ಶಾಲೆಯೇನೋ ಆರಂಭವಾಗಿದೆ.ಪಾಠೋಪಕರಣ ಲಭ್ಯವಿರುವ ಅಂಗಡಿಗಳತ್ತ ಕಣ್ಣು ಹಾಯಿಸಿದರೆ ಮಕ್ಕಳ ವಯಸ್ಸು, ನೀಡುವ ಕಾಸಿಗೆ ಅನುಗುಣವಾಗಿ ತರಹೇವಾರಿ ಪಾಟಿಚೀಲಗಳು (ಸ್ಕೂಲ್‌ಬ್ಯಾಗ್), ಕುಡಿಯುವ ನೀರಿನ ಬಾಟಲಿಗಳು, ಬುತ್ತಿ ಬ್ಯಾಗ್‌ಗಳನ್ನು ನೋಡಬಹುದು.
ಲೆದರ್, ಬಟ್ಟೆ, ನೈಲಾನ್ ಹೀಗೆ ವಿವಿಧ ಮಾದರಿಯಲ್ಲಿ ಲಭ್ಯವಿರುವ ಬ್ಯಾಗ್‌ಗಳಲ್ಲಿ ಶಾಲೆಮಕ್ಕಳು ಹೆಚ್ಚಾಗಿ ಬೆನ್ನಿಗೆ ನೇತುಹಾಕಿಕೊಳ್ಳುವ ಬ್ಯಾಗುಗಳನ್ನು ಇಷ್ಟಪಡುತ್ತಾರೆ. ಸದ್ಯ ವೈಲ್ಡ್ ಕ್ರಾಫ್ಟ್ ಮತ್ತು ಸ್ಕೈ ಬ್ಯಾಗ್ ಕಂಪನಿ ಬ್ಯಾಗ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದಲ್ಲದೇ. ಟಾಮಿ ಹಿಲ್‌ಫಿಗರ್, ಎಫ್ ಗೇರ್, ಪೂಮಾ, ಅಮೆರಿಕನ್ ಟೂರಿಸ್ಟರ್, ಅಡಿಡಾಸ್ ಕಂಪನಿಗಳ ಬ್ಯಾಗ್‌ಗಳನ್ನು ಮಕ್ಕಳು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಈ ಬಗ್ಗೆಲೆದರ್ ಬ್ಯಾಗ್ ಅಂಗಡಿಯ ಮೋಹನ್ ಪಟೇಲ್ ಹೇಳುವುದು ಹೀಗೆ– ‘ಒಂದರಿಂದ ಆರನೇ ತರಗತಿಯ ಮಕ್ಕಳು ಬ್ಯಾಗ್ ಮೇಲೆ ಗೊಂಬೆ ಚಿತ್ರಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಕಾಮಿಕ್ ಪಾತ್ರಗಳಾದ ಚೋಟಾ ಭೀಮ್, ಟಾಮ್ ಅಂಡ್ ಜೆರ‍್ರಿ, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್‌ಗಳಿರುವ ಬ್ಯಾಗ್‌ಗಳನ್ನೇ ಆಯ್ಕೆ ಮಾಡುತ್ತಾರೆ’.
ಆರಂಭದಲ್ಲಿ ಗಟ್ಟಿಯಾದ ಮೆಟಿರಿಯಲ್‌ನಿಂದ ಬ್ಯಾಗ್ ತಯಾರಿಸಿ, ಅದರ ಮೇಲೆ ಗೊಂಬೆ ಚಿತ್ರ ಅಂಟಿಸಲಾಗುತ್ತಿತ್ತು. ಇದನ್ನು ಮೇಥಿ ಕ್ಲಾತ್ ಎನ್ನಲಾಗುತ್ತದೆ. ಆದರೆ ಈಗ ಹಾಗಲ್ಲ. ಬಟ್ಟೆ ಮೇಲೆ ಗೊಂಬೆಗಳ ಚಿತ್ರವಿರುತ್ತದೆ. ಆರರಿಂದ ಕಾಲೇಜಿಗೆ ಹೋಗುವ ಮಕ್ಕಳೆಲ್ಲ ಪ್ರಿಂಟೆಂಡ್ ಬ್ಯಾಗ್‌ಗಳನ್ನು ಇಷ್ಡಪಡುತ್ತಾರೆ. ಚಿಕ್ಕಮಕ್ಕಳೆಲ್ಲ ಗಾಢಬಣ್ಣದ ಬ್ಯಾಗ್‌ಗಳನ್ನೇ ಇಷ್ಟಪಡುತ್ತಾರೆ.ಹುಡುಗಿಯರು ಬ್ಯಾಗ್‌ನಲ್ಲಿ ಗುಲಾಬಿ ಬಣ್ಣ, ನೇರಳೆ ಬಣ್ಣದ ಬ್ಯಾಗುಗಳನ್ನು ಇಷ್ಟಪಡುತ್ತಾರೆ ಎಂದರು.
ವಾಟ್ಸ್‌ಆ್ಯಪ್ ಕರೆ ಮಾಡಿ, ಬ್ಯಾಗ್ ಖರೀದಿ:ಮೊದಲೆಲ್ಲ ಚಿಣ್ಣರು ಅಪ್ಪ ಅಮ್ಮ ಖರೀದಿಸುತ್ತಿದ್ದ ಬ್ಯಾಗ್‌ಗಳನ್ನು ಇಷ್ಟಪಡುತ್ತಿದ್ದರು. ಈಗ ಅವರ ಇಷ್ಟಾನಿಷ್ಠಗಳು ಬದಲಾಗಿವೆ. ಇಂಥದ್ದೇ ಬಣ್ಣ, ಮೆಟಿರಿಯಲ್, ಕೊನೆಗೆ ಬ್ರಾಂಡ್ ಎಲ್ಲವನ್ನು ಮಕ್ಕಳೇ ನಿರ್ಧರಿಸುತ್ತಾರೆ. ಅನಿವಾರ್ಯ ಕಾರಣಗಳಿಗೆ ಮಕ್ಕಳನ್ನು ಕರೆತರದೇಬ್ಯಾಗ್ ಖರೀದಿಗೆ ಬಂದ ಬಹುತೇಕ ಪೋಷಕರು ‘ವಾಟ್ಸ್ ಆ್ಯಪ್’ ಮೂಲಕ ವಿಡಿಯೊ ಕರೆ ಮಾಡಿ, ಬ್ಯಾಗ್ ಆಯ್ಕೆಯ ಅವಕಾಶವನ್ನು ಮಕ್ಕಳಿಗೆ ಬಿಡುತ್ತಾರೆ.
ಗಮನ ಸೆಳೆಯುತ್ತಿರುವ ಟ್ರಾಲಿ ಬ್ಯಾಗ್ಸ್: ಬೆನ್ನಿಗೆ ನೇತುಹಾಕಿಕೊಳ್ಳುವ ಬದಲು ಚಕ್ರಗಳ ಸಹಾಯದಿಂದ ಎಳೆದುಕೊಂಡು ಹೋಗುವ ಈ ಬ್ಯಾಗ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ, ಇದು ಕ್ರೀಡಾಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ನೆರವಾಗುತ್ತದೆ.
ಬಗೆ ಬಗೆಯ ನೀರಿನ ಬಾಟಲಿ:ಸ್ವಲ್ಪಮಟ್ಟಿಗೆಪ್ಲಾಸ್ಟಿಕ್ ಬಳಸಬಾರದೆಂಬ ಅರಿವು ಮೂಡಿರುವುದರಿಂದ ತುಕ್ಕು ಹಿಡಿಯದ ಉಕ್ಕಿನ ಬಾಟಲಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಿಲ್ಟನ್, ಎಚ್‌ಟುಒ, ವಯ ಕಂಪನಿಯ ನೀರಿನ ಬಾಟಲಿಗಳು ಹೆಚ್ಚು ಮಾರಾಟವಾಗುತ್ತಿವೆ. 500 ಮಿ.ಲೀ ಸಾಮರ್ಥ್ಯವಿರುವ ಮಿಲ್ಟನ್ ಬಾಟಲಿಗಳು ₹ 500ರಿಂದ ಲಭ್ಯವಿದೆ.
ತಾಮ್ರದ ಬಾಟಲಿಗಳು ಲಭ್ಯವಿದ್ದು, ಇದರ ಬೆಲೆ ₹ 700ರಿಂದ ₹ 1500 ಇದೆ. ಆದರೆ, ಕಚೇರಿ ಮತ್ತು ಮನೆ ಬಳಕೆಗೆ ಮಾತ್ರ ಇದು ಸೂಕ್ತ. ಮಕ್ಕಳು ಶಾಲೆಗಳಿಗೆ ಒಯ್ದರೆ ಬಹುಬೇಗ ಮುಚ್ಚಳದಿಂದ ಸೋರಿಕೆಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಮೋಹನ್.
ಪಾಟಿಚೀಲಕ್ಕೊಂದು ಇತಿಹಾಸ: 1938ರಲ್ಲಿ ಗೆರ‍್ರಿ ಔಟ್‌ಡೋರ್ಸ್ ಜಿಪ್ ಇರುವ ಮೊದಲ ಆಧುನಿಕ ಪಾಟಿಚೀಲವನ್ನು ತಯಾರಿಸಿದ. ಮಾಮೂಲಿ ಸಣ್ಣ ಚೀಲದಂತಿದ್ದ ಬಟ್ಟೆ ಬ್ಯಾಗ್‌ಗೆ ಒಂದು ಸ್ಪಷ್ಟ ರೂಪ ನೀಡಿದ.
***
ರೇನ್‌ಕೋಟ್ ಇರೊ ಬ್ಯಾಗ್ಸ್‌ಗಳಂದ್ರೆ ತುಂಬಾ ಇಷ್ಟ. ಆದರೆ, ನಾನು ಈ ಸಲ ನೀಲಿ ಬಣ್ಣದ ಸ್ಕೈಬ್ಯಾಗ್ ತಗೊಂಡಿದ್ದೀನಿ. ಮುಂದಿನ ವೈಲ್ಡ್‌ಕ್ರಾಫ್ಡ್ ಬ್ರಾಂಡ್ ಅಥವಾ ರೇನ್‌ಕೋಟ್ ಇರುವ ಬ್ಯಾಗ್‌ಗಳನ್ನು ತಗೊಳ್ತೀನಿ.
ಶಿರಿಶ್, 6ನೇ ತರಗತಿ , ಲಿಟಲ್‌ರಾಕ್ ಪಬ್ಲಿಕ್ ಸ್ಕೂಲ್, ಬನಶಂಕರಿ ಮುಖ್ಯರಸ್ತೆ
***
ನನಗೆ ಕೆಂಪು ಬಣ್ಣದ ಸ್ಕೂಲ್ ಬ್ಯಾಗ್ ಅಂದ್ರೆ ಇಷ್ಟ. ಅದಕ್ಕೆ ಸಿಂಡ್ರೆಲಾ ಚಿತ್ರ ಇರೊ ಕೆಂಪು ಬಣ್ಣದ ಬ್ಯಾಗ್ ತಗೊಂಡಿದ್ದೀನಿ.
ಮೋನಿಶಾ, ಸೇಂಟ್ ಕ್ಸೇವಿಯರ್ ಸ್ಕೂಲ್, ಶ್ರೀನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.