ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯಕ್ಕಾಗಿ ‘ಇಂಡಿಯಾ’ಗೆ ಮತ ಹಾಕಿ: ಸಿಎಂ ಸ್ಟಾಲಿನ್‌

Published 30 ಮಾರ್ಚ್ 2024, 2:36 IST
Last Updated 30 ಮಾರ್ಚ್ 2024, 2:36 IST
ಅಕ್ಷರ ಗಾತ್ರ

ಧರ್ಮಪುರಿ (ತಮಿಳುನಾಡು): ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್‌, ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯ ನೆಲೆಸಲು ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಇತಿಹಾಸದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯು ಮಹತ್ವದ್ದಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಇಳಿಸುವ ಸಮಯ ಬಂದಿದೆ. ಧರ್ಮ, ಜಾತಿ ಮತ್ತು ಭಾಷೆಗಳ ಆಧಾರದ ಮೇಲೆ ಬಿಜೆಪಿ ಜನರನ್ನು ವಿಭಜಿಸುತ್ತದೆ’ ಎಂದು ಆರೋಪಿಸಿದ್ದಾರೆ.

ಧರ್ಮಪುರಿಯ ಡಿಎಂಕೆ ಅಭ್ಯರ್ಥಿ ಎ. ಮಣಿ ಮತ್ತು ಕೃಷ್ಣಗಿರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೋಪಿನಾಥ್‌ ಅವರ ಪರವಾಗಿ ಮತ ಪ್ರಚಾರ ನಡೆಸಿದ ಸ್ಟಾಲಿನ್‌, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ನೆಲೆಸಲು ಜನರು ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕಬೇಕು ಎಂದು ಕೋರಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆ ಕುರಿತು ಮಾತನಾಡಿರುವ ಸ್ಟಾಲಿನ್‌, ‘ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಮಲಾ ಅವರ ಬಳಿ ಹಣವಿಲ್ಲದಿರುವುದು ನಿಜವಾದರೆ, ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿರುವ ಹಣ ಏನಾಯಿತು’ ಎಂದು ಪ್ರಶ್ನಿಸಿದ್ದಾರೆ.

‘ಮೇಡಂ, ಚುನಾವಣೆಗೆ ಸ್ಪರ್ಧಿಸಬೇಕಾದರೆ ಜನರನ್ನು ಭೇಟಿ ಮಾಡಬೇಕು ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಜನರು ನಿಮಗೆ ಮತ ಹಾಕುವುದಿಲ್ಲ ಎಂದು ನಿಮಗೆ ತಿಳಿದಿರುವುದರಿಂದ ನೀವು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೀರಿ’ ಎಂದು ಸ್ಟಾಲಿನ್‌ ಟೀಕಿಸಿದ್ದಾರೆ.

ಆಂಧ್ರ ಪ್ರದೇಶ ಅಥವಾ ತಮಿಳುನಾಡಿನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿ ನೀಡಿದ್ದ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ. ಏಕೆಂದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಹಣ ನನ್ನ ಬಳಿ ಇಲ್ಲ ಎಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT