ಮಂಗಳವಾರ, ಜೂನ್ 28, 2022
25 °C
ಗುಂಡ್ಲುಪೇಟೆ ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಪ್ರಯತ್ನ

ಕಾಡಂಚಿನಲ್ಲೂ‌‌ ಮೀಟ್, ಝೂಮ್ ಪಾಠ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಕಾಡಂಚಿನ ಗ್ರಾಮೀಣ ಪ್ರದೇಶಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿ ಕೊಠಡಿಗಳ ಸೌಲಭ್ಯ ಇಲ್ಲದಿದ್ದರೂ, ಶಿಕ್ಷಕರೇ ಸ್ವತಃ ಆಸಕ್ತಿ ವಹಿಸಿ ಮೊಬೈಲ್‌ ಆ್ಯಪ್‌ಗಳ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. 

ಖಾಸಗಿ ಶಾಲೆಗಳಲ್ಲಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಆ್ಯಪ್‌ಗಳ ಮೂಲಕ ಶಿಕ್ಷಕರು ಈಗಾಗಲೇ ಪಾಠ ಮಾಡುತ್ತಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಥ ಪ್ರಯತ್ನ ನಡೆದಿಲ್ಲ.

ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ದೇವರಹಳ್ಳಿ, ಗೋಪಾಲಪುರ, ಹಂಗಳ, ಬರಗಿ, ಭೀಮನಬೀಡು, ಬನ್ನಿತಾಳಪುರ, ದೇಸಿಹಳ್ಳಿ, ಅಂಕಹಳ್ಳಿ ಸೇರಿದಂತೆ 13ಕ್ಕೂ ಹೆಚ್ಚು ಶಾಲೆಗಳಲ್ಲಿ ಶಿಕ್ಷಕರು 6, 7, 8ನೇ ತರಗತಿ ವಿದ್ಯಾರ್ಥಿಗಳಿಗೆ ಗೂಗಲ್‌ ಮೀಟ್‌, ಝೂಮ್ ಆ್ಯಪ್‌ ಮೂಲಕ ಪಾಠ ಕಲಿಸುತ್ತಿದ್ದಾರೆ. 

ಹಲವು ಮಿತಿ: ಹಳ್ಳಿಗಳಲ್ಲಿರುವ ಎಲ್ಲ ಪೋಷಕರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಇದ್ದರೂ ಬಳಸುವುದು ಗೊತ್ತಿಲ್ಲ. ರೀಚಾರ್ಜ್‌ ಮಾಡುವುದಕ್ಕೆ ಕಷ್ಟಪಡುವವರೂ ಇದ್ದಾರೆ. ಎಲ್ಲ ಇದ್ದರೆ ನೆಟ್‌ವರ್ಕ್‌ ಸಮಸ್ಯೆ. ಇಂಥ ಮಿತಿಗಳ ನಡುವೆಯೇ ಶಿಕ್ಷಕರು ಮಕ್ಕಳನ್ನು ಆನ್‌ಲೈನ್‌ ಬೋಧನೆಯ ದಾರಿಯಲ್ಲಿ ಕರೆದೊಯ್ಯುತ್ತಿದ್ದಾರೆ.

ಎಲ್ಲರಲ್ಲೂ ಸ್ಮಾರ್ಟ್‌ಫೋನ್‌ ಇಲ್ಲದೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ.

ಗೋಪಾಲಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ 35 ವಿದ್ಯಾರ್ಥಿಗಳ ಪೈಕಿ ಎಂಟು ವಿದ್ಯಾರ್ಥಿಗಳು ಆನ್‌ಲೈನ್‌ ಪಾಠಕ್ಕೆ ಕೂರುತ್ತಾರೆ. ದೇವರಹಳ್ಳಿ ಶಾಲೆಯಲ್ಲಿ 10, ಹಂಗಳ ಶಾಲೆಯಲ್ಲಿ 20 ಮಕ್ಕಳು ಹಾಜರಾಗುತ್ತಿದ್ದಾರೆ. 

‘ಪ್ರಾಯೋಗಿಕವಾಗಿ ಆರಂಭಿಸಿರುವ ಆನ್‌ಲೈನ್‌ ಪಾಠಕ್ಕೆ ಸ್ಮಾರ್ಟ್‌ಫೋನ್‌ ಇರುವ ಪೋಷಕರ ಮಕ್ಕಳು ಮಾತ್ರ ಹಾಜರಾಗುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಹಾಜರಾಗದವರಿಗೆ ಶಾಲೆಯಲ್ಲೇ ವರ್ಕ್‌ ಶೀಟ್‌ಗಳನ್ನು ಕೊಡುತ್ತೇವೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೂಲಕವೂ ಪಾಠ ಮುಂದುವರಿದಿದೆ’ ಎಂದು ಗೋಪಾಲಪುರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸಿ.ಎಸ್‌.ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಕೋವಿಡ್‌ ಕಾರಣದಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂದು ನಡೆಸುತ್ತಿರುವ ಆನ್‌ಲೈನ್‌ ಪಾಠಕ್ಕೆ ಉತ್ತಮ ಸ್ಪಂದನೆ
ವ್ಯಕ್ತವಾಗಿದೆ’ ಎಂದು ದೇವರಹಳ್ಳಿ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ, ದೊಡ್ಡಹುಂಡಿ ಶಾಲೆಯ ಶಿಕ್ಷಕಿ ನಿರ್ಮಲಾ ಹೇಳಿದರು.

ಶಾಲೆ ಅವಧಿಯ ನಂತರ ಪಾಠ

ಪೋಷಕರು ಕೆಲಸಕ್ಕೆ ಹೋಗುವುದರಿಂದ ಶಾಲೆಯ ಸಮಯದಲ್ಲಿ ಮಕ್ಕಳಿಗೆ ಮೊಬೈಲ್‌ ಫೋನ್ ಸಿಗುವುದಿಲ್ಲ. ಹೀಗಾಗಿ, ಕೆಲವು ಶಾಲೆಗಳ ಶಿಕ್ಷಕರು ಪೋಷಕರು ಸಂಜೆಯ ವೇಳೆ ಆನ್‌ಲೈನ್‌ ತರಗತಿ ನಡೆಸುತ್ತಿದ್ದಾರೆ.

‘ನನ್ನ ತರಗತಿಯಲ್ಲಿ 20 ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ. ಸಂಜೆ ಆರು ಗಂಟೆಯ ನಂತರ ಮನೆಯಿಂದಲೇ ಆನ್‌ಲೈನ್‌ ತರಗತಿ ನಡೆಸುತ್ತಿದ್ದೇವೆ’ ಎಂದು ಹಂಗಳ ಪಬ್ಲಿಕ್‌ ಶಾಲೆಯ ಇಂಗ್ಲಿಷ್‌ ಶಿಕ್ಷಕಿ ಅನಿತಾ ತಿಳಿಸಿದರು.

***

ಪ್ರೌಢಶಾಲೆಗಳಲ್ಲಿ ಆನ್‌ಲೈನ್‌ ಪಾಠ ನಡೆಯುತ್ತಿದೆ. ಪ್ರಾಥಮಿಕ ಶಾಲೆಯಲ್ಲಿ ಈಗ ಆರಂಭವಾಗಿದೆ. 8 ಶಾಲೆಗಳಲ್ಲಿ ಪ್ರಯೋಗ ನಡೆದಿತ್ತು. ಈಗ ಶಾಲೆಗಳ ಸಂಖ್ಯೆ ಹೆಚ್ಚಿದೆ
- ಶಿವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ

ಆನ್‌ಲೈನ್‌ ತರಗತಿಗಳಲ್ಲಿ ಶಿಕ್ಷಕರು ಚೆನ್ನಾಗಿ ಹೇಳಿ ಕೊಡುತ್ತಿದ್ದಾರೆ. ಮೊಬೈಲ್‌ ಫೋನ್‌ನಲ್ಲೇ ಪಾಠ ಕೇಳಿದರೂ ಅರ್ಥವಾಗುತ್ತಿದೆ
- ಅಂಜಲಿ, ಹಂಗಳ ಪಬ್ಲಿಕ್‌ ಶಾಲೆ ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು