ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾದು ನೋಡಿ... ನಮ್ಮ ಫಲಿತಾಂಶ ಮತಗಟ್ಟೆ ಸಮೀಕ್ಷೆಗೆ ವಿರುದ್ಧವಾಗಿರಲಿದೆ: ಸೋನಿಯಾ

Published 3 ಜೂನ್ 2024, 6:44 IST
Last Updated 3 ಜೂನ್ 2024, 6:44 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಜೂನ್‌ 4ರಂದು (ಮಂಗಳವಾರ) ನಡೆಯಲಿದ್ದು, ದೇಶದಾದ್ಯಂತ ಎಲ್ಲ ಕೇಂದ್ರಗಳಲ್ಲಿ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ‘ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲರೂ ಕಾದು ನೋಡಬೇಕಿದೆ. ನಮ್ಮ ಫಲಿತಾಂಶವು ಮತಗಟ್ಟೆ ಸಮೀಕ್ಷೆಗಳಿಗೆ ವಿರುದ್ಧವಾಗಿರಲಿದೆ. ನಿಜವಾದ ಫಲಿತಾಂಶವನ್ನು ನೀವು ನಾಳೆ ನೋಡಲಿದ್ದೀರಿ’ ಎಂದು ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆ 7 ಹಂತಗಳಲ್ಲಿ ನಡೆದಿತ್ತು. ನಾಳೆ (ಮಂಗಳವಾರ) ಫಲಿತಾಂಶ ಪ್ರಕಟವಾಗಲಿದೆ.

‘ಮತಗಟ್ಟೆ ಸಮೀಕ್ಷೆಗಳನ್ನು ‘ಬೋಗಸ್’ ಎಂದು ಕರೆದಿರುವ ಕಾಂಗ್ರೆಸ್, ಇದು ಚುನಾವಣಾ ಅಕ್ರಮವನ್ನು ಸಮರ್ಥಿಸಿಕೊಳ್ಳುವ ‘ಉದ್ದೇಶ ಪೂರ್ವಕ ಪ್ರಯತ್ನ’ ಮತ್ತು ‘ಇಂಡಿಯಾ’ ಕೂಟದ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ ‘ಒತ್ತಡ ತಂತ್ರ’ದ ಭಾಗ ಎಂದು ಭಾನುವಾರ ಟೀಕಿಸಿತ್ತು.

ಪಕ್ಷದ ಸಂಸದರ ಜತೆ ವಿಡಿಯೊ ಸಂವಾದ ನಡೆಸಿದ ನಂತರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇದನ್ನು ಮತಗಟ್ಟೆ ಸಮೀಕ್ಷೆ ಎನ್ನಲಾಗುವುದಿಲ್ಲ. ಇದು ಮೋದಿ ಮಾಧ್ಯಮ ಸಮೀಕ್ಷೆ. ಇದು ಮೋದಿ ಅವರ ಸಮೀಕ್ಷೆ. ಅವರ ಕಾಲ್ಪನಿಕ ಸಮೀಕ್ಷೆ’ ಎಂದು ಹೇಳಿದ್ದರು.

‘ಮತಗಟ್ಟೆ ಸಮೀಕ್ಷೆಗಳು ಚುನಾವಣಾ ಅಕ್ರಮವನ್ನು, ಇವಿಎಂಗಳ ಕೈವಾಡವನ್ನು ಸಮರ್ಥಿಸುವ ಉದ್ದೇಶ ಪೂರ್ವಕ ಪ್ರಯತ್ನ. ನಾವು ಹೆದರಿಕೊಳ್ಳುವುದಿಲ್ಲ. ಮತಗಟ್ಟೆ ಸಮೀಕ್ಷೆಗಳಿಗಿಂತ ಸಂಪೂರ್ಣ ಭಿನ್ನವಾದ, ನಿಜವಾದ ಫಲಿತಾಂಶವನ್ನು ಜೂನ್ 4ರಂದು ನೋಡಲಿದ್ದೀರಿ’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT