪೈಪೋಟಿ ಎದುರಿಸಲು ಕೌಶಲ ಅಗತ್ಯ. ಉತ್ಪನ್ನ‌ಗಳ ಬಗ್ಗೆ ಗ್ರಾಹಕರಿಗೆ ತಿಳಿಸಲು, ಸ್ಥಳೀಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಪರಿವರ್ತಿಸುವುದು ವ್ಯಾಪಾರದ ಒಂದು ತಂತ್ರ. ರಿಟೇಲ್ ಮ್ಯಾನೇಜ್‌ಮೆಂಟ್ ಎಂಬುದು ವ್ಯಾಪಾರದ ಒಂದು ಅಂಗವಾಗಿದ್ದು, ಗ್ರಾಹಕರನ್ನು ವ್ಯಾಪಾರದ ಸ್ಥಳಕ್ಕೆ ಆಕರ್ಷಿಸಲು ಮತ್ತು ವ್ಯಾಪಾರವನ್ನು ಸುಗಮವಾಗಿಸಲು ರಿಟೇಲ್ ಮ್ಯಾನೇಜ್‌ಮೆಂಟ್ ಅಗತ್ಯವಾಗಿದೆ. ಅದಕ್ಕಾಗಿ ಸೂಕ್ತ ತರಬೇತಿ ಮತ್ತು ನಿರ್ವಹಣಾ ಕೌಶಲಗಳಿರುವ ನೌಕರರ ಅಗತ್ಯವಿದೆ.

ಇಂತಹ ಅಗತ್ಯವನ್ನು ಪೂರೈಸುವುದು ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಮೂಲ ಉದ್ದೇಶವಾಗಿದೆ. ಇವುಗಳ ಜೊತೆಗೆ ವ್ಯವಹಾರ ನಿರ್ವಹಣಾ ಕೌಶಲ, ಮಾರುಕಟ್ಟೆ ಅಭಿವೃದ್ಧಿಯ ತಂತ್ರಗಳು, ವ್ಯವಹಾರ ಜಾಲದ ವಿಸ್ತರಣೆ, ನಿಖರವಾದ ಲೆಕ್ಕ ನಿರ್ವಹಣೆ ಇವುಗಳ ಕೌಶಲವನ್ನು ಬೆಳೆಸಲಾಗುತ್ತದೆ.

ಅರ್ಹತೆ, ಮಾನದಂಡ

ರಿಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ, ಪದವಿ, ಪಿ.ಜಿ. ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ ಹಂತದ ಕೋರ್ಸ್‌ಗಳಿವೆ. ಆಯಾ ಕೋರ್ಸ್‌ಗೆ ಅನುಗುಣವಾಗಿ ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ.

ಕಲಿಕಾ ಪಠ್ಯಕ್ರಮ

ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ನಿಗದಿಪಡಿಸಿದ ಪಠ್ಯಕ್ರಮ ಹೀಗಿದೆ. ಪೂರೈಕೆ ಜಾಲ ವ್ಯವಸ್ಥೆ, ಮಾರ್ಕೆಟಿಂಗ್ ಮಾಹಿತಿ, ಹಣಕಾಸು ನಿರ್ವಹಣೆ, ಗ್ರಾಹಕರೊಂದಿಗಿನ ಸಂಬಂಧ, ವ್ಯಾಪಾರ ನೀತಿ, ರಿಟೇಲ್ ಬ್ರ್ಯಾಂಡ್ ನಿರ್ವಹಣೆ, ನಿರ್ವಹಣೆ ಮತ್ತು ಸಾಂಸ್ಥಿಕ ನಡವಳಿಕೆ, ಚಿಲ್ಲರೆ ವ್ಯಾಪಾರದಲ್ಲಿ ಲೆಕ್ಕಪತ್ರ ನಿರ್ವಹಣೆ, ಎಲೆಕ್ಟ್ರಾನಿಕ್ ಚಿಲ್ಲರೆ ವ್ಯಾಪಾರ, ಮರ್ಚಂಡೈಸ್ ನಿರ್ವಹಣೆ, ಮಾರ್ಕೆಟಿಂಗ್ ಮತ್ತು ವ್ಯವಹಾರ ಸಂವಹನ, ಮಾರಾಟ ಪ್ರಚಾರ, ಸಾರ್ವಜನಿಕ ಸಂಪರ್ಕ, ದಾಸ್ತಾನು ನಿರ್ವಹಣೆ, ಚಿಲ್ಲರೆ ವ್ಯಾಪಾರಿಗಳ ಮನಶಾಸ್ತ್ರ.. ಹೀಗೆ ವಿವಿಧ ವ್ಯಾಪಾರ ಕೌಶಲಗಳನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ.

ಕೋರ್ಸ್ ನಂತರದ ಉದ್ಯೋಗಗಳು

ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಜಾಹೀರಾತು ಏಜೆನ್ಸಿಗಳು, ಸೂಪರ್ ಮಾರ್ಕೆಟ್‌ಗಳು, ಮಾಲ್‌ಗಳು ಮುಂತಾದ ಕಡೆಗಳಲ್ಲಿ ಈ ಕೋರ್ಸ್ ಮಾಡಿದವರಿಗೆ ಹೆಚ್ಚು ಆದ್ಯತೆ. ಮಳಿಗೆ ವ್ಯವಸ್ಥಾಪಕರು, ಮಳಿಗೆ ಅಧಿಕಾರಿ, ಮಾರಾಟ ವ್ಯವಸ್ಥಾಪಕರು, ಮಾರ್ಕೆಟಿಂಗ್ ಡೆವಲಪರ್, ರಿಟೇಲ್ ವ್ಯವಸ್ಥಾಪಕರು, ಮಾರುಕಟ್ಟೆ ವಿತರಕರು, ಗ್ರಾಹಕ ಸ್ನೇಹಿ ಅಧಿಕಾರಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಮರ್ಚಂಡೈಸರ್, ಗೋದಾಮು ನಿರ್ವಾಹಕ ಮತ್ತಿತರ ಹುದ್ದೆಗಳಿರುತ್ತವೆ.

ಸರ್ಕಾರಿ ಮತ್ತು ಅರೆ ಸರ್ಕಾರಿ ಕ್ಷೇತ್ರಗಳಲ್ಲಿ ಕಾಯಂ ಅಥವಾ ಅರೆಕಾಲಿಕ ಹುದ್ದೆಗಳಿಗೆ ಅವಕಾಶವಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡಬಯಸುವವರಿಗೆ ವಿಫುಲ ಅವಕಾಶಗಳಿವೆ. ಸಿನಿಮಾ ಮಂದಿರ, ಸೂಪರ್ ಮಾರ್ಕೆಟ್‌ಗಳು, ಹೈಪರ್ ಮಾರ್ಕೆಟ್‌ಗಳಲ್ಲಿ ಉದ್ಯೋಗಾವಕಾಶಗಳಿವೆ.

ಈ ಕೋರ್ಸ್‌ ಮಾಡಿದವರಿಗೆ ಉತ್ತಮ ವೇತನವೂ ಇದೆ. ಅದು ಅಭ್ಯರ್ಥಿಯ ಕೌಶಲ, ಅನುಭವದ ಮೇಲೆ ನಿರ್ಧಾರವಾಗುತ್ತದೆ. ಕೌಶಲ, ಅನುಭವ ಹೆಚ್ಚಿದಂತೆ ವೇತನವೂ ಹೆಚ್ಚಾಗುತ್ತದೆ. ಕೆಲ ಕಂಪನಿಗಳು ವೇತನದ ಜೊತೆಗೆ
ಬೋನಸ್ ಮತ್ತು ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತವೆ. ಮಾರುಕಟ್ಟೆ ಕ್ಷೇತ್ರದಲ್ಲಿ ಸಫಲರಾಗಬೇಕೆಂಬ ಕನಸಿರುವವರಿಗೆ ಇದೊಂದು ಉತ್ತಮ ಕೋರ್ಸ್.

ರಾಜ್ಯದ ಹಲವು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿರುವ ಖಾಸಗಿ ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಲಭ್ಯವಿವೆ. ಪದವಿ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿರುವ(ಬಿಬಿಎಂ) ಆಯ್ದ ಕಾಲೇಜುಗಳಲ್ಲಿ ಈ ಕೋರ್ಸ್‌ಗಳಿವೆ. ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿದೆ: https://bit.ly/3e6lKHa

ಕೋರ್ಸ್‌ ಹೆಸರು; ಕೋರ್ಸ್‌ ಅವಧಿ; ಅರ್ಹತಾ ಮಾನದಂಡ

ರಿಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ;1 ವರ್ಷ;12ನೇ ತರಗತಿ ಉತ್ತೀರ್ಣ

ಬಿ.ಬಿ.ಎ ಇನ್ ರಿಟೇಲ್ ಮ್ಯಾನೇಜ್‌ಮೆಂಟ್;3 ವರ್ಷ;12 ನೇ ತರಗತಿ ಉತ್ತೀರ್ಣ

ಬ್ಯಾಚಲರ್ ಆಫ್ ಫ್ಯಾಷನ್ ಮರ್ಚಂಡೈಸಿಂಗ್ ಅಂಡ್ ರಿಟೇಲ್ ಮ್ಯಾನೇಜ್‌ಮೆಂಟ್;4 ವರ್ಷ;12 ನೇ ತರಗತಿ ಉತ್ತೀರ್ಣ

ಎಂ.ಬಿ.ಎ. ಇನ್ ರಿಟೇಲ್ ಮ್ಯಾನೇಜ್‌ಮೆಂಟ್;2 ವರ್ಷ;ಯಾವುದೇ ಸ್ನಾತಕ ಪದವಿ

ಎಂ.ಎಸ್ಸಿ. ಇನ್ ರಿಟೇಲ್ ಮ್ಯಾನೇಜ್‌ಮೆಂಟ್;2 ವರ್ಷ;ಯಾವುದೇ ಸ್ನಾತಕ ಪದವಿ

ಪಿ.ಜಿ. ಡಿಪ್ಲೊಮಾ ಇನ್ ರಿಟೇಲ್ ಮ್ಯಾನೇಜ್‌ಮೆಂಟ್;1-2 ವರ್ಷ;ಯಾವುದೇ ಸ್ನಾತಕ ಪದವಿ

ಪಿ.ಜಿ.ಡಿಪ್ಲೊಮಾ ಇನ್ ಫ್ಯಾಷನ್ ಮರ್ಚಂಡೈಸಿಶಗ್ ಅಂಡ್ ರಿಟೇಲ್ ಮ್ಯಾನೇಜ್‌ಮೆಂಟ್;1-2 ವರ್ಷ;ಯಾವುದೇ ಸ್ನಾತಕ ಪದವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು