ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಕೇಸರಿ ‘ಪ್ರಯೋಗ’ದ ಸಿ.ಎಂಗಳ ಮುಂದಿದೆ ಸವಾಲು

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕಳೆದೊಂದು ದಶಕದಲ್ಲಿ ಬಿಜೆಪಿ ನೆಚ್ಚಿಕೊಂಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಚರಿಷ್ಮಾವನ್ನು. ಪಕ್ಷವು ಜಾಣ್ಮೆಯ ‘ಸೋಷಿಯಲ್‌ ಎಂಜಿನಿಯರಿಂಗ್‌’ ಸೂತ್ರದ ಮೂಲಕ ಹಳ್ಳಿ ಹಳ್ಳಿಗಳಲ್ಲಿ ತನ್ನ ನೆಲೆ ವಿಸ್ತರಿಸಿದೆ.

***

ನವದೆಹಲಿ: ಹಿಂದಿ ನೆಲದ ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ವಿಧಾನಸಭಾ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿ ಹೊಸ ಪ್ರಯೋಗ ಮಾಡಿತು. ವಾಜ‍ಪೇಯಿ–ಅಡ್ವಾಣಿ ಯುಗದ ನಾಯಕರಾದ ಶಿವರಾಜ ಸಿಂಗ್ ಚೌಹಾಣ್‌, ಅರುಣ್ ಸಿಂಗ್‌ ಹಾಗೂ ವಸುಂಧರಾ ರಾಜೇ ಸಿಂಧಿಯಾ ಅವರು ಹೊಸಬರಿಗೆ ದಾರಿ ಮಾಡಿಕೊಟ್ಟರು. ಲೋಕಸಭಾ ಚುನಾವಣೆಯಲ್ಲಿ ಹೊಸ ತಲೆಮಾರಿನ ಈ ಮುಖ್ಯಮಂತ್ರಿಗಳ ಮುಂದೆ ಭಾರಿ ಸವಾಲಿದೆ. ಪಕ್ಷದ ಹಿರಿಯ ನಾಯಕರ ಒಳ ಏಟು ಹಾಗೂ ಅಸಹಕಾರದ ನಡುವೆ ಎದುರಾಳಿಯ ಸವಾಲನ್ನು ಮೀರಿ ನಿಂತು ಗರಿಷ್ಠ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರಬೇಕಿದೆ. 

2003ರಲ್ಲಿ ನಡೆದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿತ್ತು. ‘ಭಾರತ ‍ಪ್ರಕಾಶಿಸುತ್ತಿದೆ’ ಎಂದು ಅಬ್ಬರದ ಪ್ರಚಾರ ನಡೆಸಿ 2004ರಲ್ಲಿ ಲೋಕಸಭಾ ಚುನಾವಣೆ ಎದುರಿಸಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. 2018ರಲ್ಲಿ ಈ ಮೂರು ರಾಜ್ಯಗಳಲ್ಲಿ ‘ಕೈ’ ಪಾಳಯ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಮೂರು ಕ್ಷೇತ್ರಗಳನ್ನಷ್ಟೇ. ಕೇಸರಿ ಪಾಳಯವು 62 ಕ್ಷೇತ್ರಗಳನ್ನು ಬಾಚಿಕೊಂಡಿತ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 2003ಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಕಳೆದೊಂದು ದಶಕದಲ್ಲಿ ಬಿಜೆಪಿ ನೆಚ್ಚಿಕೊಂಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಚರಿಷ್ಮಾವನ್ನು. ಪಕ್ಷವು ಜಾಣ್ಮೆಯ ‘ಸೋಷಿಯಲ್‌ ಎಂಜಿನಿಯರಿಂಗ್‌’ ಸೂತ್ರದ ಮೂಲಕ ಹಳ್ಳಿ ಹಳ್ಳಿಗಳಲ್ಲಿ ತನ್ನ ನೆಲೆ ವಿಸ್ತರಿಸಿದೆ. ಇತ್ತೀಚಿನ ಚುನಾವಣಾ ಸಾಧನೆ ಗಮನಿಸಿದರೆ ಈ ಪ್ರಯತ್ನದಲ್ಲಿ ಪಕ್ಷಕ್ಕೆ ಭಾರಿ ಯಶಸ್ಸು ಸಿಕ್ಕಿದೆ.

ಈ ನಡುವೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಹೀನಾಯ ಸೋಲಿನ ನಂತರ ಕಾಂಗ್ರೆಸ್‌ ಪಕ್ಷವು ‘ನಾಯಕತ್ವ ಬದಲಾವಣೆ’ ಪ್ರಕ್ರಿಯೆ ನಡೆಸಿದೆ. ಎರಡನೇ ತಲೆಮಾರಿನ ನಾಯಕರಿಗೆ ಮಣೆ ಹಾಕಿದೆ. ಮಧ್ಯಪ್ರದೇಶದಲ್ಲಿ ಹಿರಿಯ ನಾಯಕ ಕಮಲನಾಥ್ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಜೀತು ಪಟ್ವಾರಿ ಅವರನ್ನು ಈ ಹುದ್ದೆಗೆ ಏರಿಸಿದೆ. ರಾಜಸ್ದಾನದಲ್ಲಿ ಟೀಕಾ ರಾಮ್‌ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಲಾಗಿದೆ. ಈ ಪ್ರಯೋಗದಿಂದ ಯಶಸ್ಸು ಸಿಗಲಿದೆ ಎಂಬುದು ಕಾಂಗ್ರೆಸ್‌ ನಾಯಕರ ವಿಶ್ವಾಸ. 

ಯಾದವರ ಮತದತ್ತ ಚಿತ್ತ

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಪ್ರಬಲ ಒಬಿಸಿ (ಇತರೆ ಹಿಂದುಳಿದ ಸಮುದಾಯ) ವರ್ಗದ ನಾಯಕ. ಶಿವರಾಜ ಸಿಂಗ್ ಚೌಹಾಣ್‌, ನರೇಂದ್ರ ಸಿಂಗ್‌ ತೋಮರ್‌, ಜ್ಯೋತಿರಾದಿತ್ಯ ಸಿಂಧಿಯಾ, ಕೈಲಾಶ್ ವಿಜಯ್‌ವರ್ಗೀಯ ಅವರು ರಾಜ್ಯದ ಪ್ರಬಲ ನಾಯಕರೆಂದು ಗುರುತಿಸಿಕೊಂಡಿದ್ದರು. ಅವರನ್ನು ಪಕ್ಕಕ್ಕೆ ಸರಿಸಿ ಮೋಹನ್‌ ಯಾದವ್‌ ಅವರನ್ನು ಮುಖ್ಯಮಂತ್ರಿ ಗಾದಿಗೆ ಏರಿಸಲಾಗಿದೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಯಾದವರು ಮಂಡಲೋತ್ತರ ರಾಜಕೀಯದ ಪ್ರಮುಖ ಫಲಾನುಭವಿಗಳು. ಉತ್ತರ ಪ್ರದೇಶದಲ್ಲಿ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಹಾಗೂ ಬಿಹಾರದಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರು ಯಾದವ ಸಮುದಾಯದ ಪ್ರಮುಖ ನಾಯಕರು. ಆ ಎರಡು ರಾಜ್ಯಗಳ ಯಾದವ ಸಮುದಾಯದ ಮತಗಳನ್ನು ಪಕ್ಷಕ್ಕೆ ಸೆಳೆಯುವ ಉದ್ದೇಶದಿಂದಲೂ ಮೋಹನ್‌ ಯಾದವ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಮೋಹನ್‌ ಯಾದವ್‌ ಅವರು ಎರಡೂ ರಾಜ್ಯಗಳಲ್ಲಿ ಹಲವು ಸಲ ಚುನಾವಣಾ ಪ್ರಚಾರ ನಡೆಸಿ ಮತ ಸೆಳೆಯುವ ಕಸರತ್ತು ನಡೆಸಿದ್ದಾರೆ. ಜತೆಗೆ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನ ವಂಚಿತ ಹಿರಿಯ ನಾಯಕರು ಎಷ್ಟರ ಮಟ್ಟಿಗೆ ತನು ಮನ ಧನದಿಂದ ಮೋಹನ್‌ ಯಾದವ್‌ ಅವರಿಗೆ ಸಹಕಾರ ನೀಡುತ್ತಾರೆ ಎಂಬುದು ಕುತೂಹಲಕರ. ಶಿವರಾಜ ಸಿಂಗ್‌ ಚೌಹಾಣ್ ಅವರು ವಿದಿಶಾ ಕ್ಷೇತ್ರದ ಹುರಿಯಾಳು. 

‘ಕೈ’ ಪಟ್ಟು– ಸಾಯ್‌ ತಂತ್ರವೇನು?

ಛತ್ತೀಸಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್ ಮುಖ್ಯಮಂತ್ರಿ ಮೇಲೆ ಕಣ್ಣಿಟ್ಟಿದ್ದರು. ಅವರನ್ನು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಹಿಂಬಡ್ತಿ ನೀಡಲಾಗಿತ್ತು. ಬುಡಕಟ್ಟು ಸಮುದಾಯದ ನಾಯಕ ವಿಷ್ಣುದೇವ್ ಸಾಯ್ ಅವರಿಗೆ ಮುಖ್ಯಮಂತ್ರಿ ಸ್ಥಾನದ ಅದೃಷ್ಟ ಒಲಿದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಿನ ಬಳಿಕ ಕಾಂಗ್ರೆಸ್‌ ಪಕ್ಷವು ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹಾಗೂ ಮಾಜಿ ಸಚಿವ ತಾಮ್ರಧ್ವಜ ಸಾಹು ಅವರನ್ನು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳನ್ನಾಗಿ ಮಾಡಿದೆ. ಇಬ್ಬರು ನಾಯಕರು ತಾವು ಗೆಲ್ಲುವುದರ ಜತೆಗೆ ಅಕ್ಕಪಕ್ಕದ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬಲ್ಲರು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಈ ಸವಾಲನ್ನು ಸಾಯ್‌ ಹೇಗೆ ಮೆಟ್ಟಿ ನಿಲ್ಲಲಿದ್ದಾರೆ ಎಂಬುದು ಕುತೂಹಲಕಾರಿ.

ಶರ್ಮಾಗೆ ರಾಜೇ ತಲೆನೋವು 

ರಾಜಸ್ಥಾನದ ವಸುಂಧರಾ ರಾಜೇ ಸಿಂಧಿಯಾ ಅವರು ಮೊದಲಿನಿಂದಲೂ ನರೇಂದ್ರ ಮೋದಿ– ಅಮಿತ್‌ ಶಾ ಗುಂಪಿಗೆ ಸೇರಿದವರಲ್ಲ. ಅವರು ವಾಜಪೇಯಿ–ಅಡ್ವಾಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲೂ ಪಕ್ಷದ ವರಿಷ್ಠರ ಜತೆಗೆ ಅಂತರ ಕಾಯ್ದುಕೊಂಡಿದ್ದರು. ಹಿರಿತನದ ಆಧಾರದಲ್ಲಿ ಮುಖ್ಯಮಂತ್ರಿ ಗಾದಿ ಒಲಿಯಲಿದೆ ಎಂದು ಆಸೆ ಇರಿಸಿಕೊಂಡಿದ್ದರು. ಆದರೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮೊದಲ ಬಾರಿಯ ಶಾಸಕ ಭಜನ್‌ ಲಾಲ್‌ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಈ ನಡೆಯಿಂದ ವಸುಂಧರಾ ಮುನಿಸಿಕೊಂಡಿದ್ದಾರೆ. ಅವರ ಕೆಲವು ಬೆಂಬಲಿಗರು ಕಾಂಗ್ರೆಸ್‌ ಪಾಳಯಕ್ಕೆ ಜಿಗಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಸುಂಧರಾ ಒಳ ಏಟು ನೀಡಬಹುದು ಎಂಬ ಆತಂಕ ಕಮಲ ಪಾಳಯದ ನಾಯಕರಿಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT