ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಮಗ ಇಷ್ಟಪಟ್ಟಿದ್ದು ಮಾರುಕಟ್ಟೆಗೆ!

Last Updated 14 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರಿನ ರಾಜಾಜಿನಗರದಲ್ಲಿರುವ ‘ಸ್ನ್ಯಾಕ್‌ಸಮಯ’ ಸಂಧ್ಯಾ ಚೈತನ್ಯ ಅವರ ವಿನೂತನ ಪ್ರಯತ್ನದ ಫಲ. ಈ ಉದ್ಯಮವು ಮನೆಯಲ್ಲಿಯೇ ತಯಾರಿಸಿದ ಪೌಷ್ಟಿಕ ಇಟಾಲಿಯನ್ ಮತ್ತು ಕಾಂಟಿನೆಂಟಲ್ ಆಹಾರಗಳನ್ನು ಒದಗಿಸುತ್ತದೆ. ಇಲ್ಲಿ ದೊರಕುವ ಪಿಜ್ಜಾಕ್ಕೆ ಸಂಬಂಧಿಸಿದ ‘ರೆಡಿ2ಮೇಕ್‌’ ಉತ್ಪನ್ನಗಳು, ಮರೀನೇಷನ್‌ಗಳು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ತಯಾರಾದವು. ಸಿದ್ಧ ಆಹಾರವನ್ನೇ ಬಯಸುವವರಿಗಾಗಿ ಕೂಡ ಸಂಧ್ಯಾ ತಮ್ಮ ‘ರೆಡಿ2ಈಟ್’ ವ್ಯವಸ್ಥೆ ಅಡಿಯಲ್ಲಿ ಆಹಾರ ಪೂರೈಸುತ್ತಾರೆ.

ಗ್ರಾಹಕರ ವಿಭಿನ್ನ ಡಯಟ್ ಮತ್ತು ಆಹಾರ ಶೈಲಿಗಳನ್ನು ಗಮನದಲ್ಲಿಟ್ಟುಕೊಂಡು, ‘ಸ್ನ್ಯಾಕ್‌ಸಮಯ’ವು ವೇಗನ್, ಗ್ಲುಟನ್ ಮುಕ್ತ, ಲೋ-ಕಾರ್ಬ್, ಫರ್ಮೆಂಟ್ ಮಾಡಿರದ ಹಿಟ್ಟು, ಬೆಳ್ಳುಳ್ಳಿ ಇಲ್ಲದ ಸಾಸ್ ಇತ್ಯಾದಿಗಳನ್ನು ಒದಗಿಸುತ್ತದೆ. ಸಂಧ್ಯಾ ಅವರು ಹೇಳುವಂತೆ ಇದು ‘ನನ್ನ ಅಡುಗೆ ಮನೆಯಲ್ಲಿ, ನಿಮಗಾಗಿ, ಮನೆಯಲ್ಲೇ ತಯಾರಿಸಿದ ಆಹಾರ.’

ಸಂಧ್ಯಾ ಅವರು ತಮ್ಮ ಮಗನಿಗೆ ಸೂಕ್ತ ಪೌಷ್ಟಿಕ ಆಹಾರದ ಬಗ್ಗೆ ತಿಳಿಯಲು ಮಾಡಿದ ಪ್ರಯತ್ನದ ಫಲವಾಗಿ ‘ಸ್ನ್ಯಾಕ್‌ಸಮಯ’ ಜನಿಸಿತು. ಹೊರಗಡೆ ಪೌಷ್ಟಿಕ ಆಹಾರ ಸಿಗುವುದು ಬಹಳ ಸೀಮಿತ ಎಂಬುದು ಸಂಧ್ಯಾ ಅವರಿಗೆ ಮನವರಿಕೆಯಾಯಿತು. ಇದಕ್ಕೆ ತಾವೇ ಏನಾದರೂ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಅವರು ಮಾಡಿದರು. ಹಲವಾರು ರೀತಿಯ ಆಹಾರ ಪದಾರ್ಥಗಳೊಡನೆ ಪ್ರಯೋಗ ಮಾಡಲಾರಂಭಿಸಿದರು. ಮೈದಾ ಹಿಟ್ಟಿನ ಬದಲು ಗೋಧಿ ಹಿಟ್ಟು ಮತ್ತು ಜೋಳ, ಸಜ್ಜೆಯಂತಹ ಆರೋಗ್ಯಕರ ಧಾನ್ಯಗಳನ್ನು ಬಳಸಲು ಪ್ರಾರಂಭಿಸಿದರು. ಪ್ರೊಟೀನ್‌ ಮಾತ್ರವಲ್ಲದೆ ಇತರ ಪೌಷ್ಟಿಕ ಅಂಶಗಳೂ ಮಗನ ಮೆನುವಿನಲ್ಲಿ ಇರುವಂತೆ ನೋಡಿಕೊಂಡರು.

ತಾವು ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಇತರ ಮಕ್ಕಳು ಕೂಡ ಬಹಳ ಇಷ್ಟಪಡುವುದನ್ನು ಗಮನಿಸಿದ ಸಂಧ್ಯಾ ಅವರಿಗೆ ಒಂದಿಷ್ಟು ಅಚ್ಚರಿಯೂ ಆಯಿತು. ತಮ್ಮ ಪರಿಚಯದ ತಾಯಂದಿರೊಡನೆ ಮಾತುಕತೆ ಆಡುವಾಗ, ಅವರೂ ಇತರೆ ಪೌಷ್ಟಿಕ ಖಾದ್ಯಗಳನ್ನು ತಯಾರಿಸಲು ಉತ್ಸುಕರಾಗಿದ್ದು, ಸಮಯದ ಅಭಾವದಿಂದಾಗಿ ಅವರು ಹಿಂಜರಿಯುತ್ತಿರುವುದು ಗಮನಕ್ಕೆ ಬಂತು. ಈ ಸಮಸ್ಯೆಯನ್ನು ಸಂಧ್ಯಾ ಅವಕಾಶವನ್ನಾಗಿ ಬಳಸಿಕೊಂಡರು. ಇದು ಅವರ ‘ರೆಡಿ2ಮೇಕ್’ ಶ್ರೇಣಿಗೆ ನಾಂದಿಯಾಯಿತು.

ಸಂಧ್ಯಾ

ಯಾವುದೇ ಉದ್ಯಮದ ಯಶಸ್ಸಿಗೆ ಬಲವಾದ ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ವಾತಾವರಣ ಅತ್ಯವಶ್ಯಕ. ಸ್ನ್ಯಾಕ್‌ಸಮಯ ಇದಕ್ಕೆ ಹೊರತಲ್ಲ. ಸಂಧ್ಯಾ ಅವರಿಗೆ ಜೊತೆಗಾರರು ಮತ್ತು ಪತಿ ಚೈತನ್ಯ ಬೆಂಬಲವಾಗಿ ನಿಂತರು. ಅವರಿಂದ ದೊರೆತ ಪ್ರೋತ್ಸಾಹದ ಫಲವಾಗಿ ಸಂಧ್ಯಾ ಅವರು ನವೀನ ಮತ್ತು ಸುಧಾರಿತ ಆಹಾರ ಆವಿಷ್ಕರಿಸಿದರು. ಸಿದ್ಧಪಡಿಸಿದ ಆಹಾರ ಚೆನ್ನಾಗಿದೆಯೋ, ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುವ ಕೆಲಸವನ್ನು 10 ವರ್ಷ ವಯಸ್ಸಿನ ಮಗ ಮಾಧವ ನಿರ್ವಹಿಸಿದ. ಅವನು ಯಾವ ಖಾದ್ಯ ಇಷ್ಟಪಟ್ಟನೋ ಅದನ್ನು ಮಾತ್ರ ಮಾರುಕಟ್ಟೆಗೆ ಪೂರೈಸಲಾಯಿತು!

ಸಂಧ್ಯಾ ಎದುರಿಸಿದ ದೊಡ್ಡ ಸವಾಲು ಆತ್ಮವಿಶ್ವಾಸಕ್ಕೆ ಸಂಬಂಧಿಸಿದ್ದಾಗಿತ್ತು. ನೌಕರಿಯಲ್ಲಿ ಇದ್ದಾಗ ಅವರಿಗೆ ತಮ್ಮದೇ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುವಷ್ಟೂ ಸಮಯವಿರಲಿಲ್ಲ. ಹೀಗಾಗಿ ಒಬ್ಬ ಉದ್ಯಮಶೀಲ ಮಹಿಳೆಗೆ ಬೇಕಿರುವ ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಪರಿವರ್ತಿಸಿಕೊಳ್ಳುವುದು ಸಂಧ್ಯಾ ಅವರಿಗೆ ಸವಾಲಾಗಿ ಪರಿಣಮಿಸಿತು. ತಮ್ಮ ಮನಃಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕೆಂದು ಅವರು ಅರಿತರು. ಸ್ವಂತ ಉದ್ಯಮವೆಂದರೆ 24x7 ಉದ್ಯಮಶೀಲ ರಾಗಿರುವುದು, ವಿಶ್ರಾಂತಿ ಅಥವಾ ರಜೆ ತೆಗೆದುಕೊಳ್ಳುವುದನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಿಕೊಳ್ಳುವುದು ಎಂಬುದನ್ನು ಅರಿತರು. ಅನೇಕ ಅನಿಶ್ಚಿತತೆ, ಅಸ್ಪಷ್ಟತೆಗಳನ್ನು ಎದುರಿಸಲು ಅವರು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕಾಯಿತು. ಇದು ಅವರನ್ನು ಒಂಟಿತನಕ್ಕೆ ಈಡು ಮಾಡಿತು. ಅಂದುಕೊಂಡ ವಿಚಾರಗಳಲ್ಲಿ ಬಲವಾದ ನಂಬಿಕೆ ಹೊಂದಿರಬೇಕಾದುದು ಅತ್ಯಗತ್ಯ. ಆಲೋಚನೆಗಳನ್ನು ಹೇಳಿಕೊಳ್ಳಲು ಹೆಚ್ಚಿನ ಅವಕಾಶವಿಲ್ಲದಿದ್ದರೂ, ಉತ್ಪನ್ನಗಳ ಬಗ್ಗೆ ಮತ್ತೊಬ್ಬರೊಂದಿಗೆ ವಿಚಾರ ಹಂಚಿಕೊಳ್ಳಬೇಕು, ಅವರಿಂದ ಅಭಿಪ್ರಾಯ ಪಡೆಯಬೇಕು ಎಂಬುದನ್ನು ಕಂಡುಕೊಂಡರು. ಹೀಗಾಗಿ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳುವುದೆಂದರೆ ಸಂಧ್ಯಾ ಅವರ ಪಾಲಿಗೆ ಹೊಸ ವ್ಯಕ್ತಿತ್ವವನ್ನೇ ರೂಪಿಸಿಕೊಂಡಂತಾಯಿತು.

ಕೋವಿಡ್ ಪರಿಣಾಮವಾಗಿ ಸಂಧ್ಯಾ ಅವರಿಗೆ ದೊಡ್ಡ ಅವಕಾಶಗಳು ತೆರೆದುಕೊಂಡವು! ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ಇರಬೇಕಾದುದು ಅನಿವಾರ್ಯವಾದ ಕಾರಣ ಜನ ಬಗೆಬಗೆಯ ಆಹಾರಕ್ಕಾಗಿ ಹಂಬಲಿಸತೊಡಗಿದರು. ಅವರ ಬಯಕೆಗೆ ಅನುಗುಣವಾಗಿ ‘ರೆಡಿ2ಮೇಕ್’ ಶ್ರೇಣಿಯ ಆಹಾರ ಉತ್ಪನ್ನಗಳು ಪರಿಹಾರ ನೀಡಿದವು. ಈ ಶ್ರೇಣಿಯ ಉತ್ಪನ್ನಗಳನ್ನು ಬಳಸಿ ತಾಯಂದಿರು ಅಲ್ಪ ಸಮಯದಲ್ಲೇ ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಲು ಪ್ರಾರಂಭಿಸಿದರು.

ಈ ಅವಕಾಶವನ್ನು ಬಳಸಿಕೊಂಡ ಸಂಧ್ಯಾ ಇನ್ನೂ ಹೆಚ್ಚಿನ ವೈವಿಧ್ಯಮಯ ಉತ್ಪನ್ನಗಳನ್ನು ಪರಿಚಯಿಸಿದರು. ಬಾಯಿಮಾತಿನ ಮೂಲಕ ಹರಡಿದ ಸುದ್ದಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಅಡುಗೆ ಮನೆಯ ಕೆಲಸಗಳ ಒತ್ತಡದಿಂದ ಬಳಲಿದ ಗೃಹಿಣಿಯರಿಗಾಗಿ ಸಂಧ್ಯಾ ‘ರೆಡಿ2ಈಟ್’ ಶ್ರೇಣಿಯ ಆಹಾರವನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಉದ್ಯಮಶೀಲರಿಗೆ ಸಂಧ್ಯಾ ಅವರ ಸಂದೇಶವೆಂದರೆ: ‘ನಿಮ್ಮ ಕನಸನ್ನು ಜೀವಂತವಾಗಿಡಿ. ಕಟ್ಟುಕತೆಗಳ ಲೋಕದಿಂದ ಹೊರಬಂದು ನಿಮ್ಮ ಕನಸನ್ನು ನನಸಾಗಿಸಲು ದೃಢ ಹೆಜ್ಜೆಗಳನ್ನಿಡಿ. ನಿಮ್ಮ ಗುರಿಯ ಕಡೆ ಸಾಗುವ ಪ್ರತಿಯೊಂದು ಮಾರ್ಗದಲ್ಲೂ ಮುಂದುವರಿಯಲು ಪ್ರಯತ್ನಿಸಿರಿ. ಮನಸ್ಸು ಮಾಡಿದಲ್ಲಿ ಗುರಿಯನ್ನು ಖಂಡಿತ ತಲುಪಬಹುದು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT