ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಹೆಸರು ಹೇಳದೆ ಪ್ರಚಾರ: ದೂರು ಕೊಟ್ಟರೆ ಮನೆಯಲ್ಲಿರುತ್ತೇನೆ –ಪ್ರೀತಂಗೌಡ

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಹಾಸನ: ಬಿಜೆಪಿ– ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿದ್ದ ಗೊಂದಲ ಬುಧವಾರ ಸ್ವಲ್ಪಮಟ್ಟಿಗೆ ನಿವಾರಣೆಯಾಗಿದ್ದು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಬುಧವಾರ ನಗರದ 89ನೇ ಬೂತ್‌ನಿಂದ ಪ್ರಚಾರ ಆರಂಭಿಸಿದರು. ಆದರೆ, ಎಲ್ಲಿಯೂ ಪ್ರಜ್ವಲ್ ರೇವಣ್ಣ ಅವರ ಹೆಸರು ಹೇಳದೆ, ‘ಮೈತ್ರಿಕೂಟದ ಅಭ್ಯರ್ಥಿಯ ಗೆಲುವಿಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು, ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದೇನೆ. ರಾಜ್ಯದಲ್ಲಿ ಎಲ್ಲ ಸ್ಥಾನ ಗೆದ್ದು, ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯೊಂದಿಗೆ ಪ್ರಚಾರ ಅರಂಭಿಸಲಾಗಿದೆ. ಹಿರಿಯರು ಕೊಟ್ಟಿರುವ ಜವಾಬ್ದಾರಿಯಂತೆ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಮೈತ್ರಿ ಧರ್ಮ ಪಾಲಿಸುತ್ತಿಲ್ಲವೆಂದು ನಿಮ್ಮ ವಿರುದ್ಧ ಕೇಂದ್ರಕ್ಕೆ ದೂರು ಹೋಗಿದೆಯೇ’ ಎಂಬ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ‘ಪ್ರೀತಿ ತೋರಿಸಿದರೆ ಕೆಲಸ ಮಾಡುವವನು ನಾನು. ನನ್ನ ವಿರುದ್ಧ ದೂರು ಕೊಟ್ಟರೆ, ನನಗೆ ರಾಜಕೀಯವೇ ಬೇಡವೆಂದು ಮನೆಯಲ್ಲಿ ಕೂರುತ್ತೇನೆ. ಬಿಜೆಪಿಯ ಕೇಂದ್ರ ಅಥವಾ ರಾಜ್ಯದ ಯಾವುದೇ ನಾಯಕರು ನನಗೆ ಸೂಚನೆ ಕೊಟ್ಟಿಲ್ಲ. ಬೇಕಿದ್ದರೆ ಯಾರನ್ನಾದರೂ ಕೇಳಿ’ ಎಂದರು.

‘ಪ್ರಪಂಚದಲ್ಲಿಯೇ ದೊಡ್ಡ ಪಕ್ಷವಾದ ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು ಎಂದೇ ಹೇಳಲಾಗುತ್ತದೆ. ಮತಗಟ್ಟೆ ಗೆದ್ದರೆ ದೇಶ ಹಾಗೂ ಚುನಾವಣೆ ಗೆದ್ದಂತೆ ಎಂದು ನಂಬಿದ್ದೇವೆ. ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ ಅವರಿಗೆ ಗುರುವಾರ ಆಲೂರಿನಲ್ಲಿ ಪ್ರಚಾರ ಮಾಡಲು ಸೂಚಿಸಿರುವೆ. ಅವರೂ ತಮ್ಮ ಮತಗಟ್ಟೆಯಿಂದಲೇ ಪ್ರಚಾರ ಆರಂಭಿಸಲಿದ್ದಾರೆ’ ಎಂದರು.

‘ಈ ಬಾರಿಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಎನ್‌ಡಿಎ ಮೈತ್ರಿಕೂಟ ಗೆಲ್ಲಿಸುವುದೇ ಗುರಿ. ನಮ್ಮ ರಾಜ್ಯ ಘಟಕದ ಅಧ್ಯಕ್ಷರು ಸೂಚಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ಮತಗಟ್ಟೆ, ತಾಲ್ಲೂಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT