ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯ ಎರಡು ಹಂತಗಳಲ್ಲೇ ‘ಇಂಡಿ’ ಮೈತ್ರಿಕೂಟ ಪರಾಭವಗೊಂಡಿದೆ: ಪ್ರಧಾನಿ ಮೋದಿ

Published 29 ಏಪ್ರಿಲ್ 2024, 15:41 IST
Last Updated 29 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಸೋಲಾಪುರ (ಮಹಾರಾಷ್ಟ್ರ): ಕಳಂಕಿತ ಹಿನ್ನೆಲೆಯ ನಡುವೆಯೂ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಆದರೆ, ಲೋಕಸಭಾ ಚುನಾವಣೆಯ ಎರಡು ಹಂತಗಳಲ್ಲೇ ‘ಇಂಡಿ’ ಮೈತ್ರಿಕೂಟ ಪರಾಭವಗೊಂಡಿರುವುದು ಅದಕ್ಕೆ ಗೊತ್ತಿಲ್ಲ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ.

ಸೋಲಾಪುರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ‘ಇಂಡಿ’ ಬ್ಲಾಕ್‌ನಲ್ಲಿ ‘ಮಹಾಯುದ್ಧ’ವೇ ನಡೆಯುತ್ತಿದೆ. ಅವರು ಈ ಕುರಿತು ಒಂದು ಸೂತ್ರವನ್ನು ಕಂಡುಕೊಂಡಿದ್ದು, ಅದರಂತೆ ಐದು ವರ್ಷಕ್ಕೆ ಐವರು ಪ್ರಧಾನಿಗಳಾಗಲಿದ್ದಾರೆ. ಅಂತಿಮವಾಗಿ ದೇಶವನ್ನು ಲೂಟಿ ಮಾಡಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಈ ಚುನಾವಣೆಯಲ್ಲಿ ನೀವು ಮುಂದಿನ ಐದು ವರ್ಷಕ್ಕೆ ಅಭಿವೃದ್ಧಿಯ ಗ್ಯಾರಂಟಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದೀರಿ. ಇನ್ನೊಂದೆಡೆ, 2014ಕ್ಕೆ ಮುಂಚೆ ದೇಶಕ್ಕೆ ಭ್ರಷ್ಟಾಚಾರ, ಭಯೋತ್ಪಾದನೆ, ದುರಾಡಳಿತ ನೀಡಿದವರಿದ್ದಾರೆ. ನೀವು 10 ವರ್ಷ ಮೋದಿಯನ್ನು ಪರೀಕ್ಷಿಸಿದ್ದೀರಿ. ಅವರ ಪ್ರತಿ ಹೆಜ್ಜೆಯನ್ನು ನೋಡಿದ್ದೀರಿ, ಪ್ರತಿ ಪದವನ್ನೂ ಲೆಕ್ಕ ಹಾಕಿದ್ದೀರಿ’ ಎಂದು ಹೇಳಿದರು.

‘ನಾಯಕತ್ವಕ್ಕೆ ತಮ್ಮಲ್ಲಿ ಹಲವಾರು ಆಯ್ಕೆಗಳಿವೆ ಎಂದು ‘ನಕಲಿ’ ಶಿವಸೇನಾ ಹೇಳಿದೆ’ ಎಂದು ಉದ್ಧವ್ ಠಾಕ್ರೆ ಅವರನ್ನು ಪ್ರಧಾನಿ ಲೇವಡಿ ಮಾಡಿದರು. 

ಮಹಾರಾಷ್ಟ್ರ ಸಾಮಾಜಿಕ ನ್ಯಾಯದ ನೆಲ ಎಂದು ಬಣ್ಣಿಸಿದ ಮೋದಿ, ‘ನೀವು ಕಾಂಗ್ರೆಸ್‌ನ 60 ವರ್ಷಗಳ ಆಡಳಿತ ನೋಡಿದ್ದೀರಿ ಮತ್ತು ಮೋದಿಯ 10 ವರ್ಷಗಳ ‘ಸೇವಾ ಪರ್ವ’ ನೋಡಿದ್ದೀರಿ. ಒಂದು ದಶಕದಲ್ಲಿ ನಡೆದಂಥ ಸಾಮಾಜಿಕ ನ್ಯಾಯದ ಕೆಲಸಗಳು ಸ್ವಾತಂತ್ರ್ಯದ ನಂತರ ಎಂದೂ ಆಗಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ಹೇಳಿದ್ದು..

* ಹಿಂದುಳಿದ ವರ್ಗಗಳಿಗೆ ಏನೂ ಮಾಡದೇ ಅವರು ತಮ್ಮ ‘ಆಶ್ರಿತ’ರಾಗಿಯೇ (ಅವಲಂಬಿತ) ಉಳಿಯುವಂತೆ ಮಾಡಿ ಮತ ಪಡೆದುಕೊಳ್ಳುವುದು ಕಾಂಗ್ರೆಸ್ ನೀತಿಯಾಗಿದೆ.

* ಹಿಂದುಳಿದವರ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ನೀಡಿದೆವು. ವೈದ್ಯಕೀಯ ಪರೀಕ್ಷೆಗಳಲ್ಲಿ ಒಬಿಸಿ ಮೀಸಲಾತಿ ಜಾರಿ ಮಾಡಿದೆವು. ಹಿಂದುಳಿದವರಿಗೆ ರಾಜಕೀಯ ಮೀಸಲಾತಿಯನ್ನು ಹೆಚ್ಚಿಸಲಾಗಿದ್ದು, ಅದನ್ನು 10 ವರ್ಷಕ್ಕೆ ಏರಿಸಲಾಗುವುದು.

* ದಲಿತರು, ಆದಿವಾಸಿಗಳ ಅಥವಾ ಹಿಂದುಳಿದವರ ಹಕ್ಕುಗಳನ್ನು ಕಸಿಯದೇ ‘ಸಾಮಾನ್ಯ ವರ್ಗ’ಕ್ಕೆ ಶೇ 10ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಅದನ್ನು ದಲಿತ ನಾಯಕರು ಸೇರಿದಂತೆ ಎಲ್ಲರೂ ಸ್ವಾಗತಿಸಿದರು.

* ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಅನ್ನು ಮರಾಠಿ ಮಾಧ್ಯಮದಲ್ಲಿ ಓದಲು ಸಾಧ್ಯವಾಗುವಂತೆ ನಾವು ಮಾಡಿದ್ದೇವೆ. ನಿಮಗೆ ಇಂಗ್ಲಿಷ್ ಗೊತ್ತಿಲ್ಲದಿದ್ದರೂ ದೇಶವನ್ನು ಮುನ್ನಡೆಸಬಹುದು.

* ಕಾಂಗ್ರೆಸ್‌ನವರಿಗೆ ಹಿಂದುಳಿದವರು, ಆದಿವಾಸಿಗಳು, ದಲಿತರು ಎಂದೂ ದೇಶ ಆಳುವುದು ಬೇಕಿರಲಿಲ್ಲ. ಅವರು ದಲಿತ ನಾಯಕರನ್ನು ಅವಮಾನಿಸಿದರು. ಬಿಜೆಪಿ ದಲಿತರಿಗೆ, ಆದಿವಾಸಿಗಳಿಗೆ ಗರಿಷ್ಠ ಅವಕಾಶ ನೀಡಲು ಪ್ರಯತ್ನಿಸುತ್ತಿದೆ.

* ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರವಿದ್ದಾಗ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ದೊರೆಯಿತು. ಎನ್‌ಡಿಎಯು ದಲಿತರ ಪುತ್ರ (ರಾಮನಾಥ್ ಕೋವಿಂದ್) ಮತ್ತು ಆದಿವಾಸಿ ಪುತ್ರಿಯನ್ನು (ದ್ರೌಪದಿ ಮುರ್ಮು)  ರಾಷ್ಟ್ರಪತಿಗಳನ್ನಾಗಿ ಮಾಡಿತು.

* ‘ಇಂಡಿ’ ಕೂಟಕ್ಕೆ ದೂರದೃಷ್ಟಿಯೇ ಇಲ್ಲ. ನಮಗೆ ದೂರದೃಷ್ಟಿ ಇದ್ದು, ನಾವು ಅದನ್ನು ವಾಸ್ತವವನ್ನಾಗಿ ಬದಲಿಸಬಲ್ಲೆವು.

* ಕಾಂಗ್ರೆಸ್‌ ಪಕ್ಷವು ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಜಾರಿ ಮಾಡುವ ಮೂಲಕ ಅಂಬೇಡ್ಕರ್ ಅವರ ಸಂವಿಧಾನವನ್ನು ಜಾರಿ ಮಾಡಿರಲಿಲ್ಲ. ಆದರೆ, ಮೋದಿ ಅದನ್ನು ರದ್ದು ಮಾಡಿ, ಅಲ್ಲಿನ ಜನರಿಗೆ ಸಾಮಾಜಿಕ ನ್ಯಾಯದ ಹಕ್ಕನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT