ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತರು, ಹಿಂದುಳಿದ ವರ್ಗದವರ ಮೀಸಲಾತಿ ವಿರುದ್ಧ ಯೋಗಿ ಬುಲ್ಡೋಜರ್: ಕಾಂಗ್ರೆಸ್

Published 17 ಮೇ 2024, 10:29 IST
Last Updated 17 ಮೇ 2024, 10:29 IST
ಅಕ್ಷರ ಗಾತ್ರ

ನವದೆಹಲಿ: ಬುಲ್ಡೋಜರ್ ಎಲ್ಲಿ ಓಡಿಸಬೇಕು ಎಂಬುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕಲಿಯಿರಿ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಿಎಂ ಯೋಗಿ ಬುಲ್ಡೋಜರ್ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿಯಾಗಿದೆ ಎಂದಿದೆ.

ಯೋಗಿ ಆದಿತ್ಯನಾಥ್ ಅವರ ವೆಬ್‌ಸೈಟ್‌ನಲ್ಲಿನ ಲೇಖನವನ್ನು ಉಲ್ಲೇಖಿಸಿ ಇದು ಆರ್‌ಎಸ್ಎಸ್‌ನ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರತಿಪಾದಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಜೈರಾಮ್, ಬುಲ್ಡೋಜರ್ ಅನ್ನು ಎಲ್ಲಿ ಓಡಿಸಬೇಕು ಎಂಬುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕಲಿಯಿರಿ ಎಂದು ನಿರ್ಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದ್ದಾರೆ. ಯೋಗಿಯ ಬುಲ್ಡೋಜರ್, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಗೆ ಹೇಗೆ ವಿರೋಧಿಯಾಗಿದೆ ಎಂಬುದನ್ನು ನೋಡಿ ಎಂದು ಬರೆದುಕೊಂಡಿದ್ದಾರೆ.

‘ಮೀಸಲಾತಿ ಬಗ್ಗೆ ಯೋಗಿಯವರ ದೃಷ್ಟಿಕೋನದಿಂದಲೇ ಅವರನ್ನು ಬೆಂಬಲಿಸುತ್ತಿದ್ದಾರೆಯೇ ಎಂಬುದನ್ನು ಮೋದಿ ಸ್ಪಷ್ಟವಾಗಿ ಹೇಳಲಿ. ಅವರ 400ಕ್ಕೂ ಹೆಚ್ಚು ಸ್ಥಾನದ ಘೋಷಣೆ ಹಿಂದಿನ ಗುಟ್ಟು ಇದೇ ಆಗಿದೆ. ಮೀಸಲಾತಿಯನ್ನು ಬದಲಿಸಲು ಅವರಿಗೆ 400 ಸದಸ್ಯರ ಬಹುಮತ ಬೇಕಿದೆ. ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಿ, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಜನರ ಮೀಸಲಾತಿ ಕಿತ್ತುಕೊಳ್ಳುವರು’ ಎಂದು ರಮೇಶ್ ಆರೋಪಿಸಿದ್ದಾರೆ.

ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಂತ್ಯ ಹಾಡಿ ಮನುವಾದಿ ಚಿಂತನೆಯ ಹೊಸ ಸಂವಿಧಾನ ರಚನೆಗೆ ಆರ್‌ಎಸ್‌ಎಸ್‌ನ ದಶಕಗಳಷ್ಟು ಹಳೆಯದಾದ ಸಂಚನ್ನು ಬಿಜೆಪಿ ಕಾರ್ಯಗತಗೊಳಿಸುತ್ತಿದೆ ಎಂದು ರಮೇಶ್ ದೂರಿದ್ದಾರೆ.

ಉತ್ತರ ಪ್ರದೇಶ ಸಿಎಂ ವೆಬ್‌ಸೈಟ್‌ನಲ್ಲಿ ಎಲ್ಲಿ ಲೇಖನ ಪ್ರಕಟಿಸಲಾಗಿದೆ ಎಂಬುದನ್ನು ವಿಡಿಯೊದಲ್ಲಿ ವಿವರಿಸಿರುವ ಜೈರಾಮ್, ಬಹಳ ಸಮಯ ಈ ಲೇಖನ ಲಭ್ಯವಾಗದೆ ಹೋಗಬಹುದು. ಆದರೆ, ಲೇಖನದ ಕೆಲ ಭಾಗವು ಮೀಸಲಾತಿ ವಿರೋಧಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಮ ಮಂದಿರ ಮೇಲೆ ಬುಲ್ಡೋಜರ್ ಹರಿಸಲಿವೆ ಎಂದು ಆರೋಪಿಸಿದ್ದರು. ಅಲ್ಲದೆ, ಎಲ್ಲಿ ಬುಲ್ಡೋಜರ್ ಹರಿಸಬೇಕೆಂಬ ಬಗ್ಗೆ ಯೋಗಿ ಬಳಿ ಟ್ಯೂಶನ್ ಪಡೆದುಕೊಳ್ಳಿ ಎಂದು ಕುಟುಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT