ಸೋಮವಾರ, ಜೂಲೈ 13, 2020
24 °C

ಭೂಮಿಕಾ: ಮಕ್ಕಳಿಗೆ ಅರ್ಥಶಾಸ್ತ್ರದ ಪಾಠ!

ಕೋಕಿಲ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಅಮ್ಮಾ, ಈ ಸಲ ಹುಟ್ಟಿದ ಹಬ್ಬಕ್ಕೆ ಹೊಸ ಸೈಕಲ್ ಕೊಡಿಸ್ತೀನಿ ಅಂತ ಹೇಳಿದ್ದೆ ಅಲ್ವಾ? ಮತ್ಯಾಕೆ ಕೊಡಿಸ್ತಿಲ್ಲ? ನಾಳೆಯೇ ಅಲ್ವಾ ಹುಟ್ಟುಹಬ್ಬ ಇರೋದು. ಸ್ಕೂಲಲ್ಲಿ ಮ್ಯಾಮ್‌ಗೂ ಹೇಳಿದ್ದೆ. ಈಗ ವಾಪಸ್ ಸ್ಕೂಲಿಗೆ ಹೋದಾಗ ಅವರು ಕೇಳಿದ್ರೆ ಏನ್‌ ಹೇಳೋದು? ಈಗ ನೋಡಿದ್ರೆ ಹೊರಗೆ ಹೋಗೊ ಹಾಗಿಲ್ಲ ಅಂತ ಒಂದ್ಸರಿ ಹೇಳ್ತಿಯಾ, ಮತ್ತೊಂದ್ಸಲ ಕೊರೊನೊ ಬಂದಿರೋದ್ರಿಂದ ದುಡ್ಡಿಲ್ಲ ಅಂತಿಯಾ. ಅಪ್ಪನ ಹತ್ರ ಇರೋ ದುಡ್ಡು ಸಾಕಲ್ವ ಸೈಕಲ್‌ಗೆ. ನೀನೀಗ ಕೊಡಿಸ್ಲಿಲ್ಲ ಅಂದ್ರೆ ನಿನ್ನ ಜೊತೆ ಠೂ ಬಿಟ್ಟು ನಾನು ಅಮ್ಮಮ್ಮನ ಮನೆಗೆ ಹೋಗ್ತಿನಿ ಅಷ್ಟೆ’.

ನಾಲ್ಕು ವರ್ಷದ ಮಗ ಹೀಗೆಲ್ಲಾ ಕೇಳುವಾಗ ಅವನಿಗೆ ಈಗಿನ ಪರಿಸ್ಥಿತಿಯ ಬಗ್ಗೆ ವಿವರಿಸಿದರೂ ಅರ್ಥ ಮಾಡಿಕೊಳ್ಳುವ ವಯಸ್ಸಲ್ಲ. ಆದರೂ ಒಂದಷ್ಟು ವಿಚಾರಗಳನ್ನು ಹೇಳಿ ಅವನನ್ನು ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗಿತ್ತು. ಒಂದು ಕ್ಷಣ ಸುಮ್ಮನೆ ಕೂತವನು ಮತ್ತೊಂದು ಪ್ರಶ್ನೆಯನ್ನ ಮುಂದಿಟ್ಟ. ‘ಸರಿ, ಈ ಕೊರೊನಾ ಬರ್ಥ್‌ಡೇ ಯಾವಾಗ ಹೇಳು? ಆವಾಗ್ಲೆ ನಂಗೆ ಸೈಕಲ್ ಕೊಡಿಸುವೆಯಂತೆ, ಹಾಗಂತ ಪ್ರಾಮಿಸ್ ಮಾಡು’ ಎಂಬ ಮಾತು ಆ ಪುಟ್ಟ ಬಾಯಿಂದ ಬಂದಾಗ ಅಷ್ಟು ಹೊತ್ತು ಕಷ್ಟಪಟ್ಟು ಮಾಡಿದ ಸಮಾಧಾನ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗಿತ್ತು.

ಆರ್ಥಿಕ ಸಂಕಷ್ಟ

ಬಹುಶಃ ಸಾಕಷ್ಟು ಮನೆಗಳಲ್ಲಿನ ಪೋಷಕರ ಪರಿಸ್ಥಿತಿಯು ಹೆಚ್ಚೂ ಕಮ್ಮಿ ಹೀಗೇ ಇರಬಹುದು. ಕೋವಿಡ್‌–19 ಎಂಬ ಸಾಂಕ್ರಾಮಿಕ ರೋಗ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿಸಿದೆ. ಪ್ರತಿದಿನದ ಆಗುಹೋಗುಗಳಲ್ಲಿ ಆಗಿರುವ ಬದಲಾವಣೆ ಹೇಳಲಸದಳ. ಆರ್ಥಿಕ ಸ್ಥಿತಿಯಲ್ಲಂತೂ ಸಾಕಷ್ಟು ಬದಲಾವಣೆಗಳನ್ನು ತಂದು ಬಿಟ್ಟಿದೆ. ಎಷ್ಟೋ ಮಂದಿಯ ಉದ್ಯೋಗ ನಷ್ಟವಾಗಿದೆ. ವೇತನ ಕಡಿತದ ಭಯ ಕಾಡುತ್ತಿದೆ. ಸಣ್ಣಪುಟ್ಟ ಉದ್ಯಮ ನೆಲಕಚ್ಚಿದೆ. ಕೂಡಿಟ್ಟ ಹಣ ಎಷ್ಟು ದಿನ ಬಂದೀತು!

ಮಧ್ಯಮ ವರ್ಗದ ಕುಟುಂಬದಲ್ಲಿ ಕೂಡ ಕಷ್ಟಪಟ್ಟು ನಿತ್ಯದ ಆಗುಹೋಗುಗಳಿಗೆ ಹಣ ಹೊಂದಿಸುತ್ತಿದ್ದಾರೆ. ಮುಂದೇನು ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ಆದರೆ ಇದನ್ನೆಲ್ಲ ಮಕ್ಕಳಿಗೆ ಅರ್ಥಮಾಡಿಸುವುದು ಪೋಷಕರ ಮುಂದಿರುವ ದೊಡ್ಡ ಪ್ರಶ್ನೆ. ಚಿಕ್ಕ ಮಕ್ಕಳಿಗೆ ಅರ್ಥವಾಗುವುದು ಕಷ್ಟ ಹಾಗೆಯೇ ದೊಡ್ಡ ಮಕ್ಕಳಿಗೆ ಪರಿಸ್ಥಿಯ ಬಗ್ಗೆ ಅರ್ಥವಾದರೂ ಅದರ ಗಂಭೀರತೆಯ ಆಳ ಗೊತ್ತಾಗುತ್ತಿಲ್ಲ. ಇದೇ ಮೊದಲ ಬಾರಿಗೆ ಇಡೀ ಜೀವಮಾನದಲ್ಲಿ ಎಲ್ಲರೂ ಇಂತಹದೊಂದು ಸಂದರ್ಭವನ್ನು ಎದುರಿಸುತ್ತಿದ್ದೇವೆ. ಆದರೆ ಹಣದ ಅವಶ್ಯಕತೆ, ಮಿತವ್ಯಯ, ಪರ್ಯಾಯ ವಸ್ತುಗಳ ಬಳಕೆ, ಜರೂರು ಅವಶ್ಯಕತೆಗಳಿಗೆ ಮಾತ್ರ ವೆಚ್ಚ ಮಾಡುವ ಬಗೆ... ಹೀಗೆ ಸಾಕಷ್ಟು ವಿಷಯಗಳನ್ನು ಮಕ್ಕಳಿಗೆ ಬೇಸರ, ನೋವಾಗದಂತೆ ಅರ್ಥಮಾಡಿಸುವ ಅವಶ್ಯಕತೆ ಇದೆ.

ಚಿಕ್ಕ ಮಕ್ಕಳಿಗೆ ತಿಳಿ ಹೇಳುವ ಬಗೆ

ದಿಢೀರನೆ ಮನೆಯಲ್ಲಿ ಆದ ಬದಲಾವಣೆ ಮಕ್ಕಳಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ. ನೇರವಾಗಿ ಅರ್ಥವಾಗದೇ ಇದ್ದರೂ ತಂದೆ ತಾಯಿಯರಲ್ಲಿ ಆಗಿರುವ ಬದಲಾವಣೆಗಳನ್ನು ಅವರು ಸುಲಭವಾಗಿ ಗುರುತಿಸಬಲ್ಲರು. ಭಾವನಾತ್ಮಕವಾಗಿ ಹೇಳಲು ಪ್ರಯತ್ನಿಸಿ. ಪದೆ ಪದೆ ಹಣದ ವಿಚಾರವಾಗಿ ಮಕ್ಕಳ ಮುಂದೆ ಜೋರಾಗಿ ಮಾತಾಡುವುದು ಬೇಡ. ಅದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸಾಧ್ಯವಾದಷ್ಟು ಪರ್ಯಾಯ ವಸ್ತುಗಳ ಬಳಕೆಯನ್ನು ತಿಳಿಸಿಕೊಡಿ. ಉದಾಹರಣೆಗೆ ಬೇಕರಿ ತಿನಿಸುಗಳನ್ನು ಕೇಳಿದರೆ ಮನೆಯಲ್ಲಿಯೇ ಏನಾದರೂ ಮಾಡಿಕೊಡಿ. ನೋಟ್‌ಬುಕ್‌ನಲ್ಲಿ ಖಾಲಿ ಉಳಿದ ಹಾಳೆಗಳಲ್ಲಿ ಬರೆಯಲು ಹೇಳಿ.

ವೈರಸ್‌ ಮತ್ತು ಅದರಿಂದಾಗುವ ಪರಿಣಾಮದ ಬಗ್ಗೆ ಆಗಾಗ ತಿಳಿಸಿಕೊಡಿ. ಭಯ ಹುಟ್ಟಿಸುವುದು ಬೇಡ. ಆಟಿಕೆ, ಗೊಂಬೆಗಳನ್ನು ಬಳಸಿ ಕಥೆಯ ರೂಪದಲ್ಲಿ ತಿಳಿ ಹೇಳಬಹುದು.

ಸಮಾಧಾನಪಡಿಸುವ ಭರದಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಬೇಡಿ. ಮನೆಯ ನಿಜವಾದ ಪರಿಸ್ಥಿತಿ, ಹೊರಗಿನ ಚಿತ್ರಣವನ್ನು ಅರ್ಥೈಸಿ.

ಮಕ್ಕಳೊಟ್ಟಿಗೆ ಹೆಚ್ಚು ಸಮಯ ಕಳೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನೀವು ಚಿಕ್ಕವರಿದ್ದಾಗ ಆಡಿದ ಆಟಗಳನ್ನು ಮಕ್ಕಳೊಟ್ಟಿಗೆ ಆಡಿ ಅವರಿಗೂ ಕಲಿಸಿ. ಇದರಿಂದ ಅವರು ಹೊಸ ಆಟಿಕೆಗಳನ್ನು ಕೇಳುವುದನ್ನು ತಪ್ಪಿಸಬಹುದು. ವರ್ಷಗಳು ಕಳೆದರೂ ಅವರು ನೀವು ಹೇಳಿಕೊಟ್ಟ, ಅವರೊಟ್ಟಿಗೆ ಆಡಿದ ಆಟಗಳನ್ನು ನೆನೆಸಿಕೊಳ್ಳುತ್ತಾರೆ.

ದೊಡ್ಡ ಮಕ್ಕಳಿಗೆ..

ವಿಷಯ ತಿಳಿದು ಪರಿಸ್ಥಿತಿಯ ಗಂಭೀರತೆ ಅರ್ಥವಾದರೂ ಕೆಲವೊಮ್ಮೆ ದೊಡ್ಡ ಮಕ್ಕಳು ಹಣಕಾಸಿನ ವಿಚಾರದಲ್ಲಿ ಹಟ ಮಾಡುತ್ತಾರೆ. ಮೊಬೈಲ್ ರೀಚಾರ್ಜ್ ಆಗಿರಬಹುದು ಅಥವಾ ಆಸೆಪಟ್ಟ ಉಡುಪು, ಶೂ ಅಥವಾ ಬೈಕ್‌ನಂತಹ ವಸ್ತುಗಳಿಗಾಗಿರಬಹುದು. ಚಿಕ್ಕವರಿಗೆ ಹೇಳಿದ ಕಥೆಗಳು ಇಲ್ಲಿ ಕೆಲಸ ಮಾಡಲಾರವು. ಹಾಗಾಗಿ ಮನೆಯವರೆಲ್ಲರೂ ಒಟ್ಟಾಗಿ ಕೂತು ಮಾತನಾಡುವುದೇ ಸರಿಯಾದ ಉಪಾಯ. ಊಟದ ನಂತರವೋ ಅಥವಾ ಮಧ್ಯಾಹ್ನದ ಸಮಯದಲ್ಲಿಯೋ ಎಲ್ಲರೂ ಕೂತು ಮನೆಯ ಪರಿಸ್ಥಿತಿಯ ಬಗ್ಗೆ ಮಾತಾಡುವುದು ಒಳ್ಳೆಯದು. ಇರುವ ವಿಚಾರವನ್ನು ನೇರವಾಗಿ ಹೇಳಿ ಅರ್ಥೈಸಿ.

ಮನೆ ಖರ್ಚನ್ನು ಕಡಿಮೆ ಮಾಡಲು ಒಂದಿಷ್ಟು ಉಪಾಯಗಳನ್ನು ಮಕ್ಕಳಿಂದಲೂ ಕೇಳಿ. ಎಲ್ಲೆಲ್ಲಿ ಅನಗತ್ಯವಾಗಿ ಮಾಡುತ್ತಿರುವ ವ್ಯಯವನ್ನು ಕಡಿಮೆ ಮಾಡಬಹುದು ಎಂಬುದನ್ನು ಬರೆದಿಡಲು ಹೇಳಿ. ಇದರಿಂದ ಅವರೂ ಮನೆಯ ಬಗ್ಗೆ ಯೋಚಿಸಿದಂತಾಗುತ್ತದೆ ಜೊತೆಗೆ ಅವರ ಅಭಿಪ್ರಾಯಕ್ಕೂ ಮನ್ನಣೆ ಸಿಕ್ಕಂತಾಗುತ್ತದೆ.

ಮನೋತಜ್ಞರು ಹೇಳುವ ಪ್ರಕಾರ ಹಣಕಾಸು ಸಂಬಂಧಿ ವಿಚಾರಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಜಾಸ್ತಿ. ಹಾಗಾಗಿ ಮಕ್ಕಳ ಮುಂದೆ ಕೂಗಾಡುವ ಬದಲು ನಿಜವಾದ ಸಮಸ್ಯೆಯನ್ನು ವಿವರಿಸಿ.

ಮಕ್ಕಳು ನಾವು ಹೇಳಿದಂತೆ ಮಾಡುವುದಕ್ಕಿಂತ ನಾವು ಮಾಡುವುದನ್ನು ನೋಡಿ ಕಲಿಯುವುದೇ ಹೆಚ್ಚು. ಹಾಗಾಗಿ ಹಣಕಾಸಿನ ವಿಚಾರದಲ್ಲಿ ನಾವು ಹೇಗೆ ವರ್ತಿಸುತ್ತೇವೆಯೋ ಅದನ್ನೇ ಅವರೂ ಅನುಸರಿಸುತ್ತಾರೆ

ಕಥೆಗಳ ಮೂಲಕ ಪಾಠ

ಚಿಕ್ಕ ಮಕ್ಕಳಿಗೆ ಮಿತವ್ಯಯದ ಬಗ್ಗೆ ಕಥೆಗಳನ್ನು ಹೇಳುವುದರ ಮೂಲಕ ಅರ್ಥೈಸಬಹುದು. ಅವರ ಆಲೋಚನೆಗಳಿಗೆ ಬಣ್ಣ ತುಂಬುವ ಕಥೆಗಳೇ ಅವರಿಗೆ ಅತ್ಯಂತ ಹತ್ತಿರ. ಉದಾಹರಣೆಗೆ, ‘ನಾಲ್ಕು ಜನ ಸ್ನೇಹಿತರು ಒಂದಿನ ಬೆಟ್ಟ ಹತ್ತೋದಕ್ಕೆ ನಿರ್ಧಾರ ಮಾಡಿದ್ರು. ನಾಲ್ವರೂ ತಮ್ಮ ತಮ್ಮ ಬ್ಯಾಗುಗಳಲ್ಲಿ ಒಂದೊಂದು ನೀರಿನ ಬಾಟಲ್‌ ತಂದಿದ್ರು. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಮೊದಲನೆಯ ಸ್ನೇಹಿತ ಅರ್ಧಕ್ಕಿಂತ ಹೆಚ್ಚು ನೀರನ್ನು ಕುಡಿದು ಖಾಲಿ ಮಾಡಿದ್ದ, ಉಳಿದವರು ಸ್ವಲ್ಪ ಕುಡಿದಿದ್ದರು. ನಾಲ್ಕನೆಯವನು ಮೊದಲನೆಯವನಿಗೆ ‘ನಾವಿನ್ನೂ ಹತ್ತುವುದು ತುಂಬಾ ಇದೆ. ಈಗಲೇ ನೀನು ಹೆಚ್ಚು ನೀರು ಕುಡಿದರೆ ಹತ್ತಲು ಕಷ್ಟವಾಗುವುದರ ಜೊತೆಗೆ ಬೇಗನೆ ನೀರು ಖಾಲಿಯಾಗುತ್ತದೆ’ ಎಂದ. ಅವನ ಮಾತನ್ನು ಕೇಳದ ಮೊದಲನೇಯವನು ಅರ್ಧ ಹತ್ತುವಷ್ಟರಲ್ಲಿ ಪೂರ್ತಿ ನೀರನ್ನು ಖಾಲಿಮಾಡಿಬಿಟ್ಟ. ನಂತರ ಮೇಲೆ ಹತ್ತಲು ಆಗದೆ ಆಯಾಸದಿಂದ ಅಲ್ಲಿಂದ ಕೆಳಗಿಳಿದ. ಉಳಿದವರು ಪೂರ್ತಿ ಬೆಟ್ಟ ಹತ್ತಿ ಆನಂದದಿಂದ ಕೆಳಗಿಳಿದರು. ನಾವೂ ಕೂಡ ಹಾಗೆ ಈಗ ಇರುವ ಸ್ವಲ್ಪ ಹಣವನ್ನೆ ಮತ್ತೆ ಕೆಲಸಕ್ಕೆ ಹೋಗುವವರೆಗೆ ಬಳಸಬೇಕು ಇಲ್ಲವಾದರೆ ದಿನನಿತ್ಯದ ಅವಶ್ಯಕತೆಗೂ ಇಲ್ಲದಂತಾಗುತ್ತದೆ’ ಎಂಬುದನ್ನು ಮನದಟ್ಟು ಮಾಡಿಸಬಹುದು.

(ಲೇಖಕಿ ಉಪನ್ಯಾಸಕಿ, ತುಮಕೂರು ವಿಶ್ವವಿದ್ಯಾಲಯ ತುಮಕೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು