ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ಅಭಿವೃದ್ಧಿ, ಗ್ಯಾರಂಟಿ ನನ್ನ ಚುನಾವಣಾ ಅಸ್ತ್ರ–DK ಸುರೇಶ್

ಗೆಲುವು ತೀರ್ಮಾನಿಸುವುದು ಮತದಾರರೇ ಹೊರತು ಮೋದಿ–ಶಾ ಅಲ್ಲ | ಹಿಂದೆ ಅನಧಿಕೃತ ಮೈತ್ರಿ ಎದುರಿಸಿದ್ದೇನೆ, ಈಗ ಅಧಿಕೃತ ಮೈತ್ರಿ ಎದುರಿಸುತ್ತಿದ್ದೇನೆ ಅಷ್ಟೇ
Published 21 ಏಪ್ರಿಲ್ 2024, 7:28 IST
Last Updated 21 ಏಪ್ರಿಲ್ 2024, 7:28 IST
ಅಕ್ಷರ ಗಾತ್ರ

ಸಂಸತ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್. ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಸಲ ಕಣಕ್ಕಿಳಿದಿದ್ದಾರೆ. ಗೆಲುವಿಗಾಗಿ ಉರಿ ಬಿಸಿಲು ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸುರೇಶ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಕಳೆದ ಮೂರು ಚುನಾವಣೆಗಳಿಗಿಂತ ಈ ಸಲದ ಚುನಾವಣೆಯಲ್ಲಿ ನಿಮಗಿರುವ ಸವಾಲುಗಳೇನು? ಬಿಜೆಪಿ–ಜೆಡಿಎಸ್ ಮೈತ್ರಿಯಿಂದ ಸ್ಪರ್ಧೆ ತುರುಸುಗೊಂಡಿದೆಯೇ?

– ಅಂತಹ ಯಾವುದೇ ಸವಾಲು ನನಗೆ ಕಾಣುತ್ತಿಲ್ಲ. ನನ್ನ ಚುನಾವಣಾ ರಾಜಕೀಯ ಕಾರ್ಯಶೈಲಿಯಲ್ಲೂ ಬದಲಾವಣೆ ಆಗಿಲ್ಲ. ಜನರು ಕೊಟ್ಟ ಅಧಿಕಾರದಿಂದ ಅವರ ಜೊತೆಗಿದ್ದುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ಈಗ ಅವರ ಬಳಿಗೆ ಹೋಗಿ ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಬಿಜೆಪಿ–ಜೆಡಿಎಸ್‌ ಮೈತ್ರಿ ಹೊಸತೇನಲ್ಲ. ಹಿಂದಿನ ಚುನಾವಣೆಗಳಲ್ಲಿ ಅವರಿಬ್ಬರ ಅಧಿಕೃತ ಮತ್ತು ಅನಧಿಕೃತ ಹೊಂದಾಣಿಕೆಯ ರಾಜಕೀಯ ಎದುರಿಸಿ ಗೆದ್ದಿದ್ದೇನೆ. ಅಸ್ತಿತ್ವಕ್ಕಾಗಿ ಬಿಜೆಪಿ ಅಪ್ಪಿಕೊಂಡಿರುವ ಜೆಡಿಎಸ್‌ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.

* ತೆರಿಗೆ ಅನ್ಯಾಯದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ನೀವು ಎತ್ತಿದ ದನಿಯು ನಿಮ್ಮ ಗೆಲುವಿಗೆ ಎಷ್ಟು ಪೂರಕವಾಗಲಿದೆ?

– ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಆಗಿರುವ ಅನ್ಯಾಯದ ಕುರಿತು ನಾನು ಪ್ರಸ್ತಾಪ ಮಾಡಿದ್ದೇನೆಯೇ ಹೊರತು ಬೇರೆನೂ ಅಲ್ಲ. ಯುವಜನರು, ರೈತರು ಹಾಗೂ ಜನಸಾಮಾನ್ಯರ ಸಮಸ್ಯೆ ಕುರಿತು ಗಮನ ಸೆಳೆದಿದ್ದೇನೆ. ನನ್ನ ಮಾತುಗಳ ಸತ್ಯಾಸತ್ಯತೆಯನ್ನು ದಾಖಲೆ ಸಮೇತ ಜನರ ಮುಂದಿಟ್ಟಿದ್ದೇನೆ. ನ್ಯಾಯ,ಅನ್ಯಾಯ ಮತ್ತು ಸತ್ಯ,ಸುಳ್ಳಿನ ಕುರಿತು ಜನ ತೀರ್ಮಾನಿಸುತ್ತಾರೆ. ರಾಜಕ್ಕಾಗಿರುವ ಅನ್ಯಾಯದ ವಿರುದ್ಧ ಮತ ಚಲಾಯಿಸುತ್ತಾರೆಂಬ ವಿಶ್ವಾಸವಿದೆ.

* ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿ ನಿಮ್ಮನ್ನು ಟಾರ್ಗೆಟ್ ಮಾಡಿ ಸೋಲಿಸಲು ತಂತ್ರ ಹೆಣೆದಿದೆ ಎಂಬ ಮಾತು ಕೇಳಿ ಬರುತ್ತಿವೆಯಲ್ಲಾ?

– ಯಾರನ್ನು ಗೆಲ್ಲಿಸಬೇಕು ಮತ್ತು ಸೋಲಿಸಬೇಕು ಎಂದು ತೀರ್ಮಾನಿಸುವುದು ಜನ. ಮೋದಿ–ಅಮಿತ್‌ ಶಾ ಜೋಡಿ ಅಲ್ಲ. ಯಾರೇ ಟಾರ್ಗೆಟ್ ಮಾಡಿದರೂ ಅಂತಿಮ ಅಸ್ತ್ರವಿರುವುದು ಜನರ ಕೈಯಲ್ಲಿ. ಬಿಜೆಪಿಯವರು ಸುಳ್ಳು ಭರವಸೆಗಳ ಜೊತೆಗೆ ಆರೋಪ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಎದುರಾಳಿಗಳನ್ನು ಮಣಿಸಲು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ತಾವು ಮಾಡಿರುವ ಕೆಲಸಗಳ ಬಗ್ಗೆ ಹಾಗೂ ಅಭಿವೃದ್ಧಿ ಕುರಿತು ಅವರು ಜನರ ಎದುರು ಮಾತನಾಡಲಿ.

* ನಿಮ್ಮ ವಿರುದ್ಧ ದರ್ಪ, ದೌರ್ಜನ್ಯದ ವೈಯಕ್ತಿಕ ಆರೋಪವನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ–ಜೆಡಿಎಸ್‌ನವರು, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೃದಯವಂತ ಮತ್ತು ಪಕ್ಷಾತೀತವಾಗಿ ಮನ್ನಣೆ ಪಡೆಯಯುತ್ತಿದ್ದಾರೆಂದು ಪ್ರಚಾರ ಮಾಡುತ್ತಿದ್ದಾರಲ್ಲ.

– ಬಿಜೆಪಿಯವರು ಜನರ ಭಾವನೆ ಕೆರಳಿಸುವ ಹಾಗೂ ವೈಯಕ್ತಿಕ ವಿಷಯ ಬಿಟ್ಟರೆ ಎಂದಾದರೂ ಅಭಿವೃದ್ಧಿ ವಿಷಯಗಳ ಕುರಿತು ಮಾತನಾಡಿದ್ದಾರೆಯೇ? ಮಾಡಿದ್ದರೆ ತಾನೇ ಮಾತನಾಡುವುದು. ಮತದಾರರಿಂದ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಎರಡೂ ಪಕ್ಷಗಳ ಮುಖಂಡರು ಕಾಂಗ್ರೆಸ್‌ನತ್ತ ಬರುತ್ತಿರುವುದುರು ಮೈತ್ರಿ ಪಕ್ಷಗಳ ನಿದ್ದೆಗೆಡಿಸಿದೆ. ಅದಕ್ಕಾಗಿಯೇ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಎರಡೂ ಪಕ್ಷದವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಇಷ್ಟಕ್ಕೂ ಮಂಜುನಾಥ್ ಒಬ್ಬರೇ ಹೃದಯವಂತರೇ. ಅವರಿಗೆ ಮಾತ್ರ ಹೃದಯವಿದೆಯೇ? ಉಳಿದವರಿಗೆ ಇಲ್ಲವೆ? ಜನರ ಕಷ್ಟಕ್ಕೆ ಮಿಡಿಯುವವರು ನಿಜವಾದ ಹೃದಯವಂತರು. ಆ ಕೆಲಸವನ್ನು ನಾನು ಮತ್ತು ನನ್ನ ಪಕ್ಷ ಮಾಡಿಕೊಂಡು ಬಂದಿದೆ.

* ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಮ್ಮ ಕೈ ಹಿಡಿಯಲಿವೆಯೇ?

– ಕಾಂಗ್ರೆಸ್ ಗೆಲುವಿಗೆ ಗ್ಯಾರಂಟಿ ಯೋಜನೆ ನೆರವಾಗಲಿವೆ ಎಂಬ ವಿಶ್ವಾಸವಿದೆ. ಸಂಕಷ್ಟದಲ್ಲಿದ್ದ ಜನರನ್ನು ಯೋಜನೆಗಳು ತಲುಪಿವೆ. ಮಹಿಳೆಯರಷ್ಟೇ ಅಲ್ಲದೆ ಇಡೀ ಕುಟುಂಬದ ಸಬಲೀಕರಣಕ್ಕೆ ಕಾರಣವಾಗಿವೆ. ಅವುಗಳು ತಂದಿರುವ ಬದಲಾವಣೆ ಕುರಿತು ಜನರೇ ಮಾತನಾಡುತ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಕಾಂಗ್ರೆಸ್‌ಗೆ ಮತದಾರರು ಗೆಲುವಿನ ಕಾಣಿಕೆ ಕೊಡಲಿದ್ದಾರೆ. ಏನೂ ಕೆಲಸ ಮಾಡದ ಬಿಜೆಪಿ–ಜೆಡಿಎಸ್‌ನವರು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ನಾನು, ಗ್ಯಾರಂಟಿ ಯೋಜನೆ ಮತ್ತು ನನ್ನ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳುತ್ತಾ ಮತ ಕೇಳುತ್ತಿದ್ದೇನೆ.

* ನಿಮ್ಮ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ, ಅಭಿವೃದ್ಧಿಯನ್ನೇ ಮಾಡಿಲ್ಲ ಎಂದು ಎದುರಾಳಿಗಳು ಆರೋಪಿಸುತ್ತಿದ್ದಾರಲ್ಲ?

– ಬಿಜೆಪಿವರು ಅಪಪ್ರಚಾರ ಮತ್ತು ಟ್ರೋಲ್ ಮಾಡುವುದರಲ್ಲಿ ನಿಸ್ಸೀಮರು. ಸುಳ್ಳು ಅವರ ಬಂಡವಾಳ. ಜಾತಿ–ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಾ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಈಗ ಜೆಡಿಎಸ್‌ನವರೂ ಅವರೊಂದಿಗೆ ಸೇರಿಸಿಕೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಇದೆ ಎನ್ನುವವರು, ಎಲ್ಲಿದೆ ಎಂದು ತೋರಿಸಲಿ. ಅಭಿವೃದ್ಧಿ ಮಾಡಿಲ್ಲ ಎನ್ನುವವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿ ಕೆಲಸಗಳೇ ನನಗೆ ಚುನಾವಣಾ ಅಸ್ತ್ರ. ಕ್ಷೇತ್ರದಾದ್ಯಂತ ಅದಕ್ಕೆ ಸಾಕ್ಷಿಗಳಿವೆ.

* ಈ ಚುನಾವಣೆ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ನಿಮ್ಮ ಸಹೋದರ ಡಿ.ಕೆ. ಶಿವಕುಮಾರ್‌ ಅವರಿಗೂ ಪ್ರತಿಷ್ಠೆಯಾಗಿದೆ ಅಲ್ಲವೆ?

– ಹಾಗೇನಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಅವರ ನಾಯಕತ್ವದಲ್ಲಿ ಎಲ್ಲರೂ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಮುಖ್ಯಮಂತ್ರಿ ಹುದ್ದೆ ಕುರಿತು ಸದ್ಯ ಯಾವುದೇ ಚರ್ಚೆ ನಡೆದಿಲ್ಲ. ಆದರೆ, ಶಿವಕುಮಾರ್ ಅವರು ಸಹ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿದೆ. 

* ಕ್ಷೇತ್ರಕ್ಕೆ ನಿಮ್ಮ ಅಭಿವೃದ್ಧಿ ಅಜೆಂಡಾ ಏನು? ಜನ ಯಾಕೆ ಮತ ಹಾಕಬೇಕು?

– ನಾನು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಮತ ಹಾಕಿ ಎಂದು ಕೇಳುತ್ತಿದ್ದೇನೆ. ನಾನು ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಮುಂದಡಿ ಇಟ್ಟಿದ್ದೇನೆ. ಇವೆಲ್ಲವೂ ಸಾಕಾರವಾಗಬೇಕಾದರೆ ಜನ ಮತ್ತೊಮ್ಮೆ ನನಗೆ ಅವಕಾಶ ನೀಡಬೇಕು.

* ನಿಮ್ಮ ಎದುರಾಳಿ ಡಾ. ಸಿ.ಎನ್. ಮಂಜುನಾಥ್ ಕುರಿತು ನಿಮ್ಮ ಅಭಿಪ್ರಾಯವೇನು?

– ಅವರೊಬ್ಬ ಉತ್ತಮ ವೈದ್ಯರು. ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡರ ಅಳಿಯ, ಎಚ್‌.ಡಿ. ಕುಮಾರಸ್ವಾಮಿ ಅವರ ಬಾಮೈದ ಅಷ್ಟೆ.

"ಇಷ್ಟಕ್ಕೂ ಮಂಜುನಾಥ್ ಒಬ್ಬರೇ ಹೃದಯವಂತರೇ. ಅವರಿಗೆ ಮಾತ್ರ ಹೃದಯವಿದೆಯೇ? ಉಳಿದವರಿಗೆ ಇಲ್ಲವೆ? ಜನರ ಕಷ್ಟಕ್ಕೆ ಮಿಡಿಯುವವರು ನಿಜವಾದ ಹೃದಯವಂತರು. ಆ ಕೆಲಸವನ್ನು ನಾನು ಮತ್ತು ನನ್ನ ಪಕ್ಷ ಮಾಡಿಕೊಂಡು ಬಂದಿದೆ"
– ಡಿ.ಕೆ. ಸುರೇಶ್‌, ಬೆಂ.ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT