ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ, ಪಿ.ಯುಗೆ ‘ತ್ರಿ’ ಪರೀಕ್ಷಾ ಸೂತ್ರ

Published 1 ಅಕ್ಟೋಬರ್ 2023, 23:30 IST
Last Updated 1 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಒಂದಲ್ಲ, ಎರಡಲ್ಲ ಮೂರು ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಒದಗಿ ಬಂದಿದೆ. ಅದೂ ಐದು ತಿಂಗಳಲ್ಲಿ ಈ ಮೂರು ಪರೀಕ್ಷೆಗಳು ಜರುಗಲಿವೆ. ಆದರೆ, ವಿದ್ಯಾರ್ಥಿಗಳಿಗೆ ಈ ಮೂರೂ ಪರೀಕ್ಷೆಗಳನ್ನು ಬರೆಯುವುದು ಕಡ್ಡಾಯವಲ್ಲ. ಒಂದು ವೇಳೆ ಮೂರು ಪರೀಕ್ಷೆಗಳನ್ನೂ ಬರೆದರೆ, ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುತ್ತವೆಯೋ ಅದನ್ನೇ ಉಳಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಅಲ್ಲದೆ ವಿಷಯವಾರು ಅಂಕಗಳನ್ನು ಹೆಚ್ಚಿಸಿಕೊಳ್ಳಲು ಸುವರ್ಣಾವಕಾಶ ಸಿಕ್ಕಿದಂತಾಗಿದೆ.

ಹೌದು, ಈ ಮೊದಲು ಒಂದು ವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ಅದರಲ್ಲಿ ‘ಫೇಲ್’ ಆದವರು ಅಥವಾ ಪಡೆದ ಅಂಕಗಳಿಂದ ತೃಪ್ತರಾಗದವರು ಪೂರಕ ಪರೀಕ್ಷೆ ಬರೆಯಬಹುದಿತ್ತು. ಆಗ ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕವೇ ಅಂತಿಮವಾಗುತ್ತಿತ್ತು. ವಾರ್ಷಿಕ ಪರೀಕ್ಷೆಗಿಂತ ಪೂರಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅನಿವಾರ್ಯವಾಗಿ ಅದನ್ನೇ ಒಪ್ಪಿಕೊಳ್ಳಬೇಕಿತ್ತು. ಹಿಂದಿನ (ವಾರ್ಷಿಕ) ಪರೀಕ್ಷೆಯ ಅಂಕಗಳನ್ನು ಪರಿಗಣಿಸಲು ಅವಕಾಶ ಇರಲಿಲ್ಲ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ‘ವಿದ್ಯಾರ್ಥಿ ಸ್ನೇಹಿ’ಯಾಗಿ ರೂಪಿಸಲಾಗಿದೆ.

ಉದಾಹರಣೆಗೆ, 10ನೇ ತರಗತಿಯ ವಿದ್ಯಾರ್ಥಿಯೊಬ್ಬರಿಗೆ ಮೊದಲ ಪರೀಕ್ಷೆಯಲ್ಲಿ (ವಾರ್ಷಿಕ ಪರೀಕ್ಷೆ-1) ಗಣಿತ ವಿಷಯದಲ್ಲಿ ಹೆಚ್ಚು ಅಂಕ ಬಂದು, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಕಡಿಮೆ ಅಂಕಗಳು ಬಂದಿರುತ್ತವೆ ಎಂದುಕೊಳ್ಳಿ. ಆಗ ಆ ವಿದ್ಯಾರ್ಥಿಯು ತನ್ನ ಅಂಕಗಳನ್ನು ಸುಧಾರಿಸಿಕೊಳ್ಳಲು ವಾರ್ಷಿಕ ಪರೀಕ್ಷೆ–2 ಬರೆಯಬಹುದು. ಆ ಪರೀಕ್ಷೆಯಲ್ಲಿ ವಿಜ್ಞಾನದಲ್ಲಿಯೂ ಹಾಗೂ ಮತ್ತೊಂದು ವಾರ್ಷಿಕ ಪರೀಕ್ಷೆ–3ರಲ್ಲಿ ಸಮಾಜ ವಿಜ್ಞಾನದಲ್ಲಿ ಹಿಂದಿನ ಪರೀಕ್ಷೆಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಆಗ ಈ ಮೂರೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗೆ ವಿಷಯವಾರು ಯಾವುದರಲ್ಲಿ ಅತ್ಯಧಿಕ ಅಂಕಗಳು ಬಂದಿರುತ್ತವೆಯೋ ಅವು ಅಂಕಪಟ್ಟಿಯಲ್ಲಿ ಸೇರ್ಪಡೆಯಾಗಿ, ಅಂತಿಮ ಫಲಿತಾಂಶ ಲಭ್ಯವಾಗುತ್ತದೆ. ಒಂದು ವೇಳೆ ಮೊದಲ ಪರೀಕ್ಷೆಯ ಫಲಿತಾಂಶವೇ ವಿದ್ಯಾರ್ಥಿಗೆ ತೃಪ್ತಿಕರವಾಗಿದ್ದರೆ ಎರಡು, ಮೂರನೇ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ.  

ಇನ್ಮುಂದೆ ‘ಪೂರಕ ಪರೀಕ್ಷೆ’ ಇರಲ್ಲ: ಬಹಳ ಹಿಂದಿನಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ನಡೆದುಕೊಂಡು ಬರುತ್ತಿದ್ದ ‘ಪೂರಕ ಪರೀಕ್ಷೆ’ ಈ ಶೈಕ್ಷಣಿಕ ವರ್ಷದಿಂದ ಇರುವುದಿಲ್ಲ. ದಶಕದ ಹಿಂದೆ ಮುಖ್ಯ ಪರೀಕ್ಷೆ ಮುಗಿದ ಐದರಿಂದ ಆರು ತಿಂಗಳ ಅವಧಿಯಲ್ಲಿ ಪೂರಕ ಪರೀಕ್ಷೆಗಳು ನಡೆಯುತ್ತಿದ್ದವು. ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆಯುತ್ತಿದ್ದರು. ಈ ಪರೀಕ್ಷೆಯಲ್ಲಿ ಪಾಸಾದವರು ಶಿಕ್ಷಣ ಮುಂದುವರಿಸಲು, ಹೊಸ ಶೈಕ್ಷಣಿಕ ವರ್ಷಕ್ಕಾಗಿ ಮತ್ತೆ ಆರು ತಿಂಗಳು ಕಾಯಬೇಕಾಗುತ್ತಿತ್ತು. ಇದರಿಂದ ಅವರಿಗೆ ಒಂದು ಶೈಕ್ಷಣಿಕ ವರ್ಷ ನಷ್ಟವಾಗುತ್ತಿತ್ತು. ಅದನ್ನು ಮನಗಂಡಿದ್ದ ಸರ್ಕಾರ ಮುಖ್ಯ ಪರೀಕ್ಷೆ ನಡೆದ ಒಂದೂವರೆಯಿಂದ ಎರಡು ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿತು. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೂ ಅನುಕೂಲವಾಗುತ್ತಿತ್ತು. ಆದರೆ ಈ ವರ್ಷದಿಂದ ‘ಪೂರಕ ಪರೀಕ್ಷೆ’ಯೇ ಇರುವುದಿಲ್ಲ. 

ಆದರೆ, ‘ಪೂರಕ ಪರೀಕ್ಷೆ’ ಎಂಬ ಹೆಸರಿನ ಬದಲಿಗೆ ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂಬ ಹೆಸರಿನ ಮೂರು ಅವಕಾಶಗಳನ್ನು ಸರ್ಕಾರ ವಿದ್ಯಾರ್ಥಿಗಳಿಗೆ ಒದಗಿಸಿದೆ. ಮೂರನೇ ಪರೀಕ್ಷೆ ಮುಗಿದ ಬಳಿಕ ಅದೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಯು ಮುಂದಿನ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಲಿದೆ.

ಬದಲಾವಣೆ ಏಕೆ: ಒಂದು ವಾರ್ಷಿಕ ಮತ್ತು ಒಂದು ಪೂರಕ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳ ಜ್ಞಾನಧಾರಣೆ, ಅರ್ಥಪೂರ್ಣ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗಿತ್ತು ಎಂಬುದನ್ನು ಸರ್ಕಾರ ಮನಗಂಡಿದೆ. ಅಲ್ಲದೆ, ಈ ಪರೀಕ್ಷಾ ವಿಧಾನದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳಿಂದ ವಿದ್ಯಾರ್ಥಿ ತೃಪ್ತರಾಗದಿದ್ದರೆ, ಅದನ್ನು ತಿರಸ್ಕರಿಸಿ ಪೂರಕ ಪರೀಕ್ಷೆ ಬರೆಯಬಹುದಿತ್ತು. ಆಗ ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕವೇ ಅಂತಿಮವಾಗುತ್ತಿತ್ತು. ಅದಕ್ಕಿಂತ ಹೆಚ್ಚು ಅಂಕಗಳು ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಪಡೆದಿದ್ದರೆ ಅದನ್ನು ಉಳಿಸಿಕೊಳ್ಳುವ ಮುಕ್ತ ಅವಕಾಶ ವಿದ್ಯಾರ್ಥಿಗಳಿಗೆ ಇರಲಿಲ್ಲ. ಅಂದರೆ ಎರಡೂ ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಆಯ್ಕೆ ಇರಲಿಲ್ಲ. ಹೀಗಾಗಿ ಇದು ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನ ಆಗಿರಲಿಲ್ಲ. ಆದ್ದರಿಂದ ಇದನ್ನು ಬದಲಿಸಿ ಹೊಸ ಪರೀಕ್ಷಾ ಸೂತ್ರ (ವಾರ್ಷಿಕ ಪರೀಕ್ಷೆ 1, 2 ಮತ್ತು 3) ಅಳವಡಿಸಲಾಗಿದೆ ಎಂಬುದು ಸರ್ಕಾರದ ಪ್ರತಿಪಾದನೆ.

ಮೂರು ಪರೀಕ್ಷಾ ಅವಕಾಶಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಯ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುವುದು ಪರೀಕ್ಷಾ ಕ್ರಮದ ಬದಲಾವಣೆಯ ಪ್ರಮುಖ ಉದ್ದೇಶ. ವಿದ್ಯಾರ್ಥಿಗಳ ಗ್ರಹಿಕೆ, ಓದು, ಸಾಮರ್ಥ್ಯ ಭಿನ್ನವಾಗಿರುತ್ತದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳ ವೇಗ ಮತ್ತು ಶೈಲಿಯೂ ವಿಭಿನ್ನವಾಗಿರುತ್ತದೆ. ಹೀಗಾಗಿ ವಾರ್ಷಿಕ 1, 2 ಮತ್ತು 3ನೇ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯ ನಿರ್ಬಂಧಗಳಿಂದ ಎದುರಾಗುವ ಒತ್ತಡ ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ಪ್ರತಿಕ್ರಿಯಿಸುತ್ತಾರೆ. ಈ ಮೂರೂ ಪರೀಕ್ಷೆಗಳಲ್ಲಿ ವಿಷಯ ಮತ್ತು ಕಠಿಣತೆಯ ಮಟ್ಟದಲ್ಲಿ ಏಕರೂಪತೆಯನ್ನು ಮಂಡಳಿ ಕಾಯ್ದುಕೊಳ್ಳುತ್ತದೆ ಎಂದೂ ಅವರು ಹೇಳುತ್ತಾರೆ.

ಫಲಿತಾಂಶ ಸುಧಾರಣೆ, ಉನ್ನತ ಶಿಕ್ಷಣಕ್ಕೆ ಸಹಕಾರಿ: ಹೊಸ ವಿಧಾನವು ‘ವಿದ್ಯಾರ್ಥಿ ಸ್ನೇಹಿ’ ಆಗಿರುವುದರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಫಲಿತಾಂಶದಲ್ಲೂ ಏರಿಕೆ ದಾಖಲಾಗುವ ಸಾಧ್ಯತೆ ಇದೆ. 2022-23ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 74.67ರಷ್ಟು ಫಲಿತಾಂಶ ಬಂದಿತ್ತು. ಆಗ 5.24 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರು. ಜೂನ್‍ನಲ್ಲಿ ನಡೆಸಿದ್ದ ಮೊದಲ ಪೂರಕ ಪರೀಕ್ಷೆಯಲ್ಲಿ 50,478 ವಿದ್ಯಾರ್ಥಿಗಳು ಪಾಸಾಗಿದ್ದರು. ಈ ವರ್ಷ ಪ್ರಥಮ ಬಾರಿಗೆ ನಡೆಸಿದ್ದ ಎರಡನೇ ಪೂರಕ ಪರೀಕ್ಷೆಯಲ್ಲಿ 41,961 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಅಂದರೆ ಎರಡು ಪೂರಕ ಪರೀಕ್ಷೆಯಿಂದ 92,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇಷ್ಟು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲ ಆಯಿತು. ಇದೇ ರೀತಿ ಮೂರು ಪರೀಕ್ಷಾ ವಿಧಾನದಿಂದಲೂ ಫಲಿತಾಂಶದಲ್ಲಿ ಏರಿಕೆ ದಾಖಲಾಗುವುದರ ಜತೆಗೆ, ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೂ ಸಹಕಾರಿಯಾಗಲಿದೆ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.

ಏನೆಲ್ಲ ನಿಯಮಗಳಿವೆ:

* ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ವಾರ್ಷಿಕ ಹಾಜರಾತಿ ಶೇ 75ರಷ್ಟು ಕಡ್ಡಾಯ. ಇಷ್ಟು ಹಾಜರಾತಿ ಇಲ್ಲದಿದ್ದರೆ ಪರೀಕ್ಷೆ ಬರೆಯಲು ಅರ್ಹತೆ ಇರುವುದಿಲ್ಲ. 

* ಮೊದಲ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುವ ಹೊಸಬರು ಮತ್ತು ಖಾಸಗಿ ಅಭ್ಯರ್ಥಿಗಳು ಎಲ್ಲ ವಿಷಯಗಳಲ್ಲಿ ಪರೀಕ್ಷೆ–1 ಬರೆಯುವುದು ಕಡ್ಡಾಯ. ನೇರವಾಗಿ ಪರೀಕ್ಷೆ–2 ಮತ್ತು ಪರೀಕ್ಷೆ–3 ಬರೆಯಲು ಅವಕಾಶ ಇರುವುದಿಲ್ಲ.

* ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ಸಲುವಾಗಿ ಒಂದು ಬಾರಿ ಮಾತ್ರ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಎರಡನೇ ಬಾರಿ ಶುಲ್ಕ ಪಡೆಯುವಂತಿಲ್ಲ.

* ಪರೀಕ್ಷೆ–1ರಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಆಸಕ್ತಿ ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸಲಾಗುತ್ತದೆ.

* ವಿದ್ಯಾರ್ಥಿಗಳ ಅಂಕಗಳನ್ನು ಪಡೆಯುವ ಸಲುವಾಗಿ ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ (ಎನ್‍ಎಡಿ) ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಆಯಾ ಪರೀಕ್ಷೆಗಳು ಮುಗಿದ ನಂತರ ಅಪ್ಲೋಡ್ ಮಾಡಲಾಗುತ್ತದೆ. 

* ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಮರು ಪ್ರಯತ್ನಿಸುವವರಿಗೆ ಹಾಲಿ ವ್ಯವಸ್ಥೆ ಮುಂದುವರಿಯುತ್ತದೆ. ಅವರಿಗೆ ಪ್ರಯತ್ನಗಳ ವಿಷಯದಲ್ಲಿ ಯಾವುದೇ ಮಿತಿ ಇರುವುದಿಲ್ಲ.

* ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನೀಡುವ ಸಂಬಂಧ ಎಲ್ಲ ಉಪ ನಿರ್ದೇಶಕರು ಅಗತ್ಯ ತನಿಖಾ ತಂಡಗಳನ್ನು ರಚಿಸಿ ಪ್ರತಿ ಕಾಲೇಜಿಗೂ ಭೇಟಿ ನೀಡಿ ಹಾಜರಾದವರ ಗೈರಾದವರ ಮತ್ತು ನೋಂದಣಿಯಾದ ವಿದ್ಯಾರ್ಥಿಗಳ ಮಾಹಿತಿಯನ್ನು ಪರಿಶೀಲಿಸುತ್ತಾರೆ.

ಮೂರು ಪರೀಕ್ಷಾ ಸೂತ್ರ ಮೊಳಕೆ ಹೊಡೆದದ್ದು ಹೇಗೆ?: ‘ತ್ರಿ’ ಪರೀಕ್ಷಾ ಸೂತ್ರ ಮೊಳಕೆ ಹೊಡೆದದ್ದು ಹೇಗೆ ಎಂಬುದರ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ. ಪರೀಕ್ಷೆಗಳ ಸುಧಾರಣೆ ಫಲಿತಾಂಶ ಹೆಚ್ಚಳ ಸೇರಿದಂತೆ ‘ವಿದ್ಯಾರ್ಥಿ ಸ್ನೇಹಿ’ ಪರೀಕ್ಷೆಗಳನ್ನು ನಡೆಸಲು ಏನೇನು ಮಾಡಬೇಕು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಹೋಗುವಂತೆ ಮಾಡಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬ ಚರ್ಚೆಗಳು ಮಂಡಳಿಯ ಅಧ್ಯಕ್ಷ ಆರ್‌. ರಾಮಚಂದ್ರನ್ ಅವರ ನೇತೃತ್ವದಲ್ಲಿ ಆಗಾಗ ನಡೆಯುತ್ತಿತ್ತು. ಈ ರೀತಿ ಚರ್ಚಿಸುವಾಗ ಈ ಬಾರಿ ದ್ವಿತೀಯ ಪಿಯುಗೆ ಎರಡನೇ ಪೂರಕ ಪರೀಕ್ಷೆ ನಡೆಸಿದರೆ ಹೇಗೆ ಎಂಬ ಚಿಂತನೆ ಮೂಡಿತು. ಅದನ್ನು ಸಾಕಾರ ಮಾಡಿದೆವು. ಪರೀಕ್ಷೆ ಬರೆದ 1.19 ಲಕ್ಷ ವಿದ್ಯಾರ್ಥಿಗಳ ಪೈಕಿ 41961 (ಶೇ 35.21)ರಷ್ಟು ವಿದ್ಯಾರ್ಥಿಗಳು ಪಾಸಾದರು. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸಿತು. ಈ ಪೈಕಿ ಶೇ 43.55ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿದ್ದರು. ಇವರಲ್ಲಿ ಎಂಟು ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಗಮನ ಸೆಳೆದರು. ಇದು ಅವರ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‍ಗಳ ಪ್ರವೇಶಿಸುವ ಕನಸನ್ನು ನನಸು ಮಾಡಲು ಸಹಕಾರ ಮಾಡಿತು. ಇದು ನಮ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದರ ಜತೆಗೆ ಹೊಸ ದಿಕ್ಕಿನತ್ತ ಯೋಚಿಸಲು ದಾರಿ ಮಾಡಿಕೊಟ್ಟಿತು. ವರ್ಷಕ್ಕೆ ಎರಡು ಪೂರಕ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದನ್ನು ಮನಗಂಡು ಪ್ರತಿ ವರ್ಷ ಹೀಗೇ ಮಾಡಿದರೆ ಹೇಗೆ ಎಂಬ ವಿಚಾರ ಮಂಡಳಿ ಮತ್ತು ಇಲಾಖೆಗೆ ಬಂದಿತು. ಆಗ ನಡೆದ ಚರ್ಚೆ ಸಂದರ್ಭದಲ್ಲಿ ಪೂರಕ ಪರೀಕ್ಷೆ ಬದಲಿಗೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ವಾರ್ಷಿಕ ಪರೀಕ್ಷೆಯಂತೆಯೇ ನಡೆಸಿದರೆ ಹೇಗೆ ಎಂಬ ಯೋಚನೆ ಬಂದಿತು. ಅದರ ಸಾಧಕ– ಬಾಧಕಗಳ ಬಗ್ಗೆ ವಿಚಾರ ವಿಮರ್ಶೆಗಳನ್ನು ಮಾಡಿದ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಾರ್ಷಿಕ ಪರೀಕ್ಷೆ 1 2 ಮತ್ತು 3 ಎಂದು ಮೂರು ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಪ್ರಕಟಿಸಿದರು. ಈ ಕುರಿತು ನಡೆಯುತ್ತಿದ್ದ ಚರ್ಚೆಗಳ ಸಂದರ್ಭದಲ್ಲಿ ನಾವು ಇತರ ರಾಜ್ಯಗಳ ಪರೀಕ್ಷಾ ಮಂಡಳಿಗಳು ಸಿಬಿಎಸ್‍ಇ ಮತ್ತು ಐಸಿಎಸ್‍ಇ ನಡೆಸುವ ಪರೀಕ್ಷೆಗಳನ್ನು ಪರಿಶೀಲಿಸಿದ್ದೆವು. ಎಲ್ಲೂ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ವಿಧಾನ ಅಳವಡಿಕೆಯಲ್ಲಿಲ್ಲ. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಮಾದರಿಯನ್ನು ಅಳವಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ಯಾವುದೇ ರಾಜ್ಯ ಅಥವಾ ಮಂಡಳಿಗಳು ನಮ್ಮ ಈ ವಿಧಾನ ಅಳವಡಿಸಿಕೊಂಡರೆ ಅದು ‘ಕರ್ನಾಟಕ ಮಾದರಿ’ ಎಂದು ಕರೆಸಿಕೊಳ್ಳಬಹುದು ಎನ್ನುತ್ತಾರೆ ಗೋಪಾಲಕೃಷ್ಣ.

ಶಿಕ್ಷಕರಿಗೆ ಹೊರೆ: ಶಿಕ್ಷಣ ಇಲಾಖೆಯಲ್ಲಿ ಬೋಧಕರಿಗೆ ವಿದ್ಯಾರ್ಥಿಗಳಿಗೆ ದಸರಾ ಬೇಸಿಗೆ ರಜೆ ಇರುತ್ತದೆ. ವಾರ್ಷಿಕ ಪರೀಕ್ಷೆಯ ಬಳಿಕ ಬೇಸಿಗೆ ರಜೆ ನಿಗದಿಯಾಗಿರುತ್ತದೆ. ಆದರೆ ಈ ಬಾರಿಯಿಂದ ವಾರ್ಷಿಕ ಮೂರು ಪರೀಕ್ಷೆ ನಡೆಸುವುದರಿಂದ ಬೇಸಿಗೆ ರಜೆ ಸಿಗುತ್ತದೆಯೇ ಎಂಬ ಆತಂಕ ಬೋಧಕರನ್ನು ಕಾಡುತ್ತಿದೆ. ಮಾರ್ಚ್‍ನಿಂದ ಜುಲೈವರೆಗೆ ಪರೀಕ್ಷೆ ಮೌಲ್ಯಮಾಪನ ಫಲಿತಾಂಶ ಪ್ರಕಟ ಕಾರ್ಯಗಳಲ್ಲಿಯೇ ನಿರತರಾಗಬೇಕಾಗುತ್ತದೆ. ಹೀಗಿರುವಾಗ ರಜೆ ಎಲ್ಲಿ ಸಿಗುತ್ತದೆ ಎಂಬುದು ಬೋಧಕರ ಅಳಲು. ಮೂರು ಪರೀಕ್ಷೆಗಳನ್ನು ಮಾಡುವುದಾದರೆ ಇತರ ಇಲಾಖೆಗಳಂತೆ ಶಿಕ್ಷಣ ಇಲಾಖೆಯನ್ನೂ ರಜೆ ರಹಿತ ಇಲಾಖೆ ಎಂದು ಘೋಷಿಸಿ ಇತರ ಇಲಾಖಾ ಸಿಬ್ಬಂದಿಗೆ ಇರುವ ಸವಲತ್ತುಗಳನ್ನೂ ಬೋಧಕರಿಗೂ ವಿಸ್ತರಿಸಬೇಕು ಎಂಬುದು ಬೋಧಕರ ಸಂಘಗಳ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT