ಭಾನುವಾರ, ಮೇ 16, 2021
22 °C

ತಾಂತ್ರಿಕ ಶಿಕ್ಷಣ: ಸ್ನಾತಕೋತ್ತರ, ಪಿಎಚ್‌.ಡಿ. ಪಡೆಯಲು ಐರ್ಲೆಂಡ್‌ನಲ್ಲಿ ಬೇಡಿಕೆ

ಸಂದರ್ಶನ: ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ವಿದ್ಯಾರ್ಥಿಗಳು ಸ್ನಾತಕೋತ್ತರ, ಪಿಎಚ್‌.ಡಿ. ಪದವಿ ಪಡೆಯಲು ವಿದೇಶಗಳತ್ತ ಮುಖ ಮಾಡುತ್ತಿರುವುದು ಈಗ ಹೊಸ ವಿಷಯವೇನಲ್ಲ. ಅಮೆರಿಕ, ಫ್ರಾನ್ಸ್, ಸ್ವೀಡನ್‌, ಐರ್ಲೆಂಡ್.. ಹೀಗೆ ಬೇರೆ ಬೇರೆ ದೇಶಗಳು ಭಾರತೀಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸದಾ ತೆರೆದ ಬಾಗಿಲು. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳು ಸಂಶೋಧನೆ ಹಾಗೂ ಉನ್ನತ ಶಿಕ್ಷಣದ ಸಲುವಾಗಿ ಐರ್ಲೆಂಡ್‌ ದೇಶವನ್ನು ಆಯ್ದುಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಶಿಕ್ಷಣದ ಮೇಲೆ ವಿಶೇಷ ಗಮನ ಹರಿಸುವ ಐರ್ಲೆಂಡ್‌ನ ಡಬ್ಲಿನ್ ವಿಶ್ವವಿದ್ಯಾಲಯದ ಎಕ್ಸಿಕ್ಯುಟಿವ್ ಡೀನ್ ಲೀಸಾ ಲೂನಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಐರ್ಲೆಂಡ್ ದೇಶದ ಶಿಕ್ಷಣ, ಎಂಜಿನಿಯರಿಂಗ್, ಕಂಪ್ಯೂಟರ್ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಿದ್ದಾರೆ.


ಲೀಸಾ ಲೂನಿ

* ಐರ್ಲೆಂಡ್‌ನಲ್ಲಿನ ಶಿಕ್ಷಣದ ಕುರಿತು ತಿಳಿಸಿ.

ಶಿಕ್ಷಣ ಎಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿರುವ ಮಾಧ್ಯಮ. ಪ್ರಪಂಚದಲ್ಲೇ ಐರ್ಲೆಂಡ್ ದೇಶ ಶೈಕ್ಷಣಿಕ ವಿಷಯದಲ್ಲಿ 10ನೇ ಸ್ಥಾನದಲ್ಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಕ್ಕೆ ಶೈಕ್ಷಣಿಕ ಇತಿಹಾಸವೇ ಇದೆ. 150 ವರ್ಷಗಳಿಂದ ಐರ್ಲೆಂಡ್ ಶೈಕ್ಷಣಿಕ ಹಿನ್ನೆಲೆಯ ಕಾರಣಕ್ಕೆ ಹೆಸರು ಗಳಿಸಿದೆ. ನಮ್ಮಲ್ಲಿ ಶಿಕ್ಷಕ ವೃತ್ತಿಯನ್ನು ಜನರು ಬಹಳ ಪ್ರೀತಿಸುತ್ತಾರೆ. ಕಲಿಸುವುದೆಂದರೆ ಅವರಿಗೆ ಬಹಳ ಪ್ರೀತಿ. 18 ವರ್ಷದವರೆಗೂ ಸಂಪೂರ್ಣ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾರೆ. ಇದರಿಂದ ಅವರ ಉತನ್ನ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಐರ್ಲೆಂಡ್‌ ಸರ್ಕಾರವೂ ಶಿಕ್ಷಣಕ್ಕೆ ತುಂಬ ಪ್ರಾಮುಖ್ಯ ನೀಡಿದೆ. ಆ ಕಾರಣಕ್ಕೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಒಟ್ಟಾರೆ ಶೈಕ್ಷಣಿಕ ಪ್ರಾಮುಖ್ಯವೇ ಐರ್ಲೆಂಡ್ ದೇಶದ ಆಸ್ತಿ ಎಂದರೂ ತಪ್ಪಾಗಲಿಕ್ಕಿಲ್ಲ.

* ನಿಮ್ಮ ಡಬ್ಲಿನ್ ಸಿಟಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಹಾಗೂ ಕಂಪ್ಯೂಟಿಂಗ್ ವಿಭಾಗದ ವಿಶೇಷತೆಗಳೇನು?‌

ನಮ್ಮ ವಿಶ್ವವಿದ್ಯಾಲಯವೂ ಅಗ್ರ ಶ್ರೇಣಿಯ ರ‍್ಯಾಂಕಿಂಗ್ ಪಡೆಯುವ ವಿಶ್ವವಿದ್ಯಾಲಯಗಳಲ್ಲಿ ಒಂದು. ನಮ್ಮದು ಉದ್ಯಮಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿದೆ. ಆ ಕಾರಣಕ್ಕೆ ಪ್ರತಿ ವರ್ಷವೂ ಶೇ 100 ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಈ ಮೂರು ವಿಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ವಿಭಾಗಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳಿಗೆ ಹೆಚ್ಚು ಒತ್ತು ನೀಡುತ್ತೇವೆ. ಪದವಿಯಲ್ಲಿ ಬಯೋ ಮೆಡಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್‌ ಎಂಜಿನಿಯರಿಂಗ್, ಮೆಕೆಟ್ರಾನಿಕ್ಸ್, ರೋಬೊಟಿಕ್ಸ್, ಎಲೆಕ್ಟ್ರಾನಿಕ್ ಅಂಡ್ ಕಂಪ್ಯೂಟರ್ ಎಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್, ಡೇಟಾ ಸೈನ್ಸ್‌, ಎಂಟರ್‌ಪ್ರೈಸ್ ಕಂಪ್ಯೂಟಿಂಗ್ (ಇದು ಬ್ಯುಸಿನೆಸ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗಳ ನಡುವಿನ ಕೊಂಡಿ) ವಿಷಯಗಳಿವೆ. ಈ ವಿಷಯಗಳು ಬಿ.ಎಸ್‌ಸಿ. ಕೋರ್ಸ್‌ನಲ್ಲಿ ಬರುತ್ತವೆ. ಈ ಎಲ್ಲಾ ವಿಷಯಗಳಲ್ಲೂ ಕಂಪ್ಯೂಟರ್ ವಿಷಯಗಳು ಇರುವುದರಿಂದ ವಿದ್ಯಾರ್ಥಿಗಳು ತಮ್ಮದೇ ವೆಬ್‌ಸೈಟ್ ಹಾಗೂ ಆ್ಯಪ್‌ಗಳನ್ನು ರಚಿಸಿಕೊಳ್ಳಬಹುದು.

* ಸಂಶೋಧನೆ ಅವಕಾಶಗಳು ಹಾಗೂ ಪ್ರಾಧ್ಯಾಪಕರ ಬಗ್ಗೆ ತಿಳಿಸಿ.

ನಮ್ಮಲ್ಲಿ ಸಂಶೋಧನೆ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಅದರಲ್ಲೂ ನಮ್ಮ ವಿಶ್ವವಿದ್ಯಾಲಯಕ್ಕೆ ಸೇರುವ ಅರ್ಧದಷ್ಟು ಸ್ಕಾಲರ್‌ಗಳು ಸಂಶೋಧನೆ ಮುಗಿಸಿರುತ್ತಾರೆ ಅಥವಾ ಸಂಶೋಧನೆ ಮೇಲೆ ಕೆಲಸ ಮಾಡುತ್ತಿರುತ್ತಾರೆ. ಐರಿಶ್ ಸರ್ಕಾರವೂ ಸಂಶೋಧನೆಗೆ ಸಹಕಾರ ನೀಡುತ್ತದೆ. ನಮ್ಮಲ್ಲಿ ಮೂರು ರಾಷ್ಟ್ರಮಟ್ಟದ ಸಂಶೋಧನೆ ಕೇಂದ್ರಗಳಿವೆ. ಅದರಲ್ಲಿ ಒಂದು ಸಂಶೋಧನೆಯಲ್ಲಿ ಮೂಲಭೂತ ವಿಷಯವನ್ನು ಕಲಿಸುವಂತಹದ್ದು, ಇನ್ನೊಂದು ಮುಂದಿನ ಜನಾಂಗಕ್ಕೆ ನೆರವಾಗುವಂತಹ ಭಾಷಾಂತರ, ರಾಷ್ಟ್ರೀಯ ಭಾಷೆ ಪ್ರೋಸೆಸಿಂಗ್ ಹಾಗೂ ಇನ್ನೊಂದು ಭವಿಷ್ಯದ ಉತ್ಪಾದನೆ ಕುರಿತಾದದ್ದು. ಅಷ್ಟೇ ಅಲ್ಲದೇ ಸಂಶೋಧನೆ ಮಾಡುವವರಿಗೆ ಸರ್ಕಾರ, ಉದ್ಯಮಗಳು ಆರ್ಥಿಕ ನೆರವು ನೀಡುತ್ತವೆ. ಕಂಪನಿಗಳು ಸಂಶೋಧನ ಅಭ್ಯರ್ಥಿಗಳಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತವೆ. ಜೊತೆಗೆ ಉದ್ಯಮಗಳ ಮೇಲೆ ಸಂಶೋಧನೆ ಮಾಡುವುದರಿಂದ ಅವರಿಗೂ ಅದರಿಂದ ನೆರವು ದೊರಕುತ್ತದೆ. ನಮ್ಮಲ್ಲಿ ದೊಡ್ಡ ಮಟ್ಟದ ಸಂಶೋಧನೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ನೆರವು ನೀಡಲು ಪ್ರಾಧ್ಯಾಪಕರ ಜೊತೆಗೆ ಹಿರಿಯ ವಿಜ್ಞಾನಿಗಳೂ ಇದ್ದಾರೆ. ಇದಕ್ಕೆ ಸರಿಯಾದ ಪ್ರಯೋಗಾಲಯಗಳು ಹಾಗೂ ಇತರ ವ್ಯವಸ್ಥೆಗಳಿದ್ದು, ವಿದ್ಯಾರ್ಥಗಳಿಗೆ ಅನುಕೂಲಕರ.

* ವಿದ್ಯಾರ್ಥಿವೇತನ ಸೌಲಭ್ಯಗಳು ಇವೆಯೇ?

ಐರ್ಲೆಂಡ್‌ನಲ್ಲಿ ಪಿಎಚ್‌.ಡಿ. ಮಾಡಲು ಬರುವ ವಿದ್ಯಾರ್ಥಿಗಳಿಗೆ ವಿಶೇಷವಾದ ಸ್ಕಾಲರ್‌ಶಿಪ್ ಪ್ರೋಗ್ರಾಂಗಳಿವೆ. ಇಲ್ಲಿ ಸ್ನಾತಕೋತ್ತರ ಪದವಿ ಮಾಡುವವರಿಗೆ ಕೆಲವೊಂದು ಉದ್ಯಮಗಳು ಸ್ಕಾಲರ್‌ಶಿಪ್‌ಗಳನ್ನು ನೀಡುತ್ತವೆ. ಆದರೆ ಅವರು ವಿಶ್ವವಿದ್ಯಾಲಯಕ್ಕೆ ಸೇರಿದ ಬಳಿಕವಷ್ಟೇ ಅವರು ಆ ಸ್ಕಾಲರ್‌ಶಿಪ್ ಪಡೆದುಕೊಳ್ಳಲು ಸಾಧ್ಯ. ನಮ್ಮಲ್ಲಿ ಅನೇಕ ಕಂಪನಿಗಳು ಸ್ನಾತಕೋತ್ತರ ಓದುವವರಿಗಾಗಿ ಸ್ಕಾಲರ್‌ಶಿಪ್‌ಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತವೆ.

* ಸ್ನಾತಕೋತ್ತರ ಮುಗಿಸಿದವರಿಗೆ ಉದ್ಯೋಗಾವಕಾಶಗಳು ಹೇಗಿವೆ?

ವಿದ್ಯಾಭ್ಯಾಸ ಮುಗಿದ ಮೇಲೂ ಎರಡು ವರ್ಷಗಳ ಕಾಲ ನಮ್ಮ ದೇಶದಲ್ಲಿ ಅದೇ ವೀಸಾದಲ್ಲಿ ಇರಬಹುದು. ಆಗ ಬೇರೆ ದೇಶದ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಅಲ್ಲಿಯೇ ಉದ್ಯೋಗ ಮಾಡಬಹುದು. ಆಮೇಲೆ ಕಂಪನಿಯೇ ತಮ್ಮ ಉದ್ಯೋಗಿಗಳಿಗೆ ವೀಸಾದ ವ್ಯವಸ್ಥೆ ಮಾಡುತ್ತದೆ. ಜೊತೆಗೆ ನಮ್ಮಲ್ಲಿ ಕ್ಯಾಂಪಸ್ ಸಂದರ್ಶನಗಳು, ಉದ್ಯೋಗ ಮೇಳಗಳು ನಡೆಯುತ್ತಿರುತ್ತವೆ. ಅದರೊಂದಿಗೆ ವಿದ್ಯಾರ್ಥಿಗಳಲ್ಲಿ ಮ್ಯಾನೇಜ್‌ಮೆಂಟ್ ಕೌಶಲ ಹಾಗೂ ಸಂದರ್ಶನ ಕೌಶಲಗಳನ್ನು ಹೆಚ್ಚಿಸಲು ವಿಶೇಷ ತರಗತಿಗಳನ್ನು ಆಯೋಜಿಸುತ್ತೇವೆ.

* ಹಾಸ್ಟೆಲ್ ವ್ಯವಸ್ಥೆ ಹೇಗಿದೆ?

ನಮ್ಮ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬರುವ ಕಾಲೇಜುಗಳಲ್ಲೇ ಹಾಸ್ಟೆಲ್ ವ್ಯವಸ್ಥೆ ಇದೆ. ಜೊತೆಗೆ ಕ್ಯಾಂಪಸ್‌ಗೆ ಸಮೀಪವಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಲೇಜಿನ ವತಿಯಿಂದ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಭಾರತದಿಂದ ಬರುವ ಅನೇಕ ವಿದ್ಯಾರ್ಥಿನಿಯರು ಕ್ಯಾಂಪಸ್ ಒಳಗಡೆಯೇ ಉಳಿದುಕೊಳ್ಳುವಂತಹ ವ್ಯವಸ್ಥೆ ಬಯಸುತ್ತಾರೆ.

ಐರ್ಲೆಂಡ್‌ನಲ್ಲಿ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವ ವಿಧಾನ

ಐರ್ಲೆಂಡ್‌ನಲ್ಲಿ ಶಿಕ್ಷಣ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಯಾವ ವಿಶ್ವವಿದ್ಯಾಲಯಕ್ಕೆ ನೀವು ಸೇರಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬೇಕು. ಅರ್ಜಿಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಿರಬೇಕು.

ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ನಿಮ್ಮ ಮೊಬೈಲ್ ಸಂಖ್ಯೆಗೆ ಕರೆಬರುತ್ತದೆ ಅಥವಾ ಸ್ಕೈಪ್ ಮೂಲಕ ಸಂಪರ್ಕ ಮಾಡುತ್ತಾರೆ. ಅವರು ನೀವು ಆಯ್ಕೆ ಮಾಡ ಬಯಸುವ ಕೋರ್ಸ್, ವಿಶ್ವವಿದ್ಯಾಲಯ, ವೀಸಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುತ್ತಾರೆ. ಜೊತೆಗೆ ವಸತಿ ವ್ಯವಸ್ಥೆಗಳ ಬಗ್ಗೆಯೂ ತಿಳಿಸುತ್ತಾರೆ.

ಅಷ್ಟೇ ಅಲ್ಲದೇ ಭಾರತದಲ್ಲಿ ಅನೇಕ ಕನ್ಸಲ್ಟೆನ್ಸಿಗಳು ಇದಕ್ಕಾಗಿ ಕೆಲಸ ಮಾಡುತ್ತಿದ್ದು ಅವುಗಳ ಸಹಾಯದಿಂದಲೂ ಐರ್ಲೆಂಡ್‌ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಪಡೆಯಬಹುದು.

ವಿದ್ಯಾರ್ಥಿವೇತನ ಸೌಲಭ್ಯ‌

ಐರ್ಲೆಂಡ್ ವಿಶ್ವವಿದ್ಯಾಲಯಗಳಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಒಟ್ಟು ಖರ್ಚಿನ ಶೇ 50 ರಿಂದ 100ರವರೆಗೆ ವಿದ್ಯಾರ್ಥಿವೇತನ ಸೌಲಭ್ಯವಿದೆ. ಐರ್ಲೆಂಡ್‌ನ ಯಾವುದೇ ವಿಶ್ವವಿದ್ಯಾಲಯಕ್ಕೆ ಸೇರಿದ ಮೇಲೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿಯ ಸಂಪೂರ್ಣ ವಿವರ ಪರಿಶೀಲಿಸಿ ವಿದ್ಯಾರ್ಥಿವೇತನ ಪಡೆದುಕೊಳ್ಳಲು 8 ರಿಂದ 12 ತಿಂಗಳು ಕಾಯುವುದು ಅನಿವಾರ್ಯ.

ಐರ್ಲೆಂಡ್ ಸರ್ಕಾರ ಮತ್ತು ಐರಿಶ್ ವಿಶ್ವವಿದ್ಯಾಲಯಗಳ ಸಂಘವು ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೊಳಿಸಿದೆ. ಭಾರತೀಯ ವಿದ್ಯಾರ್ಥಿಗಳು ಇದಕ್ಕೆ ಅರ್ಹರಾಗಿದ್ದು ಜೀವನ ವೆಚ್ಚ ಮತ್ತು ಪೂರ್ಣ ಬೋಧನಾ ಶುಲ್ಕವನ್ನು ಅರ್ಹ ವಿದ್ಯಾರ್ಥಿಗಳು ಪಡೆಯಬಹುದು. ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಅವಕಾಶವನ್ನು ಬಳಸಿಕೊಳ್ಳಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು