ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರ ಧರ್ಮದವರನ್ನು ಕೀಳಾಗಿ ನೋಡುವಂತೆ ನಮ್ಮ ಧರ್ಮ ಹೇಳಲ್ಲ: ಫಾರೂಕ್ ಅಬ್ದುಲ್ಲಾ

Published 23 ಏಪ್ರಿಲ್ 2024, 13:26 IST
Last Updated 23 ಏಪ್ರಿಲ್ 2024, 13:26 IST
ಅಕ್ಷರ ಗಾತ್ರ

ಶ್ರೀನಗರ: ‘ನಮ್ಮ ಧರ್ಮವು ಇತರ ಧರ್ಮವನ್ನು ಕೀಳಾಗಿ ಕಾಣುವಂತೆ ಎಲ್ಲಿಯೂ ಹೇಳಿಲ್ಲ. ಮುಸ್ಲೀಮರು ಎಂದಿಗೂ ಹಿಂದೂ ಮಹಿಳೆಯರ ಮಂಗಳಸೂತ್ರ ಕಸಿಯುವವರಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ‘ಮಂಗಳಸೂತ್ರ’ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಪ್ರಧಾನಿ ಇಂಥ ಕೀಳುಮಟ್ಟದ ಹೇಳಿಕೆ ನೀಡಿರುವುದು ದುರದೃಷ್ಟಕರ. ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವಂತೆ ನಮ್ಮ ಧರ್ಮ ಹೇಳಿದೆ. ಯಾವುದೇ ಇತರ ಧರ್ಮವನ್ನು ಕೀಳಾಗಿ ಕಾಣುವಂತೆ ಇಸ್ಲಾಂನಲ್ಲಿ ಎಲ್ಲಿಯೂ ಹೇಳಿಲ್ಲ. ನಮ್ಮ ಧರ್ಮದ ಮೇಲೆ ನಾವು ನಂಬಿಕೆ ಇಟ್ಟಂತೆಯೇ ಇತರ ಧರ್ಮದವರನ್ನೂ ಕಾಣುವಂತೆ ಬೋಧಿಸಿದೆ’ ಎಂದಿದ್ದಾರೆ.

‘ಹಿಂದೂ ಧರ್ಮದ ತಾಯಿ ಅಥವಾ ಸೋದರಿಯ ಮಂಗಳಸೂತ್ರ ಕಸಿದ ಎಂದರೆ ಆ ವ್ಯಕ್ತಿ ಮುಸಲ್ಮಾನನೇ ಅಲ್ಲ ಹಾಗೂ ಆತ ಇಸ್ಲಾಂ ಧರ್ಮವನ್ನೇ ಅರ್ಥ ಮಾಡಿಕೊಂಡಿಲ್ಲ ಎಂದರ್ಥ’ ಎಂದಿದ್ದಾರೆ.

‘ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದರೆ, ಆತ ಆ ವ್ಯಕ್ತಿಯನ್ನು ಮಾತ್ರವಲ್ಲ, ಇಡೀ ಮನುಕುಲವನ್ನು ಕೊಲೆಗೈದ ಎಂದು ಇಸ್ಲಾಂ ಹೇಳುತ್ತದೆ. ಹಿಂದೂಗಳನ್ನು ದ್ವೇಷಿಸಬೇಕೆಂದು ಇಸ್ಲಾಂ ಎಲ್ಲಿಯೂ ಹೇಳಿಲ್ಲ. ಮುಸ್ಲಿಂ ಮತ್ತು ಸಿಖ್‌ ಬಾಂಧವರನ್ನು ಪ್ರೀತಿಸಿದಷ್ಟೇ ಹಿಂದೂಗಳನ್ನೂ ನಾನು ಪ್ರೀತಿಸುತ್ತೇನೆ. ಎಲ್ಲರ ಏಳಿಗೆ ದೇಶದ ಏಳಿಗೆ ಇದ್ದಂತೆ’ ಎಂದಿದ್ದಾರೆ.

ರಾಜಸ್ಥಾನದ ಬನ್ಸ್ವಾರದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ, ‘ತಾಯಂದಿರು ಹಾಗೂ ಸೋದರಿಯರ ಬಳಿ ಇರುವ ಬಂಗಾರವನ್ನು ಲೆಕ್ಕ ಹಾಕಿ, ಅದನ್ನು ಇತರರಿಗೆ ಹಂಚಲಾಗುವುದು ಎಂದು ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿಯಲ್ಲಿ ಹೇಳಲಾಗಿದೆ. ಹಾಗಿದ್ದರೆ, ಅದನ್ನು ಯಾರಿಗೆ ಹಂಚುತ್ತಾರೆ. ಈ ದೇಶದ ಆಸ್ತಿಯ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಮನಮೋಹನ ಸಿಂಗ್ ಹೇಳಿದ್ದಾರೆ’ ಎಂದಿದ್ದರು.

ರಷ್ಯಾದಂತೆ ಭಾರತದಲ್ಲೂ ಆಜೀವ ಪ್ರಧಾನಿ

ಒಂದು ದೇಶ ಒಂದು ಚುನಾವಣೆ ಕುರಿತು ಮಾತನಾಡಿರುವ ಫಾರೂಕ್ ಅಬ್ದುಲ್ಲಾ, ‘ಅವರು ಸಂವಿಧಾನ ಬದಲಿಸುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಬೇಕಿರುವುದು ಪ್ರಧಾನಿಯನ್ನು ಆಯ್ಕೆ ಮಾಡುವ ಒಂದು ಚುನಾವಣೆ. ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಅವರಂತೆಯೇ, ಬದುಕಿರುವವರೆಗೂ ಅವರೇ ಪ್ರಧಾನಿ ಎಂಬ ಪರಿಕಲ್ಪನೆ ತರಲು ಬಿಜೆಪಿ ಬಯಸುತ್ತಿದೆ. ಇಲ್ಲವಾದಲ್ಲಿ, 2047ರ ಕುರಿತು ಇಷ್ಟೊಂದು ಒತ್ತಿ ಹೇಳುತ್ತಿರುವುದಾದರೂ ಏಕೆ? ಅವರಿಗೆ ಚುನಾವಣೆ ಬೇಡವಾಗಿದೆ. ಏನಿದ್ದರೂ ಅಧಿಕಾರವನ್ನು ಕಬಳಿಸುವ ಯೋಜನೆ ಇದೆ’ ಎಂದಿದ್ದಾರೆ.

’ಚುನಾವಣಾ ಆಯೋಗದ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆಯಲಾಗಿದೆ. ಆಯ್ಕೆ ಸಮಿತಿಯಲ್ಲಿ ಇರುವ ಮೂವರಲ್ಲಿ ಸರ್ಕಾರದ ಇಬ್ಬರು ಪ್ರತಿನಿಧಿಗಳು ಇದ್ದರೆ, ಅದರ ಫಲಿತಾಂಶ ಏನಾಗಬಹುದು ಎಂಬುದು ಸ್ಪಷ್ಟ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT