ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ರಾಜ್ಯ, ರಾಷ್ಟ್ರಮಟ್ಟ ತಲುಪದ ‘ಬುದ್ಧಿವಂತರು’

ಜಾಗೃತಿ ಕಾರ್ಯಕ್ರಮ, ಪ್ರಖ್ಯಾತರ ಮನವಿ, ರಾಜಕಾರಣಿಗಳ ಒತ್ತಾಸೆಗೂ ಮಣಿಯದ ನಗರ ಮತದಾರ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜ್ಞಾವಂತರು, ಪ್ರಶ್ನೆ ಮಾಡುವವರು, ಬುದ್ಧಿವಂತರು ಹೆಚ್ಚಿರುವ ಬೆಂಗಳೂರು ನಗರ, ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಮತ್ತು ರಾಜ್ಯದ ಒಟ್ಟಾರೆ ಮತದಾನದ ಪ್ರಮಾಣಕ್ಕಿಂತಲೂ ಹಿಂದೆಯೇ ಉಳಿದಿದೆ.

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 92 ಲಕ್ಷ ಮತದಾರರೂ ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಕೋಟಿಗೂ ಅಧಿಕ ಮತದಾರರಿದ್ದಾರೆ. ಪ್ರತಿ ಚುನಾವಣೆ ಮುಗಿದ ಮೇಲೆ ‘ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದೆ, ಮುಂದಿನ ಬಾರಿ ಹೆಚ್ಚಿಸಬೇಕು, ಮತದಾರರು ಜಾಗೃತಗೊಂಡು ಮತದಾನ ಮಾಡಬೇಕು’ ಎಂದೆಲ್ಲ ಹೇಳಲಾಗುತ್ತದೆ. ಅದಕ್ಕೆ ಅತಿ ಹೆಚ್ಚು ‘ಸ್ವೀಪ್‌’ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಇಷ್ಟಾದರೂ ನಗರದ ‘ಬುದ್ಧಿವಂತ’ ಮತದಾರರು ಮಣಿಯುತ್ತಿಲ್ಲ.

ಮತದಾನದ ದಿನ ರಜೆ ಇರುತ್ತದೆ. ಅದರ ಹಿಂದಿನ ಅಥವಾ ಮುಂದಿನ ದಿನ ರಜೆ ಇದ್ದರೆ, ವಾರಾಂತ್ಯವಾಗಿದ್ದರೆ ಮತದಾನವನ್ನು ಮರೆಯುವ ‘ಬುದ್ಧಿವಂತರು’ ಪ್ರವಾಸದ ಮೋಜಿಗೆ ನಗರ ಬಿಟ್ಟು ಹೊರಡುತ್ತಾರೆ. ಈ ಕಾರಣದಿಂದಲೇ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದು ಅರಿವಿಗೆ ಬಂದಿದೆ. ‘ಹೈಟೆಕ್‌ ಪ್ರದೇಶ’, ಐಷಾರಾಮಿ ಸ್ಥಳ, ಸಾಫ್ಟ್‌ವೇರ್‌– ಹಾರ್ಡ್‌ವೇರ್‌ ಕಂಪನಿಗಳ ಸಿಬ್ಬಂದಿಯಿರುವ ಪ್ರದೇಶಗಳಲ್ಲೇ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದೂ ಆತಂಕದ ವಿಷಯವಾಗಿದೆ.

‘ರಸ್ತೆ ಸರಿ ಇಲ್ಲ, ಗುಂಡಿಗಳೇ ಇವೆ, ಮಳೆಯ ನೀರು ಮನೆಗೆ, ವಿಲ್ಲಾಗೆ ನುಗ್ಗಿದೆ, ಬೆಂಗಳೂರು ಮುಳುಗುತ್ತೆ, ಇಲ್ಲಿ ಸೌಲಭ್ಯಗಳಿಲ್ಲ’ ಎಂದು ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಪ್ರಚಾರ ಹಾಗೂ ಪ್ರಶ್ನೆ ಮಾಡುವ ಪ್ರದೇಶದ ಜನರೇ ಮತದಾನದ ಹಬ್ಬದಲ್ಲಿ ಬಹುತೇಕ ಪಾಲ್ಗೊಳ್ಳದಿರುವುದನ್ನೂ ಅಂಕಿ–ಅಂಶಗಳು ಬಹಿರಂಗಗೊಳಿಸಿವೆ.

‘ನಗರದ ಮತದಾರರೆಲ್ಲರೂ ಮತದಾನ ಮಾಡಬೇಕು. ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಮತದಾನದ ಪ್ರಮಾಣ ಹೆಚ್ಚಾಗಬೇಕು’ ಎಂದು ಜಿಲ್ಲಾಡಳಿತ, ನಗರ ಜಿಲ್ಲಾ ಚುನಾವಣೆ ಅಧಿಕಾರಿಗಳು ‘ಸ್ವೀಪ್‌’ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಬೀದಿನಾಟಕ, ರ‍್ಯಾಲಿ, ವಾಕಥಾನ್‌, ಸೈಕಲ್‌ಥಾನ್‌ ಎಂದೆಲ್ಲ ಚಟುವಟಿಕೆಗಳನ್ನು ಪ್ರತಿ ಚುನಾವಣೆಯ ಸಮಯದಲ್ಲೂ ನಡೆಸಲಾಗುತ್ತಿದೆ. ಈ ಬಾರಿಯೂ ಇವೆಲ್ಲ ಚಟುವಟಿಕೆಗಳೂ ನಡೆಯುತ್ತಿವೆ. 

ಬೆಂಗಳೂರಿನ ಉತ್ತರ, ಕೇಂದ್ರ, ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಮತದಾರರ ಸಂಖ್ಯೆ 31 ಲಕ್ಷ ಮೀರಿದೆ. ಆದರೆ, ಮತದಾನದ ಪ್ರಮಾಣ ಮಾತ್ರ ಹೆಚ್ಚಾಗುತ್ತಿಲ್ಲ. 2009ರಲ್ಲಿ ಸುಮಾರು 60 ಲಕ್ಷ ಮತದಾರರಿದ್ದ ನಗರದಲ್ಲಿ ಈ ಬಾರಿ ಮತದಾರರ ಸಂಖ್ಯೆ ಒಂದು ಕೋಟಿ ಮೀರುತ್ತಿದೆ. 2009ರಲ್ಲಿ ಸರಾಸರಿ ಶೇ 45ರಷ್ಟು ಮತದಾನವಾಗಿತ್ತು. 2019ರಲ್ಲಿ ಶೇ 54ರಷ್ಟು ಮತದಾನವಾಗಿದೆ. ಮತದಾರ ಪಟ್ಟಿ (ಎಪಿಕ್‌) ಮಾಡಿಸಿಕೊಳ್ಳುವಲ್ಲಿನ ಆಸಕ್ತಿ ಮತದಾನ ಮಾಡುವಲ್ಲಿ ಇಲ್ಲ ಎಂಬುದು ಕಳೆದ ವಿಧಾನಸಭೆ ಚುನಾವಣೆಯಲ್ಲೂ ಸಾಬೀತಾಗಿದೆ. ಆ ಚುನಾವಣೆಯಲ್ಲಿ ಶೇ 54.53ರಷ್ಟು ಮಾತ್ರ ಮತದಾನವಾಗಿತ್ತು.

ಕಳೆದ ಮೂರು ಚುನಾವಣೆಗಳಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಒಟ್ಟಾರೆ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ ಬೆಂಗಳೂರು ನಗರದ ಮತದಾರರು ಹಿಂದೆಯೇ ಇದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ನಗರ ಜಿಲ್ಲೆಯ ಜನರಿದ್ದಾರೆ. ಅಲ್ಲಿ ನಗರದ ಮೂರು ಕ್ಷೇತ್ರಗಳಿಗಿಂತ ಹೆಚ್ಚಿನ ಮತದಾನವಾಗಿದೆ. ಆದರೆ, ಅಭಿವೃದ್ಧಿ, ಸೌಕರ್ಯ ಸೇರಿದಂತೆ ಎಲ್ಲವನ್ನೂ ಅತಿಹೆಚ್ಚೇ ಬಯಸುವ ನಗರದ ಬುದ್ಧಿವಂತ ಮತದಾರ, ಮತದಾನದಲ್ಲಿ ಇಂದಿಗೂ ಹಿಂದೆಯೇ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT