ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ಕಾಂಗ್ರೆಸ್ ಸಭೆ: ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಮತ್ತೆ ಆಯ್ಕೆ!

Published 8 ಜೂನ್ 2024, 2:58 IST
Last Updated 8 ಜೂನ್ 2024, 2:58 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಹಾಗೂ ಸಂಸದೀಯ ಪಕ್ಷದ ನಾಯಕರ ಆಯ್ಕೆ ವಿಚಾರವಾಗಿ ಚರ್ಚಿಸಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಹಾಗೂ ಸಂಸದೀಯ ಪಕ್ಷದ (ಸಿಪಿಪಿ) ಸಭೆಗಳು ಇಂದು (ಶನಿವಾರ) ನಡೆಯಲಿವೆ.

ರಾಜ್ಯಸಭೆ ಸದಸ್ಯರು ಹಾಗೂ ಲೋಕಸಭೆಗೆ ಹೊಸದಾಗಿ ಚುನಾಯಿತರಾಗಿರುವ ಸಂಸದ ಸಭೆಯಲ್ಲಿ ಹಾಜರಿರಲಿದ್ದಾರೆ. ಸದ್ಯ ಸಂಸದೀಯ ಪಕ್ಷದ ನಾಯಕಿಯಾಗಿರುವ ಸೋನಿಯಾ ಗಾಂಧಿ ಅವರು ಸ್ಥಾನದಲ್ಲಿ ಮುಂದುವರಿಯುವ ಆಸಕ್ತಿ ತೋರಿಲ್ಲವಾದರೂ, ಅವರನ್ನೇ ಮತ್ತೊಮ್ಮೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಅವರೇ ಮುಂದುವರಿಯಬೇಕು ಎಂಬುದು ಪಕ್ಷದ ಒಮ್ಮತದ ನಿಲುವಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿ ಗೆದ್ದಿದ್ದ ಸೋನಿಯಾ ಸದ್ಯ ಚುನಾವಣಾ ರಾಜಕೀಯ ತ್ಯಜಿಸಿದ್ದಾರೆ. ಆದಾಗ್ಯೂ ಅವರನ್ನು ಈ ವರ್ಷಾರಂಭದಲ್ಲಿ ರಾಜ್ಯಸಭೆಗೆ ಆಯ್ಕೆಮಾಡಲಾಗಿದೆ. ಸೋನಿಯಾ ಪುತ್ರ ರಾಹುಲ್‌ ಗಾಂಧಿ ಈ ಬಾರಿ ರಾಯ್‌ಬರೇಲಿಯಲ್ಲಿ 3.90 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಮೊದಲು, ಸಿಡಬ್ಲ್ಯುಸಿ ಸಭೆ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಬಳಿಕ ನಂತರ ಸಿಪಿಪಿ ಸಭೆ ಆರಂಭವಾಗಲಿದೆ. ಸಮಿತಿ ಸದಸ್ಯರಷ್ಟೇ ಅಲ್ಲದೆ, ಪಕ್ಷದ ಹಿರಿಯ ನಾಯಕರು, ರಾಜ್ಯ ಘಟಕಗಳ ಅಧ್ಯಕ್ಷರೂ ಭಾಗಿಯಾಗಲಿದ್ದಾರೆ. ಎರಡೂ ಸಭೆಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿವೆ.

2024ರಲ್ಲಿ ಚೇತರಿಕೆ
ಹಿಂದಿನ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಈ ಬಾರಿ ಚೇತರಿಸಿಕೊಂಡಿದೆ. 2014ರಲ್ಲಿ 44 ಹಾಗೂ 2019ರಲ್ಲಿ 52 ಸ್ಥಾನಗಳನ್ನಷ್ಟೇ ಗೆದ್ದಿದ್ದ ಈ ಪಕ್ಷ ಈ ಬಾರಿ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಹೆಚ್ಚು ಸ್ಥಾನ ಗೆದ್ದ ಎರಡನೇ ದೊಡ್ಡ ಪಕ್ಷ ಎನಿಸಿಕೊಂಡಿದೆ.

ಕಾಂಗ್ರೆಸ್ ಮಾತ್ರವಲ್ಲದೆ, ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವೂ ಈ ಬಾರಿ ಪ್ರಬಲವಾಗಿದೆ. 234 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಆಡಳಿತ ಪಕ್ಷಕ್ಕೆ ಸಮರ್ಥ ಎದುರಾಳಿಯಾಗಲು ಸಜ್ಜಾಗಿದೆ.

ರಾಹುಲ್‌ ಅವರಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ವಹಿಸಿಕೊಡುವ ಬಗ್ಗೆಯೂ ಸಭೆಗಳಲ್ಲಿ ಚರ್ಚೆಯಾಗಬಹದು.

ಕಳೆದ ಎರಡು ಅವಧಿಗಳಲ್ಲಿ ಲೋಕಸಭೆ ಸದಸ್ಯ ಬಲದ ಶೇ 10ಕ್ಕಿಂತ ಕಡಿಮೆ ಸಂಸದರನ್ನು ಹೊಂದಿದ್ದ ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT