ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಇಲ್ಲ: ಶ್ರೀರಾಮುಲು ವ್ಯಂಗ್ಯ

Published 2 ಏಪ್ರಿಲ್ 2024, 10:05 IST
Last Updated 2 ಏಪ್ರಿಲ್ 2024, 10:05 IST
ಅಕ್ಷರ ಗಾತ್ರ

ಬಳ್ಳಾರಿ: ‘ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹೀಗಾಗಿ ಬಿಜೆಪಿ 400 ಕ್ಷೇತ್ರಗಳನ್ನು ಗೆಲ್ಲಲಿದೆ’ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿ ನಗರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಯಾತ್ರೆ ನಡೆಸಿದ ಅವರು ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.

‘ಉತ್ತರ ಪ್ರದೇಶದ ರಾಯಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸಲಾಗದೆ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಹೋಗಿದ್ದಾರೆ. ಅಮೇಠಿಯಲ್ಲಿ ಸ್ಪರ್ಧಿಸಲಾಗದೆ ರಾಹುಲ್‌ ಗಾಂಧಿ ಕೇರಳದ ವಯನಾಡಿಗೆ ಹೋಗಿದ್ದಾರೆ. ಪ್ರಿಯಾಂಕಾ ಗಾಂಧಿ ‘ಈ ಬಾರಿ ಬೇಡ, ಮುಂದಿನ ಬಾರಿ ನೋಡೋಣ’ ಅನ್ನುತ್ತಿದ್ದಾರೆ. ಕಾಂಗ್ರೆಸ್‌ಗೆ ದೇಶದಲ್ಲಿ ಅಭ್ಯರ್ಥಿಗಳೇ ಇಲ್ಲ‘ ಎಂದು ವ್ಯಂಗ್ಯವಾಡಿದರು.

‘ಮಂತ್ರಿಗಳನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಆರಂಭದಲ್ಲಿ ಚರ್ಚೆಗಳಾದವು. ಕೊನೆಗೆ ಮಂತ್ರಿಗಳೆಲ್ಲ ಸ್ಪರ್ಧೆಗೆ ನಿರಾಕರಿಸಿದರು. ಈಗ ಅವರ ಮಕ್ಕಳು, ಮೊಮ್ಮಕ್ಕಳು, ಹೆಣ್ಮಕ್ಕಳು, ಕುಟುಂಬಸ್ಥರೇ ಚುನಾವಣೆಗೆ ನಿಂತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್‌ಗೆ ಅಭ್ಯರ್ಥಿಗಳಿಲ್ಲ. ದೇಶದೆಲ್ಲೆಡೆ ಮೋದಿ ಅಲೆ ಇದೆ. ಬಿಜೆಪಿ 400 ಸ್ಥಾನ ಗೆಲ್ಲಲಿದೆ. ಕರ್ನಾಟಕದಲ್ಲಿ 28 ಗೆಲ್ಲುತ್ತೇವೆ. ಇದರಲ್ಲಿ ಬಳ್ಳಾರಿಯೂ ಒಂದಾಗಿರಲಿದೆ‘ ಎಂದು ಅವರು ಭವಿಷ್ಯ ನುಡಿದರು.

‘ಶ್ರೀರಾಮುಲು ಮತ್ತು ತಂಡ ಕೌರವರಿದ್ದಂತೆ. ಅವರನ್ನು ಸೋಲಿಸುತ್ತೇವೆ’ ಎಂಬ ಸಚಿವ ಬಿ. ನಾಗೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇವರೆಲ್ಲ ಮಧ್ಯರಾತ್ರಿ ನಾಯಕರಾದವರು. ಅದಕ್ಕೇ ಹೀಗೇ ಮಾತಾಡುತ್ತಾರೆ. ಯಾರದ್ದೋ ಹೆಸರು ಹೇಳಿಕೊಂಡು ಇವರೆಲ್ಲ ದೊಡ್ಡವರಾದವರು. ಭೂತದ ಬಾಯಲ್ಲಿ ಭಗವದ್ಗೀತೆ ಬರುತ್ತಿದೆ. ಮಹಾಭಾರತ, ಭವಿಷ್ಯವನ್ನೂ ಅವರು ಹೇಳುತ್ತಿದ್ದಾರೆ. ಇವರಿಗೆಲ್ಲ ಆನೆಯಂತೆ ಮದವೇರಿದೆ. ನರಿಗಳು ಕುತಂತ್ರ ಮಾಡುತ್ತಿವೆ. ಕೌರವ–ಪಾಂಡವ ಯಾರೆಂದು ಜನ ತೀರ್ಮಾನಿಸಲಿದ್ದಾರೆ‘ ಎಂದರು.

ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷದ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಏ.4ರಂದು ಕೆಆರ್‌ಪಿಪಿ ನಾಯಕರ ಸಭೆ ನಡೆಯಲಿದೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ಅಲ್ಲಿ ನಿರ್ಧರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT