ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಅಖಾಡದಲ್ಲಿ ಕಾಡುವ ಕುಶಲಿಗಳ ಗೈರು

ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಕಣವನ್ನು ಕಳೆಗಟ್ಟಿಸಿದ್ದ ನಾಯಕರು
Published 11 ಏಪ್ರಿಲ್ 2024, 0:30 IST
Last Updated 11 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಕೆಲವು ರಾಜಕೀಯ ಮುಖಂಡರು ತಮ್ಮ ತಂತ್ರಗಾರಿಕೆ, ಮುಂಗಾಣ್ಕೆ, ಬುದ್ಧಿಮತ್ತೆಗಳಿಂದ ಚುನಾವಣಾ ಕಣವನ್ನು ರಂಗೇರಿಸುತ್ತಾರೆ. 2019ರ ಲೋಕಸಭಾ ಚುನಾವಣೆಯವರೆಗೆ ಹಾಗೆ ಕ್ರಿಯಾಶೀಲವಾಗಿದ್ದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಹಲವು ನಾಯಕರ ಗೈರುಹಾಜರಿ ಗಮನ ಸೆಳೆಯುತ್ತಿದೆ

ನವದೆಹಲಿ: ಅತ್ಯುತ್ತಮ ‘ನೇಪಥ್ಯದ ತಂತ್ರಗಾರ’ ಎನಿಸಿದ್ದ ಅಹ್ಮದ್ ಪಟೇಲ್ ಅವರಿಂದ ಹಿಡಿದು ‘ಕಾರ್ಯತಂತ್ರ ನಿಪುಣ’ ಅರುಣ್ ಜೇಟ್ಲಿವರೆಗೆ ಕಳೆದ ಕೆಲವು ದಶಕಗಳಲ್ಲಿ ಭಾರತದ ಚುನಾವಣಾ ಕಣವನ್ನು ತಮ್ಮ ತಂತ್ರ, ಪ್ರತಿತಂತ್ರ, ಕೌಶಲಗಳಿಂದ ಕಳೆಗಟ್ಟಿಸಿದ್ದ ನಾಯಕರ ಅನುಪಸ್ಥಿತಿ ಪ್ರಸ್ತುತ ಚುನಾವಣೆಯಲ್ಲಿ ಎದ್ದುಕಾಣುತ್ತಿದೆ.

ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಕಣದಿಂದ ದೂರ ಉಳಿದಿದ್ದರೆ, ಅಹ್ಮದ್ ಪಟೇಲ್, ‘ಭವಿಷ್ಯಕಾರ’ ರಾಮ್‌ವಿಲಾಸ್ ಪಾಸ್ವಾನ್, ಹಿರಿಯ ಸಮಾಜವಾದಿ ಮುಲಾಯಂ ಸಿಂಗ್ ಮತ್ತು ‘ಕೋಶಾಧಿಕಾರಿ’ ಮೋತಿಲಾಲ್ ವೋರಾ ಅಸ್ತಂಗತರಾಗಿದ್ದಾರೆ.

ಆಸಕ್ತಿಕರ ಗೈರುಹಾಜರಿ ಎಂದರೆ, ಅದು ಮಾಯಾವತಿ ಅವರದ್ದು. ಪಕ್ಷದ ಜನಪ್ರಿಯ ನಾಯಕಿಯಾಗಿ ದಲಿತ ಮತಗಳ ಮುಖ್ಯ ಪಾಲನ್ನು ತಮ್ಮದಾಗಿಸಿಕೊಳ್ಳುತ್ತಿದ್ದ ಅವರು, ಪಕ್ಷದ ನೇತೃತ್ವವನ್ನು ತಮ್ಮ ಸೋದರಳಿಯ ಮತ್ತು ಉತ್ತರಾಧಿಕಾರಿಯಾದ ಆಕಾಶ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದರೂ ಮಾಯಾವತಿ ಸಾರ್ವಜನಿಕ ವೇದಿಕೆಗಳಿಂದ ದೂರ ಉಳಿದಿರುವುದು ಏಕೆ ಎನ್ನುವುದರ ಬಗ್ಗೆ ಬಿಎಸ್‌ಪಿಯ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. 

ಆಗೀಗ ‘ಎಕ್ಸ್‌’ ವೇದಿಕೆಯಲ್ಲಿ ಪೋಸ್ಟ್ ಮಾಡುವುದನ್ನು ಬಿಟ್ಟರೆ, ಪಕ್ಷದ ಪ್ರಚಾರ ಕಾರ್ಯವನ್ನು ಸಂಪೂರ್ಣವಾಗಿ ಅವರು ಆಕಾಶ್‌ಗೆ ಬಿಟ್ಟುಕೊಟ್ಟಿದ್ದಾರೆ. ಸದ್ಯದ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿಯು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಅವರು ಹಲವು ಬಾರಿ ‘ಎಕ್ಸ್‌’ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. 

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಒಂದು ಕಾಲದ ಸಿಪಿಎಂ ತಾರಾ ಪ್ರಚಾರಕ, ಶತಾಯುಷಿ ವಿ.ಎಸ್‌.ಅಚ್ಯುತಾನಂದನ್ ಅವರು ಸಕ್ರಿಯ ರಾಜಕಾರಣದಿಂದ ದೂರ ಇದ್ದಾರೆ.  

ಕಾಂಗ್ರೆಸ್ ಪಕ್ಷಕ್ಕೆ ಅಹ್ಮದ್ ಪಟೇಲ್ ಅವರ ಗೈರು ಬಹಳ ಕಾಡುತ್ತಿದೆ. ವಾಸ್ತವವಾಗಿ, ಪಕ್ಷವನ್ನು ಮುನ್ನಡೆಸುತ್ತಿದ್ದವರು ಮತ್ತು ಚುನಾವಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದವರೇ ಅವರು. ಚಾಣಾಕ್ಷ ರಾಜಕಾರಣಿಯಾಗಿದ್ದ ಅವರು ಪಕ್ಷದಲ್ಲಿನ ಭಿನ್ನಮತಗಳನ್ನು ನಿಭಾಯಿಸುವುದಲ್ಲದೆ  ಹಣಕಾಸು ವ್ಯವಹಾರಗಳನ್ನು ಕೂಡ ನೋಡಿಕೊಳ್ಳುತ್ತಿದ್ದರು. ಪಟೇಲ್ 2020ರಲ್ಲಿ ನಿಧನರಾದರು.

ಅದೇ ರೀತಿ ಮೋತಿಲಾಲ್ ವೋರಾ, ಕಾಂಗ್ರೆಸ್‌ನ ಹಣಕಾಸು ವ್ಯವಹಾರಗಳನ್ನು ವರ್ಷಾನುಗಟ್ಟಲೇ ನಿಭಾಯಿಸಿದವರು. ಉತ್ತರ ಭಾರತದ ರಾಜಕಾರಣದಲ್ಲಿನ ಜಟಿಲತೆಗಳನ್ನು ಅರಿತಿದ್ದ ವೋರಾ, 2020ರ ಡಿಸೆಂಬರ್‌ನಲ್ಲಿ ನಿಧನರಾಗುವವರೆಗೂ, ಕಾಂಗ್ರೆಸ್ ವರಿಷ್ಠರಿಗೆ ಸಲಹೆ, ಸೂಚನೆ ನೀಡುತ್ತಿದ್ದರು. 

ಇದೇ ರೀತಿ ನಿರ್ಗಮಿಸಿದವರ ಪೈಕಿ ರಾಮ್‌ವಿಲಾಸ್ ಪಾಸ್ವಾನ್ ಕೂಡ ಒಬ್ಬರು. ಚುನಾವಣೆಯ ‘ಗಾಳಿ’ ಯಾವ ದಿಕ್ಕಿನತ್ತ ಬೀಸುತ್ತಿದೆ ಎನ್ನುವುದನ್ನು ಕಂಡುಕೊಳ್ಳುವುದರಲ್ಲಿ ನಿಪುಣರಾಗಿದ್ದ ಅವರು, ಅದಕ್ಕೆ ತಕ್ಕಂತೆ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುತ್ತಿದ್ದರು. ಅಕ್ಟೋಬರ್ 2020ರಲ್ಲಿ ಪಾಸ್ವಾನ್ ನಿಧನದ ನಂತರ ಅವರ ಮಗ ಚಿರಾಗ್ ಪಾಸ್ವಾನ್ ಪಕ್ಷದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಬಿಜೆಪಿಯ ಅರುಣ್ ಜೇಟ್ಲಿ ಅದ್ವಿತೀಯ ಚುನಾವಣಾ ಕಾರ್ಯತಂತ್ರ ನಿಪುಣರಾಗಿದ್ದರು ಮತ್ತು ಸಂಕಥನ ಕಟ್ಟಬಲ್ಲವರಾಗಿದ್ದರು. 2019ರ ಚುನಾವಣೆಯ ಸಮಯದಲ್ಲಿ ಅವರು ಅನಾರೋಗ್ಯದಿಂದಾಗಿ ಕ್ರಿಯಾಶೀಲರಾಗಿರಲಿಲ್ಲ. ಆದರೂ ಪಕ್ಷದ ನಾಯಕರು ಅವರನ್ನು ಆಗಾಗ್ಗೆ ಸಂಪರ್ಕಿಸಿ ಸಲಹೆ ಸೂಚನೆ ಪಡೆಯುತ್ತಿದ್ದರು.

ಪ್ರಸ್ತುತ ಚುನಾವಣಾ ಕಣದಲ್ಲಿ ಕಾಣದಿರುವ ಮತ್ತೊಬ್ಬ ಪ್ರಮುಖ ನಾಯಕನೆಂದರೆ, ಅದು ಸಮಾಜವಾದಿ ಪಕ್ಷದ ಹಿರಿಯ ಮುಖಂಡರಾಗಿದ್ದ ಮುಲಾಯಂ ಸಿಂಗ್ ಯಾದವ್. ದೇಶದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಭಾವಿಯಾಗಿದ್ದ ಅವರು, ರಾಜಕಾರಣದ ಒಳಸುಳಿಗಳನ್ನು ಕರಗತ ಮಾಡಿಕೊಂಡಿದ್ದ ಮೇಧಾವಿಯಾಗಿದ್ದರು.     

2019ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಕಣದಿಂದ ಹೊರಗುಳಿದಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2019ರ ಚುನಾವಣೆ ಅಂತ್ಯಗೊಂಡ ಕೆಲವೇ ತಿಂಗಳಲ್ಲಿ ನಿಧನರಾಗಿದ್ದರು.

ಮಾಯಾವತಿ
ಮಾಯಾವತಿ
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್
ಮೋತಿಲಾಲ್ ವೋರಾ
ಮೋತಿಲಾಲ್ ವೋರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT