ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಹುಮತಕ್ಕೆ 1.5 ಕೋಟಿ ಮತದ ಗುರಿ: ಬಿ.ಎಲ್.ಸಂತೋಷ್‌

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌
Last Updated 21 ಏಪ್ರಿಲ್ 2023, 13:31 IST
ಅಕ್ಷರ ಗಾತ್ರ

ಮೈಸೂರು: ‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಬೇಕಾದರೆ ಒಂದೂವರೆ ಕೋಟಿ ಮತಗಳು ಬೇಕು. ಇದೆಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ‌ಬೊಮ್ಮಾಯಿ ಅಥವಾ ಅಭ್ಯರ್ಥಿಗಳೇ ತರಲಾಗದು. ಕಾರ್ಯಕರ್ತರು ಕೊಡುಗೆ ನೀಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ತಿಳಿಸಿದರು.

ಇಲ್ಲಿ ಶುಕ್ರವಾರ ಪಕ್ಷದ ಡಿಜಿಟಲ್‌ ಮಾಧ್ಯಮ ಪ್ರಕೋಷ್ಠ ಆಯೋಜಿಸಿದ್ದ ‘ಡಿಜಿಟಲ್‌ ಕಾರ್ಯಕರ್ತರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘133 ಸ್ಥಾನಗಳನ್ನು ಗೆಲ್ಲುವ ಸಂಕಲ್ಪವನ್ನು ಕಾರ್ಯಕರ್ತರೆಲ್ಲರೂ ಮಾಡಬೇಕು. ಇದಕ್ಕಾಗಿ ದೊಡ್ಡ ಅಸ್ತ್ರವಾದ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಗುರಿ ಈಡೇರಿಕೆಗೆ ಮೈಸೂರು ಭಾಗದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕು. ಸರ್ಕಾರ ರಚನೆಗೆ ನಾವು ಕಾರಣವಾದೆವು ಎಂಬ ಭಾವನೆ ಬರಬೇಕಾದರೆ ನಮ್ಮವರನ್ನೆಲ್ಲ ಗೆಲ್ಲಿಸಬೇಕು. ಬಹುಮತದತ್ತ ನಮ್ಮ ಚಿತ್ತವಿರಬೇಕು’ ಎಂದು ಹೇಳಿದರು.

ಈಗ ಶ್ರಮಿಸಿದರೆ:

‘2018ರ ಚುನಾವಣೆಯಲ್ಲಿ ಕಾಂಗ್ರೆಸ್ 130 ಸೀಟುಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಹಾಗಾಯಿತೇ? ನಾವು ಮೇ 10ರವರೆಗೆ ಶ್ರಮಿಸಿದರೆ ಮೇ 13ರಂದು ಆನಂದ ಅನುಭವಿಸಬಹುದು’ ಎಂದರು.

‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಲಾಗುವುದಿಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಆದರೆ, ಅದನ್ನು ಸಾಧ್ಯ ಮಾಡಿದೆವು. ವರುಣದಲ್ಲಿ ವಿ.ಸೋಮಣ್ಣ ಸ್ಪರ್ಧೆಯ ಬಳಿಕ ಸಿದ್ದರಾಮಯ್ಯ ಅವರ ಸ್ವರ ಉಡುಗಿದೆ. ಮುಖ ಕಳೆಗುಂದಿದೆ. ಪಿಎಫ್‌ಐ ನಿಷೇಧಿಸಿದ್ದನ್ನು ಕಾಂಗ್ರೆಸ್, ಜೆಡಿಎಸ್‌ ವಿರೋಧಿಸಿದ್ದವು. ಇಂಥವರ ಮತ್ತೆ ವಿಧಾನಸೌಧಕ್ಕೆ ಹೋಗಲು ಬಿಡಬೇಕಾ?’ ಎಂದು ಕೇಳಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5ಸಾವಿರ ಮಂದಿಯಿಂದ ನಮೋ ಆ್ಯಪ್‌ ಡೌನ್‌ಲೋಡ್ ಮಾಡಿಸಬೇಕು. ಮತಗಟ್ಟೆವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಬೇಕು. ಚುನಾವಣೆಯ ವಿಜಯ ರಥ ಮುಂದಕ್ಕೆ ಹೋಗುತ್ತಿದ್ದು, ಆರೋಗ್ಯಕರ, ಗೌರವಯುತ ಯುದ್ಧಕ್ಕೆ ಸನ್ನದ್ಧರಾಗಬೇಕು’ ಎಂದು ತಿಳಿಸಿದರು.

ಸಿದ್ದರಾಮಯ್ಯ ನಿಲುವು ತಿಳಿಸಿ:

‘ಚುನಾವಣೆ ಬಂದಾಗ ಉದ್ದುದ್ದ ಕುಂಕುಮ ಹಾಕುವ, ದೇವಸ್ಥಾನಗಳಿಗೆ ಭೇಟಿ ಕೊಡುವ ಸಿದ್ದರಾಮಯ್ಯ ಅವರ ನಿಲುವನ್ನು ಜನರಿಗೆ ತಿಳಿಸಬೇಕೋ ಬೇಡವೋ? ಇದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಸಿಕೊಳ್ಳಿ’ ಎಂದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಜಾತಿವಾದಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಅನ್ನು ವಿರೋಧಿಸಿ ಅಭಿವೃದ್ಧಿ ಪರವಾದ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಸಾಮಾಜಿಕ ಮಾಧ್ಯಮದ ಯುಗವಿದು. ಅದರಲ್ಲಿನ ಪೋಸ್ಟ್‌ಗಳನ್ನು ನೋಡಿ ಜನರು ನಿರ್ಧರಿಸುತ್ತಾರೆ. ಹೀಗಾಗಿ ಪಕ್ಷದ ಒಳ್ಳೆಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಶೇರ್ ಮಾಡಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್, ಮುಖಂಡ ಜಗದೀಶ್ ಹಿರೇಮನಿ, ಜಿಲ್ಲಾ ಘಟಕದ ವಕ್ತಾರ ಡಾ.ಕೆ.ವಸಂತ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT